ಶುಕ್ರವಾರ, ಮೇ 29, 2020
27 °C

ಕಲ್ಲಿದ್ದಲು ಕೊರತೆಯ ಹುನ್ನಾರ?

ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ಕಲ್ಲಿದ್ದಲು ಕೊರತೆಯ ಹುನ್ನಾರ?

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಾಡಿಗೆ ಬೆಳಕು ನೀಡುವ `ಶಕ್ತಿ~ ಕೇಂದ್ರ. ಎಂಟು ಘಟಕಗಳನ್ನು ಹೊಂದಿರುವ  ಸ್ಥಾವರ ಇರುವ ಪ್ರದೇಶಕ್ಕೆ  ಶಕ್ತಿನಗರ ಎಂದೇ ಹೆಸರು.

 

ಎರಡೂವರೆ ದಶಕಗಳಿಂದ ವಿದ್ಯುತ್ ಉತ್ಪಾದನೆ ಮಾಡಿ ನಾಡಿಗೆ ಪೂರೈಸುತ್ತ ಬಂದ ಹೆಗ್ಗಳಿಕೆ ಈ ಸ್ಥಾವರದ ಏಳು ಘಟಕಗಳದ್ದು. ಈ `ಶಕ್ತಿ~ ಈಗ ದಿನದಿಂದ ದಿನಕ್ಕೆ ಉಡುಗಿ ಹೋಗುತ್ತಿದೆ.ಕಲ್ಲಿದ್ದಲು ಕೊರತೆ, ಕಚ್ಚಾ ಕಲ್ಲಿದ್ದಲು ಬಳಕೆ ಮತ್ತು ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಕಾರಣಗಳಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಆಗಾಗ ಅಡಚಣೆ ಎದುರಾಗುತ್ತಿದೆ. ಕಳೆದ 20 ದಿನಗಳಿಂದ ಆರ್‌ಟಿಪಿಎಸ್ ಘಟಕಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ.ಆಂಧ್ರಪ್ರದೇಶದ ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದಿರುವ ಹೋರಾಟದಲ್ಲಿ ಪಾಲ್ಗೊಂಡಿರುವುದು ಮತ್ತು ಆ ರಾಜ್ಯದಲ್ಲಿ ನಡೆಯುತ್ತಿರುವ ರೈಲ್ವೆ ತಡೆ ಪ್ರತಿಭಟನೆ ಇದಕ್ಕೆ ಮುಖ್ಯ ಕಾರಣ.ತೆಲಂಗಾಣ ಹೋರಾಟ ಉಲ್ಬಣಗೊಂಡು ಐದಾರು ತಿಂಗಳುಗಳಾಗಿವೆ. ರೈಲು ತಡೆ ಪ್ರತಿಭಟನೆ ನಡೆಸುವ ಬಗ್ಗೆ ಹೋರಾಟಗಾರರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.ಈ ಬೆಳವಣಿಗೆಗಳನ್ನು ಕರ್ನಾಟಕ ವಿದ್ಯುತ್ ನಿಗಮದ ಉನ್ನತ ಅಧಿಕಾರಿಗಳು ಅಥವಾ ಆರ್‌ಟಿಪಿಎಸ್ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿದ್ದರೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳಬಹುದಿತ್ತು. ಕಲ್ಲಿದ್ದಲನ್ನು ಬೇರೆ ಮಾರ್ಗದಿಂದ ಸರಬರಾಜು ಮಾಡಿಕೊಳ್ಳುವಂಥ ಪರ್ಯಾಯ ಕ್ರಮದ ಬಗ್ಗೆಯೂ ಯೋಚನೆ ಮಾಡಬಹುದಿತ್ತು. ಆದರೆ, ಇದ್ಯಾವುದನ್ನು ಕೆಪಿಸಿ ಮಾಡಿಲ್ಲ. ರಾಜ್ಯವನ್ನು ಪೂರ್ಣವಾಗಿ ಕತ್ತಲೆ ಆವರಿಸಿದ ಮೇಲೆ ಇದು ನಿಧಾನವಾಗಿ ಕಣ್ಣು ಬಿಡುತ್ತಿದೆ.ಕಲ್ಲಿದ್ದಲೇ ಮುಖ್ಯ ಸಮಸ್ಯೆ:  ಕಲ್ಲಿದ್ದಲು ಮೊದಲಿನಿಂದಲೂ ಇಲ್ಲಿನ ಮುಖ್ಯ ಸಮಸ್ಯೆ. ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆಗೆ ಈಗ ತೆಲಂಗಾಣ ಚಳವಳಿ ಅಡಚಣೆಯಾಗಿರಬಹುದು. ಚಳವಳಿ ಇಲ್ಲದ ದಿನಗಳಲ್ಲಿಯೂ ಇಲ್ಲಿ ಸಮಸ್ಯೆ ಇತ್ತು. ಕಲ್ಲಿದ್ದಲಿನ ಗುಣಮಟ್ಟವೂ ಇದಕ್ಕೆ ಕಾರಣ.ಆಂಧ್ರಪ್ರದೇಶದ ಸಿಂಗರೇಣಿ, ಮಹಾರಾಷ್ಟ್ರದ ಡಬ್ಲ್ಯುಸಿಎಲ್ ಮೈನ್, ಮತ್ತು ಒರಿಸ್ಸಾದ ತಾಲ್ಚೇರಿಯಿಂದ ಆರ್‌ಟಿಪಿಎಸ್ ಕಲ್ಲಿದ್ದಲು ಖರೀದಿಸುತ್ತದೆ. ಗುಣಮಟ್ಟದ ದೃಷ್ಟಿಯಿಂದ ಆಂಧ್ರಪ್ರದೇಶದ ಸಿಂಗರೇಣಿ ಕಲ್ಲಿದ್ದಲು  ಉತ್ತಮವಾಗಿದೆ. ಇತರ ಗಣಿಗಳಿಂದ ಪೂರೈಕೆ ಆಗುತ್ತಿರುವ ಕಲ್ಲಿದ್ದಲು ಗುಣಮಟ್ಟ ಉತ್ತಮವಾಗಿಲ್ಲ ಎಂಬುದು ಆರ್‌ಟಿಪಿಎಸ್ ತಜ್ಞರ ಅಭಿಪ್ರಾಯ. ಕಸ ಕಡ್ಡಿ, ತೋಯ್ದ ಕಲ್ಲಿದ್ದಲು (ವೆಟ್ ಕೋಲ್), ಭಾರಿ ಗಾತ್ರದ ಕಲ್ಲುಗಳು, ಉಸುಕು, ಬೂದಿಯೇ ಹೆಚ್ಚಿನ ಪ್ರಮಾಣದಲ್ಲಿರುವುದು ಕಳಪೆ ಕಲ್ಲಿದ್ದಲಿನ ಪ್ರಮುಖ ಅಂಶಗಳು.ಕಳಪೆ ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನೆ ಘಟಕಗಳಿಗೆ ಬಳಸುವುದರಿಂದ ಸಮರ್ಪಕ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಅಸಾಧ್ಯ. ದೊಡ್ಡ ಗಾತ್ರದ ಕಲ್ಲುಗಳು ಮಿಲ್‌ನಲ್ಲಿ ಪುಡಿಯಾಗುವುದಿಲ್ಲ. ಘಟಕಗಳ ಟರ್ಬೈನ್‌ಗಳು ಸ್ಥಗಿತಗೊಳ್ಳುತ್ತವೆ. ಹೆಚ್ಚು ಎಣ್ಣೆ ಬಳಸಿದರೆ ಆವಿ ಪೂರೈಸುವ ಕೊಳವೆಗಳ ಮೇಲೆ ಒತ್ತಡ ಹೆಚ್ಚಾಗಿ ರಂಧ್ರಗಳು ಬೀಳುತ್ತವೆ.ಈ ರೀತಿ ರಂಧ್ರ ಬಿದ್ದು ಆವಿ ಸೋರಿಕೆ ಆಗುತ್ತದೆ. ಒಂದು ಸೂಜಿ ಮೊನೆಯಷ್ಟು ಗಾತ್ರದ ರಂಧ್ರ ಬಿದ್ದರೂ ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತ ಮಾಡಲೇಬೇಕು. ಈ ರೀತಿ ಸ್ಥಗಿತಗೊಂಡ ಘಟಕ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಲು ಒಂದು ದಿನವಾದರೂ ಬೇಕು ಎನ್ನುತ್ತಾರೆ ಆರ್‌ಟಿಪಿಎಸ್‌ನ ತಜ್ಞರು. ಈ ಪರಿಸ್ಥಿತಿಯಲ್ಲಿ ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದನೆ ನಿರೀಕ್ಷೆ ಮಾಡುವುದಾದರೂ ಹೇಗೆ?ಕಲ್ಲಿದ್ದಲು ಸಂಗ್ರಹದ ಬಗ್ಗೆ ನಿರ್ಲಕ್ಷ್ಯ: ಸಿಂಗರೇಣಿ ಗಣಿಯಿಂದ ಪೂರೈಕೆಯಾಗುತ್ತಿದ್ದ ಕಲ್ಲಿದ್ದಲು ಸ್ಥಗಿತಗೊಂಡಿರುವುದು ಇತ್ತೀಚಿನ ಸಮಸ್ಯೆ. ಆದರೆ ಸಾಮಾನ್ಯ ದಿನಗಳಲ್ಲೂ ಗರಿಷ್ಠ ಪ್ರಮಾಣದ ಕಲ್ಲಿದ್ದಲು ಖರೀದಿಸುವ ಪ್ರಯತ್ನ ನಡೆದೇ ಇಲ್ಲ. ಕೇವಲ 1.8 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲಿಗಷ್ಟೇ ತನ್ನ ಸಂಗ್ರಹವನ್ನು ಕೆಪಿಸಿ ಸೀಮಿತಗೊಳಿಸಿದೆ.ಸಿಂಗರೇಣಿ ಕಲ್ಲಿದ್ದಲು ಗುಣಮಟ್ಟದಲ್ಲಿ ಉತ್ತಮ. ಒರಿಸ್ಸಾದ ತಾಲ್ಚೇರಿ ಮತ್ತು ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್ ಕಲ್ಲಿದ್ದಲು ಕಳಪೆ ಎಂಬುದು ಆರ್‌ಟಿಪಿಎಸ್ ಮತ್ತು ಕೆಪಿಸಿಗೆ ಗೊತ್ತಿರುವ ಸಂಗತಿಯೇ. ಈ ಹಿನ್ನೆಲೆಯಲ್ಲಿ ಸಿಂಗರೇಣಿಯಿಂದಲೇ ಗರಿಷ್ಠ ಪ್ರಮಾಣದ ಕಲ್ಲಿದ್ದಲು ಸಂಗ್ರಹಕ್ಕೆ ಮುಂದಾಗಬಹುದಿತ್ತು. ಅದನ್ನೂ ಮಾಡಲಿಲ್ಲ. ಜೈರಾಜ್ ಅವರು ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ 6 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಮಾಡಲಾಗಿತ್ತು. ಆಗ ತೆಲಂಗಾಣ ಹೋರಾಟ, ರೈಲು ತಡೆ ಪ್ರತಿಭಟನೆ, ಭಾರಿ ವಿದ್ಯುತ್ ಬೇಡಿಕೆಯ ಒತ್ತಡ ಯಾವುದೂ ಇರಲಿಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಗರಿಷ್ಠ ಪ್ರಮಾಣದ ಕಲ್ಲಿದ್ದಲು ಸಂಗ್ರಹ ಮಾಡಲಾಗಿತ್ತು. ಇದು ಆಗಿನ ಆಡಳಿತ ವರ್ಗ ಹೊಂದಿದ್ದ ದೂರದೃಷ್ಟಿ.

 

ತೆಲಂಗಾಣ ಹೋರಾಟ ಚುರುಕುಗೊಂಡರೆ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆ ಸ್ಥಗಿತ ಆಗುತ್ತದೆ. ತಾಲ್ಚೇರಿ ಮತ್ತು ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್‌ನಿಂದ ಪೂರೈಕೆ ಆಗುವ ಕಲ್ಲಿದ್ದಲು ಕಳಪೆ ಎಂಬ ಸಂಗತಿಗಳು ಆಡಳಿತ ವರ್ಗಕ್ಕೆ ಗೊತ್ತಿದ್ದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದೇಕೆ?ಈಗಿನ ಸ್ಥಿತಿಗೆ ಕಾರಣಗಳು: ಸಿಂಗರೇಣಿಯಿಂದ ಹೆಚ್ಚು ಕಲ್ಲಿದ್ದಲು ಖರೀದಿಸಬೇಕಾದರೆ ಮುಂಗಡವಾಗಿ ಹಣ ಪಾವತಿಸಬೇಕಾಗುತ್ತದೆ. ಅದನ್ನು ಸರ್ಕಾರ ಮಾಡಲಿಲ್ಲ. ಇದೇ ವೇಳೆ ವಿದ್ಯುತ್ ಬೇಡಿಕೆಯ ಒತ್ತಡ, ಮತ್ತು ಕಲ್ಲಿದ್ದಲು ಕೊರತೆ -ಎರಡೂ ಹೆಚ್ಚಾಯಿತು. ಈ ಮೂಲಕ ಸರ್ಕಾರವೇ ಅನಿವಾರ‌್ಯವಾಗಿ ದುಬಾರಿ ದರದಲ್ಲಿ ವಿದ್ಯುತ್ ಖರೀದಿ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ದುಬಾರಿ ವಿದ್ಯುತ್ ಖರೀದಿಗೆ ಸರ್ಕಾರ ತೋರುತ್ತಿರುವ ಆಸಕ್ತಿಗೆ `ಕಿಕ್‌ಬ್ಯಾಕ್ ಲಾಬಿ~ ಕೂಡಾ ಕಾರಣ ಎಂಬ ಆರೋಪ ಇದೆ.ತೊಳೆದ ಕಲ್ಲಿದ್ದಲು ವಿವಾದ ಕೂಡಾ ಈಗಿನ ಸ್ಥಿತಿಗೆ ಕಾರಣ. ಮೂರು ವರ್ಷಗಳ ಹಿಂದೆ ಈ ಘಟಕಗಳಿಗೆ ತೊಳೆದ ಕಲ್ಲಿದ್ದಲನ್ನು  ಬಳಸಲಾಗುತ್ತಿತ್ತು. ಇದರಿಂದ ಘಟಕಗಳ ಮೇಲೆ ಹೆಚ್ಚಿನ ಒತ್ತಡ ಬೀಳದೆ ತಾಂತ್ರಿಕ ಸಮಸ್ಯೆ ಇಲ್ಲದೆ  ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ತೊಳೆದ ಕಲ್ಲಿದ್ದಲು ದುಬಾರಿ ಮತ್ತು ಅದರ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕಾರಣ ನೀಡಿ  ಮೂರು ವರ್ಷಗಳ ಹಿಂದೆ ತೊಳೆದ ಕಲ್ಲಿದ್ದಲು ಬಳಕೆ ಸ್ಥಗಿತಗೊಳಿಸಲಾಯಿತು.ಕಚ್ಚಾ ಕಲ್ಲಿದ್ದಲು ಬಳಸಿದರೂ ವಿದ್ಯುತ್ ಉತ್ಪಾದನೆ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂದ ಕರ್ನಾಟಕ ವಿದ್ಯುತ್ ನಿಗಮದ ಆಡಳಿತ ಮಂಡಳಿಯು ಕಚ್ಚಾ ಕಲ್ಲಿದ್ದಲನ್ನೇ ಬಳಸಲು ನಿರ್ಧರಿಸಿತು. ತೊಳೆದ ಕಲ್ಲಿದ್ದಲು ಬಳಕೆ ಸ್ಥಗಿತ ಮಾಡಿ ಕಚ್ಚಾ ಕಲ್ಲಿದ್ದಲನ್ನೇ ಬಳಕೆ ಮಾಡುವುದರಿಂದ ವರ್ಷಕ್ಕೆ 500 ಕೋಟಿ ರೂಪಾಯಿ ಕರ್ನಾಟಕ ವಿದ್ಯುತ್ ನಿಗಮಕ್ಕೆ ಉಳಿತಾಯ ಆಗುತ್ತದೆ ಎಂಬುದನ್ನು ಕೆಪಿಸಿಯ ಆಗಿನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ ಜಾಮದಾರ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು.ಆದರೆ ಇದರಿಂದ ಸೃಷ್ಟಿಯಾಗಿರುವ ಸಮಸ್ಯೆಯಿಂದ ಆಗುತ್ತಿರುವ ನಷ್ಟ ಸಾವಿರಾರು ಕೋಟಿ ರೂಪಾಯಿ ಎನ್ನುವುದನ್ನು ಯಾರೂ ಹೇಳುತ್ತಿಲ್ಲ. ಈ ನಡುವೆ ತೊಳೆದ ಕಲ್ಲಿದ್ದಲು ಸ್ಥಗಿತಗೊಂಡ ಬಳಿಕ ಆರ್‌ಟಿಪಿಎಸ್‌ನ ಘಟಕಗಳಿಗೆ ತಾಂತ್ರಿಕ ತೊಂದರೆ ಆಗುತ್ತದೆ ಎಂಬುದನ್ನು ಬಿಂಬಿಸಲು ಯಂತ್ರಗಳ ನಿರ್ವಹಣೆಯನ್ನೇ ಕೆಲವು ತಂತ್ರಜ್ಞರು ಏರುಪೇರು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.ಕಚ್ಚಾ ಕಲ್ಲಿದ್ದಲು ಬಳಸಲು ಪ್ರಾರಂಭಿಸಿದ ದಿನದಿಂದ ಒಂದಿಲ್ಲೊಂದು ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಆರ್‌ಟಿಪಿಎಸ್‌ನಲ್ಲೇ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ತಜ್ಞರ ಪಡೆಯನ್ನು ರಚನೆ ಮಾಡಿದ ಕೆಪಿಸಿ.ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಸಲಹೆ ಕೋರಿತ್ತು. ಘಟಕಗಳಿಗೆ ಕಲ್ಲಿದ್ದಲು ಪೂರೈಕೆ ಆಗುವ ನಿರ್ದಿಷ್ಟ ಸ್ಥಳದಲ್ಲಿ ಜಾಲರಿ (ಸಾಣಿಗೆ) ಅಳವಡಿಸಿದರೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದನ್ನು ಆ ತಜ್ಞರ ತಂಡವು ನೀಡಿತ್ತು. ಇದನ್ನೇ ಅನುಸರಿಸಲು ಕಟ್ಟುನಿಟ್ಟಿನ ಆದೇಶವನ್ನು ಆರ್‌ಟಿಪಿಎಸ್ ಅಧಿಕಾರಿಗಳಿಗೆ ನೀಡಿದ ಕೆಪಿಸಿಯು ಮತ್ತೆ ಆರ್‌ಟಿಪಿಎಸ್‌ನತ್ತ ಕಣ್ತೆರೆದು ನೋಡಲಿಲ್ಲ.ಬದಲಾಗಿ ವರ್ಗಾವಣೆ ಭೀತಿ ಎದುರಿಸುತ್ತಿರುವ ಆರ್‌ಟಿಪಿಎಸ್‌ನ ಹಿರಿಯ, ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಒತ್ತಡದಲ್ಲಿ ಈಗ ಕೆಲಸ ಮಾಡುತ್ತಿದ್ದಾರೆ. ಕಲ್ಲಿದ್ದಲು ಇಲ್ಲದೆ ಇವರಾದರೂ ಏನು ಮಾಡಲು ಸಾಧ್ಯ? ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸಬಹುದು, ಕಲ್ಲಿದ್ದಲನ್ನು ಹೇಗೆ ಉತ್ಪಾದಿಸಲು ಸಾಧ್ಯ?                      

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.