ಬುಧವಾರ, ಜೂನ್ 23, 2021
22 °C

ಕಸ ಸಂಗ್ರಹಣೆಗೆ ಕಸದ ಬುಟ್ಟಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ನಗರ ವ್ಯಾಪ್ತಿಯ ವಿವಿಧ ಬಡಾವಣೆಯ ಮನೆಗಳ ಕಸ ಸಂಗ್ರಹಣಾ ಕಾರ್ಯಕ್ಕೆ ಅನುಕೂಲವಾಗಲು ಕಸದ ಬುಟ್ಟಿ ನೀಡುವ ಯೋಜನೆಗೆ ನಗರಸಭೆ ವಿಶೇಷ ಸಭೆ ಒಪ್ಪಿಗೆ ನೀಡಿದೆ.ಸೋಮವಾರ ನಗರಸಭಾಧ್ಯಕ್ಷ ಬಿ.ಕೆ. ಮೋಹನ್ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಸದ ಬುಟ್ಟಿಗಾಗಿ ಟೆಂಡರ್ ಕರೆದಿದ್ದು, ಇದಕ್ಕಾಗಿ ಮೂರು ಸಂಸ್ಥೆಗಳು ಅರ್ಜಿ ಹಾಕಿದ್ದು, ಉತ್ತಮ ಗುಣಮಟ್ಟದ ಬುಟ್ಟಿ ನೀಡಲು ಒಪ್ಪಿಗೆ ಪಡೆಯುವ ಸಲುವಾಗಿ ಸಭೆಯಲ್ಲಿ ಚರ್ಚೆ ನಡೆಯಿತು.ಈ ಹಂತದಲ್ಲಿ ಕಸದ ಕಂಟೈನರ್‌ಗಳನ್ನು ಒದಗಿಸುವಂತೆ ಡಿಸೆಂಬರ್ ಸಭೆಯಲ್ಲಿ ತೀರ್ಮಾನವಾಗಿದ್ದರೂ ಇನ್ನು ಅದನ್ನು ವ್ಯವಸ್ಥಿತವಾಗಿ ಇಟ್ಟಿಲ್ಲ ಎಂದು ಸದಸ್ಯ ನಟರಾಜ್ ಎತ್ತಿದ ಪ್ರಶ್ನೆ ಹಲವು ಕುತೂಹಲದ ಸಂಗತಿಗಳನ್ನು ಹೊರಗೆಡಹಿತು.ರಿಪೇರಿಯಾದ ಕಂಟೈನರ್ ಮೇಷರ್‌ಮೆಂಟ್‌ಗೆ ಎಂಜಿನಿಯರ್ ಲಭ್ಯವಿಲ್ಲ ಎಂದು ಸಿಬ್ಬಂದಿ ರಾಗ ಎಳೆದರೆ, ಇದನ್ನು ಹೆಲ್ತ್ ಇನ್‌ಸ್ಪೆಕ್ಟರ್‌ಗೆ ವರ್ಗ ಮಾಡಲಾಗಿದೆ ಎಂಬ ಮಾತು ಸಿಬ್ಬಂದಿಯಿಂದ ಕೇಳಿಬಂತು ಒಟ್ಟಿನಲ್ಲಿ ಮೂರು ಮಂದಿ ಸಿಬ್ಬಂದಿ ನೀಡಿದ ವಿವರಣೆಯು ತೃಪ್ತಿ ಕೊಡದ ಸಂದರ್ಭದಲ್ಲಿ ಸಿಟ್ಟಿಗೆದ್ದ ಸದಸ್ಯರು ಗೊಣಗಿದ್ದು `ಅಧಿಕಾರಿಗಳು ಗುತ್ತಿಗೆದಾರರ ಜತೆ ಷಾಮೀಲು ಆಗಿದ್ದಾರೆ~ ಎಂಬ ನಿರಾಸೆಯ ದನಿ.ಹಿರಿಯ ಸದಸ್ಯ ಆರ್. ಕರುಣಾಮೂರ್ತಿ, ವಿ. ಕದಿರೇಶ್, ಜಿ. ಆನಂದಕುಮಾರ್, ಚನ್ನಪ್ಪ, ಮೋಹನ್‌ರಾವ್ ಇದಕ್ಕೆ ದನಿಗೂಡಿಸಿ ಎರಡು ತಿಂಗಳು ಕಳೆದರೂ ರಿಪೇರಿ ಮಾಡಿಲ್ಲ ಎಂದು ಸಬೂಬು ಹೇಳುವ ಗುತ್ತಿಗೆದಾರನನ್ನು ಬ್ಲಾಕ್‌ಲಿಸ್ಟ್ ಮಾಡಿ ಕೆಲಸ ರದ್ದು ಮಾಡಿ, ಮುಂದಿನ ಬಜೆಟ್ ಸಭೆ ವೇಳೆಗಾದರು ಕಂಟೈನರ್ ಇಡಿಸುವ ಕೆಲಸ ಮಾಡಿ ಎಂದು ಸಿಡುಕಿದರು. ದುಪ್ಪಟ್ಟು ಹಣ: ಕಸ ವಿಲೇವಾರಿಗೆ ನಗರಸಭೆ ಖರೀಸಿರುವ ತಳ್ಳು ಗಾಡಿಗೆ ದುಪ್ಪಟ್ಟು ಹಣ ವ್ಯಯ ಮಾಡಲಾ ಗಿದೆ ಎಂದು ಸದಸ್ಯ ಜಿ. ಆನಂದ ಕುಮಾರ್ ಅಪಸ್ವರ ಎತ್ತಿದರು.ಇದೇ ಗಾಡಿಗೆ ಶಿವಮೊಗ್ಗ ನಗರಸಭೆ ಕೇವಲ ರೂ.3ರಿಂದ 6ಸಾವಿರ ಹಣ ನೀಡಿದ ಆದರೆ ನಮ್ಮ ನಗರಸಭೆ ರೂ.9ಸಾವಿರ ಹಣವನ್ನು ಪಾವತಿ ಮಾಡಿ ಮೋಸಕ್ಕೆ ಒಳಗಾಗಿದೆ ಎಂದು ಸಿಡುಕಿದರು.

ಈ ಹಂತದಲ್ಲಿ ಇವರ ಮಾತಿಗೆ ದನಿಗೂಡಿಸಿದ ಕರುಣಾಮೂರ್ತಿ, ಕದಿರೇಶ್, ನಟರಾಜ್ ಪೂರ್ತಿ ಹಣ ಪಾವತಿ ಮಾಡುವ ಮುನ್ನ ಸದಸ್ಯರ ಒಪ್ಪಿಗೆ ಪಡೆದಿಲ್ಲ ಎಂದು ಆಕ್ಷೇಪಣೆ ಎತ್ತಿದರು. ಇದಕ್ಕೆ ಅಧ್ಯಕ್ಷರು 3ನೇ ವ್ಯಕ್ತಿಯ ವರದಿ ಆಧರಿಸಿ ಹಣ ಪಾವತಿ ಮಾಡಲಾಗಿದೆ. ಇದರಲ್ಲಿ ಲೋಪವಾಗಿಲ್ಲ ಎಂದು ಸಮಜಾಯಿಷಿ ನೀಡಿದರು.ಸ್ವಾಗತ ಕಮಾನು ಪೂರೈಸಿ: ನಗರದ ನಾಲ್ಕು ದಿಕ್ಕಿನಲ್ಲಿ ಹಾಕುವ ಸ್ವಾಗತ ಕಮಾನಿಗೆ ಅನುಮೋದನೆ ಪಡೆದು ವರ್ಷಗಳು ಕಳೆದಿವೆ. ಇನ್ನು ಎರಡು ಕಡೆ ಇದನ್ನು ಹಾಕಿಲ್ಲ ಈ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಚನ್ನಪ್ಪ ಆಗ್ರಹಿಸಿದರು.ನಗರಸಭೆ ಫಂಡ್‌ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಗುತ್ತಿಗೆ ದಾರರು ಗೊಣಗುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಆರಳಿತ ವೈಫಲ್ಯ ಎಂದು ಕರುಣಾ ಮೂರ್ತಿ ಸಿಡುಕಿದರು. ಇವರಿಗೆ ಕದಿರೇಶ್, ಮೋಹನ್‌ರಾವ್ ದನಿ ಸೇರಿಸಿದರು.ತಾರತಮ್ಯ: ಕೆಲಸ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಸದಸ್ಯೆ ಶೋಭಾ ಎತ್ತಿದ ದನಿಗೆ ಕರುಣಾ ಮೂರ್ತಿ ಮಾತನಾಡಿ, ನಗರಸಭೆಗೆ ಬರುವ ಅನುದಾನವನ್ನು ಎಲ್ಲಾ ವಾರ್ಡ್‌ಗಳಿಗೆ ಸಮಾನವಾಗಿ ವಿತರಣೆ ಮಾಡಿ. ಇದರಲ್ಲಿ ರಾಜಕೀಯ ತಾರತಮ್ಯ ಸರಿಯಲ್ಲ ಎಂದು ಗುಡುಗಿದರು.ಶೇ. 7.5ರ ಅನುದಾನದ ಫಲಾನುಭವಿ ಪಟ್ಟಿಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಮಂದಿಯ ಹೆಸರು ಹೆಚ್ಚಾಗಿದೆ. ಇದನ್ನು ಸರಿಪಡಿಸಿ ಎಂದು ಸದಸ್ಯ ವಿ. ಕದಿರೇಶ್ ಆಗ್ರಹಿಸಿದರು, ಇದಕ್ಕೆ ಆನಂದಕುಮಾರ್ ದನಿ ಸೇರಿಸಿದರು. ಇದಕ್ಕೆ ಅಧ್ಯಕ್ಷರು ಪರಿಶೀಲನೆ ಭರವಸೆ ನೀಡಿದರು.ಈ ಸಭೆಯಲ್ಲಿ 13ನೇ ಹಣಕಾಸು ಯೋಜನೆ ಅಡಿ ವಿವಿಧ ಯೋಜನೆಗಳಿಗೆ ನಿಗದಿ ಮಾಡಿರುವ ಹಣದ ಪ್ರಸ್ತಾವ ಸೇರಿದಂತೆ ಒಟ್ಟು 15ವಿಷಯಗಳ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಸಿದ ಸದಸ್ಯರು ಎಲ್ಲಕ್ಕೂ ಒಪ್ಪಿಗೆ ನೀಡಿದರು.ಸಭೆಯಲ್ಲಿ ಆಯುಕ್ತ ಬಿ.ಡಿ. ಬಸವರಾಜ್, ಉಪಾದ್ಯಕ್ಷೆ ಲಕ್ಷ್ಮೀದೇವಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.