ಶುಕ್ರವಾರ, ಏಪ್ರಿಲ್ 23, 2021
31 °C

ಕನ್ನಡದ ಸೇವೆಗೆ ಪ್ರಾಮಾಣಿಕತೆ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಎಲ್ಲರನ್ನು ಒಗ್ಗೂಡಿಸಿಕೊಂಡು ಕನ್ನಡಾಭಿಮಾನವನ್ನು ಬೆಳೆಸುವ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕನ್ನಡದ ತೇರನ್ನು ಎಳೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಹೇಳಿದರು.ಪಟ್ಟಣದ ಎಕ್ಸ್ ಮುನಿಸಿಪಲ್ ಹೈಸ್ಕೂಲಿನಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ಕನಕಪುರ ತಾಲ್ಲೂಕಿನ ಬಹುತೇಕ ಗ್ರಾಮಗಳು ಗಡಿನಾಡು ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.ಹೋಬಳಿ ಮಟ್ಟದಲ್ಲಿ ಯುವಕರಿಗೆ ಜವಾಬ್ದಾರಿ ನೀಡಿ ಗ್ರಾಮಮಟ್ಟದಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಬೇಕು. ಕಸಾಪ ಕಾರ್ಯಕ್ರಮಗಳು ದತ್ತಿ ಸಹಕಾರದಿಂದ ನಡೆಯುತ್ತಿದ್ದು ತಾಲ್ಲೂಕಿನಲ್ಲಿ ಕೇವಲ 5 ದತ್ತಿಗಳು ಮಾತ್ರ ಇವೆ. ಕನಿಷ್ಠ 25 ಸಾವಿರ ರೂಪಾಯಿಗಳಂತೆ ದಾನಿಗಳಿಂದ ದತ್ತಿ ಸಂಗ್ರಹಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.   ಕಸಾಪ ಶತಮಾನೋತ್ಸವದ ಹೊಸ್ತಿಲಲ್ಲಿ ಇರುವುದರಿಂದ ಪ್ರತಿ ತಾಲ್ಲೂಕಿನಲ್ಲೂ ಒಂದು ಕನ್ನಡ ಭವನವನ್ನು ನಿರ್ಮಾಣ ಮಾಡಬೇಕು. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು, ದಾನಿಗಳು, ಸಾಹಿತ್ಯಾಭಿಮಾನಿಗಳಿಂದ ಆರ್ಥಿಕ ಸಂಪನ್ಮೂಲ ದೊರೆಯುವಂತಾಗಬೇಕು ಎಂದು ಹೇಳಿದರು.ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಹೋರಾಟಗಳು ನಿಂತ ನೀರಾಗಬಾರದು. ಗುಂಪುಗಾರಿಕೆ, ವಿರೋಧಗಳಿಗೆ ಅವಕಾಶ ಕೊಡದೆ, ಎಲ್ಲರನ್ನೂ ಸಹಕಾರಕ್ಕೆ ತೆಗೆದುಕೊಂಡು ತಳಮಟ್ಟದಿಂದ ಕನ್ನಡದ ಸಂಘಟನೆ ಮಾಡಬೇಕು. ಮನೆಗೊಂದು ಕನ್ನಡ ಕಾರ್ಯಕ್ರಮ ನಡೆಸುವ ಮೂಲಕ ಕನ್ನಡವನ್ನು ಗಟ್ಟಿಗೊಳಿಸಬೇಕು ಎಂದರು.ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಅರಸೀಕರೆ ಮಾಯಪ್ಪ ಮಾತನಾಡಿ. ಕನ್ನಡ ಭಾಷೆಗೆ ಕುತ್ತು ಬಂದಿರುವ ಇಂದಿನ ಸಮಯದಲ್ಲಿ ಅದರ ಉಳಿವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಹೇಳಿದರು.ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಎಲ್ಲರ ಸಹಕಾರ ಪಡೆದು ಕನ್ನಡ ಸಾಹಿತ್ಯವನ್ನು ಉತ್ಕೃಷ್ಟವಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ನಿಕಟ ಪೂರ್ವ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಶಸ್ವಿ ಮೂರು ವರ್ಷದ ಅಧಿಕಾರ ಪೂರೈಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಕೋಶಾಧ್ಯಕ್ಷ  ಕನಕಪುರ ಮಹೇಶ್, ಚನ್ನಪಟ್ಟಣ ಅಧ್ಯಕ್ಷ ಶಿವಮಾದು, ಜಿಲ್ಲಾ ನಿಕಟಪೂರ್ವ ಸಂಚಾಲಕ ಆರ್.ವಿ.ನಾರಾಯಣ, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ಜಲಾನಯನ ಇಲಾಖೆಯ ಹುಚ್ಚಪ್ಪ, ಮರಳವಾಡಿ ಶಿವರಾಜು, ಮುನಿಯಪ್ಪ, ಶಿವರಾಜು ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.