ಮಂಗಳವಾರ, ಏಪ್ರಿಲ್ 20, 2021
32 °C

ಕರುಳುಬೇನೆ ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆ ಬಂತೆಂದರೆ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ. ಅನೇಕ ಕಡೆ ಕಲುಷಿತ ನೀರು ಪೂರೈಕೆ. ಹೀಗಾಗಿ ವಾಂತಿ ಭೇದಿ ಮತ್ತು ಕರುಳುಬೇನೆಯಂತಹ ರೋಗಗಳು ಕಾಣಿಸಿಕೊಳ್ಳುವುದು ಈಗಾಗಲೇ ಆರಂಭವಾಗಿದೆ. ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಮಲಯಪ್ಪನಕೊಪ್ಪಲು ಗ್ರಾಮದಲ್ಲಿ 45 ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ಅವರ ಪೈಕಿ ಮೂವರು ಮೃತಪಟ್ಟಿರುವ ಪ್ರಕರಣಗಳು ಜನರಲ್ಲಿ ಆತಂಕ ಉಂಟು ಮಾಡಿದೆ. ಈ ಸಮಸ್ಯೆ ಬೆಂಗಳೂರನ್ನೂ ಬಿಟ್ಟಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿಯೂ ಇತ್ತೀಚೆಗೆ ಕರುಳುಬೇನೆ ಕಾಣಿಸಿಕೊಂಡಿರುವ ವರದಿಗಳಿವೆ. ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಕರುಳುಬೇನೆಯಿಂದ ಚಿಕಿತ್ಸೆಗಾಗಿ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದಾಗಿ ಆ ಆಸ್ಪತ್ರೆಗಳ ಮೂಲಗಳು ತಿಳಿಸಿವೆ. ಇದು ನಿಜಕ್ಕೂ ಗಾಬರಿ ಉಂಟು ಮಾಡುವಂತಹ ಬೆಳವಣಿಗೆ. ಇದಕ್ಕೆ ಮುಖ್ಯಕಾರಣ ಕಲುಷಿತ ನೀರು ಸೇವನೆ ಮತ್ತು ಹಾದಿ ಬೀದಿಯಲ್ಲಿ ಸಿಗುವ ತಿನಿಸುಗಳ ಸೇವನೆ ಎಂಬ ವೈದ್ಯರ ಅಭಿಪ್ರಾಯಗಳನ್ನು ಅಲ್ಲಗಳೆಯಲಾಗದು. ಅನೇಕ ಬಡಾವಣೆಗಳಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಅಂತಹ ಕಡೆಗಳಲ್ಲಿ ಜಲಮಂಡಳಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೆ, ಹಲವರು ಖಾಸಗಿಯವರಿಂದ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಹೀಗೆ ಪೂರೈಕೆ ಆಗುತ್ತಿರುವ ನೀರು ಕುಡಿಯಲು ಯೋಗ್ಯವೇ ಎಂದು ಪರೀಕ್ಷಿಸುವ ಸಹನೆ ಯಾರಿಗೂ ಇಲ್ಲ. ಸದ್ಯ ನೀರು ಸಿಕ್ಕಿತಲ್ಲ ಎನ್ನುವ ಸಮಾಧಾನ ಜನರಿಗೆ.ಅನೇಕ ಕಡೆಗಳಲ್ಲಿ ಕುಡಿಯುವ ನೀರು ಮತ್ತು ಕೊಳಚೆ ನೀರಿನ ಪೈಪುಗಳು ಜೊತೆ ಜೊತೆಯಲ್ಲಿಯೇ ಇವೆ. ಕೊಳಚೆ ನೀರಿನ ಪೈಪು ಒಡೆದು ಕುಡಿಯುವ ನೀರಿನ ಜೊತೆ ಸೇರಿಕೊಂಡಿರುವ ಪ್ರಕರಣಗಳೂ ಇವೆ. ಅನೇಕ ಕಡೆಗಳಲ್ಲಿ ಹಳೆಕಾಲದ ಜೀರ್ಣವಾದ ಪೈಪುಗಳೇ ಇವೆ. ಅವುಗಳನ್ನು ಬದಲಿಸುವ ವ್ಯವಸ್ಥೆ ಬಗೆಗೆ ಜಲಮಂಡಳಿ ತಲೆ ಕೆಡಿಸಿಕೊಂಡಂತಿಲ್ಲ. ಮತ್ತೆ ಅನೇಕ ಕಡೆಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳು ಮತ್ತು ಸಂಪ್‌ಗಳನ್ನು ಮಂಡಳಿ ಹತ್ತಾರು ವರ್ಷಗಳಾದರೂ ಸ್ವಚ್ಛಗೊಳಿಸಿಲ್ಲ. ಜನರಿಗೆ ಅಶುದ್ಧವಾದ ನೀರು ಪೂರೈಕೆಗೆ ಇದು ಸಹಾ ಕಾರಣವಾಗಿರಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ನೀರು ಪೂರೈಸಿದರೆ ಸಾಕು ಎನ್ನುವ ಮನೋಭಾವ ಮಂಡಳಿಯ ಅಧಿಕಾರಿ ಸಿಬ್ಬಂದಿಯದು. ಇದೇನೇ ಇದ್ದರೂ, ನಗರದ ಅಲ್ಲಲ್ಲಿ ಕಾಣಿಸಿಕೊಂಡಿರುವ ಕರುಳುಬೇನೆ ಮತ್ತು ವಾಂತಿ ಭೇದಿಗೆ ಬಹುತೇಕ ಮಟ್ಟಿಗೆ ಕುಡಿಯುವ ನೀರೇ ಕಾರಣ ಎನ್ನುವ ವರದಿಗಳಿರುವುದರಿಂದ ಬೆಂಗಳೂರು ಜಲಮಂಡಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಗದು. ಜನರಿಗೆ ಶುದ್ಧವಾದ ನೀರು ಪೂರೈಸಬೇಕಾದುದು ಅದರ ಕರ್ತವ್ಯ. ಜೊತೆಗೆ ಬೇಸಿಗೆ ದಿನಗಳ ವ್ಯಾಧಿಗಳಿಗೆ ಕಾರಣವಾಗುವ ಹಾದಿ ಬೀದಿಯ ತಿನಿಸು ಮತ್ತು ಹಣ್ಣು ಹಂಪಲುಗಳ ಮಾರಾಟವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಯಂತ್ರಿಸಬೇಕಿದೆ. ಇವುಗಳ ಜೊತೆಗೆ ಆರೋಗ್ಯ ಇಲಾಖೆಯೂ ಎಚ್ಚೆತ್ತುಕೊಂಡು ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಔಷಧೋಪಚಾರ ಮತ್ತು ಸಿಬ್ಬಂದಿಯ ಕೊರತೆ ಇರದಂತೆ ನೋಡಿಕೊಳ್ಳಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.