ಮಂಗಳವಾರ, ಮೇ 17, 2022
25 °C

ಕಂಟಿಗಳ ಒಳಗೆ ಹೊನ್ನು ಹುಡುಕುವ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ ಜಿಲ್ಲೆ ಶಿಗ್ಗಾವ ತಾಲ್ಲೂಕು ಕಮಲಾನಗರ ತಾಂಡಾದ ಮಹಿಳೆಯರು ನಸುಗತ್ತಲು ಇರುವಾಗಲೆ ಕೊರಳಿಗೊಂದು ಸಣ್ಣದಾದ ಹಳೇ ಖಾಲಿಡಬ್ಬ ಇಲ್ಲವೆ ಹಳೆರಬ್ಬರ್ ತಂಬಿಗೆ, ಬಗಲಿಗೊಂದು ಖಾಲಿ ಡಬ್ಬವನ್ನು ನೇತುಹಾಕಿಕೊಂಡು, ಎಡಗೈಯಲ್ಲೊಂದು ಆಳೆತ್ತರದ ಕೊಕ್ಕೆಕೋಲು, ಬಲಗೈಯಲ್ಲೊಂದು ಕೈಚೀಲ ಹಿಡಿದು, ಲಂಗವನ್ನೇ ಕಚ್ಚಿಯಾಗಿ ಕಟ್ಟಿಕೊಂಡು ಮೇಲೊಂದು ಹರಿದ ಅಂಗಿ ತೊಟ್ಟು ಅವಸರದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿ ಗ್ರಾಮದ ಹಿಂಬಾಗದಲ್ಲಿರುವ ಕಾಡಿಗೆ ಇಳಿಯುತ್ತಾರೆ.ಸುಮಾರು ಒಂಬತ್ತು ಗಂಟೆವರೆಗೆ ಗಿಡಗಂಟಿಗಳನ್ನು ಹುಡುಕಿ ಕಾಡಿನ ಹಣ್ಣುಗಳನ್ನು ಕಿತ್ತುತ್ತಾರೆ. ಮನೆಗೆ ಬಂದು ಒಂದು ಬುಟ್ಟಿಯಲ್ಲಿ ಹಾಕಿಕೊಂಡು ನಗರ, ಹಳ್ಳಿಗಳಲ್ಲಿ ತಲೆಮೇಲೆ ಹೊತ್ತು ಮಾರುತ್ತಾರೆ.ಇದು ಇವರ ಬೇಸಿಗೆ ಕಾಲದ ನಿತ್ಯದ ಕಾಯಕ. ಪಾರಂಪರಿಕವಾಗಿ ಬಂದ ವೃತ್ತಿಯು ಹೌದು. ಡಿಸೆಂಬರ್‌ನಿಂದ ಆರಂಭವಾಗಿ ಜೂನ್  ಕೊನೆವರೆಗೆ ಇವರಿಗೆ ಇದು ನಿರಂತರ ಕಾಯಕ. ಜುಲೈ ತಿಂಗಳಿನಿಂದ ಕೆಲವರು ಕೃಷಿಕೂಲಿಯಲ್ಲೊ, ಮತ್ತೆ ಕೆಲವರು ಕೃಷಿಯಲ್ಲೊ ನಿರತರಾಗುತ್ತಾರೆ. ಒಟ್ಟಿನಲ್ಲಿ ಹಣ್ಣು ಮಾರಾಟ ಆರೇಳು ತಿಂಗಳ ಕಾಯಕವೇ ಸರಿ. ಬಡಕುಟುಂಬಗಳು ಈ ಬದುಕನ್ನೇ ನಂಬಿಕೊಂಡಿವೆ. ಇಡಿ ಕುಟುಂಬದ ಸದಸ್ಯರೆಲ್ಲರು ಈ ಕೆಲಸದಲ್ಲಿ ತೊಡಗಿಕೊಂಡ ಮನೆತನಗಳು ಬಹಳಷ್ಟಿವೆ.ಇವರು ಕುರುಚಲು ಕಾಡು ಅಥವಾ ತುದಿಭಾಗದ ಕಾಡಿಗೆ ಹೋಗುತ್ತಾರೆ. ಅಲ್ಲಿ ಸಿಗುವ ಹಣ್ಣುಗಳನ್ನು ಕಿತ್ತು ತರುತ್ತಾರೆ. ಇದರಲ್ಲಿ ಸಣ್ಣಪುಟ್ಟ ಹಣ್ಣುಗಳೇ ಹೆಚ್ಚು. ಕಾಲಕ್ಕೆ ತಕ್ಕಂತೆ ವಿವಿಧ ಬಗೆಯ ಹಣ್ಣುಗಳು ಇರುತ್ತವೆ. ಪ್ರಮುಖವಾಗಿ ಪಿರೆಗೆ, ಕೇರು, ಕೌಳಿ, ಕಾರಿ ನೀರಲ, ಮಾವು ಮುಂತಾದ ಹಣ್ಣುಗಳು ಸೇರಿವೆ. ಇವುಗಳಲ್ಲಿ ಕೌಳಿಹಣ್ಣು ಮುಖ್ಯವಾದುದು. ಈ ಹಣ್ಣು ಸುಮಾರು ಐದರಿಂದ ಆರು ತಿಂಗಳಗಳ ಕಾಲ ಕೆಲಸ ಕೊಡುತ್ತದೆ ಎನ್ನುತ್ತಾರೆ. ಅಂದರೆ ಜನವರಿಯಿಂದ ಫೆಬ್ರುವರಿ ಅಂತ್ಯದವರೆಗೆ ಕಾಯಿ, ಮಾರ್ಚನಿಂದ ಜೂನ್ ಅಂತ್ಯದವರೆಗೆ ಹಣ್ಣು ಮಾರಾಟ ಮಾಡುವುದಕ್ಕೆ ಅವಕಾಶವಿರುತ್ತದೆ.ಕಾಡಿನಿಂದ ಹಣ್ಣನ್ನು ಕಿತ್ತುತರುವುದು ಕಷ್ಟದ ಕೆಲಸ. ಬೆಳಗಿನ ಜಾವ ಆರು ಗಂಟೆಗೆ ಕಾಡಿಗೆ ಹೋಗಬೇಕು. ಅಲ್ಲಿ ಕೌಳಿಗಿಡದ ಪೊದೆಗಳನ್ನು ಹೊಕ್ಕು ಹಣ್ಣುಗಳನ್ನು ಹುಡುಕಬೇಕು. ಸಣ್ಣ ಗಿಡವಾದರೆ ಕೆಳಗಡೆ ನಿಂತು ಹಣ್ಣು ಕೀಳಬಹುದು. ದೊಡ್ಡ ಗಿಡವಾದರೆ ಮುಳ್ಳಿನ ಕಂಟಿ ಹತ್ತಲೇಬೇಕು.

 

`ಈ ಕೆಲಸವೇನಿದ್ದರೂ ಯುವತಿಯರಿಗೆ ಸರಿ. ನಮಗಲ್ಲ. ಎತ್ತರದ ಕಂಟಿಗಳಲ್ಲಿ ಹಣ್ಣು ತೆಗೆಯುವುದಕ್ಕೆ ಈ ಕೊಕ್ಕೆ ಕೋಲೇ ನಮಗೆ ಗತಿ~ ಎನ್ನುತ್ತಾರೆ ಅಜ್ಜಿಯರು. ಮಕ್ಕಳಿಗೂ ಈ ಕೊಕ್ಕೆಕೋಲು ಬೇಕೆ ಬೇಕು. ಅಜ್ಜಿಯರಿಗಂತೂ ಕಾಡಿನಲ್ಲಿ ನಡೆದಾಡುವುದಕ್ಕೂ, ಹಣ್ಣನ್ನು ಬಿಡಿಸುವುದಕ್ಕೂ ಈ ಕೋಲೇ ಆಶ್ರಯ.ಇವರು ಹಣ್ಣು ಸಂಗ್ರಹಿಸುವ ವಿಧಾನವೂ ಭಿನ್ನ. ಕಿತ್ತ ಹಣ್ಣುಗಳನ್ನು ಮೊದಲು ಕೊರಳಲ್ಲಿನ ಡಬ್ಬದೊಳಗೆ ಹಾಕಿಕೊಳ್ಳುತ್ತಾರೆ. ಈ ಡಬ್ಬ ತುಂಬಿದ ನಂತರ ಮತ್ತೊಂದು ಡಬ್ಬ. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹೋಗುವಾಗ ಡಬ್ಬವನ್ನು ಹೊತ್ತು ಸಾಗುತ್ತಾರೆ. ಆ ಸಂದರ್ಭದಲ್ಲಿ ಮೈ ಕೈಗಳಿಗೆ ಮುಳ್ಳುಗಳು ಪರಚುತ್ತವೆ.ಇವರು ಇದಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಕಂಟಿಯನ್ನು ಹತ್ತದಿದ್ದರೆ ಅಥವಾ ಒಳಗಡೆ ನುಗ್ಗದಿದ್ದರೆ ಹೆಚ್ಚು ಹಣ್ಣುಗಳು ಸಿಗುವುದಿಲ್ಲ. ಆ ಅನಿವಾರ್ಯಕ್ಕಾಗಿ ಕಂಟಿಗಳಲ್ಲಿ ನುಗ್ಗುತ್ತಾರೆ. ಮುಳ್ಳುಗಳಿಂದ ರಕ್ಷಣೆ ಪಡೆಯುವುದಕ್ಕೆ ಇವರಿಗೆ ಹಳೆ ಅಂಗಿಯೇ ರಕ್ಷಾಕವಚ.ಹೀಗೆ ಕಿತ್ತು ತಂದ ಹಣ್ಣುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ತಲೆ ಮೇಲೆ ಹೊತ್ತು ಹಳ್ಳಿ, ನಗರಗಳಲ್ಲಿ ಮಾರಾಟ ಮಾಡಿ ಸಾಯಂಕಾಲ ಮನೆಗೆ ಮರಳುತ್ತಾರೆ. ಬೀದಿಗಳು, ಶಾಲೆಗಳ ಆವರಣಗಳು, ಸಂತೆಗಳು ಇವರ ವ್ಯಾಪಾರದ ಸ್ಥಳಗಳು. ಕೆಲವರು ಮನೆ ಮನೆಗೆ ಹೋಗಿ ಮಾರಾಟ ಮಾಡಿ ಬರುತ್ತಾರೆ. ಈ ಕೆಲಸದಲ್ಲಿ ವಯಸ್ಸಾದ ಮಹಿಳೆಯರೇ ಹೆಚ್ಚು. ಹೀಗೆ ವ್ಯಾಪಾರ ಮಾಡಿ ದಿನಕ್ಕೆ ನೂರರಿಂದ ನೂರೈವತ್ತು ರೂಪಾಯಿ ಸಂಪಾದನೆ ಮಾಡುತ್ತಾರೆ.ತಾಲ್ಲೂಕಿನಲ್ಲಿ ಗುಡ್ಡಗಾಡು ಮತ್ತು ಕಾಡುಗಳಿಗೆ ಹೊಂದಿಕೊಂಡ ಅನೇಕ ತಾಂಡಾಗಳ ಕುಟುಂಬಗಳು ಈ ಕಾಯಕದಲ್ಲಿ ತೊಡಗಿವೆ. ಅನೇಕರಿಗೆ ಇದೇ ಜೀವನೋಪಾಯ. ಆದರೆ ಸರ್ಕಾರ ದೊಡ್ಡ ದೊಡ್ಡ ಮರಗಳನ್ನು ಬೆಳೆಸುವ ಉತ್ಸಾಹದಲ್ಲಿ ಹಣ್ಣಿನ ಕಂಟಿ, ಪೊದೆಗಳನ್ನು ಕಡಿಯಲು ಅನುಮತಿ ಕೊಡುತ್ತದೆ. ಹೀಗಾಗಿ ಕಾರೆ, ಕೌಳೆ, ಪಿರಿಗಿ ಮತ್ತು ಕೇರಣ್ಣಿನ ಗಿಡಗಳೇ ಹೆಚ್ಚು ಹಾಳಾಗಿವೆ. ಇದರಿಂದ ದೊಡ್ಡ ಮರನಾದ್ರು ಉಳಿದಾವೇ? ಅದೂ ಇಲ್ಲ. `ಮರಗಳ್ಳರಿಗೆ ಇನ್ನೂ ಅನುಕೂಲವಾಗೈತಿ~ ಎನ್ನುತ್ತಾರೆ ತಾಂಡಾದ ಹಿರಿಯ ಮೋಹನ್ ರೇವಪ್ಪ ಲಮಾಣಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.