ಸೋಮವಾರ, ಏಪ್ರಿಲ್ 19, 2021
23 °C

ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಕಾಡಾನೆ ದಾಳಿಗೆ ಸಿಲುಕಿ ವಿದ್ಯಾರ್ಥಿನಿ ಮೃತಪಟ್ಟ ದುರ್ಘಟನೆ ನೀರುಗುಂದ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ ಕಾಫಿ ಬೆಳೆಗಾರ ಎನ್.ಎನ್.ಇಂದೂಶೇಖರ್ ಹಾಗೂ ತೀರ್ಥ ದಂಪತಿಯ ಪುತ್ರಿ ಎನ್.ಐ.ಸುಪ್ರೀತಾ (16) ಎಂಬ ವಿದ್ಯಾರ್ಥಿನಿಯೇ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ. ಈಕೆ ಕಿರಿಕೊಡ್ಲಿ ಮಠದ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಬುಧವಾರ ಬೆಳಿಗ್ಗೆ 7.30ಕ್ಕೆ ಸುಪ್ರೀತಾ ತನ್ನ ಸಹಪಾಠಿ ಸುಷ್ಮಿತಾ ಜತೆಯಲ್ಲಿ ಸೈಕಲ್‌ನಲ್ಲಿ ಶಾಲೆಗೆ  ಹೊರಟರು. 1 ಕಿ.ಮೀ.ದೂರ ಕ್ರಮಿಸುತ್ತಿದ್ದಂತೆ ಕಾಡಾನೆ ಎದುರಾಯಿತು. ಭೀತಳಾದ ಸುಪ್ರೀತಾ ಹಿಂದಕ್ಕೆ  ಓಡಲಾರಂಭಿಸಿದರೆ, ಸ್ನೇಹಿತೆ ಸುಷ್ಮಿತಾ ರಸ್ತೆ ಪಕ್ಕದ ಮಣ್ಣಿನ ಚರಂಡಿಯಲ್ಲಿ ಸದ್ದಿಲ್ಲದೆ ಮಲಗಿದಳು.  ಸುಪ್ರೀತಾಳ ಬೆನ್ನಟ್ಟಿದ ಕಾಡಾನೆ ಅವಳನ್ನು ಸೊಂಡಿಲಿನಿಂದ ಪಕ್ಕದ ಕಾಡು ಜಾಗಕ್ಕೆ ಎಸೆದು ಕಾಫಿ  ತೋಟದೊಳಗೆ ನುಗ್ಗಿ ಹೊರಟು ಹೋಯಿತು.ಈ ದುರ್ಘಟನೆ ನೋಡಿದ ವಿದ್ಯಾರ್ಥಿನಿ ಸುಷ್ಮಿತಾ ಹಾಗೂ ರಸ್ತೆ ಬದಿಯ ಮನೆಯ ಗೃಹಿಣಿ  ಜಯಂತಿಹರೀಶ್ ಮಾತನಾಡಿ, ‘ಕಾಡಾನೆಯು ಸೊಂಡಿಲಿನಲ್ಲಿ ಎಸೆದ ಸುಪ್ರೀತಾಳ ದೇಹ ಮನೆ ಮುಂಭಾಗದ  ಕಾಡು ಜಾಗದಲ್ಲೆ ಬಿದ್ದಿತ್ತು. ಶರೀರ ಬಿಸಿಯಾಗಿದ್ದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ನೀರು ಕುಡಿಸಿ,  ಆಸ್ಪತ್ರೆಗೆ ಕರೆದೊಯ್ದರು. ಆದರೆ, ಪರೀಕ್ಷಿಸಿದ ವೈದ್ಯರು ಸುಪ್ರೀತಾ ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದರು.ಘಟನೆ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಪ್ರಸನ್ನಕುಮಾರ್ ಮಾತನಾಡಿ, ಈ ವಿಭಾಗದಲ್ಲಿ ಕಳ್ಳಬಟ್ಟಿ ಸಾರಾಯಿ ದಂಧೆಯಿದೆ. ಕಾಡಾನೆಗಳು ಪುಳಿಗಂಜಿ ಕುಡಿದು ದಾಂಧಲೆ ಎಬ್ಬಿಸುತ್ತವೆ. ಸಮಸ್ಯೆ ಪರಿಹಾರಕ್ಕೆ  ಪ್ರಯತ್ನಿಸಲಾಗುವುದು. ಸರ್ಕಾರದಿಂದ ಮೃತಳ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.