ಗುರುವಾರ , ಮೇ 13, 2021
16 °C

`ಓದುವ ಹವ್ಯಾಸ ಬೆಳೆಸಿಕೊಳ್ಳಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಓದುವ ಹವ್ಯಾಸ, ಅಭಿರುಚಿಯು ಮನುಷ್ಯನನ್ನು ಜಗತ್ತಿನ ಜೊತೆಗೆ ಬೆಸೆಯಲಿದ್ದು, ವಿದ್ಯಾರ್ಥಿ ಸಮುದಾಯ ಇಂಥ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ, ನಟ ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟರು.ನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ 2013-14ನೇ ಶೈಕ್ಷಣಿಕ ವರ್ಷದ ಓದುಗರ ಕೂಟ (ರೀಡರ್ಸ್‌ ಕ್ಲಬ್) ಉದ್ಘಾಟಿಸಿ ಮಾತನಾಡಿದ ಅವರು, `ತಂತ್ರಜ್ಞಾನದ ಪ್ರಗತಿಯೊಂದಿಗೆಇಂದು ಎಲ್ಲದರ ಸ್ವರೂಪ ಬದಲಾಗುತ್ತಿದೆ. ಪುಸ್ತಕಗಳು ಇದಕ್ಕೆ ಹೊರತಾದುದಲ್ಲ' ಎಂದರು.`ಪ್ರಗತಿಪರ ರಾಷ್ಟ್ರಗಳಲ್ಲಿ ಪುಸ್ತಕಗಳಿಗೆ ಡಿಜಿಟಲ್ ರೂಪ ನೀಡಲಾಗುತ್ತಿದೆ. ಈ ಆಧುನಿಕ ತಂತ್ರಜ್ಞಾನದಿಂದಾಗಿ ಇಡೀ ಗ್ರಂಥಾಲಯದ ಜೊತೆಗೆ ಸಂಪರ್ಕ ಬೆಸೆಯುವುದು ಸಾಧ್ಯವಾಗಲಿದೆ. ಓದುವ ಅವಕಾಶಗಳು ಇದರೊಂದಿಗೆ ಇನ್ನಷ್ಟು ವಿಸ್ತಾರಗೊಂಡಿದ್ದು, ವಿದ್ಯಾರ್ಥಿ ಸಮುದಾಯ ಇದನ್ನು ಬಳಸಿಕೊಳ್ಳಬೇಕಾಗಿದೆ' ಎಂದರು.`ಇಂಗ್ಲಿಷ್ ಸಾಹಿತ್ಯದ ಜೊತೆಗೆ ಕನ್ನಡ ಸಾಹಿತ್ಯ ಓದುವುದು ಮುಖ್ಯ. ಕನ್ನಡ ಸಾಹಿತ್ಯ ತನ್ನದೇ ಆದ ಶ್ರೀಮಂತಿಕೆ, ಪರಂಪರೆಯನ್ನು ಹೊಂದಿದೆ. ಓದುವಿಕೆಯೊಂದಿಗೆ ಅದರ ಸಮಗ್ರ ಪರಿಚಯವೂ ಆಗಲಿದೆ. ಒಟ್ಟಾರೆ, ಓದುವ ಅಭಿರುಚಿಯನ್ನು ರೂಢಿಸಿಕೊಳ್ಳುವುದು ಉತ್ತಮ' ಎಂದರು.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಪೂರ್ಣಿಮಾ ಅವರು ಮಾತನಾಡಿ, ಶಾಲೆಯ ಮಕ್ಕಳು ನಿತ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿರುವ ಕಾರ್ನಾಡ್ ಅವರ ಚಿತ್ರ ನೋಡುತ್ತಿದ್ದರು. ಇಂದು ಅವರನ್ನೇನೋಡುವ ಭಾಗ್ಯ ದೊರೆತಿದೆ ಎಂದರು.ಕಾರ್ನಾಡರ ವ್ಯಕ್ತಿತ್ವ ಬಣ್ಣಿಸಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಗೌರವ ಹೆಚ್ಚಿಸಿದ ಅವರು ನಟ, ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಅವರ ಬದುಕು ಆಧರಿಸಿದ `ಆಡಾಡುತಾ ಆಯುಷ್ಯ' ಕೃತಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿದೆ ಎಂದರು. ಸಂಸ್ಥೆ ಆಡಳಿತ ವರ್ಗದ ಮಂಜುಳಾ ಮೂಲಗೆ, ಮೌನೇಶ್, ರವಿ ಮೂಲಗೆ, ಬೋಧಕ ಸಿಬ್ಬಂದಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.