ಭಾನುವಾರ, ಜೂನ್ 20, 2021
25 °C
ದಾವಣಗೆರೆ: 2004, 2009ರಲ್ಲಿ ಸತತ ಗೆಲುವು ದಾಖಲಿಸಿದ ಜಿ.ಎಂ.ಸಿದ್ದೇಶ್ವರ

ಕಾಂಗ್ರೆಸ್‌ ವಿರುದ್ಧವೇ ಒಡೆಯರ್‌ ಸ್ಪರ್ಧೆ!

ಪ್ರಜಾವಾಣಿ ವಾರ್ತೆ/ ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಲೋಕಸಭಾ ಕಣಕ್ಕೆ ಇಳಿಯುವ ಮುನ್ನ ನಡೆದ ಪ್ರತಿ ಚುನಾವಣೆಯೂ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳ ನಡುವಿನ ಸ್ಪರ್ಧೆಯಾಗಿತ್ತು.1998ರ ಚುನಾವಣೆಯಿಂದ ಅದು ಎರಡು ಕುಟುಂಬಗಳ ನಡುವಿನ ಕದನವಾಗಿ ಮಾರ್ಪಟ್ಟಿತು. ಭೀಮಸಮುದ್ರದ ಮಲ್ಲಿಕಾರ್ಜುನಪ್ಪ ಕುಟುಂಬ ಹಾಗೂ ಶಾಮನೂರು ಕುಟುಂಬದ ನಡುವೆ ಆರಂಭವಾದ ಸ್ಪರ್ಧೆ 1999, 2004 ಹಾಗೂ 2009ರಲ್ಲೂ ಮುಂದುವರಿದಿತ್ತು.

1991ರಿಂದ ಆರಂಭವಾಗಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಯುದ್ಧಕ್ಕೆ 98ರಿಂದ ಈ ಎರಡೂ ಕುಟುಂಬಗಳು ಸಾರಥ್ಯ ವಹಿಸುತ್ತಾ ಬಂದಿವೆ. ಅಂದಿನಿಂದ ನಡೆದಿರುವ 4 ಲೋಕಸಭಾ ಚುನಾವಣೆಯಲ್ಲಿ 3 ಬಾರಿ ಭೀಮಸಮುದ್ರದ ಕುಟುಂಬ, ಕೇವಲ ಒಂದು ಬಾರಿ ಶಾಮನೂರು ಕುಟುಂಬ ಗೆಲುವು ಕಂಡಿವೆ.98ರಲ್ಲಿ ಶಾಮನೂರು, 99ರಲ್ಲಿ ಮಲ್ಲಿಕಾರ್ಜುನಪ್ಪ ಗೆಲುವು ಪಡೆದರೆ, 2004 ಹಾಗೂ 2009ರಲ್ಲಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನಪ್ಪ ಪುತ್ರ ಜಿ.ಎಂ.ಸಿದ್ದೇಶ್ವರ ಸತತ ಎರಡು ಬಾರಿ ವಿಜಯ ಮಾಲೆ ಧರಿಸಿದ್ದರು. ಮಲ್ಲಿಕಾರ್ಜುನ್‌–ಸಿದ್ದೇಶ್ವರ ಹಣಾಹಣಿ

ಸಂಸದರಾಗಿದ್ದ ಮಲ್ಲಿಕಾರ್ಜುನಪ್ಪ ನಿಧನದ ನಂತರ ನಡೆದ 2004ರ  ಚುನಾವಣೆಯಲ್ಲಿ ಬಿಜೆಪಿಯಿಂದ ಅವರ ಪುತ್ರ ಜಿ.ಎಂ.ಸಿದ್ದೇಶ್ವರ, ಕಾಂಗ್ರೆಸ್‌ನಿಂದ ಶಾಮನೂರು ಪುತ್ರ ಎಸ್‌.ಎಸ್.ಮಲ್ಲಿಕಾರ್ಜುನ್‌ ಕಣಕ್ಕೆ ಇಳಿದಿದ್ದರು. ಈ ಚುನಾವಣೆಯ ಇನ್ನೊಂದು ಸ್ವಾರಸ್ಯವೆಂದರೆ, ಕಾಂಗ್ರೆಸ್‌ನಿಂದ ಮೂರು ಬಾರಿ ಸಂಸದರಾಗಿ 1996ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ ಚನ್ನಯ್ಯ ಒಡೆಯರ್ ಜೆಡಿಎಸ್‌ ಟಿಕೆಟ್‌ ಪಡೆದು ಕಾಂಗ್ರೆಸ್‌ ವಿರುದ್ಧ ತೊಡೆತಟ್ಟಿದ್ದರು. ಆ ಚುನಾವಣೆಯಲ್ಲಿ ತಾವು ಗೆಲ್ಲಲು ಸಾಧ್ಯವಾಗದಿದ್ದರೂ, ತಮ್ಮನ್ನು ಕಡೆಗಣಿಸಿದ ಕಾಂಗ್ರೆಸ್‌ ಗೆಲುವಿಗೆ ತೊಡರುಗಾಲು ಹಾಕುವಲ್ಲಿ ಯಶಸ್ಸಿಯಾಗಿದ್ದರು.ಚಲಾವಣೆಯಾದ  9,10,398 ಮತದಲ್ಲಿ ಬಿಜೆಪಿಯ ಸಿದ್ದೇಶ್ವರ 3,70,499 ಮತ ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್‌ ಅವರನ್ನು 32,676 ಮತಗಳ ಅಂತರದಿಂದ ಮಣಿಸಿದ್ದರು. ಎಸ್‌ಎಸ್‌ಎಂ 3,37,823 ಮತ ಪಡೆದರೆ, ಚನ್ನಯ್ಯ ಒಡೆಯರ್‌ 1,58,515 ಮತ ಪಡೆದು ಮತ್ತೊಮ್ಮೆ 3ನೇ ಸ್ಥಾನಕ್ಕೆ ಕುಸಿದಿದ್ದರು.ಪಕ್ಷೇತರರಾಗಿ ಸ್ಪರ್ಧಿಸಿದ್ದ  ಡಾ.ಶ್ರೀಧರ ಉಡುಪ 16,582 ಮತ, ಆರ್‌.ಮಾದಪ್ಪ 14,646 ಮತ, ಟಿ.ಎಂ. ಮಲ್ಲಿಕಾರ್ಜುನ ಸ್ವಾಮಿ 12,333 ಮತ ಪಡೆದು ಗಮನ ಸೆಳೆದಿದ್ದರು.ಸಿದ್ದೇಶ್ವರ್‌ಗೆ ಪ್ರಯಾಸದ ಗೆಲುವು

2004 ಚುನಾವಣೆಯಂತೆಯೇ 2009ರ ಚುನಾವಣೆಯಲ್ಲೂ ಸಿದ್ದೇಶ್ವರ್‌ ಹಾಗೂ ಮಲ್ಲಿಕಾರ್ಜುನ್‌ ಸ್ಪರ್ಧೆಗೆ ಧುಮುಕಿದ್ದರು.

2004ಕ್ಕಿಂತ ಅನುಕೂಲ ಪರಿಸ್ಥಿತಿ ಸಿದ್ದೇಶ್ವರ್ ಬೆನ್ನಿತ್ತು. ಕಾರಣ 2008ರಲ್ಲಿ ಮೊದಲ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಶಾಸಕರಿದ್ದರು. ಆದರೂ, ಸಿದ್ದೇಶ್ವರ ಅವರು ಕಾಂಗ್ರೆಸ್‌ ವಿರುದ್ಧ ಗೆಲುವು ಕಂಡಿದ್ದು ಕೇವಲ 2024 ಮತಗಳ ಅಂತರದಲ್ಲಿ.ಒಟ್ಟು ಚಲಾವಣೆಯಾದ 9,07,277 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ 4,23,447 ಮತ, ಎಸ್‌.ಎಸ್‌.ಮಲ್ಲಿಕಾರ್ಜುನ್‌  4,21,423 ಮತ ಪಡೆದಿದ್ದರು.ಜೆಡಿಎಸ್‌ನ  ಕೆ.ಬಿ.ಕಲ್ಲೇರುದ್ರೇಶಪ್ಪ (10.489 ಮತ), ಬಿಎಸ್‌ಪಿಯ ಡಾ.ಹಿದಾಯತ್ ಉರ್ ರೆಹಮಾನ್‌ (5,469 ಮತ), ಸಿಪಿಐ ಎಂಎಲ್‌ನ ಇದ್ಲಿ ರಾಮಪ್ಪ (1,731 ಮತ) ಹಾಗೂ 23 ಪಕ್ಷೇತರರು ಸೇರಿದಂತೆ ಎಲ್ಲರೂ ಠೇವಣಿ ಕಳೆದುಕೊಂಡಿದ್ದರು. 28 ಮಂದಿ ಕಣದಲ್ಲಿದ್ದದ್ದು ಕ್ಷೇತ್ರದ ಇತಿಹಾಸದಲ್ಲೇ ದಾಖಲೆಯಾಗಿತ್ತು. ಜೆಡಿಎಸ್‌ ಅಭ್ಯರ್ಥಿ ನಾಪತ್ತೆಯಾಗಿದ್ದು ಕುತೂಹಲ ಮೂಡಿಸಿತ್ತು.ಸೋತೆವು ಎಂದುಕೊಂಡು ಗೆದ್ದಾಗ...

2009ರ ಚುನಾವಣೆ ಮತ ಎಣಿಕೆ ದಿನ ಮರೆಯಲಾಗದ ಅನುಭವ. ಅಂದು ಮೊದಲ ಸುತ್ತಿನಿಂದಲೂ ಕಾಂಗ್ರೆಸ್‌ ಮುಂದಿತ್ತು. ಚನ್ನಗಿರಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಎಲ್ಲ ಎಣಿಕೆ ಮುಗಿದಿತ್ತು. ಕಾಂಗ್ರೆಸ್ ಅಭ್ಯರ್ಥಿ ಏಳುಸಾವಿರ ಚಿಲ್ಲರೆ ಮತಗಳಿಂದ ಮುಂದಿದ್ದರು. ಕಾಂಗ್ರೆಸ್‌ ವಲಯದಲ್ಲಿ ಗೆಲುವಿನ ಸಂಭ್ರಮ ಮನೆ ಮಾಡಿತ್ತು. ಅಷ್ಟರಲ್ಲಿ ಚನ್ನಗಿರಿ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಮುಗಿದಿತ್ತು. ಆ ಕ್ಷೇತ್ರವೊಂದರಲ್ಲೇ 9 ಸಾವಿರಕ್ಕೂ ಅಧಿಕ ಲೀಡ್‌ ಬಂದ ಕಾರಣ ನಮ್ಮ ಅಭ್ಯರ್ಥಿ  2024 ಮತಗಳ ಅಂತರದಿಂದ ಗೆಲುವು ಕಂಡರು. ನಮ್ಮ ಕಾರ್ಯಕರ್ತರ ಸಂಭ್ರಮ ಮೇರೆಮೀರಿತ್ತು.

–ಬಿ.ಎಸ್‌.ಜಗದೀಶ್‌, ಬಿಜೆಪಿ ಮುಖಂಡ.ಸೋಲಿಗೆ ಒಡೆಯರ್ ಕಾರಣ 

ಒಡೆಯರ್ ಅವರಿಗೆ ಕಾಂಗ್ರೆಸ್‌ ಸಾಕಷ್ಟು ಅವಕಾಶ ನೀಡಿತ್ತು. ಕಾಂಗ್ರೆಸ್‌ನಿಂದ ಮೂರು ಬಾರಿ ಸಂಸದರಾಗಿದ್ದರು. ಅವರಿಗೆ ಸ್ಥಾನಮಾನ ಕಲ್ಪಿಸಿದ ಪಕ್ಷದ ವಿರುದ್ಧವೇ ನಿಂತ ಪರಿಣಾಮ ಅದುವರೆಗೂ ಕಾಂಗ್ರೆಸ್‌ ಜತೆಗಿದ್ದ ಒಂದು ದೊಡ್ಡ ಸಮುದಾಯದ ಮತಗಳು ವಿಭಜಿತವಾದವು. ಅದು 2004ರ ಕಾಂಗ್ರೆಸ್‌ ಸೋಲಿಗೆ ಕಾರಣವಾಯಿತು. 2009ರಲ್ಲಿ ಯಡಿಯೂರಪ್ಪ ಅಲೆ ಬಿಜೆಪಿಗೆ ಅನುಕೂಲವಾಯಿತು.

–ಹಾಲೇಶಪ್ಪ, ಕಾಂಗ್ರೆಸ್ ಹಿರಿಯ ಮುಖಂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.