ಸೋಮವಾರ, ಜೂನ್ 21, 2021
29 °C

ಕತ್ತು ಕೊಯ್ದರು: ಕಣ್ಣೀರಿಟ್ಟ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಈ ಕ್ಷೇತ್ರದ ಮತ­ದಾ­ರರು ಆರು ತಿಂಗಳ ಹಿಂದೆ ಬೆಂಗ­ಳೂರು ಗ್ರಾಮಾಂತರ ಲೋಕ­ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊಲೆ­ಗಡುಕ­ನನ್ನು ಗೆಲ್ಲಿಸಿ, ನನ್ನ ಪತ್ನಿ ಅನಿತಾರ ಕತ್ತು ಕೊ­ಯ್ದರು. ಹೀಗೆ ಸೋಲಿಸುವಂತಹ ಅನ್ಯಾಯ ನಾನೇನು ಮಾಡಿದ್ದೆ? ಆಗ ನನ್ನ ಕೈ ಯಾಕೆ ಬಿಟ್ಟಿರಿ’ ಎಂದು ಕೇಳುತ್ತಾ ಜೆಡಿಎಸ್‌ ರಾಜ್ಯಾಧ್ಯಕ್ಷ  ಎಚ್‌.ಡಿ.­­­ಕುಮಾರ­ಸ್ವಾಮಿ ಶನಿವಾರ ಇಲ್ಲಿ ಗಳಗಳನೆ ಕಣ್ಣೀರು ಸುರಿಸಿದರು.ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ವಿಚಾರ­ವಾಗಿ ರಾಮನಗರದ ಕಾರ್ಯ­ಕರ್ತರ ಅಭಿಪ್ರಾಯ ಪಡೆಯಲು ಶನಿ­ವಾರ ಜೆಡಿಎಸ್‌ ಜಿಲ್ಲಾ ಕಚೇರಿ ಆವ­ರಣ­ದಲ್ಲಿ ಆಯೋಜಿಸಿದ್ದ ಸಭೆ­ಯಲ್ಲಿ ಈ ಘಟನೆ ನಡೆಯಿತು. ಕಾರ್ಯಕರ್ತರ ಆಕ್ರೋಶ ಅರಿತು ಶುಕ್ರವಾರದ ಸಭೆಗೆ ಗೈರು ಹಾಜ­ರಾಗಿದ್ದ ಕುಮಾರಸ್ವಾಮಿ ಶನಿವಾರ ಸಭೆಗೆ ಹಾಜ­ರಾಗಿ ಭಾವ­ನಾ­ತ್ಮಕವಾಗಿ ಮಾತ­ನಾಡಿ ಕಣ್ಣೀರು ಸುರಿಸಿದರು.ಸಭೆಯಲ್ಲಿ ಜೆಡಿಎಸ್‌ ಕಾರ್ಯಕರ್ತ­ರೊ­ಬ್ಬರು ಕ್ರಿಮಿನಾಶಕದ ಬಾಟಲು ತೋರಿಸಿ, ‘ಚಿಕ್ಕಬಳ್ಳಾಪುರದಿಂದ ಸ್ಪರ್ಧಿ­ಸುವ ನಿಲುವನ್ನು ಹಿಂಪಡೆಯಬೇಕು. ಇಲ್ಲ­ದಿದ್ದರೆ ವಿಷ ಕುಡಿಯ­ಬೇಕಾ­ಗು­ತ್ತದೆ’ ಎಂದು ಬೆದರಿಕೆ ಹಾಕಿದರು.ಇದರಿಂದ ಅಸಮಾಧಾನ­ಗೊಂಡ ಕುಮಾರ­­­ಸ್ವಾಮಿ ಅವರು, ಕಳೆದ ಲೋಕ­ಸಭಾ ಉಪಚುನಾವಣೆ ಮತ್ತು ಚನ್ನ­ಪಟ್ಟಣ ವಿಧಾನಸಭಾ ಚುನಾವಣೆ­ಯನ್ನು ಪ್ರಸ್ತಾಪಿಸಿ ಗದ್ಗದಿತರಾದರು.‘ಲೋಕಸಭೆ ಉಪಚುನಾವಣೆ­ಯಲ್ಲಿ ಜೆಡಿಎಸ್‌ ಕುತಂತ್ರದಿಂದ ಸೋಲನ್ನ­ಪ್ಪಿತು. ಆದರೆ ನಾನು ಬಹು ನಂಬಿದ್ದ ರಾಮನಗರದ ಅಲ್ಪಸಂಖ್ಯಾತ ಸಮು­ದಾಯ ಜೆಡಿಎಸ್‌ ಕೈ ಹಿಡಿಯ­ಲಿಲ್ಲ. ಅನಿತಾ ಅವರಿಗೆ ರಾಮ­ನಗರ­ದಲ್ಲಿ ಕೇವಲ 3000 ಮತಗಳ ಮುನ್ನಡೆ ದೊರೆಯಿತು. ಇದನ್ನು ನೆನೆದು ಆರು ತಿಂಗಳಿಂದ ಸಾಕಷ್ಟು ಕೊರಗಿದ್ದೇನೆ. ಎಂದು ಅವರು ಅಸ­ಮಾ­ಧಾನ ಹೊರಹಾಕಿದರು.‘ನಾನೇನಾದರೂ ತಪ್ಪು ಮಾಡಿರ­ಬಹುದು ಅಥವಾ ಅನ್ಯಾಯ ಎಸಗಿರ­ಬ­ಹುದು ಎಂಬ ಭಾವನೆ ಅಲ್ಪ­ಸಂಖ್ಯಾತ­ರಲ್ಲಿ ಮೂಡಿರಬಹುದು. ಅದಕ್ಕಾಗಿ ಈ ಶಿಕ್ಷೆ ನೀಡಿದ್ದೀರಿ ಎಂದು ಕೊಂಡಿ­ದ್ದೇನೆ. ಇದೀಗ ಜಾಫರ್‌ ಷರೀಫ್‌ ಜೆಡಿಎಸ್‌ ಸೇರಿದ್ದಾರೆ. ಈಗಲಾದರೂ ಅಲ್ಪ­ಸಂ­ಖ್ಯಾ­­ತರಿಗೆ ನಮ್ಮ ಮೇಲೆ ನಂಬಿಕೆ ಬರಲಿ’ ಎಂದು ಅವರು ಕಣ್ಣೀರು ಸುರಿಸಿದರು.ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ

‘ಪಕ್ಷದ ಹಿತದೃಷ್ಟಿಯಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ­ರಾಗಿರುವುದಾಗಿ ರಾಮ­ನಗರದ ಕಾರ್ಯ­ಕರ್ತರು ಹೇಳಿ­ದ್ದಾರೆ. ಚಿಕ್ಕ­ಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ­ವನ್ನು ಸೂಕ್ತ ಸಮಯದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದು­ಕೊಳ್ಳು­ತ್ತೇನೆ’ ಎಂದು ಶಾಸಕ ಎಚ್‌.ಡಿ.­ಕುಮಾರ­ಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.