ಕಲಿಕೆ ಅತ್ಯುತ್ತಮ ಯಾವಾಗ ಆಗುತ್ತದೆಂದರೆ ಭಯರಹಿತ, ಆತ್ಮೀಯವಾದಂತಹ, ತಪ್ಪುಗಳನ್ನು ಮಾಡುತ್ತಾ ಕಲಿಯುವ ವಾತಾವರಣ ಸಿಕ್ಕಾಗ. ಪಾಶ್ಚಿಮಾತ್ಯ ದಾರ್ಶನಿಕ ಕೆನ್ ರಾಬಿನ್ಸನ್ ಹೇಳಿದ ‘ಶಿಕ್ಷಣದಲ್ಲಿ ಕ್ರಾಂತಿಯಾಗದ ಹೊರತು ಬಹಳ ದೊಡ್ಡ ದುರಂತಕ್ಕೆ ನಾವು ಈಡಾಗುತ್ತೇವೆ’ ಎಂಬ ಮಾತೇ ನಮಗೆ ಧಾರವಾಡದಂತಹ ಒಂದು ಪ್ರಮುಖ ಜಿಲ್ಲಾ ಕೇಂದ್ರದಲ್ಲಿ ‘ಬಾಲಬಳಗ’ ಸೃಜನಶೀಲ ಶಾಲೆಯನ್ನು ಆರಂಭಿಸಲು ಸ್ಫೂರ್ತಿಯಾಯಿತು.

ನಾವು ಕಂಡುಕೊಂಡಂತೆ, ಇಂದು ನಮ್ಮಲ್ಲಿರುವ ಬ್ರಿಟಿಷ್ಪ್ರಣೀತ ಶಿಕ್ಷಣ ವ್ಯವಸ್ಥೆ ಕೇವಲ ಕಾರ್ಖಾನೆಗಳಿಗೆ ಅಗತ್ಯವಾದ ಕಾರ್ಮಿಕರನ್ನು ಪೂರೈಸಲು ಮಾತ್ರ ಸಹಕಾರಿಯಾಗುತ್ತದೆ. ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಇದು ಪ್ರಯೋಜನಕಾರಿಯಲ್ಲ. ಅನುಭವಾತ್ಮಕ, ಮೌಲ್ಯದ ಶಿಕ್ಷಣ ಇಲ್ಲದ ಹೊರತು ಯಾವ ಕಲಿಕೆಯೂ ಅಂತರಾಳಕ್ಕೆ ಇಳಿಯುವುದಿಲ್ಲ.

ಪರೀಕ್ಷೆ ಮುಗಿದ ಮರುದಿನವೇ ಎಲ್ಲವನ್ನೂ ಮರೆತುಬಿಡುವ ಈ ಶಿಕ್ಷಣ ಪದ್ಧತಿ ಕೈಗಾರಿಕಾ ಕ್ರಾಂತಿಯ ಉತ್ಪನ್ನವಾಗಿದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣ, ವೃತ್ತಿಪರ ಕೋರ್ಸ್, ಉದ್ಯೋಗದ ನಂತರ ವಿದೇಶಕ್ಕೆ ಹಾರುವುದನ್ನೇ ನಮ್ಮ ಶಿಕ್ಷಣ ಪ್ರಚೋದಿಸುತ್ತಿದೆ. ನಮಗೆ ಬೇಕಿರುವುದು ಮಕ್ಕಳನ್ನು ಹಳ್ಳಿಯತ್ತ ಮುಖಮಾಡಿಸುವ ಶಿಕ್ಷಣ.

ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉತ್ತಮ ಎಂಬ ವಾದಕ್ಕೆ ಇಳಿದಾಗ ಇದು ಸಮಾಜಮುಖಿ ಶಿಕ್ಷಣ ಅಲ್ಲ. ವ್ಯಕ್ತಿಗಳು ಸಮುದಾಯದ ವ್ಯಕ್ತಿಗಳಾಗುತ್ತಿಲ್ಲ. ಸಂಕುಚಿತ, ಲಾಭವನ್ನು ಮಾತ್ರ ನೋಡುವ ವ್ಯಕ್ತಿಗಳಾಗುತ್ತಿದ್ದಾರೆ. ಈ ಪದ್ಧತಿಯಲ್ಲಿ ಮಕ್ಕಳ ಭಾವನೆಗಳಿಗೆ ಅವಕಾಶವಿಲ್ಲ. ಅದರ ಮಹತ್ವ ಬೆಳೆಸುವ ವ್ಯವಸ್ಥೆ ಇಲ್ಲಿಲ್ಲ ಎಂಬುದು ಗೊತ್ತಾಯಿತು.

ಹಾಗಾಗಿಯೇ 1996ರಲ್ಲಿ ಒಂದು ಮನೆಯ ಪಡಸಾಲೆಯಲ್ಲಿ ಮೂವರು ಮಕ್ಕಳೊಂದಿಗೆ ‘ಬಾಲಬಳಗ’ ಶಿಶುವಿಹಾರ ಆರಂಭವಾಯಿತು. ನಿಶ್ಚಿತವಾಗಿಯೂ ನಮ್ಮದು ಕನ್ನಡ ಮಾಧ್ಯಮ ಶಾಲೆ. ಶಿಶುವಿಹಾರದಿಂದ 10ನೇ ತರಗತಿಯವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಮೂರು ಎಕರೆ ಪರಿಸರ ಸ್ನೇಹಿ ಜಾಗದಲ್ಲಿ ಶಾಲೆ ನಡೆಯುತ್ತಿದೆ.

ಮೂವರು ಇದ್ದ ವಿದ್ಯಾರ್ಥಿಗಳ ಸಂಖ್ಯೆ 330ಕ್ಕೆ ಏರಿದೆ. ಕನ್ನಡ ಮಾಧ್ಯಮ ಎಂದರೆ ಪಾಲಕರು ಮೂಗು ಮುರಿಯುತ್ತಾರೆ ಎಂಬ ಮಾತು ನಮ್ಮ ಅನುಭವದಲ್ಲಿ ಹುಸಿಯಾಗಿದೆ. ಪ್ರತಿವರ್ಷವೂ ಮಕ್ಕಳ ಪ್ರವೇಶ ಏರುತ್ತಲೇ ಇದೆ. ಅವರ ಬೇಡಿಕೆಗೆ ತಕ್ಕಂತೆ ನಮಗೆ ಕೊಠಡಿಗಳನ್ನು ಹೊಂದಿಸಲು ಆಗುತ್ತಿಲ್ಲ.

ಶಾಲೆಯನ್ನು ಮಗು ಸ್ನೇಹಿಯಾಗಿ ಮಾಡುವ ಮೊದಲ ಹಂತದಲ್ಲಿ ನಾವು ಕೆಲವು ನಿಯಮಗಳನ್ನು ಅಳವಡಿಸಿಕೊಂಡೆವು. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಯಾವ ಬಗೆಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಾರೆಯೋ ಅದರ ಮೇಲೆ ಅವರ ಬೆಳವಣಿಗೆ ನಿರ್ಧಾರವಾಗುತ್ತದೆ. ಅದಕ್ಕಾಗಿ ಮಕ್ಕಳ ಊಟದ ಡಬ್ಬಿಯಲ್ಲಿ ಬೇಕರಿ ಉತ್ಪನ್ನದ ಬದಲು ಹಣ್ಣು, ತರಕಾರಿ, ಮೊಳಕೆ ಕಾಳುಗಳಂತಹ ನಿರಗ್ನಿ ಆಹಾರವನ್ನು ಇಡುವಂತೆ ಪಾಲಕರಿಗೆ ಮನವಿ ಮಾಡಿಕೊಂಡೆವು.

ಇದರಿಂದ ಮಕ್ಕಳ ಶಾರೀರಿಕ ಅಡಿಪಾಯ ಗಟ್ಟಿಯಾಗುತ್ತದೆ. ತಮ್ಮ ಬದುಕಿನ ಬಹುಮುಖ್ಯ ಭಾಗವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಹಾಗಾಗಿ ಅವರಿಗೆ ಮನೆಯ ವಾತಾವರಣದಂತಹ ಶಾಲೆಯನ್ನು ರೂಪಿಸುವುದು ನಮ್ಮ ಗುರಿಯಾಗಿತ್ತು. ಅದರಂತೆ ವಿಶಾಲವಾದ ಜಾಗದಲ್ಲಿ ಶಾಲೆ ತಲೆ ಎತ್ತಿದೆ. ಶಾಲೆಯ ಸುತ್ತಲೂ ಮಕ್ಕಳು ಬೆಳೆಸಿದ 2,500 ವಿವಿಧ ಬಗೆಯ ಸಸಿಗಳು ಹಸಿರು ತೋರಣ ಕಟ್ಟಿವೆ.

ನಮ್ಮ ಶಾಲೆಯಲ್ಲಿ ಓದುವ ಮಕ್ಕಳಿಗೆ ಸಮವಸ್ತ್ರವನ್ನು ಕಡ್ಡಾಯ ಮಾಡಿಲ್ಲ. ಅವರು ಬಯಸಿದ ಬಟ್ಟೆಯನ್ನು ಹಾಕಿಕೊಂಡು ಬರಬಹುದು. ಕುಣಿದು, ಕುಪ್ಪಳಿಸಿ, ಮರ ಹತ್ತಿ ಆಟವಾಡಬಹುದು. ಸೋಮವಾರ ಮತ್ತು ಗುರುವಾರ ಮಾತ್ರ ದೇಹಕ್ಕೆ ಒಳ್ಳೆಯದಾದ ಖಾದಿ ಬಟ್ಟೆಗಳನ್ನು ಧರಿಸಿಕೊಂಡು ಬರುವಂತೆ ಸೂಚಿಸಿದ್ದೇವೆ. ಖಾದಿ ನಮ್ಮ ದೇಶದ ಚರಿತ್ರೆಯ ಒಂದು ಮುಖ್ಯ ಅಂಶ.

ಶಿಕ್ಷಕರ ಕುರಿತಾಗಿ ಮಕ್ಕಳು ಭಯ ಹೊಂದುವುದನ್ನು ತೊಡೆದುಹಾಕಲು ನಾವು ಮನೆಯಲ್ಲಿ ಕರೆಯುವಂತೆ ಶಿಕ್ಷಕಿಯರನ್ನು ಅಕ್ಕ, ಮೌಸಿ (ಚಿಕ್ಕಮ್ಮ) ಎಂತಲೂ, ಶಿಕ್ಷಕರನ್ನು ಮಾಮಾ ಎಂದು ಸಂಬೋಧಿಸುವ ಪದ್ಧತಿ ಚಾಲ್ತಿಯಲ್ಲಿದೆ. ಪ್ರತಿವರ್ಷವೂ ಶಾಲೆಯಲ್ಲಿ ಮಕ್ಕಳ ಹಬ್ಬವನ್ನು ಆಚರಿಸುತ್ತೇವೆ. ಇದರಲ್ಲಿ ಬರೀ ಪ್ರತಿಭಾವಂತ ಮಕ್ಕಳಷ್ಟೇ ವೇದಿಕೆ ಹತ್ತುವಂತಿಲ್ಲ. ಎಲ್ಲರೂ ವೇದಿಕೆ ಏರಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಬೇಕು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುದ್ರಿತ ಸಿನಿಮಾ ಹಾಡುಗಳನ್ನು ಬಳಸಲು (ಹಲವು ಶಾಲೆಗಳಲ್ಲಿರುವಂತೆ) ಅವಕಾಶವಿಲ್ಲ. ಮಕ್ಕಳೇ ಸ್ವತಃ ಕಲಿತ ಹಾಡುಗಳನ್ನು ಹಾಡಬೇಕು. ಸ್ವತಂತ್ರವಾಗಿ ನೃತ್ಯ ಸಂಯೋಜನೆ ಮಾಡಿರಬೇಕು. ನೃತ್ಯ, ಯೋಗ, ಸಂಗೀತ ಕಲಿಯಲು ಇಲ್ಲಿ ಅವಕಾಶವಿದೆ. ಅನೇಕ ಮಕ್ಕಳು ಈ ಕಲಿಕೆಯನ್ನು ಗಂಭೀರವಾಗಿ ಮುಂದುವರಿಸಿಕೊಂಡು ಹೋಗುತ್ತಾರೆ. ಪ್ರತಿವರ್ಷವೂ ಪಾಲಕರ ಹಬ್ಬವನ್ನು ಆಚರಿಸುತ್ತೇವೆ. ಪಾಲಕರ ಕ್ರೀಡಾಕೂಟದಲ್ಲಿಯೂ ಹಲವು ಪಾಲಕರು ಭಾಗವಹಿಸುತ್ತಾರೆ. ತರಗತಿಗಳಲ್ಲಿ ಕುಳಿತುಕೊಂಡು ಕಲಿಕೆಯ ಗುಣಮಟ್ಟದ ಬಗ್ಗೆ ಹೇಳುವುದಕ್ಕೂ ಪಾಲಕರಿಗೆ ಅವಕಾಶ ಕಲ್ಪಿಸಿದ್ದೇವೆ.

ನಮ್ಮಲ್ಲಿ ಪ್ರಮುಖವಾಗಿ ಡೊನೇಷನ್ ಇಲ್ಲ. 17 ವರ್ಷಗಳಿಂದ ಶಾಲೆ ನಡೆಯುತ್ತಿರುವುದು ಮಕ್ಕಳು ನೀಡಿದ ಶುಲ್ಕ ಹಾಗೂ ಸಮಾನ ಮನಸ್ಕರು ನೀಡಿದ ದೇಣಿಗೆ ಹಣದ ಮೇಲೆ. ನಾವು ಮರುಪಾವತಿ ಠೇವಣಿ ಯೋಜನೆಯನ್ನು ಆರಂಭಿಸಿದ್ದೇವೆ. ಶಾಲೆಗೆ ದಾಖಲಾಗುವ ಮಗುವಿನ ಪೋಷಕರಿಂದ ಠೇವಣಿ ಪಡೆದುಕೊಂಡು, ಮಗುವಿನ ಕಲಿಕೆ ಮುಗಿದ ಮೇಲೆ ಠೇವಣಿ ಹಣವನ್ನು ವಾಪಸ್ ಮಾಡುತ್ತೇವೆ.

ನಾವು ಅನುದಾನ ನೀಡುವಂತೆ ಸರ್ಕಾರವನ್ನು ಕೇಳಿಲ್ಲ. ನಮ್ಮದೂ ಸೇರಿದಂತೆ ಸೃಜನಶೀಲ ಶಿಕ್ಷಣ ನೀಡುವ ಹಲವು ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆಯ ಉನ್ನತ ಹಂತದ ಅಧಿಕಾರಿಗಳಿಗೆ ಗೊತ್ತಿದೆ. ಆದರೆ, ಕೆಳ ಹಂತದ ಅಧಿಕಾರಿಗಳಿಗೆ ನಮ್ಮ ಪ್ರಯತ್ನದ ಗಂಭೀರತೆ ಗೊತ್ತಿಲ್ಲ. ಅದಕ್ಕೆ ಪೂರಕವಾಗಿ ಒಂದು ಘಟನೆಯನ್ನು ಹಂಚಿಕೊಳ್ಳುತ್ತೇನೆ.

ಶಾಲೆಯ ನವೀಕರಣಕ್ಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಹಲವು ಬಾರಿ ಅಲೆದೆವು. ‘ಓ ಡಾಕ್ಟರ್ ಬರ್ರಿ, ಬರ್ರಿ’ ಎಂದು ಕರೆದು ಅಧಿಕಾರಿಗಳು ಒಂದು ಕಪ್ ಚಹಾ ಕುಡಿಸುತ್ತಾರೆ. ಆದರೆ, ಶಾಲೆಯ ನವೀಕರಣವನ್ನು ನಿಗದಿತ ಅವಧಿಯೊಳಗೆ ಮಾಡಿಕೊಡುವುದಿಲ್ಲ. ಏಕೆಂದರೆ ನಾವು ಅವರ ಕೈ ಬೆಚ್ಚಗೆ ಮಾಡುವುದಿಲ್ಲ!

‘ನೀವು ಬೇಕಾದಷ್ಟು ಬಾರಿ ಕರೆಯಿರಿ. ನಾವು ಬರುತ್ತೇವೆ. ಆದರೆ, ಲಂಚವನ್ನು ಮಾತ್ರ ಕೊಡುವುದಿಲ್ಲ’ ಎಂದು ಹೇಳಿದ್ದಕ್ಕೆ, ಮೂರು ಬಾರಿ ನಾವು ನವೀಕರಣಕ್ಕೆ ಸಲ್ಲಿಸಿದ ಅರ್ಜಿಯನ್ನೇ ಕಳೆದರು. ಆದರೂ, ಮತ್ತೊಂದು ಅರ್ಜಿಯನ್ನು ಕೊಟ್ಟೆವು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುವ ನಮಗೆ ಇಲಾಖೆ ಹೀಗೆ ಮಾಡಬಹುದೆ?

ಜಪಾನಿ ಮೂಲದ ತೊತ್ತೆಚಾನ್, ಗೀಜುಬಾಯಿ ಬದೇಕಾ ಅವರ ‘ಹಗಲುಗನಸು’, ಅಲೆಕ್ಸಾಂಡರ್ ನೀಲ್ ಅವರ ‘ಸಮ್ಮರ್ ಹಿಲ್’, ಜಾನ್ ಹೋಲ್ಟ್ ಅವರ ಪುಸ್ತಕಗಳು, ಕೆನ್ ರಾಬಿನ್ಸನ್ ಅವರ ವಿಡಿಯೊಗಳು ನಮಗೆ ಸ್ಫೂರ್ತಿಯಾಗಿವೆ. ಇದರೊಟ್ಟಿಗೆ ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ, ಅರವಿಂದರು, ಜಿಡ್ಡು ಕೃಷ್ಣಮೂರ್ತಿ ಅವರ ವಿಚಾರಗಳನ್ನು ಅರ್ಥ ಮಾಡಿಕೊಂಡು ಅನುಷ್ಠಾನಕ್ಕೆ ತರುವ ಯತ್ನ ಮಾಡುತ್ತಿದ್ದೇವೆ.

ಸರ್ಕಾರ ನೀತಿ ರೂಪಿಸುವ ಮೊದಲೇ ನಮ್ಮಲ್ಲಿ ಇಂಗ್ಲಿಷನ್ನು ಒಂದು ವಿಷಯವಾಗಿ ಒಂದನೇ ತರಗತಿಯಿಂದಲೇ ಕಲಿಸುತ್ತಿದ್ದೇವೆ. ಮಾಧ್ಯಮವಾಗಿ ಅಲ್ಲ. ನಮ್ಮ ಶಾಲೆಯ ಒಟ್ಟಾರೆ ಉದ್ದೇಶ ಮಕ್ಕಳು ಶೇಕಡಾ 80ರಷ್ಟಿರುವ ಹಳ್ಳಿಗಳತ್ತ ಮುಖಮಾಡುವಂತೆ ಮಾಡುವುದು, ಇತರರಿಗೆ ಸಹಕಾರ ನೀಡುವುದು ಹಾಗೂ ಸ್ವಾವಲಂಬಿಯಾಗುವಂತೆ ಮಾಡುವುದು.

ನಿರೂಪಣೆ: ಮನೋಜಕುಮಾರ್ ಗುದ್ದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.