ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆತನ ದೊಡ್ಡದು ಕಾಸು ದೊಡ್ಡದಲ್ಲ...

Last Updated 20 ಡಿಸೆಂಬರ್ 2010, 11:30 IST
ಅಕ್ಷರ ಗಾತ್ರ

ಮಾಸ್ತಿಯವರನ್ನು ಓದಿದವರಿಗೆ ಅವರ ಮಾತುಗಳನ್ನು ಕೇಳಿದವರಿಗೆ ಅನಿಸುವುದು ಅವರ ಭಾಷೆ ತುಂಬಾ ಸರಳ, ನಿರಾಡಂಬರ. ಕನ್ನಡದ ಸಂದರ್ಭದಲ್ಲಿ ಇದೊಂದು ಬಹಳ ಮಹತ್ವದ ವಿಷಯ. ಯಾಕೆಂದರೆ ಅವರ ಕಾಲದ ಲೇಖಕ ಸಾಮಾನ್ಯವಾಗಿ ಅಲಂಕಾರವಿಲ್ಲದೆ ಬರೆಯುವುದು ಬಹಳ ಕಷ್ಟ. ಹೀಗೆ ನಿರಾಡಂಬರವಾದ ಅವರ ಭಾಷೆಯ ಹಿಂದೆ ಒಂದು ಜೀವನ ದೃಷ್ಟಿ ಇದೆ ಎಂದು ಅನ್ನಿಸುತ್ತದೆ. ಬರಿ ಭಾಷೆಯ ಪ್ರಶ್ನೆ ಅಲ್ಲ. ಬರಿ ಬರವಣಿಗೆಯ ಸರಳತೆಯ ಪ್ರಶ್ನೆ ಅಲ್ಲ. ಅದೊಂದು ಆಲೋಚಿಸುವ ಕ್ರಮ. ಅದೊಂದು ಭಾವಿಸುವ ಕ್ರಮ.

ಒಳ್ಳೆತನ ದೊಡ್ಡದು ಕಾಸು ದೊಡ್ಡದಲ್ಲ...

ತನ್ನ ಬಾಳಲಿ ತಾನು ಬೇಸತ್ತಳಲೆ ಮುದುಕಿ;
ತಾನಿದ್ದು ಆಗಬೇಕಾದುದಿನ್ನೇನಿಹುದು.
ಹರಿ ತನ್ನ ಜೀವವನು ಕೊಳುವುದಕೆ ಯಾವ ಹದ
ಬರಬೇಕೋ ಕಾಣೆ, ಎಂದಳು: ಹಳಸಿತೀ ಬದುಕು
ಕಳಿತುದುಸಿರಿನಹಣ್ಣು ಸಾವೆಂಬ ಗಿಣಿ ಕೆದಕಿ
ತನ್ನ ತಿನ್ನುವುದೆಂದು ಎಂದಿದಿರು ನೋಡುತ
ಬಾಳ್‌ತೊಟ್ಟು ಬಿಡದೇಕೆ ಎಂದು ಹಠ ಮಾಡುತ್ತಾ
ದಿನವ ನೂಕಿದುದು, ಏನಾತುರವೋ ಸಾವುದಕೆ!
ನಾವರಿವೆವೆಂತದನು? ಎಳೆಯ ರೇಷಿಮೆಯ ಹುಳು
ಉಗುಳಿನೆಳೆಯಲಿ ಗೂಡು ಮಾಡಿಕೊಳುತಿಹ ವೇಳೆ
ತಿಳಿಯಬಹುದೆಂತು ಕತ್ತಲಲಿ ಹಲದಿನವಿದ್ದು
ಗರಿ ಕಾಣುತಿಹ ಮುದಿಯ ಭಾವವನು? ಈ ನಿದ್ದೆ
ಸಾಕು ಎನುತಿಹುದು ಅದು. ಬಿಡುಗಡೆಯ ಸಮಯದೊಳು
ರುಚಿಸಲಾರದು ಅದಕೆ ಬಾಳ ಕನಸಿನಜಾಲ
            (ಜೀವ ರೇಷಿಮೆಯ ಹುಳು)

ಸರ್, ನನಗೆ ಈ ಪದ್ಯ ಓದಿದಾಗೆಲ್ಲ ನಿಮ್ಮ ಒಟ್ಟೂ ಬರವಣಿಗೆಯ ವಿಷಯ ಶೇಕ್ಸ್‌ಪಿಯರ್ ಹೇಳ್ತಾನಲ್ಲ- ‘ರೈಪ್‌ನೆಸ್ ಈಸ್ ಆಲ್’ ಅಂತ. ತುಂಬಿಬರೋದು. ಎಲ್ಲ ಅನುಭವವು ತುಂಬಿ ಒಂದು ಹದವನ್ನು ಪಡೆಯುವುದು. ಅದೇ ನಿಮ್ಮ ಎಲ್ಲ ಬರವಣಿಗೆಯ ಸೂತ್ರ ಎಂದು ನನಗನ್ನಿಸುತ್ತದೆ. ಹಾಗೆಯೇ ನಮ್ಮ ಪುಣ್ಯಕ್ಕೆ ನೀವು ನಮ್ಮೊಡನೆ ಇದೀರಿ. ತೊಂಬತ್ತೈದು ವರ್ಷ ತುಂಬು ಜೀವನ ನಡೆಸಿ ನಡೆಸಿ ಈಗಲೂ ಹಿಂದಿನ ತರದ ಆ ಶ್ರದ್ಧೆ, ಪ್ರೀತಿ, ಉತ್ಸಾಹ ಎಲ್ಲ ಇಟ್ಟುಕೊಂಡು ನೀವಿದ್ದೀರಿ. ಇದರ ಗುಟ್ಟೇನು ಎಂದು ನಮ್ಮ ಜನಕ್ಕೆ ಗೊತ್ತಾಗಬೇಕು. ಅದನ್ನು ನಿಮ್ಮ ಬಾಯಿಂದಲೇ ಕೇಳಬೇಕು ಅಂತ ನನ್ನ ಆಸೆ.

ದೇವರು ಈ ಗೊಂಬೆಯನ್ನು ಹೀಗೆ ಮಾಡಿದ್ರು ಅದೇ ಅದರ ಗುಟ್ಟು. (ನಗು). ಇದರಲ್ಲಿ ನಾನೇನೂ ಮಾಡಲಿಲ್ಲ. ಎಲ್ಲರನ್ನೂ ಸೃಷ್ಟಿ ನಡೆಸುತ್ತಿದೆ. ಅದು ಸರ್ವಶಕ್ತ, ಸರ್ವವ್ಯಾಪಿ, ಕೃಪಾಳು. ನನಗೆ ಚಿಕ್ಕಂದಿನಿಂದಲೂ ನನ್ನ ತಾತ- ತಾಯಿಯ ತಂದೆ, ನನ್ನ ತಂದೆ, ನನ್ನ ತಾಯಿ ಈ ಮೂವರ ಜೀವನ ಮೇಲ್ಪಂಕ್ತಿಯಾಯಿತು. ಅವರು ನನ್ನಷ್ಟು ಓದಿದವರಲ್ಲ. ನನ್ನಷ್ಟು ಜೀವನವನ್ನು ಕಂಡವರೂ ಅಲ್ಲ. ಆದರೆ ಅವರ ಶ್ರದ್ಧೆ ಅಚಲ. ಸಂಪೂರ್ಣ. ಇವತ್ತು ನಾನು ಪ್ರಯತ್ನ ಮಾಡಿದರೂ ನನಗದು ಸಾಧ್ಯವಿಲ್ಲ. ಅಷ್ಟು ಸಹಜವಾಗಿ ಅವರಿಗೆ ದೇವರ ಸ್ವರೂಪ ಪ್ರತ್ಯಕ್ಷವಾಗಿತ್ತು. ವಯಸ್ಸಿಗೆ ಬಂದ ಮೇಲೆ ನಾನು ಪ್ರಶ್ನೆ ಮಾಡಿದೆ. ದೇವರೇಕೆ? ಪೂಜೆ ಯಾಕೆ? ಸಂಧ್ಯಾವಂದನೆ ಯಾಕೆ? ನಾನು ಪ್ರಶ್ನೆ ಮಾಡಿಕೊಂಡಿದ್ದೇನೆ. ಆಗ ಇದೆಲ್ಲವೂ ಅಸಂಬದ್ಧ ಅನ್ನಿಸಿಬಿಟ್ಟಿತ್ತು. ನಿನಗೆ ಅದು ಮುಖ್ಯವೋ? ಇದು ಮುಖ್ಯವೋ? ಪರಮಾತ್ಮನೇ ಹೀಗೆ. ಐ ಸ್ಟಿಲ್ ಪ್ಲೇ. ಲೀವ್ ಇಟ್. ಯು ಕ್ಯನ್ ಲೀವ್ ಇಟ್. ಎಲ್ಲಿರುತ್ತೀಯೋ ಒಂದು ಕಡೆಯಲ್ಲಿ ಅಲ್ಲೇ ಇರು. ನೀನು ಬೆಳಕಿಗೆ ಹೋಗಬೇಡ ಉದ್ಧಾರವಾಗಲಿಕ್ಕೆ. ಆದರೆ ಏನು ಸಾಧ್ಯ ನಿನ್ನಿಂದ ಅಷ್ಟು ಒಳ್ಳೆಯದನ್ನು ಮಾಡು. ಒಳ್ಳೆಯ ರೀತಿಯಲ್ಲಿ ನಡೆದುಕೋ. ಒಳ್ಳೆಯ ಕೆಲಸ ಮಾಡು. ಒಳ್ಳೆಯ ಮಾತನಾಡು. ಸಹಾಯ ಮಾಡು. ಉದ್ಧಾರವಾಗು. ಇದು ಸಹಜವಾಗಿ ಪಾಠ ಹೇಳಿದ್ದು ನನಗೆ. ಆದ್ದರಿಂದ ಜೀವನದಲ್ಲಿ ನನಗೆ ಸಮಸ್ಯೆಯೇ ಬರಲಿಲ್ಲ. ಕಷ್ಟ ಬಂತು. ನಿಷ್ಠುರ ಬಂತು. ಹೊಟ್ಟೆಗಿಲ್ಲದೇ ಓಡಾಡಿದೆ. ಆದರೆ ಸಮಸ್ಯೆಗಳೇ ಬರಲಿಲ್ಲ. ಹೇಗೋ ಮುಂದಕ್ಕೆ ಹೋಗೋದು. ನುಣುಚಿಕೊಂಡು ಹೋಗ್ತಾ ಇರೋದು. ಹಾಗೆಯೇ ಬಾಳು ಬೆಳೆದುಬಂದಿದೆ. ಎಲ್ಲ ದೇವರ ಕೃಪೆ.

ನೋವಿದೆ ಜೀವನದಲ್ಲಿ, ಆದರೆ ಸಮಸ್ಯೆ ಇದೆ ಎಂದು ನಾನು ತಿಳಿಯುವುದಿಲ್ಲ ಎಂದಿರಿ. ಆದರೆ ನನ್ನ ವಾರಿಗೆಯವರಿಗೆ ಇದು ನೀವು ಹೇಳಿದಷ್ಟು ಸುಲಭವಾಗಿ ನಾವು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ನಾವು ಸಮಸ್ಯೆ ಇದೆ ಎಂದು ತಿಳಿದುಕೊಂಡೇ ಬರೆಯುತ್ತೇವೆ.

ಸಮಸ್ಯೆ ಇದೆ. ನೋವೂ ಇದೆ. ಆದರೆ ಸಮಸ್ಯೆ ಮತ್ತು ನೋವು ಎರಡೂ ಒಂದೇ ಎಂದು ನಾನು ಹೇಳುವುದಿಲ್ಲ. ನೋವಿರುವೆಡೆಯೆಲ್ಲ ಸಮಸ್ಯೆ ಇರಬೇಕಾದ್ದಿಲ್ಲ. ಇರೋದಿಲ್ಲ. ಓಲ್ಡ್ ಟೆಸ್ಟೆಮೆಂಟ್‌ನಲ್ಲಿ ಜೋಬ್ ಹೇಳ್ತಾನೆ, ಒಳಗಿದ್ದ ದೇವರು ಈ ಆತ್ಮವನ್ನು ಹಿಡಿದಿಟ್ಟುಕೊಂಡಿದ್ದಾನೆ. ತೋಳಲ್ಲಿ ಹಿಡಿದಿಟ್ಟುಕೊಂಡಿದ್ದಾನೆ. ಬಿಟ್ಟಿಲ್ಲ ನಿನ್ನನ್ನು. ತುಂಬಾ ಕಷ್ಟ ಆಗಿದೆಯಲ್ಲ. ಹೌದು ಕಷ್ಟ ಆಗಿದೆ. ಎಲ್ಲರ ಜೀವನದಲ್ಲಿ ತಪ್ಪಿದ್ದಲ್ಲ. ಅದು ಜೀವನದ ಲಕ್ಷಣ. ನೀನು ಸಹಿಸಿಕೊಳ್ಳಬೇಕು. ದೇವರು ಕೊಟ್ಟಿರೋದು ಅದು. ಯಾಕೆ ಕೊಟ್ಟನೋ? ಅವನನ್ನೇ ಕೇಳು ಬೇಕಿದ್ರೆ ಹೇಳ್ತಾನೆ. ಇಷ್ಟ ಇಲ್ವೆ? ನಿನಗೆ ಗೊತ್ತಾಗೋದಿಲ್ಲ ಸುಮ್ಮನಿರು. ಎಂಥ ಮೌಲ್ಯ ಇದು ಮನುಷ್ಯನಿಗೆ ಕಷ್ಟದಲ್ಲಿ.

ಈ ಈವಿಲ್‌ಗೆ ಏನು ನೀವು ಹೇಳ್ತೀರಿ ಸರ್, ಈ ಕೆಡುಕಿದೆಯಲ್ಲ. ಅವಿದ್ಯೆ ಇದೆಯಲ್ಲ?

ಸೃಷ್ಟಿಯಲ್ಲಿ ಒಳ್ಳೆಯದು-ಕೆಟ್ಟದರ ನಡುವಣ ದ್ವಂದ್ವ ತಪ್ಪಿದ್ದಲ್ಲ. ನೀವು ಅದನ್ನು ಅಲ್ಲಿಗೇ ಬಿಟ್ಟು ಬಿಡಿ. ಕೆಡುಕು ಇಲ್ಲದಿದ್ದರೆ ಒಳ್ಳೆಯದೂ ಇಲ್ಲ. ಸುಳ್ಳಿಲ್ಲದಿದ್ದರೆ ಸತ್ಯವೂ ಇಲ್ಲ.

ಆ ಕೆಟ್ಟದ್ದು ನಿಮಗೆ ಸಮಸ್ಯೆಯಾಗಲಿಲ್ವ, ಲೇಖಕನಾಗಿ.

ಆಗಕೂಡದು ಅಂತ ನಾನು ಹೇಳುವುದು. ಸಮಸ್ಯೆ ಆಗತ್ತೆ ಯಾಕೆಂದರೆ ನೀವು ತಿಳಿದುಕೊಳ್ಳದೇ ಹೋದರೆ. ತಿಳಿದುಕೊಳ್ಳಿ. ಸಮಸ್ಯೆ ಆಗುವುದಿಲ್ಲ.

ಈ ಕಷ್ಟದ ನಡುವೆಯೇ ನಿಮಗೆ ಬರೆಯಬೇಕು ಅನಿಸಿದ್ದಾ ಸರ್?

ನಾನು ಬರೆದದ್ದರಲ್ಲಿ ಚಿಕ್ಕಂದಿನಿಂದಲೂ ಅದನ್ನೇ ಮಾಡಿದ್ದೇನೆ. ನನಗೆ ಬರಿ ಅಂತ ಯಾರೂ ಹೇಳಿಲ್ಲವಲ್ಲ. ನನಗೇ ಬಂದ ಪ್ರೇರಣೆ. 1921ರಲ್ಲಿ ನನಗೆ ಒಂದು ರೀತಿಯ ಅನುಭವ ಆಯಿತು, ಬೇಲೂರು ದೇವಸ್ಥಾನದಲ್ಲಿ. ಹೋಗಿ ದೇವರ ಮೂರ್ತಿಯನ್ನು ನೋಡಿ ಸಂತೋಷ ಪಟ್ಟು ಎಲ್ಲ ಆದಮೇಲೆ ನನಗೆ ಸಂತೋಷಕ್ಕಿಂತ ದುಃಖ ಹೆಚ್ಚಾಯಿತು. ಇಂಥ ಮೂರ್ತಿಯನ್ನು ಸೃಷ್ಟಿಸಿದ ನಮ್ಮ ಹಿರಿಯರು, ನಮ್ಮ ಜನ. ಅವರ ಸಂಪ್ರದಾಯದಲ್ಲಿ ಬೆಳೆದ ನಾವು. ಈ ಸೊಗಸೆಲ್ಲಿ? ನಾವೆಲ್ಲಿ? ಈ ದೇಶದಲ್ಲಿ ಇವತ್ತು ಒಂದು ತುಣುಕು ಕೂಡಾ ಸೃಷ್ಟಿ ಕಲ್ಪನೆ ಕಾಣುತ್ತಿಲ್ಲವಲ್ಲ. ಈ ಸೊಗಸೆಲ್ಲಿ ನಾವೆಲ್ಲಿ ಅಂತ ದುಃಖ ಬಂದು ಬಿಟ್ಟಿತು ನನಗೆ. ಅತ್ಕೊಂಡೆ ಅಲ್ಲಿ. ಯಾಕೆ ನಮಗೆ ಈ ಗತಿ ತಂದುಬಿಟ್ಟೆಯಪ್ಪ ನನ್ನಪ್ಪ. ದೇವರು ಅಂತ ಹೇಳ್ತಿದೀವಲ್ಲ. ದೊಡ್ಡವರು ಪೂಜೆ ಮಾಡಿದಾರಲ್ಲ. ಯಾಕೆ ಈ ದೇಶ ಹೀಗಾಯ್ತು? ಈ ಗತಿ ಬಂತು. ಒಳ್ಳೆಯ ಬರವಣಿಗೆ ಅಂತ ಒಂದು ಪಂಕ್ತಿ ಇಲ್ಲ. ಒಳ್ಳೆಯ ಹಾಡುವ ಒಬ್ಬ ಮನುಷ್ಯ ಇಲ್ಲ. ಒಳ್ಳೆಯ ಒಂದು ಚಿತ್ರ ಇಲ್ಲ. ಯಾಕೆ ಹೀಗಾಯ್ತು ಅಂತ ನನಗೆ ದುಃಖ ಬಂದ್ಬಿಟ್ತು.

ನಿಮ್ಮ ಬಾಲ್ಯದಲ್ಲಿ ಮುಂದೆ ನಿಮ್ಮನ್ನು ಲೇಖಕನಾಗಿ ರೂಪಿಸಿದ ಕೆಲವು ಅನುಭವಗಳಾದರೂ ಆಗಿರಬಹುದು. ಅವು ನಿಮ್ಮ ಮನಸಿನಲ್ಲಿ ಅಚ್ಚೊತ್ತಿ ನಿಂತಿರಬಹುದು.

ಹಾಂ. ನಾನು ಮೊನ್ನೆ ಯಾರಿಗೋ ಹೇಳಿದೆ- ‘ಐ ವಾಸ್ ಎ ಬಾರ್ನ್ ರೈಟರ್’ ಅಂತ. ಬರವಣಿಗೆ ಎನ್ನುವುದು ತನಗೆ ತಾನೇ ಒದಗಿ ಬಂದಿದ್ದು ನನಗೆ. ಅದಕ್ಕೆ ಕಾರಣ ಊರಿನಲ್ಲಿರುವ ಒಂದು ವಾತಾವರಣ. ರಾಮಾಯಣ, ಮಹಾಭಾರತ ವಾಚನ ಕೇಳ್ತಾ ಇದ್ದೆ. ಪುಸ್ತಕ ತೆಗೆದುಕೊಂಡು ಓದ್ತಾ ಇದ್ದೆ. ಮಿಡ್ಲ್ ಸ್ಕೂಲಿನಲ್ಲಿರುವಾಗ ಕನ್ನಡ ತರಗತಿಯಲ್ಲಿ ನನಗೆ ಕಾಳಿದಾಸ ಪರಿಚಯವಾದ. ಶೇಕ್ಸ್‌ಪಿಯರ್‌ನ ನಾಟಕಗಳ ಅನುವಾದಗಳನ್ನು ಓದಿದೆ. ಹನ್ನೊಂದು ವರ್ಷದವನಿರುವಾಗಲೇ ಶೇಕ್ಸ್‌ಪಿಯರ್‌ನ ಕಥೆಗಳು ಗೊತ್ತಿತ್ತು. ಕಾಳಿದಾಸನ ನಾಟಕ ಕಂಡೆ. ರಾಮಾಯಣ ಓದಿದೆ. ದೇವಿ ಮಹಾತ್ಮೆ ಕೇಳಿದ್ದೆ.

ನೀವು ಓದಿದ್ದು ಅಲ್ಲದೇನೆ ಪ್ರಕೃತಿಯ ಜೊತೆಯೋ ನಿಮ್ಮ ಮನೆಯ ಪರಿಸರದಲ್ಲೋ

ಅದನ್ನು ಹೇಗೆ ಹೇಳುವುದು? ಹೇಳೋಕಾಗತ್ಯೆ ಇವತ್ತು. ಅದು ಬಾಲ್ಯದ ಚಿತ್ರ. ನಮ್ಮ ಹೊಂಗೇನಹಳ್ಳಿ ಭಾರಿ ಚಿಕ್ಕದಾದ ಊರು. ಇವತ್ತು ಅಲ್ಲಿಗೆ ಹೋಗಿ ನೋಡಿದರೆ ನಾನು ಹೇಳುವ ಯಾವುದೂ ಇಲ್ಲ ಅಲ್ಲಿ. ಹೊಂಗೇನಹಳ್ಳಿಯ ಊರ ಬಾಗಿಲಿನಿಂದ ಹೊರಟರೆ ತೋಟದ ಬಾವಿ ಸಿಕ್ತಿತ್ತು. ಬಲಗಡೆಗೆ ಹನುಮಂತರಾಯನ ದೇವಸ್ಥಾನ. ಎದುರಿಗೊಂದು ಬೃಹದಾಕಾರದ ಅಶ್ವತ್ಥ ಮರ. ಅಲ್ಲಿಂದ ಎಡಕ್ಕೆ ಹೋದರೆ ಅಲ್ಲೊಂದು ನೇರಳೆ ಹಣ್ಣಿನ ಗಿಡ. ಹೊಟ್ಟೆ ತುಂಬಾ ನೇರಳೆ ಹಣ್ಣನ್ನು ತಿನ್ನೋದು. ಅಲ್ಲಿಂದ ಮುಂದಕ್ಕೆ ಹೋದರೆ ಅಲ್ಲೊಂದು ಅತ್ತಿಮರ. ಅದರ ತುಂಬಾ ಅತ್ತಿ ಹೂವು-ಹಣ್ಣು ಬಿಟ್ಟಿರೋದು. ಅದರ ಹಣ್ಣೂ ರುಚಿಯೇ. ಹೂವೂ ರುಚಿಯೇ.

ಕನ್ನಡದಲ್ಲಿ ನೀವೊಬ್ರೇ ಲೇಖಕರು ಅಂತ ಕಾಣಿಸತ್ತೆ. ಪೇಟೆ ವಿಷಯವನ್ನೂ ಬರೆದಿದ್ದೀರಿ. ಹಳ್ಳಿ ವಿಷಯವನ್ನೂ ಬರೆದಿದ್ದೀರಿ. ಎರಡನ್ನೂ ದಟ್ಟವಾಗಿ ಬರೆದಿದ್ದೀರಿ. ಹೊಂಗೇನಹಳ್ಳಿ ನಿಮ್ಮ ಮನಸಿನಲ್ಲಿ ಮೂಡಿದ ಹಾಗೆ ನಿಮ್ಮ ಬಾಲ್ಯದಲ್ಲಿ ಕಂಡ ಯಾವ ಪೇಟೆ ನಿಮ್ಮ ಮನಸಿನಲ್ಲಿ ಉಳಿದಿದೆ?
ಮಾಸ್ತಿ ಪೇಟೆ ಮನಸಿನಲ್ಲಿ ಉಳಿದಿದೆ. ಹಳ್ಳಿಯಿಂದ ಬಂದ ನನಗೆ ಮಾಸ್ತಿಯೇ ಪೇಟೆ.

ಮಾಸ್ತಿಗೆ ಮತ್ತೆ ಯಾವಾಗ ಹೋಗಿದ್ದಿರಿ ಸರ್?

ನಾಲ್ಕು ತಿಂಗಳ ಹಿಂದಷ್ಟೇ ಹೊಂಗೇನಹಳ್ಳಿಗೆ ಹೋಗಿದ್ದೆ. ಮಾಸ್ತಿಯಲ್ಲಿ ನಾನೊಂದು ಲೈಬ್ರರಿ ಮಾಡಿದ್ದೀನಿ. ಅದರ ಉದ್ಘಾಟನೆಗೆ ಹೋಗಿದ್ದೆ. ನನ್ನ ಹಳ್ಳಿಯ ಗ್ರಾಮಸ್ಥರಿಗೆ ನನ್ನ ಕೈಯಲ್ಲಿ ನಡೆದ ಸಣ್ಣ ಒಂದು ಕೆಲಸ ಇದು.

ಬಹಳ ಒಳ್ಳೆಯ ಜೆಶ್ಚರ್ ಅದು. ನಾವು ಹುಟ್ಟಿದ ಹಳ್ಳಿಗೆ ಮಾಡಬಹುದಾದದ್ದು
ನನ್ನನ್ನು ಕಾಪಾಡಿದ ಊರು ಸರ್ ಅದು.

ಹೊಂಗೇನಹಳ್ಳಿಯಲ್ಲಿ ದೊಡ್ಡ ಅರಳಿಮರ ಇತ್ತು ಅಂದ್ರಲ್ಲ, ಅದು ಇನ್ನೂ ಇದೆಯಾ ಸರ್?
ಇಲ್ಲ ಆ ಮರ ಹೋಗಿ ಆಗಿದೆ.

ಯಾವ ಮರ ಉಳಿದಿದೆ? ಅತ್ತಿಮರ ಇದೆಯಾ?

ಅತ್ತಿ ಮರವೂ ಇಲ್ಲ. ನೇರಳೆ ಮರವೂ ಇಲ್ಲ. ಒಂದು ಆಲದ ಮರ ಇತ್ತು, ಅದು ಈಗ ಇಲ್ಲ. ನಾನು ಹೇಳ್ತಾ ಇರುವುದು 1902ರ ಹೊಂಗೇನಹಳ್ಳಿಯ ವಿಷಯ. 1908ರಲ್ಲಿ ನಾನು ಮೆಟ್ರಿಕ್ ಪಾಸಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಎಫ್.ಎ ಓದಲು ಹೋದೆ.  ಊರಿನಲ್ಲಿರುವ ಯಾರಿಗೂ ಆಗ ಪರಸ್ಪರರಲ್ಲಿ ವೈಷಮ್ಯ ಇರಲಿಲ್ಲ. ಯಾರೂ ಯಾರ ವಿಷಯಕ್ಕೂ ಕೆಟ್ಟ ಮಾತು ಕೆಟ್ಟ ಯೋಚನೆ ಮಾಡ್ತಾ ಇರಲಿಲ್ಲ. ಈಗ ಹಾಗಿಲ್ಲ. ಅದು ಹೋಯ್ತು. ಯಾಕೆ? ವೋಟಿಂಗ್. ನಮ್ಮ ಜಾತಿಯವನಿಗೆ ವೋಟ್ ಕೊಡು. ನನ್ನ ಜಾತಿಯವನಿಗೆ ವೋಟ್ ಕೊಡು. ಯಾರೋ ಬೇರೊಬ್ಬರಿಗೆ ವೋಟು ಕೊಟ್ಟರೆ, ಏನೋ ನೀನು ನಮ್ಮ ಜಾತಿಗೆ ಹುಟ್ಟಿದ್ಯಾ? ನೀನು ಯಾವ ಜಾತಿಗೆ ಹುಟ್ಟಿದೀಯಾ ಅಂತ ಕೇಳ್ತಾರೆ. ಅಯ್ಯಾ, ಒಳ್ಳೆತನ ದೊಡ್ಡದು. ಕಾಸು ದೊಡ್ಡದಲ್ಲ ಅಂತ ನೀವು ಜನಕ್ಕೆ ಹೇಳಿಕೊಡಬೇಕು.

ಹೇಳಿಕೊಟ್ಟರೆ ಕಲೀತಾರಾ ಸರ್?

ಕಲೀತಾರೆ. ಕಲೀಲಿಕ್ಕೆ ಸಾಧ್ಯವೇ ಇಲ್ಲದ ಮನುಷ್ಯನೇ ಇಲ್ಲ.

ನಮ್ಮ ಹಿರಿಯ ಲೇಖಕರಲ್ಲಿ ದಾಂಪತ್ಯ ಜೀವನದ ಬಗ್ಗೆ, ಕಾಮದ ಬಗ್ಗೆ ಬಹಳ ಆರೋಗ್ಯಕರವಾದ ಮತ್ತು ಬಹಳ ಪಾಸಿಟಿವ್ ಆದ ಮಾತನ್ನಾಡಿದವರು ನೀವು ಅಂತ ನನಗನ್ನಿಸುತ್ತದೆ.

ಚಿಕ್ಕವಯಸಿನಿಂದಲೂ ನಮ್ಮ ಗ್ರಾಮಜೀವನದಲ್ಲಿ ಎಲ್ಲ ಕಂಡಿದೀನಿ ಸರ್ ನಾನು. ನನ್ನ ಗ್ರಾಮದಲ್ಲಿ ಎಲ್ಲ ಕಂಡಿದೀನಿ ನಾನು. ಒಳ್ಳೆ ಹೆಂಗಸು-ಒಳ್ಳೆ ಗಂಡಸು, ದುಷ್ಟ ಗಂಡಸು-ದುಷ್ಟ ಹೆಂಗಸು ಎಲ್ಲ ಕಡೆಯೂ ಇರೋ ಸತ್ಯ. ಅನೇಕ ದೊಡ್ಡ ಮನುಷ್ಯರಲ್ಲಿ ಹೆಂಡತಿ ಒಬ್ಬಳೇ ಸಾಕು ಅಂತ ಏಕ ಪತ್ನಿವ್ರತಸ್ಥರಾಗಿರುವವರು ಪ್ರಾಯಶಃ ತುಂಬಾ ಕಡಿಮೆ. ಹೆಣ್ಣು ಸಹ ಅಷ್ಟೇನೇ, ಅನೇಕ ಬಾರಿ ಯಾರೋ ಒಬ್ಬನಿಗೆ ಸೋಲ್ತಾಳೆ. ಅದು ಅಂಥ ಪಾತಕ ಆಗುವುದಿಲ್ಲ. ಆದರೆ ಸಮಾಜದ ದೃಷ್ಟಿಯಲ್ಲಿ ತಪ್ಪು ಅಷ್ಟೆ.

ಒಟ್ಟು ಕನ್ನಡ ಸಾಹಿತ್ಯದಲ್ಲಿ ‘ಅಣ್ಣ’ ಅಂತ ನಿಮ್ಮನ್ನು ಕರೆಯುತ್ತಾರೆ, ಅದರ ಜೊತೆಗೆ ನಿಮ್ಮ ಬರವಣಿಗೆಯ ರೀತಿಗೆ ನಿಮ್ಮ ನಿಲುವಿಗೆ ಪ್ರಗತಿಶೀಲರಿಂದ ಸ್ವಲ್ಪ ಮಟ್ಟಿಗೆ ವಿರೋಧ ಬಂತಲ್ವಾ?

ಇಲ್ಲ ಇಲ್ಲ. ನನ್ನ ಬರವಣಿಗೆ ವಿಷಯದಲ್ಲಿ ಅವರೇನೂ ಹೇಳಲಿಲ್ಲ. ಸಮಾಜದ ಕೆಡುಕಿನ ಬಗ್ಗೆ ನೀವು ಏನನ್ನೂ ಹೇಳುವುದಿಲ್ಲ. ಸಮಾಜ ಸುಧಾರಣೆ ಕಾಣಬೇಕು ಅನ್ನೋ ಮಾತನ್ನು ನೀವು ಆಡುವುದಿಲ್ಲ. ಈ ರೀತಿ ಹೇಳಿದರು. ನಾನು ಹೇಳಿದೆ, ಪ್ರಗತಿಶೀಲ ಎನ್ನುವುದು ಸಮಾಜದ ಒಂದು ಭಾಗ ಆಗಬಹುದೇ ಹೊರತು ಸಾಹಿತ್ಯವೆಲ್ಲವೂ ಪ್ರಗತಿಶೀಲ ಆಗೋದಿಲ್ಲ. ಪ್ರಗತಿ ಬೇಕು, ಅದರ ಬಗ್ಗೆ ಮಾತಾಡಬೇಕು, ಆದರೆ ಅದು ಒಂದೇ ಆಗಬಾರದು. ಮನೆ ತಾಯಿ ಮನೆಯ ಕಸ ಗುಡಿಸ್ತಾಳೆ, ಆದರೆ ಅವಳು ಕಸಗುಡಿಸುವಾಕೆಯೇ? ಅಡಿಗೆ ಮಾಡಿ ಹಾಕ್ತಾಳೆ. ಅವಳು ಅಡಿಗೆಯಾಕೆಯೇ? ಅಲ್ವಲ್ಲ. ಅವಳು ಮನೆತಾಯಿ. ಕೃಷ್ಣರಾಯ (ಅನಕೃ) ಅಣ್ಣಾ ಅಂತ್ಲೇ ಮಾತಾಡಿಸೋನು. ಕೆಲವೊಮ್ಮೆ ಬಯ್ದೂ ಬಿಡೋನು. ಅಭಿಮಾನ ಇಟ್ಟುಕೊಂಡೇ ಬಯ್ಯೋನು. ಒಂದು ಸಂದರ್ಭದಲ್ಲಿ ನನ್ನನ್ನುದ್ದೇಶಿಸಿ ಆರಕ್ಕೆ ಹೆಚ್ಚಿಲ್ಲ ಮೂರಕ್ಕೆ ಕಡಿಮೆಯಿಲ್ಲ ಎಂದ. ನಾನು, ಮಾರಾಯ ಪುಣ್ಯವಂತ ನೀನು ಮೂರಕ್ಕೆ ಕಡಿಮೆಯಿಲ್ಲ ನೋಡು ಅಂತಂದೆ.

‘ಶೂದ್ರ ತಪಸ್ವಿ’ ಬಗ್ಗೆ ನಿಮಗೂ ಕುವೆಂಪುಗೂ ನಡೆದ ಚರ್ಚೆ ಬಗ್ಗೆ

ಏನಿಲ್ಲ. ಚರ್ಚೆಯೇ ಆಗಲಿಲ್ಲ ನಮ್ಮ ನಡುವೆ. ಅವರು ಬರೆದರು. ನಾನು ಹೇಳಿದೆ- ಹಿಂದೂ ಸಮಾಜ ಕೆಟ್ಟಿದೆ, ಹೌದು ಅದನ್ನು ಸರಿಪಡಿಸಬೇಕು. ಆದರೆ ಹೀಗೆ ಆಗಬೇಕಾದರೆ ಬ್ರಾಹ್ಮಣನನ್ನು ಒಕ್ಕಲಿಗ ಬಯ್ಯೋದು, ಒಕ್ಕಲಿಗನನ್ನು ಬ್ರಾಹ್ಮಣ ಬಯ್ಯೋದು ಹೀಗೆ ಮಾಡಬಾರದು. ಹೀಗೆ ಮಾಡಿದ್ರೆ ಕೆಲಸ ಆಗೋದಿಲ್ಲ. ಪುಟ್ಟಪ್ಪ ಒಕ್ಕಲಿಗ ಸಮಾಜದ ಶಿಖರ. ಅವನು ಒಳ್ಳೆಯ ಮಾತಾಡಬೇಕು. ಬ್ರಾಹ್ಮಣರನ್ನು ಬಯ್ಯಬಾರದು. ಬ್ರಾಹ್ಮಣರನ್ನು ಅಪಹಾಸ್ಯಕ್ಕೆ ಗುರಿಪಡಿಸಬಾರದು. ಒಳ್ಳೆ ಮಾತಿನಿಂದ ಸರಿಪಡಿಸಬೇಕು.

ಬ್ರಿಟಿಷರು ಬಂದು ನಮ್ಮನ್ನು ಆಳೋದು ನಮ್ಮನ್ನು ದಾಸ್ಯಕ್ಕೆ ಗುರಿಪಡಿಸಿದ್ದು ಇದೆಲ್ಲಕ್ಕೆ ಈ ದೇಶ ಜಾತಿ ಪದ್ಧತಿಯಿಂದ ಒಡೆದು ಹೋಗಿದ್ದೇ ಕಾರಣವೇ?

ಅಲ್ಲ. ಅಲ್ವೇ ಅಲ್ಲ. ಅವರು ಬಂದ್ರು ಆಸೆ ತೋರಿಸಿದರು. ಹಳಸಿದ ಹಿಟ್ಟಿಗೆ ಹೋದ ನಾಯಿ ಹಾಗೆ ಅವರು ಕೊಡುವ ಸಂಬಳಕ್ಕೆ ಅವರ ಹಿಂದೆ ಹೋದ್ವಿ.

ಎಷ್ಟನೇ ವಯಸ್ಸಿಗೆ ನಿಮ್ಮ ಮದುವೆಯಾಯಿತು ಸರ್?

ಮದುವೆಯಾಗುವಾಗ ಅವಳು ಹುಡುಗಿ ನಾನು ಹುಡುಗ. ಅವಳು ಹನ್ನೆರಡು ವಯಸ್ಸಿನ ಹುಡುಗಿ ನಾನು ಇಪ್ಪತ್ತರ ವಯಸ್ಸಿನ ಹುಡುಗ. ನಾವು ಒಬ್ಬರಿಗೊಬ್ಬರು ಮಾತಾಡಿಸೋದೇ ತಪ್ಪಾಗಿತ್ತು. ಮದುವೆಯಾದ ಹೊಸತರಲ್ಲಿ ಹುಡುಗಿ ಹುಡುಗ ಮಾತಾಡೋ ಹಾಗಿಲ್ಲ. ಮಾತಾಡೋಕೆ ಏನಿತ್ತು? ಏನೂ ಇರೋದಿಲ್ಲ. ಶೀ ವಾಸ್ ಎ ವೆರಿಗುಡ್ ವೈಫ್. ವೆರಿಗುಡ್ ವುಮನ್, ವೆರಿಗುಡ್ ಪರ್ಸನ್. ಕನ್ನಡದ ಕೆಲಸ ಅಂತ ಯಾರೇ ಮನೆಗೆ ಬಂದ್ರೂ ಅವರನ್ನು ಕೂರಿಸಿ ಮಾತಾಡಿಸಿ ಏನು ವಿಷಯ ಕೇಳಿ ನನಗದನ್ನು ತಿಳಿಸೋದು ಎಲ್ಲ ಮಾಡೋರು.

ನಿಮ್ಮ ಸ್ತ್ರೀ ಪಾತ್ರಗಳು ಒಂದು ದೃಷ್ಟಿಯಿಂದ ಅನನ್ಯರಾಗಿರುತ್ತವೆ. ನಿಮ್ಮ ತಾಯಿ ಮತ್ತು ಮನೆಯವರ ಜೊತೆಗಿನ ಅನುಭವದ ಪ್ರಭಾವ ಅಲ್ಲಿದೆಯಾ?

ನಮ್ಮ ತಾಯಿ. ನಾನು ಈಗಾಗಲೇ ಹೇಳಿದ್ದೇನೆ ದೇವರಿದ್ದಾನೆ ಅನ್ನೋದಕ್ಕೆ ಸಾಕ್ಷಿ ಏನು ಅಂದರೆ ತಾಯಿ. ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ ಪ್ರತಿರೂಪವೇ ಅದು. ಚಂಡಾಲ ಆಗಬಹುದು ಗುರು ಶಂಕರಾಚಾರ್ಯನೇ ಆಗಬಹುದು ಏನಾಗತ್ತೆ ಅನ್ನೋ ಯೋಚನೆಯೇ ಇಲ್ಲದೆ ಸಾಗೋದೊಂದೆ ಕೆಲಸ ತಾಯಿಗೆ, ತನ್ನದು ಅಂದುಕೊಂಡು. ಈ ಮಮತೆ ಈ ವಾತ್ಸಲ್ಯ ಎಲ್ಲ ದೇವರೊಬ್ಬನಿಗೆ ಮಾತ್ರ ಸಾಧ್ಯ. 

ತಾವು ರಾಮಾನುಜಾಚಾರ್ಯ ಪಂಥದವರು ಆಗಿರುವುದರಿಂದಲೇ ಉದಾರತಾ ದೃಷ್ಟಿ ನಿಮಗೆ ಸಾಧ್ಯವಾಯಿತೇ?

ಇದೆ ಇದೆ. ನಮ್ಮ ಹಿರಿಯರು ಅವರು ರಾಮಾನುಜಾಚಾರ್ಯರು. ‘ಆಚಾರ್ಯರ ಪತ್ನಿ’ ಕಥೆಯಲ್ಲಿ ಬರೆದಿದ್ದೇನಲ್ಲ ನಾನು. ಆಚಾರ್ಯ ಬಹಳ ಒಳ್ಳೆಯ ಮನುಷ್ಯ. ವೆರಿ ಲವಬಲ್ ಮ್ಯಾನ್. ಆದರೆ ತಪ್ಪು ಮಾಡಿದ. ಹೀ ಗೇವ್ ಹಿಸ್ ವೈಫ್ ಪೂರ್ ರೀಸನ್.

ನಿಮ್ಮಲ್ಲಿ ಆರ್ಥೊಡಾಕ್ಸಿ ಇದೆಯಲ್ಲ, ಆದ್ದರಿಂದ ಗಾಂಧಿಯವರನ್ನು ಓದಿದಾಗ ನಿಮಗೇನಾದರೂ ಸಮಸ್ಯೆಯಾಯಿತಾ?

ಗಾಂಧೀಜಿ ನನಗೆ ಸಮಸ್ಯೆಯಾದದ್ದು ಎಲ್ಲೂ ಇಲ್ಲ. ಅವರು ಆಡಿದ ಮಾತು ಕೆಲವೊಮ್ಮೆ ಸರಿಯಿಲ್ಲ ಅಂತ ಹೇಳಿದ್ದೇನೆ. ಗಾಂಧೀಜಿ ಗ್ರೇಟ್ ಅಂತ ಗೊತ್ತಿದೆ.
                                                                                                       
ಡಿ.21 ಯು.ಆರ್.ಅನಂತಮೂರ್ತಿ ಅವರ 79ನೇ ಹುಟ್ಟುಹಬ್ಬ. ಈ ಸಂಭ್ರಮದ ಆಚರಣೆ ಉಡುಪಿಯಲ್ಲಿ ನಡೆಯಲಿದ್ದು, ಆ ಸಂದರ್ಭದಲ್ಲಿ ‘ಅನಂತಮೂರ್ತಿ ಮಾತುಕತೆ: ಹತ್ತು ಸಮಸ್ತರ ಜೊತೆ’ ಕೃತಿ ಬಿಡುಗಡೆಯಾಗಲಿದೆ (ಸಂ: ಎಚ್.ಪಟ್ಟಾಭಿರಾಮ ಸೋಮಯಾಜಿ, ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ). ಈ ಪುಸ್ತಕದಿಂದ ಆಯ್ದ ಸಂದರ್ಶನ ಇಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT