ಶನಿವಾರ, ಏಪ್ರಿಲ್ 10, 2021
33 °C

ಕರ್ತವ್ಯಲೋಪ: ಬಿಬಿಎಂಪಿ ಎಂಜಿನಿಯರ್‌ಗಳು ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಎಂಜಿನಿಯರ್‌ಗಳನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತುಪಡಿಸಿ ಪಾಲಿಕೆ ಆಯುಕ್ತ ಸಿದ್ದಯ್ಯ ಅವರು ಆದೇಶ ಹೊರಡಿಸಿದ್ದಾರೆ.ಬಸವನಗುಡಿ ಉಪ ವಿಭಾಗದಲ್ಲಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ರವಿಶಂಕರ್ (ಮಾತೃ ಇಲಾಖೆ- ಲೋಕೋಪಯೋಗಿ) ಹಾಗೂ ಕಿರಿಯ ಎಂಜಿನಿಯರ್ ಪಿ.ಮಂಜುನಾಥ್ (ಮಾತೃ ಇಲಾಖೆ- ಪೌರಾಡಳಿತ ನಿರ್ದೇಶನಾಲಯ) ಅಮಾನತುಗೊಂಡವರು.ರವಿಶಂಕರ್ ಮತ್ತು ಮಂಜುನಾಥ್ ಅವರು ಪಾಲಿಕೆಯಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದರು. ಹನುಮಂತನಗರ ವಾರ್ಡ್ ವ್ಯಾಪ್ತಿಯ ವೀರಭದ್ರಸ್ವಾಮಿ ದೇವಸ್ಥಾನದ ಸುತ್ತಮುತ್ತ ಸಿರಾ ಕಲ್ಲುಗಳ ಮರು ಜೋಡಣೆ ಹಾಗೂ ಡಾ.ಶಿವರಾಮ ಕಾರಂತ ರಸ್ತೆಯ ಮಾರುತಿ ವೃತ್ತದಿಂದ ಹನುಮಂತನಗರ 3ನೇ ಮುಖ್ಯರಸ್ತೆವರೆಗಿನ ಪಾದಚಾರಿ ಮಾರ್ಗದಲ್ಲಿ ಸಿರಾ ಕಲ್ಲು ತೆಗೆದು ಸಾದರಹಳ್ಳಿ ಕಲ್ಲು ಅಳವಡಿಸುವ ಕಾಮಗಾರಿಗೆ ಸಂಬಂಧಪಟ್ಟಂತೆ ಪತ್ರಿಕೆಯಲ್ಲಿ ಈ ಅಧಿಕಾರಿಗಳು ಟೆಂಡರ್ ಪ್ರಕಟಣೆ ನೀಡಿದ್ದರು.ಅದರಂತೆ ಪರಿಶೀಲನೆ ನಡೆಸಿದಾಗ ಶಿವರಾಮ ಕಾರಂತ ರಸ್ತೆಯ ಕೆಲವು ಪಾದಚಾರಿ ಮಾರ್ಗಗಳು ಸುಸ್ಥಿತಿಯಲ್ಲಿರುವುದು ಕಂಡುಬಂದಿದೆ. ಆದರೂ ಈ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಸಿರಾ ಕಲ್ಲುಗಳನ್ನು ತೆರವುಗೊಳಿಸಿ ವೀರಭದ್ರಸ್ವಾಮಿ ದೇವಸ್ಥಾನದ ಸುತ್ತಮುತ್ತ ಮರು ಜೋಡಣೆ ಮಾಡಲು ಸಿದ್ಧತೆ ನಡೆಸಿರುವುದು ಬಯಲಾಗಿದೆ. ಅಲ್ಲದೇ ಈ ಕಾಮಗಾರಿಗೆ ಅಂದಾಜು ಪಟ್ಟಿಯಲ್ಲಿ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿಗಳನ್ನು ದಾಖಲಿಸಿ ದೃಢೀಕರಿಸದಿರುವುದು ಪತ್ತೆಯಾಗಿದೆ.ಹಾಗಾಗಿ ಅಗತ್ಯವಿಲ್ಲದಿದ್ದರೂ ಕಾಮಗಾರಿ ಕೈಗೊಳ್ಳಲು ಟೆಂಡರ್ ಆಹ್ವಾನಿಸಿ, ಪಾಲಿಕೆಗೆ ನಷ್ಟ ಉಂಟು ಮಾಡಲು ಯತ್ನಿಸಿರುವುದನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.