ಸೋಮವಾರ, ಮೇ 16, 2022
30 °C

ಕನ್ನಡಿಗರಲ್ಲಿನ ಹಿಂಜರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯೋಗಕ್ಕಾಗಿ ರಾಜ್ಯದ ಹೊರಗೆ ಕಾಲಿಡಲು ಹಿಂಜರಿಯುವ ಪ್ರವೃತ್ತಿ ಕನ್ನಡಿಗರಲ್ಲಿ ಇನ್ನೂ ಮುಂದುವರಿದಿರುವುದು ವಿಪರ್ಯಾಸ. ಕೇವಲ ಉನ್ನತ ಹುದ್ದೆಗಳಿಗೆ ಮಾತ್ರ ಹೊರಗೆ ಹೋಗಬಯಸುವ  ಕನ್ನಡಿಗರು ಗುಮಾಸ್ತೆಯಂತಹ ಉದ್ಯೋಗಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವುದು ವಿಚಿತ್ರ.

 

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೆಕ್ಷನ್ ಆಫೀಸರ್ಸ್‌, ಲೆಕ್ಕಪರಿಶೋಧಕರು, ಕಿರಿಯ ಎಂಜಿನಿಯರ್ ಸೇರಿದಂತೆ ಸುಮಾರು 60 ಲಕ್ಷ ಸಿಬ್ಬಂದಿ ನೇಮಕಕ್ಕಾಗಿ ಅರ್ಜಿ ಕರೆಯಲಾಗಿತ್ತಾದರೂ ಕರ್ನಾಟಕದವರಿಂದ ಕೇವಲ ಏಳು ಸಾವಿರ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿರುವ ವರದಿ ಬೆಂಗಳೂರಿನಲ್ಲಿರುವ ಕೇಂದ್ರೀಯ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ಕಚೇರಿಯವರಿಗೇ ಬೇಸರ ತಂದಿದೆ.

 

ಕೇಂದ್ರ ಸರ್ಕಾರದ ಉದ್ಯೋಗಗಳಿಗಾಗಿ ಈ ಕಚೇರಿಗೆ ಒಟ್ಟು 37 ಸಾವಿರ ಅರ್ಜಿಗಳು ಬಂದಿವೆ. ಅವುಗಳಲ್ಲಿ ಒಂದು ಸಣ್ಣ ಉದ್ಯೋಗ ಸಿಕ್ಕರೂ ದೇಶದ ಯಾವುದೇ ಮೂಲೆಗೂ ಹೋಗಲು ಸಿದ್ಧವಿರುವ ಕೇರಳದ ಮಂದಿ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ 30 ಸಾವಿರ.ಉಳಿದ ಏಳು ಸಾವಿರ ಕನ್ನಡಿಗರು ಸಲ್ಲಿಸಿರುವ ಅರ್ಜಿಗಳು. ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಹೋಗಲು ಕನ್ನಡಿಗರಿಗೆ ಇರುವ ನಿರಾಸಕ್ತಿಗೆ ಹಿಡಿದ ಕೈಗನ್ನಡಿ ಇದು.ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ರಾಜ್ಯ ಸರ್ಕಾರದ ಸಿಬ್ಬಂದಿಗಿಂತ ಹೆಚ್ಚಿನ ವೇತನ ಮತ್ತು ಇತರೆ ಸೌಲಭ್ಯಗಳಿವೆ. ಆದರೆ ಕೇಂದ್ರ ಸರ್ಕಾರದ ಉದ್ಯೋಗ ಸೇರಿದರೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಕೆಲಸ ಮಾಡಬೇಕಾಗುತ್ತದೆ.ದೂರದ ರಾಜ್ಯಗಳಿಗೆ ಹೋಗಲು ಹಿಂದಿ ಮತ್ತು ಇಂಗ್ಲಿಷ್ ಭಾಷಾ ಜ್ಞಾನ ಅಗತ್ಯ. ಬಹುತೇಕ ಕನ್ನಡಿಗರಿಗೆ ಇರುವ ಕೊರತೆ ಎಂದರೆ ಬರೆಯಲು ಮತ್ತು ಮಾತನಾಡಲು ಹಿಂದಿ ಬಾರದಿರುವುದು.

 

ಜೊತೆಗೆ `ಎಲ್ಲಿಯಾದರೂ ಹೋಗಿ ಬದುಕುತ್ತೇನೆ~ ಎನ್ನುವ ಛಲದ ಕೊರತೆ ಈ ಹಿಂಜರಿಕೆಗೆ ಕಾರಣವಿರಬಹುದು. ಕೇಂದ್ರ ಸರ್ಕಾರವು ಕನ್ನಡಿಗರ ಬಗೆಗೆ ತಾರತಮ್ಯ ಮಾಡುತ್ತಿದೆ ಎಂದು ಆಗಾಗ್ಗೆ ಬೊಬ್ಬೆಹಾಕುವ ಮಂದಿ ವಾಸ್ತವ ಸ್ಥಿತಿಯನ್ನು ಅರಿಯಬೇಕಿದೆ.ಕೇಂದ್ರದ ಹುದ್ದೆಗಳಿಗೆ ಕನ್ನಡಿಗರಿಂದ ಸೂಕ್ತ ಪ್ರತಿಕ್ರಿಯೆ ಇಲ್ಲದಿರುವ ಕಾರಣ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮುಂತಾದ ಕೆಲವು ಕೇಂದ್ರ ಸರ್ಕಾರದ ಸ್ವಾಮ್ಯದ ನಿಗಮ ಮತ್ತು ಪ್ರಾಧಿಕಾರಗಳು ನಡೆಸುವ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳನ್ನೇ ಮಾಡುತ್ತಿಲ್ಲ.ಇಂತಹ ಪರೀಕ್ಷೆಗಳು ಹೆಚ್ಚಾಗಿ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ನಡೆಯುತ್ತಿವೆ. ಅಲ್ಲಿಗೆ ಹೋಗಿ ಪರೀಕ್ಷೆ ಬರೆಯಲೂ ಕನ್ನಡಿಗರು ಹೋಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಹುದ್ದೆಗಳು ಕನ್ನಡಿಗರಿಗೆ ಇನ್ನೂ ಮರೀಚಿಕೆಯೇ ಆಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ. ಇದಕ್ಕೆ ಕೇಂದ್ರ ಸರ್ಕಾರವನ್ನಾಗಲಿ ಅಥವಾ ಬೇರೆ ಭಾಷೆಯವರನ್ನಾಗಲಿ ದೂರಿದರೆ ಪ್ರಯೋಜನವಿಲ್ಲ.ಎಂತಹ ಉದ್ಯೋಗ ಸಿಕ್ಕರೂ ಎಲ್ಲಿಗೆ ಬೇಕಾದರೂ ಹೋಗಬಲ್ಲೆ ಎನ್ನುವ ಛಲವನ್ನು ಬೆಳೆಸಿಕೊಳ್ಳುವಂತೆ ಯುವಜನರನ್ನು ಹುರಿದುಂಬಿಸುವ ವಾತಾವರಣವನ್ನು ನಿರ್ಮಿಸಬೇಕು. ಮಾತೃಭಾಷಾ ಪ್ರೇಮವನ್ನು ಉಳಿಸಿಕೊಂಡೇ ಬೇರೆ ಕಡೆಗಳಲ್ಲಿ ಕೆಲಸ ಮಾಡುವ ವ್ಯಕ್ತಿತ್ವ ವಿಕಸನ ಇಂದು ಕನ್ನಡಿಗರಲ್ಲಿ ಆಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.