ಸೋಮವಾರ, ಮೇ 23, 2022
21 °C

ಒಳ ಮೀಸಲಾತಿ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಒಳ ಮೀಸಲಾತಿ ವರ್ಗೀಕರಣ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಮಾದಿಗ ಜನಾಂಗವು ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೂ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಪರಿಶಿಷ್ಟರಿಗೆ ನೀಡಲಾಗುತ್ತಿರುವ ಬಹುತೇಕ ಸೌಲಭ್ಯ ಮಾದಿಗ ಜನಾಂಗಕ್ಕೆ ದೊರೆಯದೇ ಇತರರ ಪಾಲಾಗುತ್ತಿವೆ. ರಾಜಕೀಯ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಮಾದಿಗ ಸಮುದಾಯಕ್ಕಿಂತ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಇತರೆ ಜಾತಿಗಳು ಹೆಚ್ಚಿನ ಸೌಲಭ್ಯ ಪಡೆಯುತ್ತಿವೆ. ಇದರಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಹಾಗೂ ಇತರೆ ಮಾದಿಗಪರ ಸಂಘಟನೆಗಳು ಕಳೆದ ಎರಡು ದಶಕಗಳಿಂದ ಮಾದಿಗ ಸಮುದಾಯಕ್ಕೆ ಸಂವಿಧಾನ ಬದ್ಧವಾದ ಒಳ ಮೀಸಲಾತಿ ವರ್ಗೀಕರಣ ಮಾಡುವಂತೆ ರಾಜ್ಯದಲ್ಲಿ ಹಲವು ರೀತಿಯ ಹೋರಾಟ ನಡೆಸುತ್ತಾ ಬಂದರೂ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಅವರು ಈಚೆಗೆ ಚಿತ್ರದುರ್ಗದಲ್ಲಿ ನಡೆದ ಮಾದಾರ ಚನ್ನಯ್ಯ ಗುರುಪೀಠದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಒಳ ಮೀಸಲಾತಿ ವರ್ಗೀಕರಣ ಮಸೂದೆ ಮಂಡಿಸುವುದಾಗಿ ಹೇಳಿಕೆ ನೀಡಿದ್ದು, ಅದರಂತೆ ಮುಖ್ಯಮಂತ್ರಿ ಬರುವ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ, ಮುಖಂಡರಾದ ಎಂ. ಚೌಡಪ್ಪ, ಅಂಜಿನಪ್ಪ ಕಡತಿ, ಜಿ.ಎಚ್. ಮಹೇಶ್, ಕೆ.ಎಂ. ಅಂಜಿನಪ್ಪ, ಎಸ್.ಎಚ್. ಮೈಲಪ್ಪ, ದೇವೇಂದ್ರಪ್ಪ ಬೆಳಲಗೆರೆ, ಎಸ್.ಡಿ. ನಾಗರಾಜ್, ಕೆ.ಬಿ. ರುದ್ರೇಶ್, ಎಂ. ಮಳ್ಳೇಶ್, ಬಸವರಾಜ ಕನ್ನಕಟ್ಟೆ, ಮಾನಸ ತಿಪ್ಪೇಸ್ವಾಮಿ, ಬಿ. ದುರುಗೇಶ್, ಎಸ್.ಎಚ್. ದುಗ್ಗೇಶ್ ಉಪಸ್ಥಿತರಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.