ಶನಿವಾರ, ಫೆಬ್ರವರಿ 27, 2021
19 °C

ಕನ್ನಡದ ಸಂಪತ್ತುಡ್ರಾಮಾದ ಆಪತ್ತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ಸಂಪತ್ತುಡ್ರಾಮಾದ ಆಪತ್ತು!

ಸಂಪತ್‌ರಾಜ್ ಕುಂದಾಪುರದಲ್ಲಿ ಬೀಡು ಬಿಟ್ಟಿದ್ದರು. ನಿರ್ದೇಶಕ ಯೋಗರಾಜಭಟ್ಟರ `ಡ್ರಾಮಾ~ದಲ್ಲಿ ಅವರದು ಖಳನ ಪಾತ್ರ. ಡಿಸೋಜಾ ಎಂಬ ಕರಾಳ ಚರಿತ್ರೆಯುಳ್ಳ ವ್ಯಕ್ತಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ದಂಡಪಾಣಿ (ಹಿರಿಯ ನಟ ಲೋಹಿತಾಶ್ವ) ಎಂಬ ಭೂಗತ ದೊರೆಯೊಂದಿಗೆ ಸಂಘರ್ಷ ನಡೆಸುವುದು ಆ ಮೂಲಕ ಮುಗ್ಧ ಹುಡುಗರ ಬದುಕಿಗೆ ಆಪತ್ತಾಗಿ ಎರಗುವುದು ಡಿಸೋಜಾ ಕೆಲಸ.ಇಡೀ ಪಾತ್ರ ಯಾವ ಗೆಟಪ್‌ನಲ್ಲಿರಬೇಕು, ಯಾವ ಮ್ಯಾನರಿಸಂ ಹೊಂದಿರಬೇಕು ಎಂಬುದನ್ನು ನಿರ್ಧರಿಸುತ್ತಿರುವುದು ಸ್ವತಃ ಸಂಪತ್. ಈ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡರಂತೆ. ಇವರ ಕಾಳಜಿಯನ್ನು ಕಂಡು ಭಟ್ಟರೂ ಖುಷಿಯಾದರು. ಪಾತ್ರದ ವಿವರಣೆಯನ್ನಷ್ಟೇ ನೀಡಿ ಮುಂದಿನ ದಾರಿ ನಿಮ್ಮದು ಎಂದರು.ಗೆಟಪ್, ಸಂಭಾಷಣೆ ಶೈಲಿ ಹಾವಭಾವಗಳ ಕುರಿತೂ ಬಿಸಿ ಬಿಸಿ ಚರ್ಚೆ ನಡೆದು ಡಿಸೋಜಾ ಪಾತ್ರದ ಒಂದು ಹಂತಕ್ಕೆ ತಲುಪಿದೆ. ಈಗಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ.ಡಿಸೋಜಾ ಪಾತ್ರವನ್ನು ಮೊದಲು ಪ್ರಕಾಶ್ ರೈ ಮಾಡಬೇಕಿತ್ತು. ಆದರೆ ಅವರ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ರೈ ನಿಗದಿತ ಡೇಟ್‌ಗೆ ಲಭ್ಯವಾಗಲಿಲ್ಲ. ಆಗ ಸಂಪತ್ ತಮಿಳು ನಟ ವಿಶಾಲ್ ಜತೆ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಭಟ್ಟರು ಹಾಗೂ ಸಂಪತ್ ನಡುವೆ ಒಂದು ವಾರಗಳ ಕಾಲ ಎಸ್‌ಎಂಎಸ್ ವ್ಯವಹಾರ.ಪಾತ್ರದ ವಿವರಣೆ ಕೇಳುತ್ತಿದ್ದಂತೆ ಸಂಪತ್‌ರಿಂದ ಹಸಿರು ನಿಶಾನೆ. ರೈ ಅಭಿನಯಿಸಬೇಕಾದ ಪಾತ್ರವಾದ್ದರಿಂದ ಚಿತ್ರೀಕರಣದ ವೇಳೆ ತುಸು ಎಚ್ಚರಿಕೆಯ ಹೆಜ್ಜೆ. ಸಂಪತ್ ಎಲ್ಲಿಯವರು ಎಂದರೆ ಅವರನ್ನು ಭಾರತದವರು ಎನ್ನಬೇಕೇ ಹೊರತು ಇಂಥದ್ದೇ ರಾಜ್ಯಕ್ಕೆ ಸೇರಿದವರು ಎನ್ನಲಾಗದು! ಏಕೆಂದರೆ ಬಾಲ್ಯದಿಂದಲೇ ಹಲವಾರು ರಾಜ್ಯಗಳಲ್ಲಿ ಓದು ಮುಗಿಸಿದರು.ತಂದೆ ಸೇನೆಯಲ್ಲಿ ಅಧಿಕಾರದಲ್ಲಿದ್ದುದು ಇದಕ್ಕೆ ಕಾರಣ. ಇವರ ಕುಟುಂಬದ ಮೂಲ ತಮಿಳುನಾಡಿನ ತಿರುಚ್ಚಿ. ಆದರೆ ಅವರಿಗೆ ತಿರುಚ್ಚಿಯ ಪರಿಚಯ ಅಷ್ಟಾಗಿ ಇಲ್ಲ. ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ. ಬೆಳೆದಿದ್ದು ದೆಹಲಿ, ಪಂಜಾಬ್ ಮತ್ತಿತರ ಕಡೆಗಳಲ್ಲಿ. ಕಡೆಗೆ ಇವರ ಕುಟುಂಬ ನೆಲೆ ಕಂಡುಕೊಂಡಿದ್ದು ಬೆಂಗಳೂರಿನಲ್ಲಿ. ಕನ್ನಡ ಸೇರಿದಂತೆ ಆರು ಭಾಷೆಗಳನ್ನಾಡಬಲ್ಲ ಅವರಿಗೆ ಈ ಜ್ಞಾನವೇ ಒಂದು ವರ.ಖಳನಾಯಕ್ ನಹೀ...

ಚಿತ್ರರಂಗ ಪ್ರವೇಶಿಸಿದ್ದು ಕವಿತಾ ಲಂಕೇಶರ `ಬಿಂಬ~ ಮೂಲಕ. ಆ ನಂತರ ಅವರದೇ `ಪ್ರೀತಿ ಪ್ರೇಮ ಪ್ರಣಯ~ ಚಿತ್ರದಲ್ಲೂ ಅಭಿನಯ. ಅವರು ತಮಿಳು ಚಿತ್ರರಂಗದತ್ತ ಸಾಗಿದ್ದು ಒಂದು ಆಕಸ್ಮಿಕ.  ಒಮ್ಮೆ ಯಾವುದೋ ವಿಚಾರಕ್ಕೆ ಚೆನ್ನೈಗೆ ತೆರಳಿದ್ದರು. ಆಗ ಅಲ್ಲಿದ್ದ ಒಬ್ಬರು ತಮಿಳು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ನೀಡಿದರು.

 

ಆ ನಂತರ ಸಂಪತ್ ಹಿಂತಿರುಗಿ ನೋಡಲಿಲ್ಲ. `ನೆರಂಜ ಮನಸು~ ಅವರ ಮೊದಲ ತಮಿಳು ಚಿತ್ರ. `ಚೆನ್ನೈ 600028~ ಹಾಗೂ `ಸರೋಜಾ~ ಚಿತ್ರಗಳ ಮೂಲಕ ತಮಿಳಿನಲ್ಲಿ ಮನೆ ಮಾತಾದರು. `ಸರೋಜಾ~ದ ಖಳನ ಪಾತ್ರ ಅವರಿಗೆ ಅಚ್ಚುಮೆಚ್ಚು. ಏಕೆಂದರೆ ಅಲ್ಲಿ ವಿಲನ್‌ಗಾಗಿಯೇ ಒಂದು ಹಾಡಿತ್ತು. ನಾಯಕರಿಗೆ ಬದಲಾಗಿ ಖಳನಾಯಕನಿಗೇ ನಾಯಕಿಯಿದ್ದಳು!ಪತ್ರಕರ್ತ

ಸಂಪತ್ ಕೆಲಕಾಲ ಪತ್ರಕರ್ತರು ಕೂಡ ಆಗಿದ್ದವರು. ಆಂಗ್ಲ ಹಾಗೂ ಹಿಂದಿ ಪತ್ರಿಕೆಗಳಲ್ಲಿ ದುಡಿದಿದ್ದರು. ನಂತರ ತಮ್ಮದೇ ಆದ ಜಾಹೀರಾತು ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಅಭಿನಯ ಅವರ ಆಸಕ್ತಿಯ ಕ್ಷೇತ್ರ. ಕನ್ನಡದವನು ಎಂದು ಅನೇಕರಿಗೆ ಗೊತ್ತಿಲ್ಲದ ಕಾರಣಕ್ಕೇ `ಚಂದನವನ~ದಲ್ಲಿ ಅವರು ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲವಂತೆ.`ಜಾಕಿ~, `ಜರಾಸಂಧ~, `ಭದ್ರ~ ಚಿತ್ರಗಳಲ್ಲಿ ನಟಿಸಿದ್ದ ಅವರು `ಶೌರ್ಯ~ ಚಿತ್ರದ ಮೂಲಕ ಕನ್ನಡದಲ್ಲಿ ಮತ್ತೆ ಹೆಚ್ಚಾಗಿ ಗುರುತಿಸಿಕೊಳ್ಳತೊಡಗಿದರು. `ಡ್ರಾಮಾ~ ಜತೆಗೆ ತೆಲುಗು ಹಾಗೂ ತಮಿಳಿನ ಹಲವು ಚಿತ್ರಗಳಲ್ಲಿ ಅವರು ಸದ್ಯಕ್ಕೆ ಬಿಜಿ ನಟ.ಅತುಲ್ ಯಾಕೆ `ಡ್ರಾಮಾ~ ಮಾಡಲಿಲ್ಲ?

ಡ್ರಾಮಾ ಸೆಟ್ಟೇರಿದ ನಂತರ ನಟವರ್ಗದಲ್ಲಿ ಅನೇಕ ಬದಲಾವಣೆಗಳಾದವು. ವಿಲನ್ ಪಾತ್ರಕ್ಕೆ ಸೂಕ್ತ ನಟರನ್ನು ಆಯ್ಕೆ ಮಾಡುವುದೇ ಕಷ್ಟ ಸಾಧ್ಯವಾಯಿತು. ಪ್ರಕಾಶ್ ರೈ ಕಾರಣಾಂತರಗಳಿಂದ ಪಾತ್ರ ವಹಿಸಲಿಲ್ಲ. ಆಮೇಲೆ ಭಟ್ಟರ ಕಣ್ಣಿಗೆ ಕಂಡದ್ದು `ಭೂಮಿಗೀತ~, `ಆ ದಿನಗಳು~ ಖ್ಯಾತಿಯ ಅತುಲ್ ಕುಲಕರ್ಣಿ.ಅತ್ತ ಅವರೂ ಒಪ್ಪಿದರು, ಭಟ್ಟರೂ ಸೈ ಎಂದರು. ಇನ್ನೇನು ಅಡ್ವಾನ್ಸ್ ಕೊಡಬೇಕು ಭಟ್ಟರಿಗೆ ಒಂದು ಅನುಮಾನ ಕಾಡಿತು. ತಕ್ಷಣ ಅವರು ಅತುಲ್‌ಗೆ ಫೋನಾಯಿಸಿ ಇತ್ತೀಚಿನ ಭಾವಚಿತ್ರ ಕಳುಹಿಸಿಕೊಡುವಂತೆ ಕೋರಿದರು. ಫೋಟೊ ನೋಡಿದಾಗ ಇವರೇನಾ ಅತುಲ್ ಎನ್ನುವಷ್ಟರ ಮಟ್ಟಿಗೆ ತೆಳುವಾಗಿ ಕಂಡು ಬಂದರು.ಮರಾಠಿ ಚಿತ್ರವೊಂದರಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಅತುಲ್ ಬರೋಬ್ಬರಿ ಹದಿನೈದು ಕೆಜಿ ತೂಕ ಇಳಿಸಿಕೊಂಡಿದ್ದರು! ಮೊದಲಿಗಿಂತಲೂ ಅವರ ಕಣ್ಣು ಆಳಕ್ಕೆ ಇಳಿದಿತ್ತು. ಹೀಗಾಗಿ ಭಟ್ಟರಿಂದ ಮತ್ತೆ ಖಳನಟನ ಹುಡುಕಾಟ ಆರಂಭ. ಆ ನಂತರ ದೊರೆತವರು ಕನ್ನಡದವರೇ ಆದ ಸಂಪತ್‌ರಾಜ್. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.