ಅಂತರರಾಷ್ಟ್ರೀಯ ಮಹಿಳಾ ದಿನ ಜಗತ್ತಿನ ಎಲ್ಲ ಮಹಿಳೆಯರಿಗೂ ಹಲವು ಸತ್ಯಗಳನ್ನು ನೆನಪಿಸುವ ದಿನ. ಶಾಂತಿ, ಸಮಾನತೆ, ಸಾಮಾಜಿಕ ಸ್ಥಾನಮಾನ ಮತ್ತು ಪ್ರಗತಿ ಇವುಗಳಿಗಾಗಿ ಮಹಿಳೆ ಹೋರಾಡಿ ತನ್ನ ಹಕ್ಕುಗಳನ್ನು ಪಡೆಯಬೇಕು ಎಂಬುದು ಇಂದು ಸುಸ್ಪಷ್ಟ. ಹಾಗೆಯೇ ಈ ಹಕ್ಕುಗಳಿಗಾಗಿ ಹೋರಾಡುತ್ತಿರುವ, ತಮ್ಮದೇ ನೆಲೆಯಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಮಹಿಳೆಯರ ಕೊಡುಗೆಯನ್ನು ನಾವಿಂದು ಗುರುತಿಸಬೇಕಾದ ಸಂದರ್ಭ.

ಈ ಬಾರಿಯ ಧ್ಯೇಯ ‘‘ವಿದ್ಯಾಭ್ಯಾಸ, ತರಬೇತಿ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಸಮಾನ ಅವಕಾಶ: ಸೂಕ್ತ ಉದ್ಯೋಗದ ದಾರಿ ಮಹಿಳೆಗೆ’’. ಇದು ಸೆಪ್ಟೆಂಬರ್ 8ರಂದು ಆಗಿಹೋದ ವಿಶ್ವ ಸಾಕ್ಷರತಾ ದಿನದ ‘ಸಾಕ್ಷರತೆ ಮತ್ತು ಸಶಕ್ತೀಕರಣ’(“ಲಿಟರಸಿ ಅಂಡ್ ಎಂಪವರ್ಮೆಂಟ್”) ಎಂಬ ಧ್ಯೇಯಕ್ಕೆ ಪೂರಕವೇ.

ಈ ಕೆಳಗಿನ ಉದಾಹರಣೆಗಳನ್ನು ನೋಡಿ:

ಜಯಾ ಎರಡು ಮಕ್ಕಳ ತಾಯಿ. ಮಕ್ಕಳನ್ನು ಉತ್ತಮ ಶಿಕ್ಷಣದ ಹಂಬಲದಿಂದ ಆಂಗ್ಲ ಮಾಧ್ಯಮಕ್ಕೆ, ಸಿ.ಬಿ.ಎಸ್.ಇ. ಸ್ಕೂಲಿಗೇ ಸೇರಿಸಿದ್ದಾಳೆ. ಜಯಾ ಓದಿದ್ದು 7ನೇ ತರಗತಿ, ಹಾಗಾಗಿ ಈ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡುವುದೆಂದರೆ ಅವಳಿಗೂ ಕಬ್ಬಿಣದ ಕಡಲೆಯೇ. ಟ್ಯೂಷನ್ನಿಗೆ ಕಳಿಸಿದರೆ ಆ ಟೀಚರ್ ಸರಿಯಾಗಿ ಹೇಳಿಕೊಡುತ್ತಾರೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲೂ ಕಷ್ಟವೇ. ಅದರ ಪರಿಣಾಮ ಜಯಾ ಆಗಾಗ ತನ್ನನ್ನೇ ತಾನು ಓದದಿದ್ದಕ್ಕಾಗಿ ಹಳಿದುಕೊಳ್ಳುವುದು.

ಇದು ಜಯಾಳ ವ್ಯಥೆಯಾದರೆ ಕಮಲೆಯದು ಇನ್ನೊಂದು ಕಥೆ. ಕಮಲೆಗೆ ಬಾಲ್ಯದಲ್ಲಿ ಓದುವ ಆಸೆ ಇದ್ದದ್ದು ಬೆಟ್ಟದಷ್ಟು. ಆಕೆಯ ಅಣ್ಣ ಅಷ್ಟೇನೂ ಬುದ್ಧಿವಂತನಲ್ಲ. ಆದರೆ ಗಂಡು ಹುಡುಗ, ಓದದಿದ್ದರೆ ಆದೀತೆ? ಮುಂದೆ ದುಡಿದು ಸಂಸಾರ ಸಾಕಬೇಕಾದವನಲ್ಲವೇ ಆತ? ಹಾಗಾಗಿ ‘ಹೆಣ್ಣು ಹುಡುಗಿ’ ‘ಕಮಲೆ’ಯ ಓದನ್ನು ಹತ್ತನೇ ತರಗತಿಗೆ ಮೊಟಕುಗೊಳಿಸಿ, ಆಕೆಯ ಅಣ್ಣನೊಬ್ಬನೇ ಮುಂದೆ ಓದುವಂತಾಯಿತು. ತನ್ನ ವಯಸ್ಸಿನ ಯುವತಿಯರು ವಿದ್ಯಾಭ್ಯಾಸ ಮುಂದುವರಿಸಿ ಆತ್ಮವಿಶ್ವಾಸದಿಂದ ಪಟಪಟನೆ ಮಾತಾಡುವಾಗ, ಉದ್ಯೋಗದಲ್ಲಿ ತೊಡಗಿರುವಾಗ ಕಮಲೆಗೆ ಅತೀವ ಬೇಸರ.

ಭಾರತದಲ್ಲಿ ಮಹಿಳೆಯ ವಿದ್ಯಾಭ್ಯಾಸದ ಮಟ್ಟ ಹೆಚ್ಚಿರುವಂತೆ ಮೇಲ್ನೋಟಕ್ಕೆ ಎನಿಸಿದರೂ 2007ರ ವರದಿಯೊಂದು, 15 ವರ್ಷ ವಯಸ್ಸಿನ ಮೇಲಿನ ಸಾಕ್ಷರತೆಯನ್ನು ಭಾರತೀಯ ಮಹಿಳೆಯರಲ್ಲಿ ಶೇ 48ಮತ್ತು ಪುರುಷರಲ್ಲಿ ಶೇ 73 ಎಂದು ಗುರುತಿಸುತ್ತದೆ. ಇಲ್ಲಿ ಸಾಕ್ಷರತೆ ಎಂದರೆ ಯಾವುದೇ ಒಂದು ಭಾಷೆಯನ್ನು ಓದಲು, ಬರೆಯಲು ಬರುವುದಷ್ಟೆ. ವಿಶ್ವಸಂಸ್ಥೆಯ ವಿಜ್ಞಾನ-ತಂತ್ರಜ್ಞಾನ-ತರಬೇತಿ-ಉದ್ಯೋಗಾವಕಾಶಗಳ ಸಮಾನತೆಯ ಸಾಧನೆಗೆ ನಾವಿನ್ನೂ ಶ್ರಮಿಸಬೇಕಾದ ಹಾದಿ ಬಹುದೂರ.

ಯುವತಿಯರ ವಿದ್ಯಾಭ್ಯಾಸಕ್ಕೂ, ಅವರ ‘ಜೋರು’ತನಕ್ಕೂ, ಆಧುನಿಕತೆಗೂ, ತಳುಕು ಹಾಕುವ ಮನೋಭಾವ. ಹಾಗಾಗಿ ಹುಡುಗಿಯರಿಗೆ ಹೆಚ್ಚು ವಿದ್ಯಾಭ್ಯಾಸ ಕೊಡಿಸಲು ಸೌಲಭ್ಯಗಳಿದ್ದಾಗ್ಯೂ ಸ್ವತಃ ತಂದೆ-ತಾಯಿಗಳು ಹೆದರುವುದು. ಮದುವೆಗೆ -ಮಹಿಳೆಯ ವಿದ್ಯಾಭ್ಯಾಸಕ್ಕೂ ಎಲ್ಲಿಲ್ಲದ ನಂಟು. ‘‘ಹೆಚ್ಚು ಓದಿದವಳಾದರೆ ನಾಳೆ ಹೊಂದಿಕೊಳ್ಳಲು ಸಾಧ್ಯವಿಲ್ಲ ’’,
‘‘ಹಾಸ್ಟೆಲ್ಲಿದ್ದು, ಓದಿರುವುದರಿಂದ ಹುಡುಗಿ ಜೋರು’’, ‘‘ಇವಳೇ ಎಂ.ಟೆಕ್ ಮಾಡಿದ್ದಾಳೆ, ಇನ್ನು ಇವಳಿಗೆಲ್ಲಿ ಅದಕ್ಕಿಂತ ಹೆಚ್ಚು ಓದಿರುವ ಹುಡುಗ ಸಿಗಲು ಸಾಧ್ಯ?’’ - ಹೀಗೆ ಓದು ವಿರೋಧಿಸುವ ಪಟ್ಟಿ ತುಂಬಾ ಉದ್ದ !

ಇದಕ್ಕೆ ಕಾರಣಗಳು ಹಲವಾರು:
*ಲಿಂಗ ತಾರತಮ್ಯ
*ಆರ್ಥಿಕ ಸಮಸ್ಯೆಗಳು
*ಮನೆ ಕೆಲಸಗಳಲ್ಲಿ ದುಡಿಸಿಕೊಳ್ಳುವುದು
*ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಮದುವೆ.
*ಬಾಲಕಿಯರ ಸುರಕ್ಷತೆಯ ಬಗೆಗಿನ ಹೆದರಿಕೆ,

ಹತ್ತನೇ ತರಗತಿಯಲ್ಲಿ ಬಾಲಕಿಯರೇ ಎಂದಿಗೂ ಮೇಲುಗೈ ಸಾಧಿಸಿದರೂ, ಅದನ್ನು ಮುಂದುವರಿಸುವ ಅವಕಾಶ ಕೆಲವರಿಗೆ ಮಾತ್ರ.

ನಿರಂತರ ಶೋಷಣೆಯನ್ನು ಸಹಿಸುತ್ತಾ ಬಂದಿದ್ದ ಸ್ತ್ರೀ ಸಮುದಾಯ ಮೂಕವಾಗಿ ನರಳುತ್ತಿದ್ದುದನ್ನು ಬದಿಗೊತ್ತಿ, ತಮ್ಮ ಭಾವನೆಗಳಿಗೆ ಧ್ವನಿ ಕೊಡಲು, ಹಲವಾರು ಸಾಧನಗಳನ್ನು ಉಪಯೋಗಿಸಲು ವಿದ್ಯೆ, ಉನ್ನತ ಶಿಕ್ಷಣ ನೆರವಾಗಿದೆ.

ಡಿಗ್ರಿ ಪಡೆದವರೆಲ್ಲಾ ಸುಶಿಕ್ಷಿತರಾಗಿರಬೇಕೆಂದಿಲ್ಲ ಎಂಬ ವಾದ ಯಾವಾಗಲೂ ನಿಜವಲ್ಲ. ವ್ಯಕ್ತಿ ಆತ್ಮವಿಶ್ವಾಸದಿಂದ ಮುನ್ನಡೆಯಲು, ಜೀವನ ಕೌಶಲಗಳನ್ನು ರೂಢಿಸಿಕೊಳ್ಳಲು ಶಿಕ್ಷಣ ಬಹು ಮುಖ್ಯ. ಮುಂದೆ ಸಿಗಬಹುದಾದ ವರನಿಗಾಗಿ, ವರದಕ್ಷಿಣೆಗೆ ದುಡ್ಡನ್ನುಳಿಸುವ ಸಲುವಾಗಿ ಮಗಳನ್ನು ಓದಿಸದಿರುವುದು ಮೂರ್ಖತನವೇ. ಅಶಿಕ್ಷಿತ ಹೆಣ್ಣಿನ ಮೌನದಿಂದ, ಪ್ರತಿಭಟಿಸದ ನರಳುವಿಕೆಯಿಂದ, ಹೆಣ್ಣಿಗೆ ವಿದ್ಯಾಭ್ಯಾಸ ದೊರಕದಿದ್ದಾಗ ‘ಮದುವೆ’ಗಳು ‘ಸುಖ’ವಾಗಿ ಉಳಿಯುತ್ತಿದ್ದವು.

ಹೆಣ್ಣಿಗೆ ತನ್ನ ಶೋಷಣೆಯ ಅರಿವು ಉಂಟಾದಷ್ಟೂ, ಸಮಾಜ ಅವಳ ಪ್ರತಿಭಟನೆಯನ್ನು ಲೆಕ್ಕಿಸದಷ್ಟೂ, ‘ಮದುವೆ’ಗಳು ಮುರಿಯಲಾರಂಭಿಸಿದವು ಎಂಬುದು ಸಾಮಾಜಿಕ ಅಧ್ಯಯನಗಳು ಕಂಡುಕೊಂಡ ಸಂಶೋಧನಾ ಸತ್ಯಗಳು.
ನೀವು ವಿದ್ಯಾಭ್ಯಾಸದಿಂದ ಅವಕಾಶ ವಂಚಿತರಾದ ಮಹಿಳೆಯರಾಗಿದ್ದಲ್ಲಿ -

* ಕೀಳರಿಮೆಯಿಟ್ಟುಕೊಳ್ಳಬೇಡಿ.
* ಜ್ಞಾನಾರ್ಜನೆಗೆ ಅವಕಾಶಗಳು ಇಂದು ಬಹಳಷ್ಟು.
* ಕನಿಷ್ಠ ಕನ್ನಡ ಓದು -ಬರಹ ಕಲಿಯಲೇ ಬೇಕು.
* ಒಳ್ಳೆಯ ಪುಸ್ತಕಗಳನ್ನು ನಿಯತಕಾಲಿಕೆಗಳನ್ನು ಓದಿ, ಕಾಡುಹರಟೆಯಲ್ಲಿ ಸಮಯ ಹರಣ ಮಾಡಬೇಡಿ.
* ‘‘ಏನೂ ಓದಿಲ್ಲ, ಹಳ್ಳಿ ಗೊಡ್ಡು’’ ಎಂದು ಪತಿ / ಸಂಬಂಧಿಕರು / ಮಕ್ಕಳು ಮೂದಲಿಸುವ ಅವಕಾಶ ಕೊಡಬೇಡಿ. ಹಾಗೆಯೇ ನಿಮಗಿಂತ ಹೆಚ್ಚು ವಿದ್ಯಾವಂತರಾದ ಮಹಿಳೆಯರ ಬಳಿ ಅಸಹನೆಯಿಂದ ವರ್ತಿಸಬೇಡಿ.

ಜಗತ್ತಿನ ಎಲ್ಲಾ ಕೆಳವರ್ಗಗಳಲ್ಲಿ, ದೈಹಿಕ ಕೆಲಸ ಕಾರ್ಯಗಳಲ್ಲಿ ಮಹಿಳೆಯ ಪಾಲು ದೊಡ್ಡದು. ಆದರೆ ಹಣದ ರೂಪದಲ್ಲಾಗಲೀ, ಗೌರವದ ರೂಪದಲ್ಲಾಗಲೀ ಅದರ ಗುರುತಿಸುವಿಕೆ ಗೌಣವೇ. ಬೌದ್ಧಿಕವಾಗಿ ಮಹಿಳೆಯ ಸಾಮರ್ಥ್ಯಗಳು ಹೆಚ್ಚಿನ ಪುರುಷರಿಂದ, ಸ್ವತಃ ಮಹಿಳೆಯರಿಂದ ಕಡೆಗಣಿಸಲ್ಪಟ್ಟಿವೆ ಎನ್ನಬಹುದು.

ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದ ಮಹಿಳೆ ಅವಕಾಶ ಸಿಕ್ಕರೆ ಎಲ್ಲ ಕ್ಷೇತ್ರಗಳಲ್ಲೂ ಗಟ್ಟಿಯಾಗಿ ನಿಲ್ಲಬಲ್ಲಳು. ಸಮಾಜವನ್ನು ಮುನ್ನಡೆಸಬಲ್ಲಳು ಎಂಬ ಸತ್ಯವನ್ನು ಪುರುಷರು, ಮಹಿಳೆಯರು, ಒಟ್ಟು ಸಮಾಜ ಇಂದು ಸ್ವೀಕರಿಸಿ, ಸ್ವಾಗತಿಸಬೇಕಾಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಮತ್ತೊಮ್ಮೆ ಎಲ್ಲ ಹುಡುಗಿಯರಿಗೆ, ಯುವತಿಯರಿಗೆ, ಮಹಿಳೆಯರಿಗೆ ಕಲಿ ಕಲಿ ನಲಿ ನಲಿ !!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.