ಸೋಮವಾರ, ಮೇ 10, 2021
26 °C

ಕಲಾಂ ಪ್ರೇರಣೆಯ `ಅಭಿಮನ್ಯು'

ಚಿತ್ರ: ಕೆ.ಎನ್. ನಾಗೇಶ್‌ಕುಮಾರ್ Updated:

ಅಕ್ಷರ ಗಾತ್ರ : | |

`ಮಹಾಭಾರತದ ಅಭಿಮನ್ಯು ಸೋತವನಲ್ಲ. ಆತ ಎಂದೆಂದಿಗೂ ಸರ್ವಶ್ರೇಷ್ಠ ಹೀರೋ'.ತಮ್ಮ `ಅಭಿಮನ್ಯು'ವಿಗೂ ಮಹಾಭಾರತದ ಅಭಿಮನ್ಯುವಿಗೂ ನಡುವಿನ ಸಾಮ್ಯತೆಯನ್ನು ನಟ ಅರ್ಜುನ್ ಸರ್ಜಾ ಬಣ್ಣಿಸಿದ್ದು ಹೀಗೆ. `ಪ್ರಸಾದ್' ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದ ಅರ್ಜುನ್ ಸರ್ಜಾ ಮತ್ತೆ ತವರಿಗೆ ಬಂದಿದ್ದಾರೆ. ಅವರೀಗ ಅರ್ಜುನ ಅಲ್ಲ, `ಅಭಿಮನ್ಯು'. ಜೊತೆಯಲ್ಲಿ ನಿರ್ಮಾಣ ಮತ್ತು ನಿರ್ದೇಶನ ಎಂಬ ಹೊಸ ಅಸ್ತ್ರಗಳನ್ನೂ ತಂದಿದ್ದಾರೆ. ಇಲ್ಲಿ ಶಿಕ್ಷಣ ವ್ಯವಸ್ಥೆಯೇ ಚಕ್ರವ್ಯೆಹ. ಅದನ್ನು ಭೇದಿಸುವ ಅಭಿಮನ್ಯು ಇಲ್ಲಿ ಗೆಲ್ಲುತ್ತಾನೆ. ಅರ್ಜುನ್ ಸರ್ಜಾ ಪ್ರಕಾರ ಮಹಾಭಾರತದಲ್ಲಿಯೂ ಅಭಿಮನ್ಯು ಸೋತವನಲ್ಲ. ಅಲ್ಲಿ ಆತ ನಿಜವಾದ ಹೀರೋ. ಅಂತೆಯೇ ಚಿತ್ರದಲ್ಲಿಯೂ ಅಭಿಮನ್ಯು ಸೋಲುವುದಿಲ್ಲ.ಕನ್ನಡದಲ್ಲಿ ಮೊದಲ ಸಲ ನಿರ್ದೇಶಕನ ಟೋಪಿ ಧರಿಸುತ್ತಿರುವ ಅರ್ಜುನ್ ಸರ್ಜಾ `ಅಭಿಮನ್ಯು'ವಿನ ಕತೆ ಹುಟ್ಟಿದ ಬಗೆಯನ್ನು ತೆರೆದಿಟ್ಟರು. ಅವರಿಗೆ ಪ್ರೇರಣೆ ನೀಡಿದ್ದು ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿದ್ದ ಡಾ. ಅಬ್ದುಲ್ ಕಲಾಂ ಅವರ ಲೇಖನ. ಹೈದರಾಬಾದ್‌ನ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಕಲಾಂ ಅಲ್ಲಿ ಎಲ್ಲಾ ವಿಭಾಗದಲ್ಲಿಯೂ ಮುಂದಿದ್ದ ವಿದ್ಯಾರ್ಥಿನಿಯನ್ನು ಅಭಿನಂದಿಸುತ್ತಾ ಮುಂದೆ ಏನಾಗಬೇಕು ಎಂದುಕೊಂಡಿದ್ದೀಯಾ ಎಂದು ಪ್ರಶ್ನಿಸಿದರಂತೆ. ಅದಕ್ಕೆ ಆ ಪುಟ್ಟ ಹುಡುಗಿ ನೀಡಿದ ಉತ್ತರ: `ನಾನು ಸಾಧಿಸುತ್ತೇನೆಂದು ಬೇರೆ ದೇಶಕ್ಕೆ ಹೋಗಲು ಇಷ್ಟಪಡುವುದಿಲ್ಲ. ಅಭಿವೃದ್ಧಿ ಹೊಂದಿದ ಭಾರತದಲ್ಲಿ ಇರಲು ಬಯಸುತ್ತೇನೆ'. ಈ ಮಾತು ಕಲಾಂ ಅವರನ್ನು ತೀವ್ರವಾಗಿ ಕಾಡಿತಂತೆ.ಇಂಥ ಮಕ್ಕಳಿಗಾಗಿಯಾದರೂ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬೇಕು ಎಂಬ ಆಶಯವನ್ನು ಕಲಾಂ ಆ ಲೇಖನದಲ್ಲಿ ವ್ಯಕ್ತಪಡಿಸಿದ್ದರು. ಸರ್ಜಾರ ಸಿನಿಮಾಕ್ಕೆ ಆ ಮಾತುಗಳೇ ಕಥಾವಸ್ತುವಾಯಿತು. ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ. ಹೇಗಾದರೆ ಚೆನ್ನಾಗಿರುತ್ತದೆ. ಬದಲಾವಣೆ ತರಲು ಏನು ಮಾಡಬೇಕು ಎನ್ನುವುದನ್ನು ಕಮರ್ಷಿಯಲ್ ಸಂಗತಿಗಳನ್ನು ತುಂಬಿ ಸಿನಿಮಾದ ಕಥನ ರೂಪಕ್ಕಿಳಿಸಿದರು ಸರ್ಜಾ. ಸಮಸ್ಯೆಗಳು ಸಾಕಷ್ಟಿವೆ. ದಿನವೂ ಅದನ್ನು ನೋಡುತ್ತೇವೆ, ಮಾತನಾಡುತ್ತೇವೆ. ಆದರೆ ಪರಿಹಾರ ಮಾತ್ರ ಹುಡುಕುವುದಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬ ದಂಡಂ ದಶಗುಣಂ ಮಂತ್ರವನ್ನು ನೆಚ್ಚಿಕೊಂಡು ಇಲ್ಲಿ ಸಮಸ್ಯೆಗೆ ಪರಿಹಾರ ನೀಡುತ್ತಾನೆ. ಗಂಭೀರ ಕಥೆಯಾದರೂ ಅದನ್ನು ಹಾಸ್ಯವೇ ಸುತ್ತುವರಿದಿರುತ್ತದೆಯಂತೆ. ನಗಿಸಲು `ಪಾಂಡು' ಖ್ಯಾತಿಯ ಜಹಾಂಗೀರ್ ಇರಲಿದ್ದಾರೆ. ಕಮರ್ಷಿಯಲ್ ದೃಷ್ಟಿಕೋನದಲ್ಲಿಯೇ ಸಿನಿಮಾ ಸಾಗುತ್ತದೆ. ಆದರೆ ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ ಅವರು.ಅಂದಹಾಗೆ, ಚಿತ್ರಕ್ಕಾಗಿ ಅವರು ಶಿಕ್ಷಣ ವ್ಯವಸ್ಥೆಯ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರಂತೆ. ಹೀಗಾಗಿ ಇದರಲ್ಲಿ ಅಡಕ ಮಾಡುವ ಸಂಗತಿಗಳೆಲ್ಲವೂ ಅಧಿಕೃತ. ಅಧ್ಯಯನ ಇಷ್ಟಕ್ಕೇ ನಿಂತಿಲ್ಲ. ವ್ಯವಸ್ಥೆ ಮತ್ತು ಅದರ ಅಧ್ಯಯನಕ್ಕೆ ಎಲ್ಲೆ ಇರುವುದಿಲ್ಲ. ತೀರಾ ಸಾಮಾನ್ಯ ಎಂಬಂತೆ ಕಾಣುವ ವಿಷಯದ ಒಳಹೊಕ್ಕು ನೋಡಿದಾಗಲೇ ಅದರ ಆಳದ ಅರಿವಾಗುವುದು. ಅಂಥ ಅನುಭವ ಈಗ ಕತೆ ಆಗುತ್ತಿದೆ ಎಂದರು ಸರ್ಜಾ. ಕತೆಯಲ್ಲಿಯೇ ರಭಸವಿದೆ. ಅದಕ್ಕೆ ಪೂರಕವಾದ ಸಾಹಸ ಸನ್ನಿವೇಶಗಳೂ ಚಿತ್ರದಲ್ಲಿದೆ ಎಂದರು. ಕನ್ನಡದ ಜೊತೆಯಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ `ಅಭಿಮನ್ಯು' ಸಿದ್ಧವಾಗಲಿದೆ. ಮತ್ತಷ್ಟು ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ಬಯಕೆ ಅರ್ಜುನ್ ಸರ್ಜಾರಲ್ಲಿದೆ. ಸಹೋದರಿಯ ಮಕ್ಕಳಾದ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಇಬ್ಬರಿಗಾಗಿ ಚಿತ್ರ ಮಾಡುವ ಯೋಜನೆಯೂ ಅವರಲ್ಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.