ಶನಿವಾರ, ಜೂಲೈ 11, 2020
27 °C

ಕಡಲಾಯ್ತು ಕನ್ನಡಿಗರ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಲಾಯ್ತು ಕನ್ನಡಿಗರ ಬಲ

ಬೆಳಗಾವಿ: ನಾಡಿನ ಸಾಂಸ್ಕೃತಿಕ ಕಲಾ ಸಂಪತ್ತನ್ನು ಬಿಂಬಿಸುವ ಚಿತ್ರಗಳನ್ನು ಹೊಂದಿರುವ ನಗರ ಸಾರಿಗೆ ಬಸ್ಸುಗಳು, ಅದರಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರ ಜಯಘೋಷ, ಜಿಲ್ಲಾ ಕ್ರೀಡಾಂಗಣಕ್ಕೆ ಉಚಿತ ಪ್ರಯಾಣವಿದ್ದದ್ದರಿಂದ ವಾಹನ ಬಂದ ತಕ್ಷಣ ಅದನ್ನೇರಲು ನಡೆಸುವ ತಳ್ಳಾಟ, ಹಾದಿಯುದ್ದಕ್ಕೂ ಅಲ್ಲಲ್ಲಿ ನುಗ್ಗಿದ್ದ ಫುಟ್‌ಪಾತ್ ವ್ಯಾಪಾರಿಗಳು...ಇವೆಲ್ಲ ಕುಂದಾನಗರಿ, ಗಡಿ ಜಿಲ್ಲೆಯ ಕೇಂದ್ರ ಸ್ಥಾನ ಎಂಬೆಲ್ಲ ಹೆಗ್ಗಳಿಕೆ ಹೊಂದಿರುವ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಆರಂಭದ ದಿನವಾದ ಶುಕ್ರವಾರ ಕಂಡು ಬಂದ ದೃಶ್ಯಗಳು.ಒಂದು ಕಾಲದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ಯುದ್ಧಭೂಮಿಯಂತೆಯೇ ಕಂಡು ಬರುತ್ತಿದ್ದ  ಈ ನಗರದಲ್ಲಿ ಈಗ ಅದರ ಬಗ್ಗೆ, ಅಂಥ ಯಾವ ಕುರುಹೂ ಉಳಿದಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಸಾಗರದಂತೆ ಹರಿದು ಬಂದ ಕನ್ನಡಿಗರು. ಇಡಿ ನಗರವೇ ಕನ್ನಡಮಯವಾಗಿದೆ. ತಾಯಿ ಭುವನೇಶ್ವರಿಯ ಜಯಘೋಷ ಹಾಗೂ ವಿಶ್ವ ಕನ್ನಡ ಸಮ್ಮೇಳನ ಕುರಿತಾದ ಯುವಕರ ಕೂಗು ಅಂಬರದಲ್ಲಿ ಮಾರ್ದನಿಸಿದೆ.ಮುಖ್ಯ ಸಮ್ಮೇಳನ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದ ಹಾದಿಯುದ್ದಕ್ಕೂ ಕನ್ನಡಿಗರದ್ದೇ ಹಾದಿ; ಅವರದೇ ಗಾಳಿ, ಕನ್ನಡಿಗರದೇ ನುಡಿ; ಕನ್ನಡಿಗರ ಕಡಲು.  ನಾಲ್ಕು ವರ್ಷಗಳ ಹಿಂದೆಯೇ ಕುಡಿಯೊಡೆದಿದ್ದ, ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕನಸು ಈಗಲಾದರೂ ನನಸಾಯಿತು ಎಂಬುದೇ ಕನ್ನಡಿಗರ ಸಂಭ್ರಮವನ್ನು ಇಮ್ಮಡಿಸಿದೆ.ಮಹಿಳೆಯರ ಪರದಾಟ

 ಸಮ್ಮೇಳನಕ್ಕೆ ಆಗಮಿಸಿದವರಿಗೆ ಊಟದ ವ್ಯವಸ್ಥೆ ಮಾಡಿದ್ದ ಸ್ಥಳಗಳು ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗಿತ್ತು. ವಾಹನ ಬಂದ ತಕ್ಷಣ ಪ್ರಯಾಣಿಕರು ನುಗ್ಗುತ್ತಿದ್ದರು. ಪುರುಷರ ನುಗ್ಗಾಟದಲ್ಲಿ ಮಹಿಳೆಯರು ವಾಹನವೇರಲು ಪರದಾಡಬೇಕಾಯಿತು. ಮಧ್ಯಾಹ್ನದ ನಂತರ ಸ್ವಲ್ಪ ಗದ್ದಲ ಕಡಿಮೆ ಆಯಿತು.ಭರ್ಜರಿ ವ್ಯಾಪಾರ

ವಿಶ್ವ ಕನ್ನಡ ಸಮ್ಮೇಳನದ ಅಂದ ಹೆಚ್ಚಿಸಲು ಡಬ್ಬಿ ಅಂಗಡಿಗಳ ಸ್ಥಳಾಂತರವನ್ನು ಕೈಗೊಳ್ಳಲಾಗಿತ್ತು; ಆದರೆ ಬೀದಿ ಬದಿಯ ವ್ಯಾಪಾರಿಗಳಿಗೆ ಇದು ಅನ್ವಯವಾಗಿರಲಿಲ್ಲ. ಸಮ್ಮೇಳನದ ಮೊದಲ ದಿನ ವಿವಿಧ ವ್ಯಾಪಾರಿಗಳು ಜಿಲ್ಲಾ ಕ್ರೀಡಾಂಗಣಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಫುಟ್‌ಪಾತ್ ಮೇಲೆ ಅಲ್ಲಲ್ಲಿ ಕುಳಿತು ಭರ್ಜರಿ ವಹಿವಾಟು ನಡೆಸಿದರು.ಕೆಲ ತಿಂಗಳು ಹಿಂದೆ ಯುದ್ಧೋಪಾದಿಯಲ್ಲಿ ಆರಂಭಗೊಂಡಿದ್ದ ರಸ್ತೆ ಕಾಮಗಾರಿ, ಅತ್ತ ಮೆರವಣಿಗೆಗೆ ಚಾಲನೆ ಸಿಕ್ಕ ನಂತರವೂ ನಗರದ ಒಂದು ಮೂಲೆಯಲ್ಲಿ ಇನ್ನೂ ಸಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.