ಶನಿವಾರ, ಏಪ್ರಿಲ್ 17, 2021
28 °C

ಓಟಿಗಾಗಿ ನೋಟು ಕಾಂಗ್ರೆಸ್‌ಗೆ ಇಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಯುಪಿಎ-1ರ ‘ಓಟಿಗಾಗಿ ನೋಟು’ ಹಗರಣವು ಗುರುವಾರ ಸಂಸತ್ತಿನ ಉಭಯ ಸದನಗಳಲ್ಲೂ ಬಿರುಗಾಳಿ ಎಬ್ಬಿಸಿತು. ‘ಮೂರು ವರ್ಷದ ಹಿಂದೆ ವಿಶ್ವಾಸ ಮತ ಯಾಚನೆ ವೇಳೆ ಕೆಲವು ಸಂಸದರಿಗೆ ಹಣ ನೀಡಿ ಅಧಿಕಾರ ಉಳಿಸಿಕೊಳ್ಳಲಾಗಿದೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ ಕೊಡಬೇಕೆಂದು ಎನ್‌ಡಿಎ ಮತ್ತು ಎಡಪಕ್ಷಗಳು ಒತ್ತಾಯಿಸಿದ್ದರಿಂದ ಸರ್ಕಾರ ತೀವ್ರ ಮುಜುಗರ ಅನುಭವಿಸಿತು.ದಿ ಹಿಂದು ಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ವರದಿ ಕೋಲಾಹಲಕ್ಕೆ ಕಾರಣವಾಯಿತು. ಈ ವರದಿ ಹಿನ್ನೆಲೆಯಲ್ಲಿ ಮನಮೋಹನ್‌ಸಿಂಗ್ ಸರ್ಕಾರ ರಾಜೀನಾಮೆ ಕೊಡಬೇಕು ಎಂದು ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸದಸ್ಯರು ಆಗ್ರಹಿಸಿದರು. ಎಡ ಪಕ್ಷಗಳೂ ಯುಪಿಎ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವುದರಲ್ಲಿ ಹಿಂದೆ ಬೀಳಲಿಲ್ಲ.ಬೆಳಿಗ್ಗೆ 11ಕ್ಕೆ ಲೋಕಸಭೆ ಸಮಾವೇಶಗೊಳ್ಳುತ್ತಿದ್ದಂತೆ ಸಿಪಿಐನ ಗುರುದಾಸ್ ದಾಸ್‌ಗುಪ್ತ ಈ ವಿಷಯ ಪ್ರಸ್ತಾಪಿಸಿ ಯುಪಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರಧಾನಿ ಸದನಕ್ಕೆ ಬಂದು ಹೇಳಿಕೆ ಕೊಡಬೇಕು ಎಂದು ಆಗ್ರಹಿಸಿದರು. ಈ ಪ್ರಕರಣದಿಂದ ಹುಟ್ಟಿಕೊಂಡ ಅನುಮಾನ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ‘ಇದೊಂದು ನಾಚಿಕೆಗೇಡಿನ ಸರ್ಕಾರ. ಹಣ ಕೊಟ್ಟು ವಿಶ್ವಾಸಮತ ಸಾಬೀತು ಮಾಡಿದ ಆರೋಪದಿಂದಾಗಿ ನೈತಿಕತೆ ಕಳೆದುಕೊಂಡಿದ್ದು, ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು. ಕೂಡಲೇ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಪಡಿಸಿದರು.ಸರ್ಕಾರದ ಸಮರ್ಥನೆಗೆ ಮುಂದಾದ ಕಾಂಗ್ರೆಸ್ ಸದಸ್ಯರು ಎದುರಾಳಿಗಳ ಜತೆ ಮಾತಿನ ಚಕಮಕಿ ನಡೆಸಿದರು. ಇದರಿಂದ ಕೋಲಾಹಲ ಉಂಟಾಗಿ ಮೂರು ಸಲ ಕಲಾಪವನ್ನು ಮುಂದೂಡಲಾಯಿತು.ಅಂತಿಮವಾಗಿ ಸಂಜೆ 6 ಗಂಟೆಗೆ ಲೋಕಸಭೆ ಸಮಾವೇಶಗೊಂಡಾಗ ವಿರೋಧ ಪಕ್ಷಗಳು ತಮ್ಮ ಬೇಡಿಕೆಗೆ  ಅಂಟಿಕೊಂಡವು. ಆರೋಪ ಕುರಿತು ಪ್ರಧಾನಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದವು. ಪ್ರಧಾನಿ  ಸದನದಲ್ಲಿ ಹಾಜರಿದ್ದರೂ ಮೌನವಾಗಿ ಎಲ್ಲವನ್ನೂ ಗಮನಿಸುತ್ತಿದ್ದರು. ಕೊನೆಗೂ ಒತ್ತಡಕ್ಕೆ ಸರ್ಕಾರ ಮಣಿಯದಿದ್ದರಿಂದ ವಿರೋಧಿಗಳ ಸಭಾತ್ಯಾಗವೂ ನಡೆಯಿತು.ರಾಜ್ಯಸಭೆಯಲ್ಲೂ ಈ ಹಗರಣ ಕೋಲಾಹಲ ಸೃಷ್ಟಿಸಿತು. ಆದರೆ, ಸರ್ಕಾರದ ಪರ ಹೇಳಿಕೆ ನೀಡಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ‘ಇದು 14ನೇ ಲೋಕಸಭೆ ವಿಷಯವಾದ್ದರಿಂದ 15ನೇ ಲೋಕಸಭೆಯಲ್ಲಿ ಚರ್ಚಿಸಲಾಗದು’ ಎಂದು ವಿರೋಧ ಪಕ್ಷಗಳ ಬೇಡಿಕೆಯನ್ನು ತಳ್ಳಿ ಹಾಕಿದರು.‘ಅಮೆರಿಕ ಮತ್ತು ಅದರ ಇಲ್ಲಿನ ರಾಯಭಾರಿ ಕಚೇರಿ ನಡುವಿನ ಪತ್ರ ವ್ಯವಹಾರದಲ್ಲಿ ಈ ಆರೋಪ ಪ್ರಸ್ತಾಪವಾಗಿರುವುದರಿಂದ ಸರ್ಕಾರ ದೃಢಪಡಿಸುವುದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ’ ಎಂದರು.ಹಲವು ಮಹತ್ವದ ರಹಸ್ಯಗಳನ್ನು ಬಯಲಿಗೆಳೆದಿರುವ ‘ವಿಕಿಲೀಕ್ಸ್’ ಅಮೆರಿಕ ಸರ್ಕಾರ ಹಾಗೂ ಆ ದೇಶದ ರಾಯಭಾರ ಕಚೇರಿಯ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ಆರೋಪ ಮಾಡಿದೆ. ಇದು ದೇಶಕ್ಕೆ ಅಪಮಾನ ಎಂದು ವಿರೋಧ ಪಕ್ಷಗಳ ಸದಸ್ಯರು ಗದ್ದಲ ಸೃಷ್ಟಿಸಿದರು.‘ಪ್ರತಿ ಲೋಕಸಭೆಯೂ ಆಯಾ ಕಾಲಕ್ಕೆ ಸಾರ್ವಭೌಮ ಆಗಿರುತ್ತದೆ. 14ನೇ ಲೋಕಸಭೆಯ ಬಗ್ಗೆ 15ನೇ ಲೋಕಸಭೆ ತೀರ್ಮಾನ ಮಾಡಲು ಬರುವುದಿಲ್ಲ. ಸರ್ಕಾರವೂ ಆಯಾ ಸಂದರ್ಭಕ್ಕೆ ಮಾತ್ರ ಹೊಣೆಯಾಗಿರುತ್ತದೆ. 14ನೇ ಲೋಕಸಭೆಯಲ್ಲಿ ನಡೆದಿದ್ದೆಲ್ಲವೂ ಮುಗಿದ ಅಧ್ಯಾಯ’ ಎಂದು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಪ್ರಣವ್ ಯತ್ನಿಸಿದರು.

 

‘ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನ್ಯಾಯಾಲಯ ಪರಿಗಣಿಸುವುದೇ’ ಎಂದು ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರನ್ನು ಕೇಳಿದರು.ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿ ಸರಿ ಇದೆಯೇ ಎಂದು ಹಣಕಾಸು ಸಚಿವರಿಂದ ಜೇಟ್ಲಿ ಸ್ಪಷ್ಟನೆ ಕೇಳಿದರು. ಇದು ಭಾರತದಲ್ಲಿ ನಡೆದ ಘಟನೆಯಾದ್ದರಿಂದ ‘ರಾಜತಾಂತ್ರಿಕ ಇಮ್ಯುನಿಟಿ’ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದರು.ಪ್ರಣವ್ ಅವರ ವಾದವನ್ನು ಜೇಟ್ಲಿ ಒಪ್ಪಲಿಲ್ಲ. ‘ನೀವು ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದೀರಿ’ ಎಂದು ಚುಚ್ಚಿದರು. ಇದರಿಂದ ಸಿಟ್ಟಿಗೆದ್ದ ಹಣಕಾಸು ಸಚಿವರು ‘ನಿಮಗೆ ಧೈರ್ಯ ಇದ್ದರೆ ನ್ಯಾಯಾಲಯಕ್ಕೆ ಹೋಗಿ’ ಎಂದು ಸವಾಲೆಸೆದರು. ಆಡಳಿತ ಮತ್ತು ವಿರೋಧ ಪಕ್ಷದ ಚಕಮಕಿ ಪರಿಣಾಮವಾಗಿ ಸದನವನ್ನು ಮುಂದಕ್ಕೆ ಹಾಕಲಾಯಿತು.ಸದನ ಮತ್ತೆ ಎರಡು ಗಂಟೆಗೆ ಸಮಾವೇಶಗೊಂಡಾಗ ‘ನೀವು ಪಾಪ ಕೃತ್ಯ ಮಾಡಿರುವುದರಿಂದ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದೀರಿ. ತಕ್ಷಣ ರಾಜೀನಾಮೆ ಕೊಡಿ’ ಎಂದು ಜೇಟ್ಲಿ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.