ಶುಕ್ರವಾರ, ಏಪ್ರಿಲ್ 16, 2021
30 °C

ಕರಾವಳಿ ಬದುಕು ನಿರಾತಂಕ-ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಪಾನ್ ಜನರ ಬದುಕನ್ನೇ ಬುಡಮೇಲು ಮಾಡಿದ ಭೂಕಂಪ ಮತ್ತು ಸುನಾಮಿಯಿಂದ ಭಾರತಕ್ಕೆ ಯಾವ ಅಪಾಯವೂ ಇಲ್ಲ ಎಂದು ಹೇಳಲಾಗುತ್ತಿದ್ದರೂ ಕರಾವಳಿಯಲ್ಲಿ ಈ ವಿದ್ಯಮಾನ ಕೊಂಚ ಆತಂಕಕ್ಕೆ ಕಾರಣವಾಗಿದೆ. ಹಾಗಿದ್ದೂ ಬದುಕು ಮಾತ್ರ ನಿರಾತಂಕವಾಗಿಯೇ ಸಾಗಿದೆ. ಈ ನಡುವೆ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.



ಜಪಾನ್‌ನಲ್ಲಿ ಭೂಕಂಪ, ಸುನಾಮಿ ಎದ್ದಿದೆ ಎಂಬ ಸುದ್ದಿ ಶುಕ್ರವಾರ ಮಧ್ಯಾಹ್ನದೊತ್ತಿಗೆ ಎಲ್ಲೆಡೆ ಪಸರಿಸುತ್ತಿರುವಂತೆಯೆ ಎಲ್ಲರ ಬಾಯಲ್ಲೂ ಇದೇ ಮಾತು. ನಮ್ಮ ಕರಾವಳಿಗೂ ಸುನಾಮಿ ಪರಿಣಾಮ ಕಾಣಿಸಿಕೊಳ್ಳಲಿದೆಯೆ, ಅಲೆಗಳಲ್ಲಿ ಏರಿಳಿತವಾಗಬಹುದು ಎಂಬ ಆತಂಕದ ಚರ್ಚೆ ಸಾಗಿತ್ತು.



ಸುನಾಮಿ ಸುದ್ದಿ ಹೆಚ್ಚು ಆತಂಕಕ್ಕೆ ಕಾರಣವಾಗಿದ್ದು ಮೀನುಗಾರರಿಗೆ. ಈಗಾಗಲೇ ಆಳಸಮುದ್ರಕ್ಕೆ ಇಳಿದ ಮೀನುಗಾರರು ಹೇಗಿದ್ದಾರೊ ಎನ್ನುವ ಆತಂಕ ಒಂದೆಡೆಯಾದರೆ ಪರಿಸ್ಥಿತಿ ತಿಳಿಯಾಗುವವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



ಹಳೆ ಬಂದರಿನಲ್ಲಿ ಶುಕ್ರವಾರ ಮಧ್ಯಾಹ್ನ ಸುನಾಮಿಯದೇ ಚರ್ಚೆ. ದೂರದ ಜಪಾನ್ ಸುನಾಮಿ ಇಲ್ಲಿಗೆ ಅಪ್ಪಳಿಸುವ ಸಾಧ್ಯತೆ ತೀರ ಕಡಿಮೆ ಎನ್ನುವ ವಿಶ್ವಾಸ ಹಲವರಲ್ಲಿ ಕಾಣಿಸಿಕೊಂಡರೂ ಎಂದಿನಂತೆ ಕಡಲಿಗೆ ಇಳಿಯುವ ಸಾಹಸಕ್ಕೆ ಅನೇಕರು ಮುಂದಾಗಿಲ್ಲ.



ಬೋಟುಗಳಿಗೆ ಮಂಜುಗಡ್ಡೆ ತುಂಬಿಸುವ ಕೆಲಸ ಶುಕ್ರವಾರ ಕೆಲವು ಕಡೆ ಮಾತ್ರ ಕಂಡುಬಂದಿದ್ದು ಬಹುತೇಕ ದೋಣಿಗಳು ಲಂಗರು ಹಾಕಿದ್ದರೆ ಇನ್ನೂ ಕೆಲವರು ಇದೇ ಉತ್ತಮ ಸಮಯ ಎಂದು ತಮ್ಮ ಬೋಟುಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.



‘ನಮ್ಮ ಬೋಟಿಗೆ ಬೆಳಿಗ್ಗೆಯೇ ಐಸ್ ತುಂಬಿದ್ದು ರಾತ್ರಿ ಹೊರಡಬೇಕು ಅಂದುಕೊಂಡಿದ್ದೆವು. ಆದರೆ ಸುನಾಮಿ ಸುದ್ದಿ ಕೇಳಿ ಭಯವಾಗುತ್ತಿದೆ. ಒಂದೆರಡು ದಿನ ನೋಡೋಣ ಎಂದು ನಮ್ಮ ಧಣಿ ಹೇಳಿದ್ದರಿಂದ ಸುಮ್ಮನಾಗಿದ್ದೇವೆ’ ಹೀಗೆ ಆತಂಕದ ಧ್ವನಿಯಲ್ಲಿ ಮಾತನಾಡಿದ ಮೀನುಗಾರ ಕನಕರಾಜ.



‘ಬೇರೆ ಬೇರೆ ಬೋಟುಗಳಿಗೆ ಹೆಚ್ಚುಕಡಿಮೆ ಒಂದು ದಿನದಲ್ಲಿ ಐದು ಟನ್ ಐಸ್ ತುಂಬುತ್ತೇವೆ, ಆದರೆ ಇವತ್ತು ಬೆಳಿಗ್ಗೆಯಿಂದ ಒಂದೇ ಬೋಟಿಗೆ ಐಸ್ ಹಾಕಿದ್ದೇವೆ. ಬಹುಶ: ಸುನಾಮಿ ಸುದ್ದಿ ಕೇಳಿ ಹೆಚ್ಚಿನವರು ನಮ್ಮನ್ನು ಸಂಪರ್ಕಿಸಿಲ್ಲ’ ಎನ್ನುವ ಮಂಜುಗಡ್ಡೆ ವಿತರಣಾ ಘಟಕದ ಹೇಮಂತ್, ಬಂದರು ಪ್ರದೇಶದಲ್ಲಿ ಒಟ್ಟು 20 ಮಂಜುಗಡ್ಡೆ ವಿತರಣಾ ಘಟಕಗಳು ಕೆಲಸ ಮಾಡುತ್ತಿವೆ ಎಂದು ತಿಳಿಸುತ್ತಾರೆ.



ಸಾಮಾನ್ಯವಾಗಿ ಸುನಾಮಿ ಕಾಣಿಸಿಕೊಂಡಾಗ ಸಮೀಪದ ರಾಷ್ಟ್ರಗಳ ಸಮುದ್ರಗಳಲ್ಲೂ ಅಲೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಈ ಹಿಂದೆ ಚನ್ನೈನಲ್ಲಿ ಕಾಣಿಸಿಕೊಂಡ ಸುನಾಮಿ ಅಲೆಗಳ ಪರಿಣಾಮ ಕರ್ನಾಟಕದ ಕರಾವಳಿಯಲ್ಲೂ ಕೆಲಮಟ್ಟಿಗೆ ಕಾಣಿಸಿಕೊಂಡಿತ್ತು. ಆದರೆ ಶುಕ್ರವಾರ ಇಲ್ಲಿ ಅಂತಹ ಬದಲಾವಣೆ ಏನೂ ಕಂಡಿಲ್ಲ. ಎಂದಿನಂತೆ ಇಂದೂ ಸಹ ಅಲೆಗಳ ಏರಿಳಿತ ಸಾಮಾನ್ಯವಾಗೇ ಇದೆ ಎಂದು ಮೀನು ವ್ಯಾಪಾರಿ ರವಿರಾಜ್ ಬೋಳೂರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.