ಶುಕ್ರವಾರ, ಜನವರಿ 24, 2020
16 °C
ಶೈಕ್ಷಣಿಕ ಅಂಗಳ

ಕಸ್ತೂರಬಾ ವಸತಿ ಶಾಲೆ: ಪ್ರತಿಭಾ ಅನಾವರಣ

ಪ್ರಜಾವಾಣಿ ವಾರ್ತೆ/ಕಿಶನರಾವ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಹನುಮಸಾಗರ: ಶಾಲೆಯಿಂದ ಹೊರಗುಳಿದ, ಕೆಲಸಕ್ಕಾಗಿ ಹೋಗುತ್ತಿದ್ದ, ಭಿಕ್ಷೆ ತಿಂದು ಗುಡಿ-ಗುಂಡಾರಗಳಲ್ಲೇ ಮಲಗಿದ್ದ ಅನೇಕ ಮಕ್ಕಳು ಇಂದು ಮಹಿಳಾ ಸಮುಖ್ಯದಡಿಯಲ್ಲಿ ನಡೆಯು­ತ್ತಿ­ರುವ ಕಸ್ತೂರಬಾ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಊರ ಹೊರಗಿನ ಪ್ರಶಾಂತ ವಾತಾವರಣ­ದಲ್ಲಿರುವ ಈ ಶಾಲೆಯಲ್ಲಿ 97 ವಿದ್ಯಾರ್ಥಿನಿ­ಯರು ವ್ಯಾಸಂಗ ಮಾಡುತ್ತಿದ್ದು, ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಒದಗಿಸಿಕೊಟ್ಟಿದೆ.ಈ ವಿದ್ಯಾರ್ಥಿಗಳು ಡೊಳ್ಳು ಬಾರಿಸುವು­ದನ್ನು ನೋಡುವುದೊಂದು ಸೊಗಸೇ ಸರಿ. ಸದ್ಯ ಈ ಕಲೆ ಯಾವ ರೀತಿ ಬೆಳವಣಿಗೆಯಾಗಿದೆ ಎಂದರೆ, ಕೊಪ್ಪಳ ಸೇರಿದಂತೆ ಹೊರ ಜಿಲ್ಲೆಗಳಿಂದ ಪ್ರದರ್ಶನಕ್ಕಾಗಿ ಇವರಿಗೆ ಕರೆ ಬರುತ್ತಿವೆ, ಕಳೆದ ತಿಂಗಳ ಬಾಗಲಕೋಟೆಯಲ್ಲಿ ಹಾಗೂ ಬಳ್ಳಾರಿಯ ಜಿಲ್ಲೆ ಜಿಂದಾಲ್‌ನಲ್ಲಿ ನಮ್ಮ ಮಕ್ಕಳು ಕಾರ್ಯಕ್ರಮ ನೀಡಿ ಬೆನ್ನುತಟ್ಟಿಸಿಕೊಂಡು ಬಂದಿದ್ದಾರೆ ಎಂದು ಮುಖ್ಯ ಶಿಕ್ಷಕ ವಿ.ಎಂ.ಗಂಜಿಹಾಳ ಅಭಿಮಾನ­ದಿಂದ ಹೇಳುತ್ತಾರೆ.ನೃತ್ಯ ಮಾಡುತ್ತಾರೆ, ಚಿತ್ರ ಬಿಡಿಸುತ್ತಾರೆ, ಭಾಷಣ ಮಾಡುತ್ತಾರೆ, ಕಥೆ- ಕವನ ಬರೆಯುತ್ತಾರೆ. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಅಲ್ಲಿ ನಮ್ಮ  ಮಕ್ಕಳು ಬಹುಮಾನ ಗಿಟ್ಟಿಸಿಕೊಂಡು ಬರುತ್ತಾರೆ ಎಂದು ಮಕ್ಕಳ ಮೆಚ್ಚಿನ ಶಿಕ್ಷಕಿಯರಾದ ಭಾರತಿ ದೇಸಾಯಿ ಹಾಗೂ ಪುಷ್ಪಾವತಿ ಮಕ್ಕಳಿಗೆ ಮತ್ತಷ್ಟು ಸ್ಫೂರ್ತಿ ನೀಡುವ ಮಾತುಗಳನ್ನು ಹೇಳುತ್ತಾರೆ.ಶಾಲೆಯಲ್ಲಿರು ಸುಮಾ, ಉಷಾ, ಶೀದೇವಿ ಶಿಕ್ಷಕಿಯರು ಒಂದೊಂದು ರಂಗದಲ್ಲಿ ಪ್ರತಿಭಾವಂತರಿದ್ದಾರೆ. ತಮ್ಮೆಲ್ಲ ಪ್ರತಿಭೆಯನ್ನು ಮಕ್ಕಳಲ್ಲಿ ತುಂಬುತ್ತಿರುವುದರಿಂದಲೇ ಈ ಮಕ್ಕಳು ಜಿಲ್ಲೆಯಲ್ಲಿ ಹೆಮ್ಮೆಯ ವಿದ್ಯಾರ್ಥಿನಿಯರಾಗಿ ಬೆಳೆಯುತ್ತಿದ್ದಾರೆ.ಆರಂಭದಲ್ಲಿ ನಿರುಪಯುಕ್ತ ವಸ್ತುಗಳನ್ನು ಹೇಗೆ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಹೇಳಿಕೊಟ್ಟಿದ್ದೆ ಅಷ್ಟೆ, ಆದರೆ ನಾವೆ ಬೆರಗಾಗುವಂತೆ ಒಣ ಹುಲ್ಲಿಗೆ ತರಾವರಿ ಬಣ್ಣ ನೀಡಿ ಕಲಾಕೃತಿಗಳನ್ನು ಮಾಡಿದ್ದಾರೆ, ಹಳೆ ಅರಿವೆಗಳಿಂದ ಕಾರ್ಪೆಟ್ ಮಾಡಿದ್ದಾರೆ, ಟೂತ್‌ಪೇಷ್ಟ್‌ ಡಬ್ಬದಿಂದ ತೋರಣ ಮಾಡಿದ್ದಾರೆ ಎಂದು ಕೈಗಾರಿಕಾ ಶಿಕ್ಷಕಿ ಜ್ಯೋತಿಲಕ್ಷ್ಮೀ ಬಾಳೆಹಳ್ಳಿಮಠ ಮಕ್ಕಳೇ ತಯಾರಿಸಿದ ಕಲಾಕೃತಿಗಳನ್ನು ತೋರಿಸುತ್ತಾ ಹೇಳುತ್ತಾರೆ. ಇದರ ಜೊತೆಗೆ ಕಸೂತಿ ಹಾಕುತ್ತಾರೆ, ವ್ಯಾಯಾಮ, ಕರಾಟೆ, ಯೋಗ ಜೊತೆಗೆ ಹಗಲು ಇರುಳೆನ್ನದೆ ಪುಸ್ತಕ ಹಿಡಿದು ಅಕ್ಷರ ಕಲಿತು ಜಾಣರಾಗುತ್ತಿದ್ದಾರೆ.ಸ್ವಚ್ಛವಾದ ಸ್ನಾನದ ಕೋಣೆ, ಹಸಿವು ಹುಟ್ಟಿಸುವಂತೆ ಕಾಣುವ ಅಡುಗೆ ಮನೆ, ಭಕ್ತಿ ಮೂಡಿಸುವ ದೇವರ ಮನೆ ಹೀಗೆ ಎಲ್ಲವೂ ಶುಭ್ರವಾಗಿರುವುದಕ್ಕೆ ಇಲ್ಲಿನ ಅಡುಗೆ ಸಿಬ್ಬಂದಿ ಕಾರ್ಯಕ್ಷಮತೆ ಎದ್ದು ಕಾಣುತ್ತದೆ. ಮಕ್ಕಳಿಗೆ ಯಾವ ರುಚಿ ಬೇಕು, ಯಾವ ತಿಂಡಿ ಬೇಕು ಕೇಳಿಯೇ ಅವರ ಇಷ್ಟದಂತೆ ತಯಾರಿಸುತ್ತೇವೆ, ಧಾರ್ಮಿಕ ಹಬ್ಬಗಳ ಬಂದರೆ ಮನೆಯಲ್ಲಿ ನಡೆಯುವಂತೆಯೇ ಇಲ್ಲಿ ಆಚರಣೆ ಮಾಡುವುದರಿಂದ ಹಬ್ಬಗಳಿಗೆ ಇವರಾರು ಊರಿಗೆ ಹೋಗುವುದಿಲ್ಲ ಎಂದು ಅಕ್ಕರೆಯಿಂದ ವಾರ್ಡನ್ ಲಲಿತಾ ಬುದ್ದಿನ್ನಿ ಹೇಳುವಾಗ ಅವರ ಕಣ್ಣುಗಳಲ್ಲಿ ಮಕ್ಕಳ ಮೇಲಿರುವ ಮಮತೆ ಎದ್ದು ಕಾಣುತ್ತದೆ.ಮಕ್ಕಳ ಕಲಿಕೆಯನ್ನು ಗಮನದಲ್ಲಿಟ್ಟು­ಕೊಂಡು ಈಚೆಗೆ ತೆರೆದ ಗ್ರಂಥಾಲ ಮಾಡಲಾ­ಗಿದೆ. ಮಕ್ಕಳಿಗೆ ಅನುಕೂಲವಾಗಲೆಂದೇ ವಿಭಾಗಗಳನ್ನು ಮಾಡಲಾಗಿದೆ. ತಮಗೆ ಇಷ್ಟವಾದ ಪುಸ್ತಕವನ್ನು ಓದುತ್ತಾರೆ.

 

ಪ್ರತಿಕ್ರಿಯಿಸಿ (+)