ಭಾನುವಾರ, ಮೇ 29, 2022
23 °C

ಕನ್ನಡ ಬಳ್ಳಿಯ ಕಾಣುತ್ತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಅನ್ನುವ ಪದವನ್ನು ನಮ್ಮ ಜನ ಮತ್ತು ಚಿಂತಕರು ಬಹುದೂರ ಕೊಂಡೊಯ್ದಿದ್ದಾರೆ. ಅದೊಂದು ಭಾಷೆ, ಸಮಾಜ, ಸಂಸ್ಕೃತಿ ಏನೆಲ್ಲಾ ಆಗಿ ಒದಗಿ ಬಂದಿದೆ. ಸಾಹಿತ್ಯಾಸಕ್ತರಾದ ಶಿಕ್ಷಕರು ಇದನ್ನು ಬೆಳೆಸಿದ ಕ್ರಮವೊಂದಿದೆ. ತಮ್ಮ ಪ್ರೀತಿ ಮತ್ತು ಕಾಳಜಿಯಿಂದ ಕರ್ನಾಟಕದ ಅನೇಕ ಹಳ್ಳಿ, ಪಟ್ಟಣಗಳು ಈ `ಕನ್ನಡ~ವನ್ನು ಕನ್ನಡಿಸುವಂತೆ ಅವರು ಮಾಡಿದ್ದರು. ಶಿಕ್ಷಕರಲ್ಲದ ಆದರೆ ಕನ್ನಡ ಬೆಳವಣಿಗೆ ಕುರಿತು ಚಿಂತಿಸಿದವರೂ ಇದ್ದರು.ಕೆಲವರು ತಿರುಗಾಡಿ `ಕನ್ನಡ ನುಡಿತೋರಣ~ ಕಟ್ಟಿದರು. ಕೆಲವರು ಆಮೆಯಂತೆ ಚಿಪ್ಪಿನೊಳಗಿದ್ದೇ ಬರೆದು ಕನ್ನಡವನ್ನು ಕಾಣಿಸಿದರು. ಕೆಲವರು ತಮ್ಮ ಬರವಣಿಗೆಯನ್ನು ಸರಿಸಿಟ್ಟು ಬರೆಯುವವರಿಗೆ ಬೆಂಬಲವಾಗಿ ನಿಂತರು. ಇದೆಲ್ಲವೂ ಕನ್ನಡವನ್ನು ಅನೇಕ ಝರಿಗಳಾಗಿ ನುಗ್ಗುವಂತೆ ಮಾಡಿದೆ.ಇಲ್ಲಿಯೇ ಶಿಕ್ಷಕರಾಗಿದ್ದ ಗಂಗಾಧರ ಮಡಿವಾಳೇಶ್ವರ ತುರಮುರಿ ಅವರನ್ನು ನೆನಪಿಸಿಕೊಳ್ಳಬಹುದು. 19ನೇ ಶತಮಾನದ ಕೊನೆಭಾಗದಲ್ಲಿ ಅವರು ಮಾಡಿದ ಕಾರ್ಯಗಳು ಅಚ್ಚರಿ ಉಂಟುಮಾಡುತ್ತವೆ. ಕನ್ನಡವು ಶಿಕ್ಷಣದಲ್ಲಿ ಬೇರುಬಿಡುತ್ತಿದ್ದ ಕಾಲವದು. ಆಗ ಕನ್ನಡಕ್ಕೆ ಬೇಕಾದ ಪಠ್ಯಪುಸ್ತಕಗಳನ್ನು ರೂಪಿಸಿದರು. ಕಲಿಯುವವರಿಗೆ ಕಲಿಸುವವರಿಗೆ ಅನುಕೂಲವಾಗಲೆಂದು ನಿಘಂಟೊಂದನ್ನು ತಂದರು. ಕನ್ನಡ ವ್ಯಾಕರಣ ಮತ್ತಿತರ ಶಾಸ್ತ್ರ ಕೃತಿಗಳನ್ನು ರಚಿಸಿದರು. ಕನ್ನಡವು ಚಿಗುರೊಡೆಯವ ದಾರಿಗಳನ್ನು ತುರಮುರಿ ಹುಡುಕಿದರು. ಅವರ ಈ ಕಾಳಜಿ ಹುನುಗುಂದದಿಂದ ಆರಂಭವಾಗಿ ಇಡೀ ಉತ್ತರಕರ್ನಾಟಕವನ್ನು ಆವರಿಸಿಕೊಂಡಿತು. ಭಾಷೆಯ ಕ್ರಿಯಾಶೀಲತೆಯನ್ನು ಈ ಹಿರಿಯ ಹುಡುಕಹೊರಟಿದ್ದರು. ಇಂಥ ತುರಮುರಿಯವರ ಬಗ್ಗೆ ಪಿ.ಲಂಕೇಶ್ ಬರೆದದ್ದು ಹೀಗಿದೆ:

`ಒಂದು ಮಟ್ಟದಲ್ಲಿ ಗಂಗಾಧರ ಮಡಿವಾಳೇಶ್ವರ ತುರಮುರಿ ಸಾಮಾನ್ಯ ಮನುಷ್ಯ, ಅಪ್ಪಟ ಮಾಸ್ತರು. ನಮ್ಮ ಸುತ್ತಣ ಮಾಸ್ತರುಗಳು ನೆನಪಾಗುತ್ತಾರೆ. ಸಣ್ಣಪುಟ್ಟ ತರಲೆಗಳಲ್ಲಿ ಮುಳುಗಿಹೋಗಿರುವ ನಮ್ಮ ಮಾಸ್ತರುಗಳು ಮಕ್ಕಳಿಗೆ ಅಂತರಂಗದ, ಬಹಿರಂಗದ ಮಾರ್ಗದರ್ಶಿಗಳಾಗುವ ಅರ್ಥಪೂರ್ಣ ಜಾಗದಲ್ಲಿದ್ದಾರೆ. ಅದು ಅವರಿಂದ ಆಗುತ್ತಿಲ್ಲ. ನಮ್ಮ ಬುದ್ಧಿಜೀವಿಗಳನ್ನೇ ನೋಡಿ. ಜಗತ್ತಿನ ತತ್ವ, ಚರಿತ್ರೆ, ಮಾನವಶಾಸ್ತ್ರವನ್ನೆಲ್ಲ ವದರುವ ಈ ಮೂರ್ಖರು ಒಂದು ಸಮಾಜಕ್ಕೆ ಬೇಕಾದ ನೆಲಗಟ್ಟಿನ ಪರಿವೆ ಕೂಡ ಪಡೆದಿಲ್ಲ. ಮಕ್ಕಳಿಗೆ ಬೇಕಾದ ಪಾಠಗಳು, ಪಾಠಕ್ರಮ, ಕಾಲೇಜು ಶಿಕ್ಷಣದ ವಿವರ, ಜನತೆಗೆ ಬೇಕಾಗಿರುವ ತಿಳಿವಳಿಕೆ ಈ ಬಗ್ಗೆ ಬುದ್ಧಿಜೀವಿಗಳು ಅಜ್ಞಾನದ ಮೊಟ್ಟೆಗಳಾಗಿದ್ದಾರೆ. ಈ ತುರಮುರಿ ಮಾಸ್ತರಿಗೆ ಇಬ್ಬರು ಹೆಂಡಿರು. ಆದರೆ ಅವರು ಪಡೆದ ಮಕ್ಕಳು ಚಿಕ್ಕಂದಿನಲ್ಲೇ ತೀರಿಕೊಂಡರು. ಇವರ ಸಂತತಿ ಮೊಟಕಾಯಿತು. ಆದರೆ ಹಾಗೆನ್ನುವುದು ಎಂಥ ಮೂರ್ಖತನ!. ಶತಮಾನದ ಹಿಂದೆ ಈತ ಸಾಧಿಸಿ ತೋರಿಸಿದ್ದು, ಈತ ತನ್ನ ಸಾಮಾನ್ಯತೆಯನ್ನು ಒಪ್ಪಿಕೊಂಡು ರೂಪಿಸಿದ ಕನ್ನಡ ಮತ್ತು ಕಲಿಸಿದ ಪಾಠ ಇವತ್ತಿಗೂ ತನ್ನ ಶೋಭೆ ಕಳೆದುಕೊಂಡಿಲ್ಲ. ನಮ್ಮೆಲ್ಲರ ಸಂತತಿ ಉಳಿಯಬೇಕಾದದ್ದು ಹೀಗೆ?~.

ಐವತ್ತು, ಅರವತ್ತು, ಎಪ್ಪತ್ತರ ದಶಕದಲ್ಲಿ ಆಗತಾನೆ ಶಿಕ್ಷಕರಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಸೇರಿದವರನ್ನು ನೆನಪಿಸಿಕೊಳ್ಳಿ. ಅವರಲ್ಲಿ ಅನೇಕರು ತಾವು ನೆಲೆನಿಂತ ಊರಿನಲ್ಲಿ ಸಾಹಿತ್ಯದ ಪ್ರೀತಿಯನ್ನು ಉಕ್ಕಿಸತೊಡಗಿದ್ದರು.ಹುಡುಗ/ಹುಡುಗಿಯರ ವ್ಯಕ್ತಿತ್ವಕ್ಕೆ ಇದರಿಂದ ಏನಾದರೂ ದಕ್ಕಬಹುದೇ ಅಂತ ಯೋಚಿಸತೊಡಗಿದ್ದರು. ಏನಿಲ್ಲವೆಂದರೂ ಒಂದೊಂದು ತಾಲ್ಲೂಕುಗಳಲ್ಲಿ ಇದಕ್ಕಾಗಿ ತೆತ್ತುಕೊಂಡ ಒಂದಿಬ್ಬರಾದರೂ ಸಿಕ್ಕುತ್ತಿದ್ದರು. ಮನೆಯಲ್ಲಿ ಪುಟ್ಟ ಗ್ರಂಥಾಲಯ, ಅದರೊಳಗೆ ಪಂಪ, ರನ್ನ, ವಚನಕಾರರು, ಕುಮಾರವ್ಯಾಸರಾದಿಯಾಗಿ ಕುವೆಂಪು, ಬೇಂದ್ರೆ, ಮಧುರಚೆನ್ನ, ಮಾಸ್ತಿ, ಕಾರಂತರು, ಎಂ.ಕೆ.ಇಂದಿರಾ ಕಾಣಿಸಿಕೊಳ್ಳುತ್ತಿದ್ದರು. ಇವರನ್ನು ಓದುವುದು, ಸುತ್ತಲಿನವರೊಂದಿಗೆ ಹಂಚಿಕೊಳ್ಳುವುದು, ವಿಶೇಷವಾಗಿ ಹುಡುಗ/ಹುಡುಗಿಯರೊಂದಿಗೆ ಚರ್ಚಿಸುವುದು ನಿತ್ಯದ ಕರ್ಮವಾಗಿತ್ತು. ಆಮೇಲೆ ಚಿತ್ತಾಲರು, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ, ಚಂಪಾ ಬಂದು ಓದುವವರ ಹುಬ್ಬನ್ನು ಕೊಂಚ ಏರಿಸಿದರು. ಬಹಿರಂಗವಾಗಿ ನಡೆಯುತ್ತಿದ್ದ ಚರ್ಚೆಗಳು ಕೆಲವೊಮ್ಮೆ ಸೆನ್ಸಾರ್‌ಗೊಂಡು ಆಪ್ತವಲಯಗಳಲ್ಲಿ ಸಾಹಿತ್ಯ ಬೆಚ್ಚನೆಯ ಸುಖ ಹರಡತೊಡಗಿತ್ತು. ಇದೆಲ್ಲವೂ ಭಾವುಕ ನೆಲೆಯದಾಗಿದ್ದರೂ ತಮ್ಮ ಮಿತಿಗಳ ನಡುವೆಯೇ ಆರೋಗ್ಯಪೂರ್ಣವಾಗಿತ್ತು. ಇನ್ನೊಂದು ವಲಯವಿತ್ತು, ಅದು ವಿದ್ವತ್ ನೆಲೆಗಳಲ್ಲಿ ಕನ್ನಡವನ್ನು ಅರಿಯುವ ಕೆಲಸದಲ್ಲಿ ತೊಡಗಿತ್ತು. ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಹಳೆಗನ್ನಡ ಪಠ್ಯ, ಜಾನಪದ, ಭಾಷಾಶಾಸ್ತ್ರ, ವಿಮರ್ಶೆ ಕುರಿತಿರುವ ಕೆಲಸವಿದು.ಶಬ್ದಮಣಿದರ್ಪಣವನ್ನೋ, ಕವಿರಾಜಮಾರ್ಗವನ್ನೋ, ಹಲ್ಮಿಡಿ ಶಾಸನವನ್ನೋ ಹಾಗೆಯೇ ತತ್ವಪದವನ್ನೋ ಎದುರು ಹಾಕಿಕೊಂಡು ಗಂಟೆಗಟ್ಟಲೆ ಚರ್ಚಿಸುವ ಗುಂಪುಗಳೂ ಇದ್ದವು. ಭಾವುಕನೆಲೆಯ ಮತ್ತು ವಿದ್ವತ್‌ನೆಲೆಯ ಕನ್ನಡ ಕೆಲಸಗಳು ಒಟ್ಟಿಗೆ ನಡೆದು ಎಲ್ಲೆಡೆಗೆ ಕಂಪು ಹರಡತೊಡಗಿದ್ದವು.ಇಂಥವರಲ್ಲಿ ಕೆಲವು ಸಮಾನ ಗುಣಗಳಿದ್ದವು. ಎಲ್ಲವನ್ನೂ ನಿರುದ್ವಿಗ್ನವಾಗಿ ನೋಡುವುದು, ತಾಳ್ಮೆಯಿಂದ ಪರಿಶೀಲಿಸುವುದು, ಹೊಸಬರ ಬೆಳವಣಿಗೆಗೆ ಅನುಕೂಲಕರ ವಾತಾವರಣ ಕಲ್ಪಿಸುವುದು, ಯಾರ ಮೇಲೂ ಯಾವ ವಿಚಾರವನ್ನೂ ಹೇರದಿರುವುದು, ಸಿನಿಕರಾಗದೆ ಬರವಣಿಗೆಯ ಹಲವು ವಿಧಾನಗಳ ಬಗೆಗೆ ಪ್ರೀತಿಯಿಂದ ವರ್ತಿಸುವುದು ಮತ್ತು ಯಾರಿಂದಲೂ ಏನನ್ನೂ ಅಪೇಕ್ಷಿಸದಿರುವುದು. ಇವೆಲ್ಲ ಇತ್ತೀಚಿಗೆ ಎಷ್ಟೆಲ್ಲ ಅಪರೂಪದ ಗುಣಗಳಾಗಿಬಿಟ್ಟಿವೆ.ನನ್ನ ಜಿಲ್ಲೆ ಬೀದರ ಕೂಡ ಇದರಿಂದ ಹೊರತಾಗಿರಲಿಲ್ಲ. ಮರಾಠಿಗರು - ಕನ್ನಡಿಗರು ಅಷ್ಟೇ ಪ್ರಮಾಣದಲ್ಲಿದ್ದ ಪ್ರದೇಶವಿದು. ಬರುಬರುತ್ತ ಕನ್ನಡ ಓದುಗರ ಸಂಖ್ಯೆ ಬೆಳೆಯುತ್ತಾ ಹೋಯಿತು. ಅನೇಕರು ಸಾಹಿತ್ಯದ ಮೇಲಿನ ಅಕ್ಕರೆಗೆ, ತಮ್ಮ ಖುಷಿಗೆ ಪುಸ್ತಕಗಳ ಸಂಗಾತಿಯಾದರು. ಇವರಲ್ಲಿ ಅನೇಕರು ಬರೆದದ್ದು ನಮ್ಮ ಸಾಹಿತ್ಯದ ಮುಖ್ಯಭಾಗವಾಗಿರಲಿಕ್ಕಿಲ್ಲ. ಅದರ ಆಸೆಯೂ ಅವರಿಗಿದ್ದಂತಿಲ್ಲ. ತಾವು ನಿಂತ ನೆಲದಲ್ಲಿ ಕನ್ನಡದ ಬಳ್ಳಿ ಹಬ್ಬುವಂತಾದರೆ ಅವರಿಗದಷ್ಟೇ ಸಾಕಾಗಿತ್ತು. ಇವರು ವಿದ್ಯಾರ್ಥಿ ಪಡೆಯೊಂದಿಗೆ ಊರಾಡತೊಡಗಿದರು. ಸುತ್ತಲಿನ ಐತಿಹಾಸಿಕ ಪ್ರದೇಶಗಳಿಗೆ ಕರೆದುಕೊಂಡು ಹೋಗುವುದು, ಸಂಕ್ರಮಣ, ಶೂದ್ರ, ರುಜುವಾತು, ಸಾಕ್ಷಿ ಪತ್ರಿಕೆಗಳ ಲೇಖನಗಳನ್ನೋ ಕವಿತೆಗಳನ್ನೋ ಕ್ಲಾಸಿನಲ್ಲಿ ಚರ್ಚಿಸುವುದು, ಎಳೆಯರು ಬರೆದುತಂದದ್ದನ್ನು ಓದಿ, ತಿದ್ದಿ ಪತ್ರಿಕೆಗಳಿಗೆ ಕಳುಹಿಸುವುದು, ವಿವಿಧ ಸ್ಪರ್ಧೆಗಳಿಗೆ ಸಿದ್ಧಗೊಳಿಸುವುದು, ನಾಟಕಗಳನ್ನು ನಿರ್ದೇಶಿಸುವುದು, ಕನ್ನಡ ಸಿನಿಮಾಗಳ ಪ್ರದರ್ಶನ ಏರ್ಪಡಿಸುವುದು, ಸಹಕಾರ ಸಂಘ ಮಾಡಿಕೊಂಡು ಪುಸ್ತಕಗಳನ್ನು ಪ್ರಕಟಿಸುವುದು, ಸಾಹಿತ್ಯ ಶಿಬಿರಗಳನ್ನು ಏರ್ಪಡಿಸುವುದು ಅವರ ಬದುಕಿನ ಭಾಗವಾಗಿದ್ದವು. ಇವರಲ್ಲಿ ಹೆಚ್ಚಿನವರು ಸಾಹಿತ್ಯದ ಶಿಕ್ಷಕರೇ ಆಗಿದ್ದರು. ಇದೆಲ್ಲ ನೆನಪಿಸಿಕೊಳ್ಳುವಾಗ ದೇಶಾಂಶ ಹುಡುಗಿ, ಜಿ.ಬಿ.ವಿಸಾಜಿ, ವಿರೇಂದ್ರ ಸಿಂಪಿ ಕಣ್ಣಮುಂದೆ ಬರುತ್ತಿದ್ದಾರೆ.

ಹೀಗೆ ನೆನಪಿಸಿಕೊಳ್ಳುತ್ತಾ ಹೋದರೆ ಗುಲ್ಬರ್ಗಾದಲ್ಲಿ ಎಂ.ಎಸ್.ಲಠ್ಠೆ, ರಾಯಚೂರಿನಲ್ಲಿ ಶಾಂತರಸರು, ಕೊಪ್ಪಳದಲ್ಲಿ ಅಲ್ಲಮಪ್ರಭು ಬೆಟ್ಟದೂರ, ಹೊಸಪೇಟೆಯಲ್ಲಿ ಬಸವರಾಜ ಮಲಶೆಟ್ಟಿ, ಸುರಪುರದಲ್ಲಿ ಬುದ್ಧಿವಂತಶೆಟ್ಟರು, ಹರಪನಹಳ್ಳಿಯಲ್ಲಿ ಎಸ್.ಎಸ್.ಹಿರೇಮಠ, ಅಂಕೋಲೆಯಲ್ಲಿ ವಿಷ್ಣುನಾಯಕ, ಧಾರವಾಡದಲ್ಲಿ ಕೀರ್ತಿನಾಥ ಕುರ್ತಕೋಟಿ, ಎಂ.ಎಂ.ಕಲಬುರ್ಗಿ, ಗಿರಡ್ಡಿಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂಪಾ, ಇನ್ನು ಬೆಂಗಳೂರಿನಲ್ಲಂತೂ ಚಿ.ಶ್ರೀನಿವಾಸರಾಜು, ಕಿ.ರಂ.ನಾಗರಾಜ, ಬರಗೂರು ರಾಮಚಂದ್ರಪ್ಪ, ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರರಾವ್, ಓ.ಎಲ್.ನಾಗಭೂಷಣಸ್ವಾಮಿ, ನಟರಾಜ ಹುಳಿಯಾರ್ ಅವರ ಸುತ್ತ ನೆರೆಯುತ್ತಿದ್ದ ಎಳೆಯರು ಕರ್ನಾಟಕದ ಯಾವ್ಯಾವುದೋ ಊರಿನವರಾಗಿದ್ದರು.ಕನ್ನಡದಲ್ಲಿ ಎಳೆಯರೊಂದಿಗಿನ ಇಂಥದ್ದೊಂದು ಸಹವಾಸ ಮುಂಚಿನಿಂದಲೂ ಇತ್ತು. ಬಿಎಂಶ್ರೀ, ಟಿ.ಎಸ್. ವೆಂಕಣ್ಣಯ್ಯ, ಜಿ.ಪಿ.ರಾಜರತ್ನಂ, ವಿ.ಕೃ.ಗೋಕಾಕ, ಜಿ.ಎಸ್.ಶಿವರುದ್ರಪ್ಪ, ಪಿ.ಲಂಕೇಶ್, ಯು.ಆರ್. ಅನಂತಮೂರ್ತಿ, ಡಿ.ಆರ್.ನಾಗರಾಜ, ರಹಮತ್ ತರೀಕೆರೆ- ಇವರನ್ನೆಲ್ಲ ನೆನಪಿಸಿಕೊಳ್ಳುವ ಬರಹಗಾರರ ಸಂಖ್ಯೆ ನೋಡಿದರೆ ಅಚ್ಚರಿಯಾಗುತ್ತದೆ. ಸಾಹಿತ್ಯದ ಸೂಕ್ಷ್ಮತೆ ಎಂದರೆ ಯಾವುದು? ಸಾಮಾಜಿಕತೆ ಮತ್ತು ಸಾಹಿತ್ಯದ ಸಂಬಂಧ ಯಾವ ಬಗೆಯದು? ಕನ್ನಡ ರೂಪಕಗಳ ಅರ್ಥದ ಸ್ತರಗಳೇನು? ಸಾಹಿತ್ಯದಲ್ಲಿ ವೈಚಾರಿಕತೆಯ ಸಾಧ್ಯತೆ ಮತ್ತು ಸಮಸ್ಯೆಗಳೇನು? ಸಾಹಿತ್ಯದಲ್ಲಿ ನೈತಿಕತೆಯನ್ನು ಪರಿಭಾವಿಸುವುದು ಹೇಗೆ? ಕನ್ನಡ ಸಂಸ್ಕೃತಿಯ ಅಧ್ಯಯನದ ಸಮಸ್ಯೆಗಳೇನು? ಹೀಗೆ ಕನ್ನಡ ಸಾಹಿತ್ಯದ ಪ್ರಶ್ನೆಗಳು ವಿಸ್ತಾರವಾಗುತ್ತಾ ನಡೆದವು. ಹೊಸ ಬರಹಗಾರರು ಇವರ ಒಡನಾಟದಲ್ಲಿ ಅನೇಕ ದೃಷ್ಟಿಕೋನಗಳನ್ನು ಮಸೆಯತೊಡಗಿದರು.ತಮ್ಮ ಅನುಭವಗಳನ್ನು ಹೆಕ್ಕತೊಡಗಿದರು. ಅದು ಸಾಹಿತ್ಯದಲ್ಲಿ ಕಾಣಿಸಿಕೊಂಡ ಬಗೆ ಈಗ ಕಣ್ಣೆದುರಿಗೇ ಇದೆ. ಇಂಗ್ಲಿಷಿನಲ್ಲಿ ಮೈಕೆಲ್ ರೆಡ್‌ಫೋರ್ಡ್‌ನ `ದಿ ಪೋಸ್ಟ್ ಮ್ಯಾನ್~ ಎನ್ನುವ ಸಿನಿಮಾ ಇದೆ. ಅದರಲ್ಲಿ ಒಬ್ಬ ಸಾಮಾನ್ಯ ಅಂಚೆಯವನು ಲೇಖಕನಿಗೆ ಪತ್ರಗಳನ್ನು ತಂದುಕೊಡುತ್ತಾ, ಅವನ ಒಡನಾಟದಲ್ಲಿ ಕಾವ್ಯವನ್ನು ಪ್ರೀತಿಸುತ್ತ, ಸ್ವತಃ ಕವಿಯಾಗಿಬಿಡುತ್ತಾನೆ. ಆ ಸಂಬಂಧಗಳು ಸಾಹಿತ್ಯದ ಸೂಕ್ಷ್ಮ ಸಂಬಂಧಗಳಾಗಿ ಪರಿವರ್ತನೆಗೊಂಡ ಬಗೆಯನ್ನು ಸಿನಿಮಾ ನೋಡಿಯೇ ಅರಿಯಬೇಕು.ಸಾಂಸ್ಥಿಕ ನೆಲೆಯಲ್ಲಿ ಕೂಡ ಸಾಹಿತ್ಯ ಪ್ರೀತಿಯನ್ನು ಹೊಸನೆಲೆಗೆ ಕೊಂಡೊಯ್ದವರಿದ್ದಾರೆ. ಒಂದು ಮಾದರಿ `ಕನ್ನಡ ವಿಭಾಗ~ವನ್ನು ಜಿ.ಎಸ್.ಶಿವರುದ್ರಪ್ಪನವರು ಕಟ್ಟಿದರು.`ನೀನಾಸಂ~ ಮೂಲಕ ಹೊಸ ಚಿಂತನೆಗಳ ಬರುವಿಗೆ ಕೆ.ವಿ.ಸುಬ್ಬಣ್ಣನವರು ಕಾರಣವಾದರು. ಕನ್ನಡ ವಿಶ್ವವಿದ್ಯಾಲಯದ ಮೂಲಕ ಕನ್ನಡ ಸಂಸ್ಕೃತಿಯ ಅಧ್ಯಯನಕ್ಕೆ ಚಂದ್ರಶೇಖರ ಕಂಬಾರರು ಹೊಸ ದಾರಿಗಳನ್ನು ತೋರಿಸಿದರು. ಸಾಹಿತ್ಯ ಅಕಾಡೆಮಿಯಲ್ಲಿ ಬರಗೂರರ ಅನೇಕ ಮಾಲಿಕೆಗಳು ಎಳೆಯರ ಚಿಂತನೆಯನ್ನು ಕಟ್ಟಿವೆ. ಇಲ್ಲೆಲ್ಲ ಗಟ್ಟಿಯಾಗುತ್ತಾ ಹೋದದ್ದು ಸಾಹಿತ್ಯ ಮತ್ತು ಓದುಗರ, ಬರಹಗಾರರ ಸಂಬಂಧಗಳು. ಈ ನಂಟು ಸಾಹಿತ್ಯದ ಪರಿಧಿಯನ್ನು ಚಾಚಿ `ಕನ್ನಡದ ಬದುಕು~ಗಳನ್ನೂ ಪ್ರಭಾವಿಸಿತು. ಕನ್ನಡದಲ್ಲಿ ಈಗಲೂ ವಾತಾವರಣ ಹಾಗೆಯೇ ಇದೆಯೇ? ಬದಲಾಗಿದ್ದರೆ ಅದರ ಸ್ವರೂಪವೇನು?

ವಾತಾವರಣ ಈಗ ಕೊಂಚ ಭಿನ್ನವಾಗಿದೆಯೇನೊ? ಸಿನಿಕರ ಒಂದು ಪಡೆಯೇ ಅನೇಕ ಕಡೆ ಹರಡಿಕೊಂಡಿದೆ. ವರ್ಗಪಾಠಗಳೆಂದರೆ ಮಾರುದೂರ ಓಡುವ, ಚರ್ಚೆಗಳೆಂದರೆ ವಿತಂಡವಾದ ಎಂದುಕೊಂಡಿರುವ, ಪ್ರಕಟಣೆಗಳೆಂದರೆ ವ್ಯವಸ್ಥಿತ ಸಂಚು ಎಂದು ತಿಳಿಯುವ, ಪಠ್ಯಕ್ರಮ ರೂಪಿಸುವಲ್ಲಿ ಅಸೂಕ್ಷ್ಮತೆ ಮೆರೆಯುವ ಗುಂಪುಗಳಿವು. ವಿದ್ಯಾರ್ಥಿಗಳ ಚೇತನವೇ ಉಡುಗಿ ಹೋಗಬಹುದಾದ ವಾತಾವರಣದಲ್ಲಿ ಸಾಹಿತ್ಯ-ಸಾಂಸ್ಕೃತಿಕ ಸಂಬಂಧಗಳು ಬಂದುನಿಂತಂತಿದೆ. ಆದರೆ ಅಲ್ಲಲ್ಲಿ ಕೆಲವು ಸಹೃದಯರು ಎಳೆಯರ ಜೊತೆಗಿನ ಸ್ನೇಹದಲ್ಲಿ ಪರಸ್ಪರ ಬೆಳೆಯುವ ದಾರಿಗಳನ್ನು ಹುಡುಕುತ್ತಿರುವುದು ಕೂಡ ಸುಳ್ಳಲ್ಲ.ಒಂದು ವರ್ಷದ ಹಿಂದೆ ಡಿ.ಎನ್.ಶಂಕರಭಟ್ಟರ ಮನೆಗೆ ನಾವು ಕೆಲ ಗೆಳೆಯರು ಹೋಗಿದ್ದೆವು. ನಮ್ಮ ನಡುವಿನಿಂದ ಅವರಿಗೊಂದು ಪ್ರಶ್ನೆ ತೂರಿ ಬಂತು; `ಈಗ ಹೊಸದಾಗಿ ಏನು ಬರೆಯುತ್ತಿದ್ದೀರಿ?~. ಅದಕ್ಕೆ ಶಂಕರಭಟ್ಟರು ಉತ್ತರಿಸಿದರು: ಕನ್ನಡಕ್ಕೆ ಒಂದು ಅರ್ಥಪೂರ್ಣವಾದ ವ್ಯಾಕರಣವೊಂದು ಮರುರಚಿಸಬಹುದೆ? ಅಂತ ಯೋಚಿಸುತ್ತಿರುವೆ.ನೋಡಿ ಇಂಗ್ಲಿಷ್ ತನ್ನ ವ್ಯಾಕರಣವನ್ನು ಅದೆಷ್ಟು ಸಲ ಮುರಿದು ಕಟ್ಟಿಕೊಂಡಿದೆ. ಜನರಿಗೆ ಸಹಜವಾಗಿ ಬಳಕೆಗೆ ಸಾಧ್ಯವಾಗುವ ವ್ಯಾಕರಣ ಬೇಕು. ಅನೇಕ ಜನ ತಪ್ಪು ತಿಳಿದುಕೊಂಡಿದ್ದಾರೆ. ಭಾಷೆಯಲ್ಲಿ ಉನ್ನತ ವಿಚಾರಗಳಿದ್ದರೆ ಸಾಕು ಅಂತ. ಅದಿಷ್ಟೇ ಸಾಲದು. ಗ್ರೀಕ್ ಭಾಷೆಯಲ್ಲಿ ವಿಚಾರಗಳು ಉನ್ನತವಾದದ್ದೇ ಆಗಿಲ್ಲವೆ? ಆದರೆ, ಯಾಕೆ ಗ್ರೀಕ್ ಭಾಷೆ ಸೀಮಿತಗೊಂಡಿತು. ಅದಕ್ಕೆ ಕಾರಣ ಅದರ ವ್ಯಾಕರಣದ ಜಟಿಲತೆ. ಭಾಷೆಯೊಂದರ ಬೆಳವಣಿಗೆಯಲ್ಲಿ ಉನ್ನತ ವಿಚಾರಗಳೊಂದಿಗೆ ಅತ್ಯುತ್ತಮ ವ್ಯಾಕರಣವೂ ಅಗತ್ಯ- ಎಂದರು. ಅನೇಕ ವಿಶ್ವವಿದ್ಯಾಲಯಗಳಲ್ಲಿ ಸುತ್ತಾಡಿ ಬಂದ ಭಟ್ಟರು ಕನ್ನಡದ ಕಸುವು ಧ್ಯಾನಿಸುತ್ತ ಗಣಪತಿಕಟ್ಟೆಯಲ್ಲಿ ನೆಲೆಯೂರಿದ್ದರು.ಕನ್ನಡತಾಯಿಗೆ ಎಷ್ಟೆಲ್ಲ ತರಹದ ಮಕ್ಕಳಿದ್ದಾರೆ. ಇರಲಿ, ಸಾಹಿತ್ಯದ ಮತ್ತು ಎಳೆಯರ ಸಂಬಂಧಗಳು ಗಟ್ಟಿಗೊಳ್ಳಲಿ. ಈ ಗಟ್ಟಿಗೊಳಿಸುವವರ ಸಂತತಿ ಹೆಚ್ಚಾಗಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.