ಗುರುವಾರ , ಏಪ್ರಿಲ್ 15, 2021
28 °C

ಓದುತ್ತಲೇ ಜೀವನದ ನೊಗ ಹೊತ್ತ ಬಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ: ತಾಯಿ-ತಂದೆಯನ್ನು ಕಳೆದುಕೊಂಡು ತಬ್ಬಲಿಯಾದರೂ ಧೃತಿಗೆಡದೆ ತನ್ನ ಇಬ್ಬರು ಒಡಹುಟ್ಟಿದವರನ್ನು ಓದಿಸುತ್ತಾ, ಜೀವನ ನಿರ್ವಹಣೆಗೆ ಕೃಷಿ ಕಾಯಕದೊಂದಿಗೆ ತಾನೂ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಈ ಪೋರ.ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ರಟ್ಟೀಹಳ್ಳಿ ಸಮೀಪದ ಚಿಕ್ಕಮೊರಬ ಗ್ರಾಮದ ಮಾಲತೇಶ ನಾಗಪ್ಪ ಕುರುಬರ ಎಂಬಾತನೇ ಈ ಬಾಲಕ. ಒಂದನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ಮಾಲತೇಶ ಸ್ವಲ್ಪ ದಿನಗಳ ಕಾಲ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ.ಎರಡು ವರ್ಷಗಳ ಹಿಂದೆ ತಾಯಿಯೂ ಮೃತರಾದರು. ಅಲ್ಲಿಯವರೆಗೆ ಅವಿಭಕ್ತ ಕುಟುಂಬವಾಗಿದ್ದ ಈತನ ಕುಟುಂಬ ವಿಭಜನೆಯಾದ ಮೇಲೆ ತಮ್ಮ ನಿಂಗರಾಜ, ತಂಗಿ ಆಶಾ ಹಾಗೂ ಅಜ್ಜಿಯನ್ನು ಸಾಕುವ ಜವಾಬ್ದಾರಿ ಸಹ ಅವನ ಹೆಗಲೇರಿತು.ಆದರೂ ಜೀವನ ನಿರ್ವಹಣೆಗೆ ಎಳ್ಳಷ್ಟೂ ಭಯ ಪಡದ ಮಾಲತೇಶ, ತನ್ನ ಪಾಲಿಗೆ ಬಂದ ಒಂದು ಎಕರೆ ಹೊಲದಲ್ಲಿಯೇ ಮೆಕ್ಕೆಜೋಳ ಬೆಳೆದಿದ್ದಾನೆ. ಈಗ ಅದರಲ್ಲಿಯೇ ಮೆಣಸಿನ ಸಸಿ ಬೆಳೆಸಿದ್ದು, ಮೆಕ್ಕೆಜೋಳ ಕಿತ್ತ ನಂತರ ಮೆಣಸಿನಕಾಯಿ ಬೆಳೆಯುವ ಆಶಯ ಹೊಂದಿದ್ದಾನೆ. ಮೆಕ್ಕೆಜೋಳ ಮಾರಾಟದಿಂದ  ಕನಿಷ್ಠ 25,000 ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದಾನೆ. ಮೆಣಸಿನಕಾಯಿ ಮಡಿ ಸಿದ್ಧಪಡಿಸಲು ಎರಡು ಸಾವಿರ ರೂಪಾಯಿ ಸಾಲದ ಭಾರವೂ ಹೆಗಲೇರಿದೆ. ಕೃಷಿಯ ಕಾಯಕವೂ ಅವನ ಓದಿನ ಜೊತೆ- ಜೊತೆಗೇ ನಡೆಯಬೇಕು. ರಜಾ ಸಮಯವನ್ನೂ ಹಾಳು ಮಾಡದ ಅವನು ಕೂಲಿ ಕೆಲಸಕ್ಕೂ ಹೋಗುತ್ತಾನೆ. ಅಷ್ಟಿಷ್ಟು ಗಳಿಸಿ ನಾಲ್ಕು ಮಂದಿಯ ಕುಟುಂಬವನ್ನು ಸಾಕುತ್ತಿದ್ದಾನೆ.

ಇಂದಿನ ಬೆಲೆ ಏರಿಕೆಯ ಬಿಸಿಯಲ್ಲಿ ನಾಲ್ವರ ಕುಟುಂಬ ನಿರ್ವಹಣೆ ಬಲು ಕಷ್ಟ.

 

ಆದರೆ ಮಾಲತೇಶ ಮಾತ್ರ ತನ್ನ ಕಷ್ಟವನ್ನು ಯಾರ ಬಳಿಯೂ ತೋಡಿಕೊಳ್ಳುವುದಿಲ್ಲ. ಸಹಾಯವನ್ನಂತೂ  ಕೇಳುವುದೇ ಇಲ್ಲ. ಅಷ್ಟೊಂದು ಸ್ವಾಭಿಮಾನ ಅವನಲ್ಲಿ. ಇದೆಲ್ಲವನ್ನೂ ಮಾಲತೇಶ `ನನ್ನ ಜೀವನ~ ಎಂಬ ಪ್ರಬಂಧದಲ್ಲಿ ದಾಖಲಿಸಿದ್ದಾನೆ. ಪ್ರಬಂಧದಲ್ಲಿ ಆತ ತನ್ನ ಜೀವನದ ಸ್ಥಿತಿಯನ್ನು ವಿವರಿಸಿರುವುದನ್ನು ಓದಿದಾಗ  ಕಣ್ಣುಗಳು ತೇವವಾಗುತ್ತವೆ.ತಂದೆಯ ಆಸೆಯಂತೆ ಎಂಜಿನಿಯರ್ ಆಗುವ ಬಯಕೆ ಆತನದು. ಜತೆಗೆ ತಂಗಿ- ತಮ್ಮನಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಿಬ್ಬರೂ ಸರ್ಕಾರಿ ಕೆಲಸ ಗಳಿಸಿಕೊಳ್ಳುವಷ್ಟರ ಮಟ್ಟಿಗಾದರೂ ಓದಿಸಬೇಕು ಎಂದು ಇಚ್ಛಿಸಿದ್ದಾನೆ. ನಾನಿಲ್ಲದಿದ್ದರೆ ತಮ್ಮ-ತಂಗಿಗೆ ಇನ್ಯಾರು ಗತಿ. ಜತೆಗೆ ಅಜ್ಜಿ ಕೂಡ ಸುಖವಾಗಿರಬೇಕು.ಇದಕ್ಕಾಗಿ ನನಗೆ ಎಷ್ಟೇ ಕಷ್ಟ ಬಂದರೂ ಪರವಾಗಿಲ್ಲ, ಎಲ್ಲ ಕುಟುಂಬಗಳಂತೆ ನಮ್ಮ ಕುಟುಂಬವೂ ಸುಖವಾಗಿ ಬದುಕಬೇಕೆಂಬು ಎಂಬುದೇ ನನ್ನ ಜೀವನದ ಆಶಯ... ಎಂದು ವಿವರಿಸಿದ್ದಾನೆ. ಓದಿನೊಂದಿಗೆ ಸಂಸಾರದ ನೊಗವನ್ನೂ ಹೊತ್ತಿರುವ ಮಾಲತೇಶನಿಗೆ ಆತ ಕಲಿಯುತ್ತಿರುವ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.