ಭಾನುವಾರ, ಮೇ 16, 2021
27 °C

ಕನ್ನಡಕ್ಕೆ ಧಕ್ಕೆಯಾದರೆ ಸರ್ಕಾರದ ವಿರುದ್ಧವೂ ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): `ಕನ್ನಡ ಸಮ್ಮೇಳನ ಆಯೋಜಿಸಲು ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್‌ಗೆ ಅನುದಾನ ನೀಡುತ್ತಿರಬಹುದು. ಆದರೆ ನಾವು ಸರ್ಕಾರದ ಅಡಿಯಾಳಲ್ಲ. ಕನ್ನಡನಾಡು-ನುಡಿಗೆ ಧಕ್ಕೆಯಾಗುತ್ತಿರುವುದು ಕಂಡು ಬಂದರೆ, ಸರ್ಕಾರದ ವಿರುದ್ಧವೇ ಹೋರಾಟಕ್ಕೆ ಇಳಿಯುತ್ತೇವೆ' ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಎಚ್ಚರಿಕೆ ನೀಡಿದರು.ಉತ್ತನೂರು ರಾಜಮ್ಮ ಮಂಟಪದ ಆವರಣದಲ್ಲಿ ಗುರುವಾರ ನಡೆದ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಅನುದಾನ ನೀಡಿದರಷ್ಟೇ ಸಾಲದು, ಕನ್ನಡ-ಕನ್ನಡತನ ಉಳಿಸಿಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸಬೇಕು. ಸರ್ಕಾರ ಯಾವಾಗ ಕನ್ನಡದ ರಕ್ಷಣೆ ಮಾಡುವುದಿಲ್ಲವೋ ಆಗ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ಸಮ್ಮೇಳನಗಳನ್ನು ಆಯೋಜಿಸಲು ಭಾರಿ ಪ್ರಮಾಣದಲ್ಲಿ ಅನುದಾನ ನೀಡಿತು. ಆದರೆ ಅದೇ ಸಮಯಕ್ಕೆ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಸಹ ಕ್ರಮ ಕೈಗೊಂಡಿತು. ಸರ್ಕಾರ ಒಂದೆಡೆ ಕೋಟಿಗಟ್ಟಲೆ ಅನುದಾನ ನೀಡಿ, ಮತ್ತೊಂದೆಡೆ ಕನ್ನಡ-ಕನ್ನಡತನ ರಕ್ಷಿಸುವಲ್ಲಿ ವಿಫಲವಾದರೆ ಎಲ್ಲವೂ ನಿಷ್ಪ್ರಯೋಜಕವಾಗುತ್ತದೆ ಎಂದು ಅವರು ವಿಷಾದಿಸಿದರು.ಜಾಗತೀಕರಣದ ದಟ್ಟ ಪ್ರಭಾವದಿಂದಾಗಿ ಬಹುತೇಕ ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದ್ದು, ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸುತ್ತಿದ್ದಾರೆ. ಕನ್ನಡ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಒಂದೆಡೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವು ನಿಧಾನವಾಗಿ ಕಣ್ಮರೆಯಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ನಾವು ಎಷ್ಟೇ ಸಾಹಿತ್ಯ ಸಮ್ಮೇಳನ ಆಯೋಜಿಸಿದರೂ ಮತ್ತು ಅದ್ದೂರಿಯಾಗಿ ಆಚರಿಸಿದರೂ ಕನ್ನಡ ಅಳಿವು-ಉಳಿವು ನಮ್ಮ ಕೈಯಲ್ಲಿದೆ. ಕನ್ನಡನಾಡು-ನುಡಿ ಅಭಿಮಾನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡ ಮತ್ತು ಕನ್ನಡತನ ಗಟ್ಟಿಯಾಗಿ ಉಳಿಯುತ್ತದೆ ಎಂದು ಅವರು ತಿಳಿಸಿದರು.ಸಿಇಟಿ ಪರೀಕ್ಷೆಯಲ್ಲಿ ಮೀಸಲಾತಿ ನೀಡಿ

`ಸರ್ಕಾರಕ್ಕೆ ಕನ್ನಡ ನುಡಿ ಮತ್ತು ಪರಂಪರೆಯನ್ನು ಉಳಿಸಿ-ಬೆಳೆಸುವ ಕಳಕಳಿಯಿದ್ದರೆ, ಸಿಇಟಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ 50ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಸಿಇಟಿ ಪರೀಕ್ಷೆಯಲ್ಲಿ ಕನ್ನಡಿಗರಿಗೂ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಸರ್ಕಾರ ಸಾಬೀತುಪಡಿಸಬೇಕು. ಆಗ ಕನ್ನಡಿಗರಿಗೂ ಸಿಇಟಿ ಪರೀಕ್ಷೆಯಲ್ಲಿ ಪ್ರಾಮುಖ್ಯತೆ ಸಿಗುತ್ತದೆ' ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದರು.`ಇಂಗ್ಲಿಷ್‌ನಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಉನ್ನತ ಹುದ್ದೆಗೇರಬಹುದು ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಯೂ ಉನ್ನತ ಹುದ್ದೆ ಗಳಿಸಬಹುದು ಎಂಬ ವಿಶ್ವಾಸ ಜನರಲ್ಲಿ ಮೂಡಬೇಕು. ಅದರಲ್ಲೂ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಬಯಸುವ ಪೋಷಕರಿಗೆ ಅದರ ಅರಿವಾಗಬೇಕು' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.