ಭಾನುವಾರ, ಜೂಲೈ 12, 2020
28 °C

ಕನ್ನಡ ಮಾತು ತಲೆಯೆತ್ತುವ ಬಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮಾತು ತಲೆಯೆತ್ತುವ ಬಗೆ

ಅಧ್ಯಕ್ಷರೆ, ಆರ್ಯರೆ, ಕನ್ನಡ ವಿದ್ಯೆಯನ್ನು ವೃದ್ಧಿ ಮಾಡುವುದಕ್ಕೆ ಈ ಸಂಘದಲ್ಲಿ ಆ ಭಾಷೆಯ ಮುಂದಿನ ಏಳಿಗೆಯನ್ನು ಕುರಿತು ಪ್ರಸ್ತಾಪಿಸುವುದು ಹಿತವಾಗಿಯೇ ಇರುತ್ತದೆ. ಆದರೆ ಈ ವಿಷಯದಲ್ಲಿ ಉತ್ಸಾಹ ಎಲ್ಲರಿಗೂ ಒಂದೇ ಸಮವಾಗಿರುವುದಿಲ್ಲ; ಕೆಲವರು ಇದಕ್ಕೆ ವಿರೋಧಿಗಳೇ ಇರಬಹುದು; ಇದಲ್ಲದೆ, ನಮ್ಮಲ್ಲಿಯೂ ಕೆಲವರಿಗೆ ಸಭೆ ಕೂಡಿದಾಗ ಉತ್ಸಾಹಕಳೆ ತುಂಬಿದ್ದು, ಮನೆಗೆ ತಿರುಗಿದಾಗ ಮಾಯವಾಗುವುದೂ ಉಂಟು. ಈ ಕಾರಣದಿಂದ ಭಾಷೆಯ ಪ್ರಸ್ತುತಸ್ಥಿತಿಯನ್ನೂ ವೃದ್ಧಿಮಾರ್ಗವನ್ನೂ ತಿಳಿಸುವುದಕ್ಕೆ ಮುಂಚೆ, ಸಂಘದ ಕಾರ್ಯದಲ್ಲಿ ಅಸಮಾಧಾನ ಪಡತಕ್ಕವರ ಕಾರಣಗಳೇನು, ಅಸಡ್ಡೆ ಮಾಡತಕ್ಕವರ ಕಾರಣಗಳೇನು, ಇವರಿಬ್ಬರಿಗೂ ಹೇಳಬಹುದಾದ ಸಮಾಧಾನಗಳೇನು, ಈ ಅಂಶವನ್ನು ವಿಚಾರ ಮಾಡುವುದು ಅವಶ್ಯಕವಾಗಿದೆ.2. ದೇಶಭಾಷೆಗಳು ಪ್ರಬಲವಾಗುವುದಕ್ಕೆ ಇಷ್ಟವಿಲ್ಲದವರ ಅಭಿಪ್ರಾಯಗಳನ್ನು ಹೀಗೆ ಸೂಚಿಸಬಹುದು: ‘ಇಂಗ್ಲಿಷ್ ಚಕ್ರಾಧಿಪತ್ಯ ನೆಲೆಯಾಗುವುದಕ್ಕೆ ಮುಂಚೆ ಇದ್ದ ಸ್ಥಿತಿ ಈಗ ಇಂಡಿಯದಲ್ಲಿ ಇಲ್ಲ. ಆಗ ಹೊರಗಿನ ಪ್ರಪಂಚದ ಸೆಲೆಯೇ ಇರಲಿಲ್ಲ. ರಾಜ್ಯವೂ ಎಂಟು ಹತ್ತು ಪ್ರಾಂತ್ಯಗಳಾಗಿ ಒಂದಕ್ಕೊಂದಕ್ಕೆ ಸಂಪರ್ಕವೇ ಇಲ್ಲದೆ ಇತ್ತು. ಜೀವನ ಸುಲಭವಾಗಿ ಜರುಗುತ್ತಿತ್ತು. ಅದೆಲ್ಲಕ್ಕೂ ತಕ್ಕ ಹಾಗೇ ಪ್ರಪಂಚವನ್ನು ಮಾಯೆಯೆಂದು ಎಣಿಸಿ, ಸಂಸಾರವನ್ನು ಪಾಶವೆಂದು ಹೇಳಿ ಬೇಸರಪಟ್ಟು, ಈ ಲೋಕಯಾತ್ರೆ ಎಷ್ಟು ಬೇಗ ಮುಗಿದೀತೋ ಎಂದು ಯಾವಾಗಲೂ ಕಾಡಿನ ಮೇಲೇ ದೃಷ್ಟಿಯಿಟ್ಟುಕೊಂಡು ಇರುತ್ತಿದ್ದರು. ಈಗ ಇದೊಂದೂ ನಡೆಯುವುದಿಲ್ಲ. ದೇಶಕ್ಕೆಲ್ಲಾ ಚಕ್ರವರ್ತಿ ಒಬ್ಬನಾದರೂ; ದೇಶವೆಲ್ಲಾ ಕಬ್ಬಿಣದಿಂದ ಕಟ್ಟಿ ಬಿಗಿದಂತೆ ಏಕವಾಯಿತು; ಕೆಂಪು ಜನರ ವಿದ್ಯೆ, ವ್ಯಾಪಾರ, ಕೈಗಾರಿಕೆ, ಇವುಗಳ ಉರುಬಿನಲ್ಲಿ ನಾವು ಮೂಲೆಗೆ ಬೀಳುತ್ತಿದ್ದೇವೆ.ಅವರ ಆಳಿಕೆಯಿಂದ ಶಾಂತಿಯೇನೋ ದೊರಕಿತು. ಆದರೆ ಮಿಕ್ಕ ಪುರುಷಾರ್ಥಗಳೆಲ್ಲಾ ನಾವೇ ಶ್ರಮಪಟ್ಟು ಸಂಪಾದಿಸಿದಲ್ಲದೆ ಬರುವುವಲ್ಲ. ಹಿಂದಿನಂತೆ ಒಡೆದುಕೊಂಡೇ ಇದ್ದೆವೇ, ಬಿದ್ದೇ ಹೋಗುವೆವು; ಒಗ್ಗಟ್ಟಾದೆವೇ, ಇನ್ನೂ ನಿಲ್ಲುವ ಆಸೆಯುಂಟು. ಒಗ್ಗಟ್ಟು, ಬಾಯಿಮಾತಿಗೆ ಬರತಕ್ಕದ್ದಲ್ಲ. ಯಾವ ಯಾವ ಭೇದಗಳಿಂದ ಆರ್ಯಭೂಮಿಯಲ್ಲಿ ಒಗ್ಗಟ್ಟು ಹುಟ್ಟಲಿಲ್ಲವೋ, ಆಯಾ ಭೇದಗಳನ್ನೆಲ್ಲಾ ಸುಟ್ಟು ಬೂದಿ ಮಾಡಿ ನೀರಿನಲ್ಲಿ ಕಲಸಿಬಿಡಬೇಕು.ಆಚಾರ, ಜಾತಿ, ಮತ, ಎಲ್ಲಾ ಒಂದೇ ಆಗುವಂತೆ ಪ್ರಯತ್ನ ಮಾಡುತ್ತ ಹೋಗಬೇಕು. ಇವೆಲ್ಲಕ್ಕೂ ಮೊದಲು ಭಾಷೆ ಒಂದಾಗಬೇಕು; ಇಂಗ್ಲಿಷ್, ಇಲ್ಲವೆ ಹಿಂದಿ, ಯಾವುದೋ ಒಂದು, ಸಾಧ್ಯವಾದದ್ದು. ಮಿಕ್ಕ ಭಾಷೆಗಳು ಸತ್ತು ಹೋಗಲಿ; ಈಗ ತಾವಾಗಿಯೇ ಸಾಯುತ್ತ ಬಿದ್ದಿರುವುವು; ಎರಡು ದಿನ ನಾವು ತಟಸ್ಥರಾಗಿದ್ದರೆ ಹೋಗಿ ಹಳ್ಳಿಗಳಲ್ಲಿ ಅಡಗಿಕೊಳ್ಳುವವು; ಆಗ ರಾಜ ಭಾಷೆಯೊಂದು ಹಿಮಾಲಯದಿಂದ ರಾಮೇಶ್ವರವರೆಗೂ ಸ್ವೇಚ್ಛೆಯಾಗಿ ಓಡಾಡುವುದು. ಇದು ಬಿಟ್ಟು, ನರಳುತ್ತಿರುವ ದೇಶಭಾಷೆಗಳನ್ನು ಗುಣಮಾಡಿ ತಲೆಯೆತ್ತಿಸಬೇಕು ಎನ್ನುವರು ಇಂಡಿಯದ ಒಗ್ಗಟ್ಟಿಗೆ ಅಡ್ಡಬಂದು ನಿಲ್ಲುವರು; ಅವರು ರಾಜ್ಯದ ಹಿತಚಿಂತನೆಗೆ ಮೃತ್ಯುಗಳು’.3) ಹೀಗೆ ಯೋಚಿಸತಕ್ಕವರು ತಿಳಿಯದವರು, ಕೆಡುಕಿಗಳು, ಅಭಿಮಾನವಿಲ್ಲದವರು ಎಂದು ಹೇಳುವುದಕ್ಕಾಗುವುದಿಲ್ಲ. ಇವರು ಬಹುದೂರ ಯೋಚನೆ ಮಾಡಿ, ಒಗ್ಗಿ ಬಂದ ಪಕ್ಷಪಾತವನ್ನು ತೊರೆದು, ಅಲ್ಪಲಾಭಕ್ಕೇ ದಣಿದು ಹೋಗದೆ, ರಾಜ್ಯಕ್ಕೆಲ್ಲಾ ಉತ್ತಮವಾಗಿಯೂ ಶ್ರೇಯಸ್ಕರವಾಗಿಯೂ ಇರುವ ಮಾರ್ಗವನ್ನು ಉಪದೇಶ ಮಾಡುತ್ತಿರುವರು. ದೇಶಭಾಷೆಗಳಲ್ಲಿ ವಿಶ್ವಾಸವುಳ್ಳವರು ಇವರಿಗೆ ಏನು ತಾನೇ ಹೇಳಲಾದೀತು? ನಮಗೆ ಒಗ್ಗಟ್ಟು ಬೇಡ ಎನ್ನಬಹುದೆ? ಒಂದು ಭಾಷೆ ಇಲ್ಲದೆ ಒಗ್ಗಟ್ಟೂ ಇಲ್ಲವಾದರೆ, ದೇಶಭಾಷೆಗಳನ್ನು ನಾವೂ ಕೈ ಬಿಟ್ಟೇ ತೀರಬೇಕು. ನಮ್ಮ ಪುಣ್ಯಕ್ಕೆ ಆ ನಿರ್ಬಂಧವೇನೂ ಇಲ್ಲ; ಏಕೆಂದರೆ ನಾವು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಒಪ್ಪಬೇಕಾದದ್ದಿಲ್ಲ. ಒಂದೇ ಭಾಷೆ ಇರುವುದು ಉತ್ತಮ ಪಕ್ಷವೇ ಸರಿ; ಆ ರೀತಿ ಇರತಕ್ಕ ಜನರು ಪುಣ್ಯವಂತರು.ಆದರೆ ಇದಕ್ಕೆ ಆಯಾ ಜನರ ಚರಿತ್ರೆ ಮೂಲಕಾರಣವಾಗಿದೆ. ಯಾವ ದೇಶದಲ್ಲಿ ಒಂದೇ ಜಾತಿಯ ಜನರು ಹೆಚ್ಚುತ್ತ ಹೋದರೋ, ಇಲ್ಲವೆ ಕೆಲವರಾದರೂ ಪೂರ್ವನಿವಾಸಿಗಳೂ ತಮ್ಮ ಭಾಷೆಯನ್ನೆ ಹಿಂದೆಯೇ ಕಲಿಸಿಬಿಟ್ಟರೋ, ಅಲ್ಲಿ ಈಗ ಒಂದೇ ಭಾಷೆ ನಿಂತಿದೆ. ಇಂಡಿಯದಲ್ಲಿ ಹಾಗಾಗಲಿಲ್ಲ. ಇಲ್ಲಿ ಮುಖ್ಯವಾಗಿ ಎರಡು ಬುಡಕಟ್ಟಿಗೆ ಸೇರಿದ ಆರ್ಯಶೂದ್ರರೇ ಇದ್ದರೂ, ಅವರ ಎರಡು ಭಾಷೆಗಳೂ ಒಡೆದು ಈಗ ಮೇಲಾಗಿರತಕ್ಕುವು ಹತ್ತು ಹದಿನೈದಿರುತ್ತವೆ. ಇವುಗಳಲ್ಲಿ ದೇಶಕ್ಕೆಲ್ಲಾ ಯಾವುದಾದರೂ ಒಂದನ್ನು ಹರಡಬೇಕಾದರೆ ಮಿಕ್ಕಮಾರಿನವರು ಒಪ್ಪುವರೋ? ಅವರ ಅಭಿಮಾನವೇನಾಗಬೇಕು? ಇದಲ್ಲದೆ ಶ್ರಮವೆಷ್ಟು? ಯಾವ ಕಾಲಕ್ಕೆ ಕೊನೆ ಮುಟ್ಟಬೇಕು? ಹಾಗೆ ಮಾಡಿದರೂ ಪ್ರಜೆಗೆಲ್ಲಾ ಒಂದು ಭಾಷೆಯಾಯಿತೇ ಹೊರತು, ಎಂದಿನಂತೆ ರಾಜರ ಸಂಗಡ ಕೆಲಸ ನಡೆಯುವುದಕ್ಕೆ ಇಂಗ್ಲಿಷ್ ಕಲಿತೇ ತೀರಬೇಕು. ಒಳ್ಳೆಯದು ಇಂಗ್ಲಿಷನ್ನೇ ಏಕೆ ದೇಶಕ್ಕೆಲ್ಲಾ ಹರಡಬಾರದು? ಆಗಬಹುದು; ಆದರೆ ಮೂವತ್ತು ಕೋಟಿ ಜನರಲ್ಲಿ ಒಂದು ಪಿಳ್ಳೆಯೂ ಬಿಡದಹಾಗೆ ಇಂಗ್ಲಿಷ್ ಮಾತನ್ನು ಆಡುವುದು ಸುಲಭಸಾಧ್ಯವೇ? ಯೋಚಿಸಿ; ಆ ಯುಗ ಬರುವತನಕ ನಾವೇನು ಮಾಡಬೇಕು? ಕನ್ನಡಿಯಲ್ಲಿರುವ ಗಂಟಿಗಾಗಿ ಕೈಯಲ್ಲಿರುವುದನ್ನು ಬಿಟ್ಟು ಕುಳಿತುಕೊಳ್ಳುವುದಷ್ಟೆ!4) ಇದನ್ನು ಬಿಟ್ಟು ಬೇರೆ ಮಾರ್ಗವನ್ನು ಹುಡುಕಿದರೆ ಅಭಿಮಾನವು ಉಳಿಯುತ್ತದೆ, ಅನುಕೂಲವೂ ಆಗುತ್ತದೆ. ಅದೇನೆಂದರೆ, ಸಾಮಾನ್ಯವಾದ ರಾಜಕಾರ್ಯಕ್ಕೂ, ಇಂಡಿಯ ರಾಜ್ಯಕ್ಕೆಲ್ಲಾ ಸಂಬಂಧಪಟ್ಟ, ವಿಷಯಗಳಿಗೂ, ಬೇರೆ ಬೇರೆ ಪ್ರಾಂತ್ಯಗಳಿಂದ ಜನ ಕಲೆಯತಕ್ಕ ಸಭೆಗಳಿಗೂ, ಬಳಸುವುದಕ್ಕೆ ಇಂಗ್ಲಿಷ್ ಭಾಷೆಯನ್ನು ಇಟ್ಟುಕೊಳ್ಳುವುದು; ಪ್ರಾಂತ್ಯಗಳಲ್ಲಿ ಹುಡುಗರು, ಹೆಂಗಸರು, ಒಕ್ಕಲಿಗರು ಎಲ್ಲರ ವಿದ್ಯಾಭಿವೃದ್ಧಿಗಾಗಿ ಆಯಾ ಜನರ ದೇಶಭಾಷೆಯನ್ನು ಇಟ್ಟುಕೊಳ್ಳುವುದು. ಎರಡಲ್ಲ, ಇಪ್ಪತ್ತು ದೇಶಭಾಷೆಗಳಿದ್ದರೂ ಒಗ್ಗಟ್ಟಿಗೆ ಕುಂದುಕವಿಲ್ಲ; ಎಲ್ಲಾ ಕಡೆಗಳಲ್ಲಿಯೂ ಆಡಬಹುದಾದ ಒಂದು ರಾಜಭಾಷೆಯಿಲ್ಲದೆ ಏಕರಾಜ್ಯವಿಲ್ಲ ಎನ್ನುವ ಮಾತು ಸುಳ್ಳು. ಹಿಂದೆ ಸಣ್ಣ ರಾಜ್ಯಗಳಲ್ಲಿ ಹೀಗಿತ್ತು; ಈಗಲೂ ಕೆಲವು ಕಡೆ ಹೀಗಿದೆ.ಆದರೆ ಇಪ್ಪತ್ತನೆಯ ಶತಮಾನದ ವಿಸ್ತಾರವಾದ ಚಕ್ರಾಧಿಪತ್ಯಗಳಲ್ಲಿ, ಸಮನಾದ ನಾಗರೀಕತೆಯೂ, ರಾಜಿಕವಿಷಯಗಳಲ್ಲಿ ಬಹುಕಾಲದಿಂದ ಕಷ್ಟಸುಖಕ್ಕೂ ಜಯಾಪಜಯಕ್ಕೂ ಸಮಭಾಗಿಗಳಾಗಿ ಮುಂದೆಯೂ ಏಕಗೃಹಕೃತ್ಯದಿಂದ ಪರಸ್ಪರ ಲಾಭವುಂಟೆಂಬ ತಿಳಿವಳಿಕೆಯೂ, ಮತ, ಜಾತಿ, ಆಚಾರ, ಭಾಷೆಗಳ ಎಲ್ಲೆ ಕಟ್ಟುಗಳನ್ನು ಮೀರಿ ಜನಾಂಗಗಳನ್ನು ಒಟ್ಟಿಗೆ ಬೆಸೆಯುತ್ತಿವೆ. ಈ ನಾಗರಿಕತೆ ಇಂಡಿಯದಲ್ಲಿ ಮೊದಲಿಂದ ಉಂಟು; ಈ ತಿಳಿವಳಿಕೆ ಈಗೀಗ ಹುಟ್ಟುತ್ತಿದೆ. ಐಕಮತ್ಯದಿಂದ ಎಲ್ಲರೂ ಒಂದೇ ಪಡಿಯಚ್ಚಾಗಿ ಸ್ವತಂತ್ರವನ್ನು ನೀಗಿಕೊಳ್ಳಬೇಕೆಂದಲ್ಲ; ಭೇದವಿರಬೇಕಾದ ಕಡೆ ಭೇದವೂ, ಸಾಮ್ಯವಿರಬೇಕಾದ ಕಡೆ ಸಾಮ್ಯವೂ, ಮುಖ್ಯ ಪರಸ್ಪರ ವಿಶ್ವಾಸವಿದ್ದಲ್ಲಿ ಎರಡೂ ಐಕಮತ್ಯದಲ್ಲಿ ಸೇರಬಹುದು. ಆದಕಾರಣ, ಅಭಿಮಾನದಿಂದ ದೇಶಭಾಷೆಗಳನ್ನು ಉದ್ಧಾರ ಮಾಡಿ ಆಯಾ ಪ್ರಾಂತ್ಯಗಳ ಜನಸಾಮಾನ್ಯಕ್ಕೂ, ಅನುಕೂಲಕ್ಕೆ ಇಂಗ್ಲಿಷ್ ಭಾಷೆಯನ್ನು ಸ್ವೀಕರಿಸಿ ಒಗ್ಗಟ್ಟಿಗಾಗಿ ಓಡಾಡುವ ಇಂಡಿಯದ ವಿದ್ಯಾವಂತರಿಗೂ, ಇಬ್ಬರಿಗೂ ಲಾಭವಾಗುವಂತೆ ನಡೆಯತಕ್ಕದ್ದೇ ಮೇಲು. ಈ ರೀತಿ ಈಗ ನಡೆಯುತ್ತಲೇ ಇದೆ. ಮುಂದೆಯೂ ಅದನ್ನೇ ಬಲಪಡಿಸಿಕೊಂಡು ಹೋಗುವುದು ಮೇಲೆಂದು ಕಾಣುತ್ತದೆ.5) ನಾವು ಸ್ವೀಕರಿಸತಕ್ಕ ಭಾಷೆಗಳನ್ನು ಹೇಳುತ್ತಿರುವಾಗ ಸಂಸ್ಕೃತವನ್ನು ಬಿಡುವುದಕ್ಕಿಲ್ಲ. ಇದು ನಮ್ಮ ಪೂರ್ವಿಕರಾದ ಆರ್ಯರ ಭಾಷೆ; ಇದರಲ್ಲೇ ನಮ್ಮ ಪುಸ್ತಕ ಭಂಡಾರವೆಲ್ಲಾ ಅಡಗಿದೆ. ಇದನ್ನು ತಿಳಿದ ಹೊರತು ಹಿಂದಿದ್ದ ಸ್ಥಿತಿಯಾಗಲಿ, ಮುಂದೆ ತಿದ್ದಬೇಕಾದ ರೀತಿಯಾಗಲಿ ತಿಳಿಯುವುದಿಲ್ಲ. ಆದುದರಿಂದ ಇಂಡಿಯದಲ್ಲಿ ವಿದ್ಯಾವಂತನೆನ್ನುವ ಪ್ರತಿಯೊಬ್ಬನೂ ಇಂಗ್ಲಿಷ್, ಸಂಸ್ಕೃತ, ತನ್ನ ಕಡೆಯ ದೇಶಭಾಷೆ ಈ ಮೂರನ್ನು ಚೆನ್ನಾಗಿ ತಿಳಿದಿರಬೇಕು. ತನಗೆ ಹರ್ಷವೂ ಲಾಭವೂ, ದೇಶಕ್ಕೆ ಉನ್ನತಿಯೂ ಸೌಖ್ಯವೂ ಬರುವಂತೆ ಶ್ರಮಬೀಳಬೇಕೆನ್ನುವವನಿಗೆ ಈ ಮೂರೂ ಬಂದೇ ತೀರಬೇಕು. ಇಲ್ಲದಿದ್ದರೆ ಅಷ್ಟು ನೇರ್ಪಿಲ್ಲ.6) ಈ ಮೂರನ್ನೂ ಕಲಿಸತಕ್ಕ ಭಾರ ಯೂನಿವರ್ಸಿಟಿಯ ಪಂಡಿತರ ಮೇಲೆ ಬಿದ್ದಿದೆ; ಉಳಿಸಿಕೊಂಡು ತೇಜಸ್ಸನ್ನು ಹೊಂದಿಸುವ ಭಾರ ವಿದ್ಯಾವಂತರ ಮೇಲಿದೆ. ಆದರೆ ಈ ಎರಡು ಕಡೆಯಿಂದಲೂ ಇವಕ್ಕೆ ಸರಿಯಾದ ಶ್ರದ್ಧೆ ಕಾಣಬರುವುದಿಲ್ಲ. ಇಂಗ್ಲಿಷೇನೋ ಬಲವಾಗುತ್ತದೆ; ಮಿಕ್ಕ ನಮ್ಮ ಭಾಷೆಗಳೆರಡೂ ಕುಗ್ಗುತ್ತಿವೆ. ಇಂಗ್ಲಿಷ್ ಕಲಿಯುವ ಹುಡುಗರೆಲ್ಲಾ ಹಿಂದೆ ಕನ್ನಡವನ್ನಾಗಲಿ, ಸಂಸ್ಕೃತವನ್ನಾಗಲಿ ಒಂದನ್ನಾದರೂ ಕಲಿಯುತ್ತಿದ್ದರು. ಈಗ ಅದೂ ಹೋಯಿತು. ಕನ್ನಡ ಸಂಸ್ಕೃತಗಳನ್ನು ಈಗ ಒಟ್ಟಿಗೆ ಕಲಿಯುತ್ತಾರಲ್ಲ ಎನ್ನಬಹುದು; ಇದೇನೋ ಸರಿಯೆ; ಆದರೆ ಎಷ್ಟು ಜನ! ಹೀಗೆ ಮಾಡಿದ್ದರಿಂದ ಮೇಲೆ ಮೇಲೆ ತೇಲಿಸಿಕೊಂಡು ಓದಿ ಬಿ.ಎ. ಡಿಗ್ರಿ ಪಡೆದು ತಾವಾಗಿ ಒಂದು ಗ್ರಂಥವನ್ನು ನೋಡಿಕೊಳ್ಳಲಾರದ ವಿದ್ಯಾರ್ಥಿಗಳು ಹೋಗಿ, ಪ್ರಚಂಡಪಂಡಿತರು ಒಂದು ಭಾಷೆಯನ್ನು ಉದ್ಧರಿಸುತ್ತಾರೆ, ಎಂದು ಯೋಚಿಸಿ ಏರ್ಪಡಿಸಿದ ಹಾಗೆ ತೋರುತ್ತದೆ.ಹೇಳಿಕೆಯಲ್ಲೇನೋ ಇದು ಮುದ್ದಾಗಿದೆ; ನಡವಳಿಕೆ ತಾನೇ ಅಷ್ಟು ಮುದ್ದಾಗಿಲ್ಲ. ಸಂಸ್ಕೃತ - ಕನ್ನಡವನ್ನು ಆರಿಸಿಕೊಂಡವರು ಈ ಏರ್ಪಾಟಿನಲ್ಲಿ ಪೂರ್ಣ ಪಾಂಡಿತ್ಯವನ್ನು ಪಡೆಯಬಹುದು, ನಿಜ; ಆದರೆ ಆರಿಸಿಕೊಳ್ಳುವವರು ಯಾರಾದರೂ ಉಂಟೋ, ತಿಳಿಯದೆ ಆರಿಸಿಕೊಂಡು ಆ ಮೇಲೆ ಕೊರಗದವರು ಉಂಟೋ? ಪ್ರಶಸ್ತವಾದ ಗ್ರಂಥಗಳಿಂದ ತುಂಬಿ ಬಹುಮಾನಕ್ಕೆ ಪಾತ್ರವಾದ ಭಾಷೆಗಳನ್ನು ತೆಗೆದುಕೊಳ್ಳುವುದೇ ಒಂದು ರೀತಿ; ಪ್ರಶಸ್ತವಾದರೂ ಬಹುಮಾನ ದೊರೆಯದ ಸಂಸ್ಕೃತವನ್ನು ತೆಗೆದುಕೊಳ್ಳುವುದೇ ಒಂದು ರೀತಿ; ಇದರ ಮೇಲೆ, ಎರಡೂ ಇಲ್ಲದೆ ದುರ್ಬಲವಾಗಿ, ಸಂಸ್ಕೃತ ಪಂಡಿತರಿಂದಲೂ, ಇಂಗ್ಲಿಷ್ ವಿದ್ಯಾರ್ಥಿಗಳಿಂದಲೂ, ಲೋಕವ್ಯಾಪಾರದಲ್ಲಿ ತೊಡರಿಕೊಂಡ ಜನ ಸಾಮಾನ್ಯರಿಂದಲೂ ಅಸಡ್ಡೆ ಮಾಡಿಸಿಕೊಂಡು ಕೈಕಟ್ಟಿ ಎತ್ತುವರಿಲ್ಲದೆ ಮುರಿದು ಬೀಳುತ್ತಿರುವ ಕನ್ನಡದ ವಿಷಯ ಹೇಳಬೇಕಾದದ್ದೇ ಇಲ್ಲ. ಕೇವಲ ಜ್ಞಾನ ವಿಕಾಸಕ್ಕಾಗಿಯೇ ಯಾರೂ ಕನ್ನಡವನ್ನು ಓದುವುದಿಲ್ಲ; ಜೀವನಕ್ಕೆ ಮಾರ್ಗವೋ, ಅದು ಕನಸಿಗೂ ಬರಲಿಲ್ಲ. ಜ್ಞಾನವೂ ಇಲ್ಲ, ಜೀವನವೂ ಇಲ್ಲ. ಇನ್ನು ಯಾವ ಪುರುಷಾರ್ಥಕ್ಕೆ ಇದನ್ನು ಕಲಿಯುವುದು? ಒಳ್ಳೆಯದು, ಮುಂದಾದರೂ ವೃದ್ಧಿಯಾದೀತೆಂದು ಅಭಿಮಾನದಿಂದ ಬಹುಮಾನದ ಆಶೆಯನ್ನು ತೊರೆದು, ವರ್ಷಕ್ಕೆ ಮೂರು ನಾಲ್ಕು ಜನ ಸೇರುತ್ತಾರಲ್ಲಾ, ಅವರೆಲ್ಲರೂ ಭಾಷಾ ಸೇವೆಯಲ್ಲಿ ಬದ್ಧಕಂಕಣರಾಗುತ್ತಾರೆ, ಎಂದೇ ಭಾವಿಸೋಣ. ಆಯಿತು, ಇವರ ಪ್ರಯತ್ನವನ್ನೂ ಇವರ ಪಾಂಡಿತ್ಯದ ಫಲವನ್ನೂ ಮೆಚ್ಚತಕ್ಕವರು ಯಾರು? ಕನ್ನಡವನ್ನು ಹಿಡಿದದ್ದಕ್ಕಾಗಿ ಇವರತ್ತ ಆಡಿಕೊಳ್ಳುತ್ತಾ, ಹುಟ್ಟುಗನ್ನಡವನ್ನೂ ಮರೆಯುತ್ತಾ, ದೊಡ್ಡ ಮನುಷ್ಯರಾಗುವ ಇವರ ಸಹಪಾಠಿಗಳೇ ಅಲ್ಲವೇ? ಇದು ಹೇಗಾಯಿತು ಎಂದರೆ, ಊರಕಿವಿಗೆಲ್ಲಾ ಹತ್ತಿಯಿಟ್ಟು, ಒಬ್ಬನಿಗೆ ವೀಣೆಹೇಳಿದ ಹಾಗಾಯಿತು ಸರಸ್ವತೀದೇವಿ. ಜನರಿಗೆ ಹಿರಿಯರಿಂದ ಬರುವ ಒಡವೆಗಳಲ್ಲಿ ಭಾಷೆ ಒಂದು. ಅದು ಚೆನ್ನಾಗಿದ್ದಷ್ಟೂ ಭೂಷಣ; ಅದರಲ್ಲಿ ಎಲ್ಲರಿಗೂ ಪರಿಶ್ರಮವಿದ್ದು, ಪ್ರಮುಖರಾದವರಿಗೆ ಪೂರ್ಣ ಜ್ಞಾನವಿದ್ದರೆ, ಅವರಿಗೆ ಲಾಭವೂ, ಇವರಿಗೆ ಉತ್ಸಾಹವೂ ಉಂಟಾಗಿ, ಭಾಷೆಯೂ ಉತ್ಕೃಷ್ಟವಾಗುತ್ತದೆ. ಹಾಗೆ ಗರಿ ಬೆಳೆದು ಪೋಷಣೆಯನ್ನು ಕೇಳದ ಕಾಲ ಬಂದಾಗ ನೋಡಿಕೊಳ್ಳೋಣ. ಬಲವಂತದಿಂದ ಬದುಕಿಸಿಕೊಂಡು ತ್ರಾಣವನ್ನು ಹುಯ್ಯುವ ಕಾಲದಲ್ಲಿ, ಅಭಿಮಾನವಿದ್ದವರು ಓದಿ, ಎಂದು ಪರೀಕ್ಷೆ ಮಾಡತಕ್ಕದ್ದು ನ್ಯಾಯವೂ ಅಲ್ಲ, ವಿವೇಕವೂ ಅಲ್ಲ. ಇದರ ಕೆಡುಕು ಆಗಲೇ ಕಾಣುತ್ತಿದೆ; ಬೇಗ ಕಣ್ಣು ಬಿಟ್ಟು ನೋಡಿ ಯೂನಿವರ್ಸಿಟಿಯವರು ಸಮರ್ಪಕವಾದ ಏರ್ಪಾಟನ್ನು ಮಾಡಲೆಂದು ಹಾರೈಸಬೇಕಾಗಿದೆ.7) ಕನ್ನಡ ವಿದ್ಯೆಯನ್ನು ಕಲಿಸತಕ್ಕವರು ಅದಕ್ಕೆ ತಂದ ಅಪಾಯವನ್ನು ನೋಡಿದೆವಷ್ಟೆ; ಅದನ್ನು ಹಿಂದೆ ಓದಿ ಬಿರುದು ಪಡೆದವರು ಮಾಡುವ ಸಹಾಯವೇನು ನೋಡೋಣ. ಇವರಿಗೆ ಕನ್ನಡದ ಏಳಿಗೆಯ ಆತಂಕವೇ ಇಲ್ಲ. ಇಂಗ್ಲಿಷ್ ಕಾವ್ಯದ ಉತ್ತಮ ಗುಣಗಳನ್ನು ಭೋಗಿಸಿ, ಅದರ ಅಂದವನ್ನು ಕಂಡ ಇವರ ಕಣ್ಣಿಗೆ, ಇಂಪನ್ನು ಕೇಳಿದ ಕಿವಿಗೆ, ಕನ್ನಡ ಸೊಗಸದು. ಓದುವುದು ಆನಂದಕ್ಕೆ, ಇಲ್ಲ ಅರ್ಥಕ್ಕೆ, ಇವರ ಮನಸ್ಸಿನಲ್ಲಿ, ಇಂಗ್ಲಿಷಿನಿಂದ ಎರಡೂ ಉಂಟು; ಕನ್ನಡದಿಂದ ಒಂದೂ ಇಲ್ಲ.ನಿಮ್ಮ ತಾಯಿಮಾತಿನಲ್ಲಿ ನಿಮಗೆ ಅಕ್ಕರೆಯೇ ಇಲ್ಲವಲ್ಲ ಎಂದು ಕೊರಗಿನಿಂದ ನಾವು ಆಕ್ಷೇಪಣೆ ಎತ್ತಿದರೆ - ‘ದಿಟ, ಮಾಡುವುದೇನು, ನಾವೂ ನಾಲ್ಕು ದಿನ ಅದಕ್ಕೆ ಮಣ್ಣು ಹಾಕಿದೆವು. ಅಪ್ಪ ನೆಟ್ಟ ಆಲದಮರ ಎಂದು ನೇತು ಹಾಕಿಕೊಳ್ಳೋಣವೇ? ಕೆಲಸಕ್ಕೆ ಬಾರದ ಮಾತು; ಎಲ್ಲೋ ಒಂದು ಮೂಲೆಯಲ್ಲಿ ಹತ್ತು ಜನ ಆಡುತ್ತಾರೆ; ಅದೂ ಅವರೂ ಎರಡು ಮೂರು ಸರ್ಕಾರಕ್ಕೆ ಸಿಕ್ಕಿ ಹೋಳು ಒಡೆದಿದ್ದಾರೆ. ಬರವಣಿಗೆಯನ್ನು ನೋಡೇವೇ, ಮೇಲೆ ತೋಟ ಶೃಂಗಾರ, ಒಳಗೆ ಗೋಣುಸೊಪ್ಪು, ಯಾವ ಕವಿಯ ಕವನವೇ ತೆಗೆಯಿರಿ, ಲೋಕಶ್ರೇಷ್ಠವಾದ ನೀತಿಗಳಾಗಲಿ, ದಿವ್ಯಜಿವನಕ್ಕೆ ಮೇಲುಪಂಕ್ತಿಯಾದ ಚರಿತ್ರೆಗಳಾಗಲಿ, ರಮ್ಯವಾದ ಸಹಜ ವರ್ಣನೆಗಳಾಗಲಿ, ಮನಸು ಮುಳುಗಿ ಹೋಗುವ ಕಲ್ಪನೆಗಳಾಗಲಿ, ಯಾವುದಾದರೂ ಒಂದು ನಮ್ಮ ಹೃದಯವನ್ನು ಆನಂದ ಪ್ರವಾಹದಲ್ಲಿ ತೊಳೆದು, ದುಃಖಮಯವಾದ ಈ ಸಂಸಾರದಲ್ಲೇ ಸ್ವರ್ಗಸುಖವನ್ನು ತಂದುಕೊಡುವಂತದು ಇದೆಯೇ? ಹಿತವಾಗಿ ಸಾರ್ಥಕವಾಗಿ ಹೊತ್ತು ಕಳೆಯಬಹುದಾದ ವಚನ ಕಾವ್ಯಗಳುಂಟೇ? ಹಿಂದಿನ ಕಾಲದ ಸತ್ಯವಾದ ವೃತ್ತಾಂತವಿಲ್ಲ; ನೀತಿ ಹೇಳಿ ಪ್ರಪಂಚ ಧರ್ಮವನ್ನು ಚಿತ್ರಿಸುವ ಕಟ್ಟು ಕಥೆ ಇಲ್ಲ; ಸಾಮಾನ್ಯವಾದ ವ್ಯವಹಾರ ಜ್ಞಾನವನ್ನು ಕೊಡುವ ಪ್ರಸಂಗವಿಲ್ಲ; ಅದ್ಭುತ ಇಲ್ಲ ತುಚ್ಛವಾದ ಮಹಾತ್ಮೆಯಿಂದ ಪೊಳ್ಳಾಗದಂಥ ದೇಶದ ಮಹನೀಯರ ಜೀವನ ಚರಿತ್ರೆ ಇಲ್ಲ; ಎಲ್ಲಕ್ಕಿಂತ, ಮನುಷ್ಯನ ಜೀವನೋಪಾಯಕ್ಕೂ ಸುಖಲೋಲುಪ್ತಿಗೂ ಅನುಕೂಲಿಸತಕ್ಕ ಶಾಸ್ತ್ರಗಳ ಪರಿಚಯಕ್ಕೆ ಅವಕಾಶವಿಲ್ಲ. ಈ ನಮ್ಮ ಕನ್ನಡವನ್ನು ಏನು ಕೊಳ್ಳೆ ಹೋಗುತ್ತದೆಂದು ಕಾಪಾಡಬೇಕು; ಕಷ್ಟ ಬಿದ್ದು ಹೆಚ್ಚಿಸಬೇಕು? ಅದರಲ್ಲಿ ನಮಗೆ ವೈರವೂ ಇಲ್ಲ, ವಿಶ್ವಾಸವೂ ಇಲ್ಲ, ಅದು ಇದ್ದರೆಷ್ಟು, ಹೋದರೆಷ್ಟು? ನಿಮಗೆ ಇನ್ನೇನು ಕೆಲಸವಿಲ್ಲದಿದ್ದರೆ, ಅದನ್ನು ಹಚ್ಚಿಸಿಕೊಂಡು ಹೊತ್ತು ಕಳೆಯಿರಿ, ನಮಗೆ ದುಃಖವಿಲ್ಲ. ನಮ್ಮ ಪಾಲಿಗೆ ಸಾಕಾದಷ್ಟು ಕನ್ನಡ ತಾಯಹಾಲಿನಲ್ಲೇ ಬೆರೆದು ಬಂದು ಹೋಯ್ತು; ಅಷ್ಟು ಆಡುತ್ತೇವೆ, ಸಾಲದ್ದಕ್ಕೆ ಇಂಗ್ಲಿಷ್ ಹಿಂದುಸ್ಥಾನಿ ಜೋಡಿಸುತ್ತೇವೆ. ಕಾಗದಗಳು ಬೇಕಾದರೆ ಇಂಗ್ಲಿಷಿನಲ್ಲಿ ಬರೆಯುತ್ತೇವೆ. ಏನೋ ಎರಡು ದಿನ ನಾಲ್ಕು ಜನಕ್ಕೆ ಮೇಲಾಗಿ ಬಾಳಿ ಹೊರಟು ಹೋಗುತ್ತೇವೆ. ನಿಮ್ಮ ಕನ್ನಡದಿಂದ ನಮಗೆ ಆಗಬೇಕಾದದ್ದು ಏನೂ ಇಲ್ಲ; ಆ ಹಾಳು ಕನ್ನಡಕ್ಕೆ ನಾವು ಪಟ್ಟ ರಗಳೆಯೇ ಸಾಕಾಗಿದೆ. ಒಂದು ಸಲ ಪರೀಕ್ಷೆ ಕೂಡ ಆಗದೆ ಹೋಗುವ ಸಂಕಟಕ್ಕೆ ಬಂದು ಬಿಟ್ಟಿತು. ತಮ್ಮ ಹುಡುಗರನ್ನೂ ಏತಕ್ಕೆ ಗೋಳು ಹುಯ್ದುಕೊಳ್ಳುತ್ತೀರಿ?’ ಎಂದು ಹಾಸ್ಯ ಮಾಡುತ್ತಾ ಉತ್ತರ ಹೇಳುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.