ಬುಧವಾರ, ಜನವರಿ 29, 2020
27 °C

ಕನ್ನಡದಲ್ಲಿ ನಾಮಫಲಕ: ಗಡುವು

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಅಂಗಡಿ ಮುಗಂಟ್ಟುಗಳು, ಹೋಟೆಲ್‌ಗಳು, ಹೋಂ ಸ್ಟೆಗಳು, ಸಂಘ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮ ಫಲಕವನ್ನು ಡಿಸೆಂಬರ್‌ 5ರೊಳಗೆ ಕನ್ನಡದಲ್ಲಿ ಅಳವಡಿಸುವಂತೆ ನಗರಸಭೆ ಸೂಚನೆ ನೀಡಿದೆ.ಮಡಿಕೇರಿಯಲ್ಲಿ ಜನವರಿ 7,8 ಹಾಗೂ 9ರಂದು ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಎಲ್ಲ ವಾಣಿಜ್ಯೋದ್ಯಮಿಗಳು ಕನ್ನಡ ನಾಮ ಫಲಕ ಅಳವಡಿಸಬೇಕೆಂದು ನಗರಸಭೆ ನಿರ್ದೇಶನ ನೀಡಿದೆ.ಕನ್ನಡದಲ್ಲಿ ನಾಮ ಫಲಕ ಅಳವಡಿಸುವ ಕುರಿತು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ನಗರ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಅನ್ಯ ಭಾಷೆಯಲ್ಲಿರುವ ನಾಮ ಫಲಕಗಳನ್ನು ಕನ್ನಡದಲ್ಲಿ ಹಾಕಿಸುವಂತೆ ನಗರಸಭೆ ಆಯುಕ್ತರಲ್ಲಿ ಕೋರಿದ್ದರು.ಕನ್ನಡ ನಾಮ ಫಲಕ ಅಳವಡಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಡಿ. 5ರೊಳಗೆ ಕನ್ನಡ ನಾಮ ಫಲಕ ಅಳವಡಿಸದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಅನ್ಯ ಭಾಷೆಯಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮ ಫಲಕಗಳನ್ನು ತೆರವುಗೊಳಿಸಲಾಗುವುದು. ಜತೆಗೆ ಉದ್ಯಮ ನಡೆಸಲು ನೀಡಿರುವ ಪರವಾನಿಗೆ ರದ್ದುಗೊಳಿಸಿ, ದಂಡ ವಿಧಿಸಲಾಗುವುದು. ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಆಯುಕ್ತ ಎಂ.ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಕನ್ನಡ ಅಕ್ಷರವುಳ್ಳ ನಾಮ ಫಲಕವನ್ನು ಹಾಕಬೇಕು. ಅಗತ್ಯವಿದ್ದಲ್ಲಿ ಅನ್ಯ ಭಾಷೆಯ ಅಕ್ಷರಗಳಲ್ಲಿಯೂ ಕೂಡ ಚಿಕ್ಕದಾಗಿ ನಮೂದಿಸಬಹುದಾಗಿದೆ.ನಗರದ ಹೊರ ವಲಯಗಳಲ್ಲಿ ಅಳವಡಿಸಲಾಗಿರುವ ಜಾಹಿರಾತು ಫಲಕಗಳಲ್ಲಿಯೂ ಅನ್ಯ ಭಾಷೆಯೆ ಹೆಚ್ಚಾಗಿದ್ದು, ಈ ಫಲಕಗಳನ್ನು ಶೀಘ್ರವೇ ತೆರವುಗೊಳಿಸಿ ಕನ್ನಡ ನಾಮ ಫಲಕ ಅಳವಡಿಸಲು ಸೂಚಿಸಲಾಗಿದೆ.

ಪ್ರತಿಕ್ರಿಯಿಸಿ (+)