ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ನೆನಪಿಸುವ ಆ್ಯಪ್

Last Updated 27 ಡಿಸೆಂಬರ್ 2015, 19:41 IST
ಅಕ್ಷರ ಗಾತ್ರ

ಮನೆಯಲ್ಲಿ ಹಿರಿಯರಿಗೆ, ಮಕ್ಕಳಿಗೆ ಅಥವಾ ಕುಟುಂಬದ ಯಾವುದೇ ಸದಸ್ಯರಿಗೆ ಅನಾರೋಗ್ಯದ ಸಮಸ್ಯೆ ಕಾಡುವುದು ಸಹಜ. ಇಂತಹ ಸಮಯದಲ್ಲಿ ಅವರಿಗೆ ಸಮಯಕ್ಕೆ ಸರಿಯಾಗಿ ಔಷಧ ನೀಡುವ ಜವಾಬ್ದಾರಿ ನಿತ್ಯದ ಕೆಲಸಗಳೊಂದಿಗೆ ಸೇರಿಕೊಳ್ಳುತ್ತದೆ. ಹೀಗಾಗಿಯೇ ಔಷಧಿ ತೆಗೆದುಕೊಳ್ಳುವ ಸಮಯಕ್ಕೆ ಸರಿಯಾಗಿ ಮನೆಯಲ್ಲೇ ಇದ್ದು, ಅವರ ಆರೈಕೆ ಮಾಡಬೇಕು ಅಥವಾ ಮನೆಯಿಂದ ಹೊರಗಿದ್ದರೆ ಕರೆ ಮಾಡಿ ಔಷಧಿ ತೆಗೆದುಕೊಳ್ಳುವಂತೆ ನೆನಪಿಸಬೇಕು. ಇಲ್ಲವಾದಲ್ಲಿ ಕೆಲವೊಮ್ಮೆ ಮರೆವಿನಿಂದಾಗಿ ಔಷಧ ತೆಗೆದುಕೊಳ್ಳುವುದು ತಪ್ಪಿಹೋಗುತ್ತದೆ.

ಇಂತಹ ಸಮಸ್ಯೆಗಳನ್ನು ನಿವಾರಿಸಲು ಎಂತತ್ವ ಸಂಸ್ಥೆ ‘ಹೆಲ್ತ್‌ ಪೈ’ ಎಂಬ ಹೊಸ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಕೇವಲ ಆ್ಯಂಡ್‌ರಾಯ್ಡ್‌ ಮೊಬೈಲ್‌ಗಳಿಗೆ ಮಾತ್ರ ಸಿದ್ಧಪಡಿಸಲಾಗಿರುವ ಈ ಆ್ಯಪ್‌ ಅನ್ನು ಉಚಿತವಾಗಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ, ಔಷಧ ತೆಗೆದುಕೊಳ್ಳುವ ಸಮಯವನ್ನು ಪದೇ ಪದೇ ನೆನಪಿಸುತ್ತದೆ. ಜೊತೆಗೆ ತೆಗೆದುಕೊಳ್ಳಬೇಕಾದ ಔಷಧಗಳ ಚಿತ್ರಗಳನ್ನು ಸಂದೇಶಗಳ ಮೂಲಕ ರವಾನಿಸುತ್ತದೆ.

ಡಿಜಿಟಲ್‌ ವೈದ್ಯನಂತೆ ಕಾರ್ಯನಿರ್ವಹಿಸುವ ಈ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿದ ಕೂಡಲೇ ನಮ್ಮ ವಿವರಗಳನ್ನು ನಮೂದಿಸಬೇಕು. ನಂತರ ವೈದ್ಯರು ನೀಡಿರುವ ಔಷಧದ ಚೀಟಿಯ ಚಿತ್ರ ತೆಗೆದು, ಅದನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕು. ಜೊತೆಗೆ ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ವೈದ್ಯಕೀಯ ಮಾಹಿತಿ ಅಥವಾ ವೈದ್ಯರು ನೀಡಿರುವ ತಪಾಸಣ ಪತ್ರಗಳು, ಸಕ್ಕರೆ, ರಕ್ತದೊತ್ತಡ ಸೇರಿದಂತೆ ಯಾವುದೇ ಕಾಯಿಲೆಗೆ ಸಂಬಂಧಪಟ್ಟ ದಾಖಲೆಗಳು ಇದ್ದಲ್ಲಿ ಅದರ ಚಿತ್ರಗಳನ್ನು ತೆಗೆದು ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದು.

ಹೀಗೆ ಅಪ್‌ಲೋಡ್‌ ಮಾಡಿದ ಚಿತ್ರಗಳಲ್ಲಿರುವ ವಿವರಗಳನ್ನು ಎಂತತ್ವ ಸಂಸ್ಥೆಯಲ್ಲಿರುವ ‘ಫಾರ್ಮಸಿಸ್ಟ್‌’ ಹಾಗೂ ವೈದ್ಯರ ತಂಡ ಪರಿಶೀಲಿಸುತ್ತದೆ. ನಂತರ ಅದನ್ನು ಸಂಬಂಧಪಟ್ಟ ತಾಂತ್ರಿಕ ಸಿಬ್ಬಂದಿ ಆ್ಯಪ್‌ನಲ್ಲಿ ದಾಖಲಿಸುತ್ತಾರೆ. ಈ ಪ್ರಕ್ರಿಯೆ ನಂತರ ಪ್ರತಿನಿತ್ಯ ಔಷಧ ತೆಗೆದುಕೊಳ್ಳುವ ಸಮಯಕ್ಕೆ ಸರಿಯಾಗಿ ಚಿತ್ರ ಸಹಿತ ಸಂದೇಶಗಳು ಬರುತ್ತವೆ. ಈ ಸಂದೇಶಗಳು ದಿನಕ್ಕೆ ಎಷ್ಟು ಬಾರಿ ಬರಬೇಕು ಎಂದು ಸೆಟಿಂಗ್‌ನಲ್ಲಿ ಸೆಟ್‌ ಮಾಡಿಕೊಳ್ಳಬಹುದು.

ಆ್ಯಪ್‌ನಲ್ಲಿ ತಮ್ಮ ಕುಟುಂಬದವರನ್ನೂ ಸೇರಿಸಿಕೊಂಡು ಅವರಿಗೂ ಸಂದೇಶಗಳು ರವಾನೆಯಾಗುವಂತೆ ಒಂದು ಗ್ರೂಪ್‌ ಸೃಷ್ಟಿಸಿಕೊಳ್ಳಬಹುದು. ಆಗ ಕುಟುಂಬದ ಯಾವುದೇ ಸದಸ್ಯ ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳದೇ ಹೋದಾಗ ನೆನಪಿಸುವ ಸಂದೇಶಗಳು ಪ್ರತಿಯೊಬ್ಬರಿಗೂ ರವಾನೆ ಯಾಗುತ್ತವೆ. ಅಷ್ಟೇ ಅಲ್ಲದೆ ರೋಗಿಯು ಔಷಧ ತೆಗೆದುಕೊಂಡಿರುವುದಾಗಿ ನೆನೆಪಿಸುವ ಸಂದೇಶಕ್ಕೆ ಉತ್ತರಿಸಿದರೆ, ಅದೂ ಸಹ ಕುಟುಂಬದ ಎಲ್ಲ ಸದಸ್ಯರಿಗೂ ರವಾನೆಯಾಗುತ್ತದೆ. ಮುಂದಿನ ದಿನಗಳಲ್ಲಿ ವೈದ್ಯರಿಂದ ಪಡೆದ ಅಪಾಯಿಂಟ್‌ಮೆಂಟ್‌ ಮತ್ತು ತೆಗೆದು ಕೊಳ್ಳಬೇಕಾದ ಚುಚ್ಚುಮದ್ದು ಕುರಿತಂತೆಯೂ ಸಂದೇಶ ರವಾನಿಸುತ್ತದೆ.

‘ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿರುವ ವೈದ್ಯಕೀಯ ದಾಖಲಾತಿ ಹಾಗೂ ಇತರೆ ವಿವರಗಳನ್ನು ವಿಶ್ವದ ಯಾವುದೇ ಭಾಗಕ್ಕೆ ಹೋದರೂ ನೀವು ನೋಡಬಹುದು. ಜೊತೆಗೆ ನೀವು ವಾಸಿಸುವ ಪ್ರದೇಶದಲ್ಲಿ ಯಾವುದೇ ಕಾಯಿಲೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತರೆ, ಅದರ ಬಗ್ಗೆಯೂ ಎಚ್ಚರಿಕೆಯ ಲಿಖಿತ ಸಂದೇಶಗಳನ್ನು ಕಳುಹಿಸುತ್ತೇವೆ. ಅದಕ್ಕಾಗಿ ನಗರದಲ್ಲಿ ಹಲವಾರು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ನಂತರ ಆ ರೋಗದ ಕುರಿತು ಸಂಪೂರ್ಣ ಮಾಹಿತಿ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅರಿಯಲು ಲಿಂಕ್‌ ಅನ್ನು ಕಳುಹಿಸುತ್ತೇವೆ. ಇನ್ನು ಯಾವುದೇ ಮಾತ್ರೆ ಅಥವಾ ಔಷಧದಿಂದ ಅಲರ್ಜಿಯಾದಲ್ಲಿ, ಆ್ಯಪ್‌ಗೆ ಸಂದೇಶ ಕಳುಹಿಸಿದರೆ, ಅದಕ್ಕೆ ತಕ್ಷಣ ಮಾಡಬೇಕಾದ ಚಿಕಿತ್ಸೆ ಕುರಿತು ನಮ್ಮ ವೈದ್ಯರು ಸಲಹೆ ನೀಡುತ್ತಾರೆ’ ಎಂದು ವಿವರಿಸುತ್ತಾರೆ ಎಂತತ್ವ ಸಂಸ್ಥೆಯ ಸಂಸ್ಥಾಪಕ ಬಲ್‌ಜಿತ್‌ ಸಿಂಗ್‌.

ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಂದೇಶಗಳನ್ನು ಕಳಯಹಿಸಲಾಗುತ್ತಿದ್ದು, ಕೆಲವೇ ತಿಂಗಳಿನಲ್ಲಿ ಕನ್ನಡ, ತೆಲಗು ಸೇರಿದಂತೆ ಇತರೆ ಭಾಷೆಗಳಲ್ಲೂ ಸಂದೇಶ ರವಾನಿಸುವ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದೆ ಈ ಸಂಸ್ಥೆ. ಅಲ್ಲದೆ ಎಂತತ್ವ ಸಂಸ್ಥೆ ಆನ್‌ಲೈನ್‌ನಲ್ಲೇ ಔಷಧಿಗಳ ಮಾರಾಟ, ಹೋಂ ಡೆಲಿವರಿ, ವೈದ್ಯರ ಭೇಟಿಗೆ ಸಮಯ ನಿಗದಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ.  

ಆ್ಯಪ್‌ ಡೌನ್‌ಲೋಡ್‌ ಮಾಡಲು ವೆಬ್‌ಸೈಟ್‌ ಲಿಂಕ್‌: https://goo.gl/dy3LwW ಅಥವಾ google play ಗೆ ಲಾಗ್‌ಇನ್‌ ಆಗಿ “health pie app’ ಡೌನ್‌ಲೋಡ್‌ ಮಾಡಬಹುದು.
              

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT