ಸೋಮವಾರ, ಜೂನ್ 21, 2021
27 °C
ಸಮಸ್ಯೆ ನಿವಾರಣೆಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಕಚೇರಿ ಮುತ್ತಿಗೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಪಟ್ಟಣದ ಹಲವು ಸಮಸ್ಯೆಗಳನ್ನು ನಿವಾರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೋರಿದ ಎರಡು ದಿನಗಳ ಕಾಲಾವಶಕ್ಕೆ ಸ್ಪಂದಿಸಿದ ಜಯಕರ್ನಾಟಕ ಸಂಘಟನೆ ತನ್ನ ಪ್ರತಿಭಟನೆಯನ್ನು ಬುಧವಾರ ಮುಂದೂಡಿತು.ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿ ಮತ್ತು ಇನ್ನಿತರ ಸಮಸ್ಯೆಗಳನ್ನು ನಿವಾರಿಸಲು ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ಬುಧವಾರ ತೆರಳಿದ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳನ್ನು ಮತ್ತು ಸಾರ್ವಜನಿಕರನ್ನು ಪಂಚಾಯಿತಿ ಅಧ್ಯಕ್ಷೆ ಕಲ್ಯಾಟಂಡ ಸುಮಿತ್ರಾ ದೇವಯ್ಯ ಅವರು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಹೀಗಾಗಿ ಸಂಘಟನೆ ತನ್ನ ಮುತ್ತಿಗೆಯನ್ನು ಮುಂದೂಡಿತು.ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಮಾತನಾಡಿ, ಜಿಲ್ಲೆಯ ಎಲ್ಲೆಡೆ ಪ್ಲಾಸ್ಟಿಕ್ ನಿಷೇಧವಿದ್ದರೂ ನಾಪೋಕ್ಲು ಗ್ರಾಮ ಪಂಚಾಯಿತಿ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿಲ್ಲ. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳಿಂದ ಪಟ್ಟಣದ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಪಟ್ಟಣದ ತ್ಯಾಜ್ಯಗಳನ್ನು ಕಾವೇರಿ ನದಿ ತೀರದಲ್ಲಿ ಸುರಿಯಲಾಗುತ್ತಿದೆ. ಮಾರುಕಟ್ಟೆ ವ್ಯಾಪಾರ ರಸ್ತೆಯ ಮಧ್ಯಕ್ಕೆ ಕಸ ಬಂದು ತಲುಪಿದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಗಡುವು ನೀಡಿದ್ದರೂ ಪಂಚಾಯಿತಿ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಮುತ್ತಿಗೆ ಹಾಕಲು ನಿರ್ಧರಿಸಲಾಯಿತು. ಅಧ್ಯಕ್ಷರು ಎರಡು ದಿನಗಳ ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ಮುತ್ತಿಗೆಯನ್ನು ಮುಂದೂಡಲಾಗಿದೆ ಎಂದರು.ಗ್ರಾಮಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಟ್ಟಣದ ಎಲ್ಲಾ ಅಂಗಡಿ ಮಳಿಗೆಗಳಿಗೆ  ನೊಟೀಸು ಜಾರಿಗೊಳಿಸಲಾಗುವದು. ಮಾರುಕಟ್ಟೆಯನ್ನು ಸಮೀಪದ ಒಂದು ಏಕರೆ ಜಾಗಕ್ಕೆ ಸ್ಥಳಾಂತರಿಸಲು ಉದ್ಧೇಶಿಸಿದ್ದು, ಹರಾಜುದಾರರೊಂದಿಗೆ ವ್ಯವಹರಿಸಿ ಕ್ರಮಕೈಗೊಳ್ಳಲಾಗುವದು. ಕಾವೇರಿ ನದಿ ತೀರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯೆ ಕಾಂಡಂಡ ಪ್ರತಿಜಾ ಅಚ್ಚಪ್ಪ, ಪಟ್ರಪಂಡ ಮೋಹನ್ ಮುದ್ದಪ್ಪ, ಬಿದ್ದಾಟಂಡ ಸೋಮಯ್ಯ, ನವೀನ್, ಅರೆಯಡ ವಿಠಲ್ ಮೊಣ್ಣಪ್ಪ, ಕುಂಡ್ಯೋಳಂಡ ಸಂಪತ್, ಬಾಳೆಯಡ ಪ್ರತೀಶ್, ಶರಿ, ಕಾಂಡಂಡ ಅಚ್ಚಪ್ಪ, ಪುಲ್ಲೇರ ಅರುಣ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.