ಭಾನುವಾರ, ಮೇ 9, 2021
26 °C

ಕಾಂಗ್ರೆಸ್‌ಗೆ ಬನ್ನಿ- ಬದಲಾವಣೆ ತನ್ನಿ:ಅಭಿಯಾನಕ್ಕೆ ಕೆಪಿಸಿಸಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚುನಾವಣಾ ತಯಾರಿಯನ್ನು ಮತ್ತಷ್ಟು ಬಿರುಸುಗೊಳಿಸಿರುವ ಕೆಪಿಸಿಸಿ, `ಕಾಂಗ್ರೆಸ್‌ಗೆ ಬನ್ನಿ- ಬದಲಾವಣೆ ತನ್ನಿ~ ಎಂಬ ರಾಜ್ಯವ್ಯಾಪಿ ಅಭಿಯಾನಕ್ಕೆ ಸಜ್ಜಾಗಿದೆ. ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಗುರಿ ಹೊಂದಿರುವ ಈ ಅಭಿಯಾನಕ್ಕೆ ಏಪ್ರಿಲ್ 8ರಂದು ಚಾಲನೆ ದೊರೆಯಲಿದ್ದು, ಐದು ತಿಂಗಳ ಕಾಲ ನಡೆಯಲಿದೆ.ಶನಿವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ನಿರಂತರ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮತ್ತು ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶ. ಆ ಮೂಲಕ ಜನರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಪ್ರಯತ್ನಿಸಲಾಗುವುದು ಎಂದರು.ಏ. 8ರಂದು ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಬಳಿ ಬೃಹತ್ ಸಮಾವೇಶದೊಂದಿಗೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಸೆಪ್ಟೆಂಬರ್‌ನಲ್ಲಿ ಅಭಿಯಾನಕ್ಕೆ ತೆರೆ ಬೀಳಲಿದೆ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರು, ಸಂಸದರು, ಶಾಸಕರು, ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಭಿಯಾನದಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಕೇಂದ್ರ ಸಚಿವರು, ಪಕ್ಷದ ರಾಜ್ಯ ಉಸ್ತುವಾರಿ ಮಧುಸೂದನ ಮಿಸ್ತ್ರಿ, ಶಾಂತರಾಂ ನಾಯ್ಕ, ವಿ.ಹನುಮಂತರಾವ್ ಮೊದಲಾದ ಹಿರಿಯ ಮುಖಂಡರು ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಏಪ್ರಿಲ್ 9ರಿಂದ ಲೋಕಸಭಾ ಕ್ಷೇತ್ರವಾರು ಪ್ರವಾಸದ ಮೂಲಕ ಅಭಿಯಾನ ಮುನ್ನಡೆಸಲಾಗುವುದು. ಈ ಅವಧಿಯಲ್ಲಿ ಕಾರ್ಯಕರ್ತರ ಸಭೆ ಮತ್ತು ಬೃಹತ್ ಸಮಾವೇಶಗಳನ್ನು ನಡೆಸಲಾಗುವುದು. ಚುನಾವಣೆಗೆ ಪೂರಕವಾಗಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.ಅರ್ಜಿ ಹಾಕಿದರೂ ಪ್ರವೇಶವಿಲ್ಲ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷ ಸೇರಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, `ಯಡಿಯೂರಪ್ಪ ಅವರು ಅರ್ಜಿ ಹಾಕಿದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅಂತಹ ಅಗತ್ಯವೂ ನಮ್ಮ ಪಕ್ಷಕ್ಕೆ ಇಲ್ಲ~ ಎಂದರು.ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಯಡಿಯೂರಪ್ಪ ವಿರುದ್ಧ ತನಿಖೆ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಯಾವುದೇ ವ್ಯಕ್ತಿಗಳ ಒತ್ತಡಕ್ಕೆ ಮಣಿಯಬಾರದು ಎಂದು ಎಂದು ಹೇಳಿದರು.`ಸದನದಲ್ಲಿ ಮಾಜಿ ಸಚಿವರು ಬ್ಲೂ ಫಿಲಂ ವೀಕ್ಷಿಸಿದ ಪ್ರಕರಣಕ್ಕೆ ಸಾಕ್ಷ್ಯಾಧಾರಗಳಿದ್ದವು ಎಂಬುದು ಜಗತ್ತಿಗೇ ಗೊತ್ತಿದೆ. ಪ್ರಕರಣದಲ್ಲಿ ಭಾಗಿಯಾದವರೇ ಮಾಧ್ಯಮಗಳ ಎದುರು ಒಪ್ಪಿಕೊಂಡಿದ್ದರು. ಆದರೆ, ಸದನದ ವಿಚಾರಣಾ ಸಮಿತಿಯು ಅವರನ್ನು ಆರೋಪಮುಕ್ತಗೊಳಿಸಿರುವುದು ಆಶ್ಚರ್ಯ ತಂದಿದೆ. ಇಂತಹವರನ್ನು ಜನತೆಯೇ ಶಿಕ್ಷಿಸಬೇಕು~ ಎಂದರು.ಅಭಿನಂದನೆ ಸಲ್ಲಿಕೆ: ಇತ್ತೀಚೆಗೆ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಗಳಿಸಿರುವ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು.

 

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಶಾಸಕ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಜೆ.ಅಲೆಕ್ಸಾಂಡರ್, ಬಿಬಿಎಂಪಿ ವಿರೋಧಪಕ್ಷದ ನಾಯಕ ಎಂ.ಉದಯಶಂಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.