ಭಾನುವಾರ, ಮಾರ್ಚ್ 7, 2021
30 °C

ಕಷ್ಟವೆಂಬ ಉಳಿ ಪೆಟ್ಟು...

ಪೃಥ್ವಿರಾಜ್ ಎಂ.ಎಚ್. Updated:

ಅಕ್ಷರ ಗಾತ್ರ : | |

ಕಷ್ಟವೆಂಬ ಉಳಿ ಪೆಟ್ಟು...

ಶಿಲೆಗೆ ಉಳಿ ಏಟು ಬಿದ್ದರೆ ಮಾತ್ರ ಅದು ಶಿಲ್ಪವಾಗುವುದು ಎಂಬ ನಾಣ್ಣುಡಿಯಂತೆ ಮನುಷ್ಯನಿಗೆ ಕಷ್ಟಗಳೆಂಬ ಉಳಿ ಏಟು ಬಿದ್ದರೆ ಬದುಕು ಹಸನಾಗುತ್ತದೆ ಎಂದು ನಂಬಿದ ಸಾಧಕರಿವರು...

ಆರತಿ ನಾಯಕ್‌

ಅದು ಕುಗ್ರಾಮ. ಮಗಳು ಓದುತ್ತಿರುವುದು ತಂದೆಗೆ ಇಷ್ಟವಿರಲಿಲ್ಲ. ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ... ಎನ್ನುವಂತೆ ಆ ಹುಡುಗಿ ಹತ್ತನೆ ತರಗತಿಯಲ್ಲಿ ಅನುತ್ತೀರ್ಣಳಾದಳು. ಮುಂದೆ ಮನೆಯಲ್ಲಿ ಬಂಧಿಯಾಗಬೇಕಾಯಿತು.  ನಾಲ್ಕು ಗೋಡೆಗಳ ಮಧ್ಯೆ ಬದುಕು ನೂಕುತ್ತ ಸವಾಲಿಗೆ ಎದೆ ಕೊಟ್ಟು ಚಿನ್ನದಂತಹ ಜೀವನ ರೂಪಿಸಿಕೊಂಡು, ಸಮಾಜಕ್ಕೂ ಕಾಣಿಕೆ ನೀಡಿದ ಯುವತಿ ಆರತಿಯ ಯಶೋಗಾಥೆ ಇದು.

   ಆರತಿ ಫೇಲ್‌ ಆದ ಮೇಲೆ ಮನೆ ಕೆಲಸದ ಹುಡುಗಿಯಾದಳು. ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು  ಹೂವಿನ ಹಾರ ಕಟ್ಟಿ ನಿತ್ಯ ಒಂಬತ್ತು ರೂಪಾಯಿಗಳನ್ನು ಸಂಪಾದಿಸಿ ಕೂಡಿಡುತ್ತಿದ್ದಳು. ಪಾಸಾಗಿ ಕಾಲೇಜಿಗೆ ಹೋಗಬೇಕೆಂಬ ಆಸೆ ಬತ್ತಿರಲಿಲ್ಲ. ಮೂರು ವರ್ಷಗಳ ಬಳಿಕ ಪರೀಕ್ಷೆ ಕಟ್ಟಿ ಶೇ 70ರಷ್ಟು ಅಂಕಗಳನ್ನು ಪಡೆದು  ಪಾಸಾದರೂ ಕಾಲೇಜು ಮೆಟ್ಟಿಲು ಹತ್ತಲು ಸಾಧ್ಯವಾಗಲಿಲ್ಲ. ಇದರಿಂದ ಬೇಜಾರು ಮಾಡಿಕೊಳ್ಳದ ಆರತಿ ದೂರ ಶಿಕ್ಷಣದಲ್ಲಿ ಪಿಯುಸಿಗೆ ಸೇರಿದರು. ತನ್ನ ವಿದ್ಯಾಭ್ಯಾಸದ ಜೊತೆಗೆ ಸಂಜೆ ಸಮಯದಲ್ಲಿ ನೆರೆಹೊರೆಯ ಮಕ್ಕಳಿಗೂ ಉಚಿತವಾಗಿ ಮನೆ ಪಾಠ ಹೇಳಿಕೊಡುತ್ತಿದ್ದರು.  ಐದು ವರ್ಷಗಳ ಬಳಿಕ ಆರತಿ ವಿಶ್ವಸಂಸ್ಥೆಯ ‘ಅತ್ಯುತ್ತಮ ಗ್ರಾಮೀಣ ಯುವ ಸಾಧಕಿ’ ಎಂಬ ಪ್ರಶಸ್ತಿ ಪಡೆಯುವ ಮೂಲಕ ದೇಶದ ಗಮನ ಸೆಳೆದರು. ‘ಸಖಿ’ ಎಂಬ ಸ್ವಯಂ ಸೇವಾ ಸಂಸ್ಥೆ ಕಟ್ಟಿಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲಿಷ್‌ ಹೇಳಿ ಕೊಡುತ್ತಿದ್ದಾರೆ.

ಆರತಿ ವಿಜ್ಞಾನ ನಿಕಾಯದಲ್ಲಿ ಪದವಿ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್‌ ಕಲಿಸುವ ಗುರಿ ಹೊಂದಿದ್ದಾರೆ. ವಿದೇಶಿ ಸಂಸ್ಥೆಗಳಿಂದ ‘ಉಚಿತ ಮನೆ ಪಾಠಕ್ಕಾಗಿ’ ದೇಣಿಗೆ ಪಡೆಯುತ್ತಿರುವ ಸಖಿ ಸಂಸ್ಥೆ ಈಗಾಗಲೇ 250 ಹಳ್ಳಿಗಳಲ್ಲಿ ಇಂಗ್ಲಿಷ್‌ ಪಾಠ ಹೇಳಿಕೊಡುತ್ತಿದೆ. ಇದನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕನಸು ಆರತಿ ಅವರದ್ದು. ಸಾಧನೆ ಅಸಾಮಾನ್ಯವಾಗಿರಬೇಕು ಎಂಬುದಕ್ಕೆ ಆರತಿ ಅವರೇ ಸಾಕ್ಷಿ ಅಲ್ಲವೇ! 

ಪರಮ್‌ ಶಾ

ನಾನು ವೈಶಾಲಿ ಶಾದುಂಗುಲೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸಮೀಪ ನನ್ನ ಊರು. ಹತ್ತನೇ ತರಗತಿ ಪಾಸಾಗುತ್ತಿ ದ್ದಂತೆ ಮನೆಯಲ್ಲಿ ಮದುವೆ ಸಿದ್ಧತೆ ಮಾಡತೊಡಗಿದರು. ಮದುವೆ ಇಷ್ಟವಿಲ್ಲ ನಾನು ಕಾಲೇಜಿಗೆ ಹೋಗಬೇಕು ಎಂದು ಮನೆಯವರ ಬಳಿ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದು ರಾತ್ರಿ ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಿದ್ದೆ.ಮುಂಜಾನೆ 4 ಗಂಟೆಗೆ ಸಮೀಪದ ರೈಲು ನಿಲ್ದಾಣಕ್ಕೆ ಬಂದು ಭೋಪಾಲ್‌ ರೈಲು ಹತ್ತಿ ಕುಳಿತೆ. ಕೈಯಲ್ಲಿ ನಯಾ ಪೈಸೆ ಇರಲಿಲ್ಲ. ಟಿಕೆಟ್‌ ಇಲ್ಲದೆ ಪ್ರಯಾಣಿಸಿ ಭೋಪಾಲ್‌ ತಲುಪಿದೆ. ಟೆಲಿಫೋನ್‌ ಬೂತ್‌ ಮಾಲೀಕರ ಸಹಾಯ ಪಡೆದು ಗೆಳತಿಗೆ ಕರೆ ಮಾಡಿದೆ. ಅವಳು ಸಕಾಲಕ್ಕೆ ಬಂದು ನೆರವಾದಳು. ಸ್ಥಳೀಯ ಕಚೇರಿಯೊಂದರಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡೆ. ಆಗ ನನಗೆ ತಿಂಗಳಿಗೆ 750 ರೂಪಾಯಿ ಸಂಬಳ. ಕೆಲಸ ಮಾಡುತ್ತಲೇ ಸಂಜೆ ಕಾಲೇಜೊಂದರಲ್ಲಿ ಪಿಯುಸಿಗೆ ಸೇರಿದೆ. ಕಷ್ಟಪಟ್ಟು ಓದಿ ಹೆಚ್ಚಿನ ಅಂಕಗಳನ್ನು  ಪಡೆದಿದ್ದರಿಂದ ಕಂಪ್ಯೂಟರ್‌ ಸೈನ್ಸ್‌ ಸೀಟು ಸಿಕ್ಕಿತ್ತು. ಅದೃಷ್ಟಕ್ಕೆ ಭೋಪಾಲ್‌ನಲ್ಲಿ ಸಂಜೆ ಕಾಲೇಜ್‌ ಇದ್ದುದರಿಂದ ಪದವಿ ಪಡೆಯಲು ಸಾಧ್ಯವಾಯಿತು. ನನಗೆ ವಸ್ತ್ರ ವಿನ್ಯಾಸದಲ್ಲಿ ಅತೀವ ಆಸಕ್ತಿ ಇತ್ತು.ಪದವಿ ಮುಗಿದ ಬಳಿಕ ಕೆಲಸ ಹುಡುಕಿಕೊಳ್ಳದೆ ಅದೇ ಕಾಲೇಜಿನಲ್ಲಿ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ಗೆ ಸೇರಿದೆ. ಕೋರ್ಸ್‌ ಮುಗಿಸಿ ಮುಂಬೈಗೆ ಬಂದು ಐದಾರು ವರ್ಷ ಫ್ಯಾಷನ್‌ ಡಿಸೈನಿಂಗ್‌ ಕಂಪೆನಿಗಳಲ್ಲಿ ಕೆಲಸ ಮಾಡಿದೆ. ಕಂಪೆನಿಗಳ ಕಾಟ ತಾಳಲಾರದೆ ಸ್ವತಂತ್ರವಾಗಿ ಫಾಷನ್‌ ಡಿಸೈನಿಂಗ್‌ ಕಂಪೆನಿ ಆರಂಭಿಸಿ ಯಶಸ್ವಿಯಾದೆ. ಇಂದು ನನ್ನ ಕಂಪೆನಿಯಲ್ಲಿ 65 ಜನ ಕೆಲಸ ಮಾಡುತ್ತಿ ದ್ದಾರೆ. ಲ್ಯಾಕ್ಮಿ, ಬ್ಲೆಂಡರ್ಸ್‌ ಫ್ರೈಡ್‌ ಸೇರಿದಂತೆ ಇನ್ನಿತರ ಫ್ಯಾಷನ್‌ ಶೋಗಳಿಗೆ ನಮ್ಮ ಕಂಪೆನಿ ವಸ್ತ್ರ ವಿನ್ಯಾಸ ಮಾಡಿಕೊಡುತ್ತಿದೆ. ಅಂದುಕೊಂಡದ್ದನ್ನು ಸಾಧಿಸಿದ ಹೆಮ್ಮೆ ನನಗಿದೆ. ಕಷ್ಟಗಳು ಬಂದಾಗ ಊರಿನ ಕಡೆ ಮುಖ ಮಾಡಲಿಲ್ಲ, ಹಾಗೇ ಸಂಬಂಧ ಗಳನ್ನು ಕಡಿದು ಕೊಂಡಿಲ್ಲ! ಇದು ವೈಶಾಲಿಯ ಮನಕಲಕುವ ಸಾಧನೆಯ ಕಥೆ.

www.vaishalis.com

ಪರಮ್‌ ಶಾ

‘ಅಂಗವಿಕಲರ ಪ್ರೀತಿಯಲ್ಲಿ ಮಿಂದು, ಅವರ ನಗುವಿನಲ್ಲಿ ನನ್ನ ತಾಯಿಯನ್ನು ಕಾಣುತ್ತೇನೆ’ ಇದು ಯುವ ಸಾಧಕ  ಪರಮ್‌ ಶಾ ಅವರ ನುಡಿ.  ಅಂಗವಿಕಲರ ಸೇವೆಗೆ ತನ್ನ ಬದುಕನ್ನೇ ಅರ್ಪಿಸಿಕೊಂಡಿರುವ ಭಾರತೀಯ ಮೂಲದ ಪರಮ್‌ ಶಾ ಅವರ ಯಶಸ್ವಿ ಕಥೆ ಇದು.

‘ನಾನು ಒಂಬತ್ತು ವರ್ಷದವನಿದ್ದಾಗ  ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟರು.  ಅಮ್ಮನ ಅಗಲಿಕೆಯ ಆಘಾತ ನನ್ನನ್ನು ಮಾನಸಿಕ ಖಿನ್ನತೆಗೆ ದೂಡಿತು. ಈ   ಕಾಯಿಲೆಯಿಂದ ಹೊರಬರುವಂತೆ  ಮಾಡಿದ್ದು ಅಂಗವಿಕಲರ ಅಸಾಮಾನ್ಯ ಜೀವನ ಪ್ರೀತಿ ಮತ್ತು ನಿಷ್ಕಲ್ಮಶ ಪ್ರೇಮ ಎನ್ನುತ್ತಾರೆ ಪರಮ್‌.ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ  ಪರಮ್‌ ವಾಸವಾಗಿದ್ದಾರೆ. ತಾಯಿ ಸತ್ತ ಮೊದಲ ವರ್ಷ ಖಿನ್ನತೆಯಿಂದ ಬಳಲುತ್ತಿದ್ದ ಪರಮ್‌ ಅವರನ್ನು ಅವರ ತಂದೆ ಕ್ರಿಸ್‌ಮಸ್‌ ರಜೆಗೆ ಭಾರತಕ್ಕೆ ಕಳುಹಿಸಿದ್ದರು. ಹಿಮಾಚಲ ಪ್ರದೇಶಕ್ಕೆ ಬಂದ ಪರಮ್‌ ತನ್ನ ಸಂಬಂಧಿ ಕರ ಊರಿನಲ್ಲಿದ್ದ ಅಂಗವಿಕಲ ಮಕ್ಕಳ ಜೊತೆ ಬೆರೆತು ಆಡುವ ಮೂಲಕ ತಾಯಿಯ ಅಗಲಿಕೆಯ ನೋವನ್ನು ಮರೆತರು. ಅಂದಿ ನಿಂದ ಪ್ರತಿವರ್ಷ ಭಾರತಕ್ಕೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅಂಗವಿಕಲರ ನೆರವಿಗಾಗಿ ‘ಲೋಟಸ್‌ ಫೌಂಡೇಷನ್‌’ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ್ದಾರೆ. ಅಂಗವಿಕಲ ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸೆ, ಸಾಧನ ಸಲಕರಣೆಗಳಿಗೆ ಹಣಕಾಸು ನೆರವು ನೀಡುತ್ತಿದ್ದಾರೆ. ಪ್ರಸ್ತುತ ಲೋಟಸ್‌ ಫೌಂಡೇಷನ್‌ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ  ಕಾರ್ಯನಿರ್ವಹಿಸುತ್ತಿದೆ.‘ಅಂಗವಿಕಲರ ನಗುವಿನಲ್ಲಿ ನನ್ನ ತಾಯಿಯನ್ನು ಕಾಣುತ್ತೇನೆ. ಅವರ ಬದುಕನ್ನು ಹಸನು ಮಾಡುವುದೇ ನನ್ನ ಜೀವನದ ಮುಖ್ಯ ಉದ್ದೇಶ. ಭವಿಷ್ಯದಲ್ಲಿ ಅಂಗವಿಕಲ ಯುವತಿಯೊಬ್ಬಳಿಗೆ ಬಾಳು ಕೊಡುತ್ತೇನೆ’ ಎಂದು ಪರಮ್‌ ಮುಗುಳು ನಗುತ್ತಾರೆ. ಪದವಿ ಓದುತ್ತಿರುವ ಪರಮ್‌ ಮಾನವೀಯ ಕಾಳಜಿ ಅನುಕರಣೀಯ. 

www.lotusfoundation.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.