ಶುಕ್ರವಾರ, ಜೂಲೈ 10, 2020
22 °C

ಕಾದಿರುವನು ರುಮಾಲು ಚೆಲುವ

ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಕಾದಿರುವನು ರುಮಾಲು ಚೆಲುವ

ಸ್ವಲ್ಪ ಬಿಡುವು ಮಾಡಿಕೊಂಡು ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ. ಸಭಾಂಗಣ ಪ್ರವೇಶಿಸುವ ಮುನ್ನ ಬಲಭಾಗದಲ್ಲಿರುವ ಕೋಣೆಯೊಂದರತ್ತ ಹೋಗುತ್ತಲೇ ರೇಷ್ಮೆ ರುಮಾಲು ಸುತ್ತಿಕೊಂಡು, ದೊಡ್ಡ ಕಣ್ಣು, ದೊಡ್ಡ ಕಿವಿ, ಮೂಗುಗಳಿಂದ ಅಲಂಕೃತನಾದ ವ್ಯಕ್ತಿಯೊಬ್ಬ ನಿಮ್ಮನ್ನು ಸ್ವಾಗತಿಸುತ್ತಾನೆ.ಅವನನ್ನು ದಾಟಿ ಹೋಗುತ್ತಿದ್ದಂತೆಯೇ ಉದ್ದ ಕೂದಲ, ಉದ್ದನೆಯ ಮುಖದ ಗಂಭೀರ ವ್ಯಕ್ತಿ, ಚಿನ್ನದ ಗೂಡು, ಕಟ್ಟಿಗೆಯ ರಥಗಳು, `ಭೂಮಿ ಉಳಿಸಿ~ ಎಂದು ಮನವಿ ಮಾಡುತ್ತಾ ಆತಂಕದಿಂದ ಕುಳಿತಿರುವ ಆಮೆಗಳು, ನೆತ್ತಿಯ ನಡುವೆ ಖಡ್ಗ ಸೇರಿಸಿಕೊಂಡು ನಿಂತಿರುವ ಕ್ರೋಧಾತ್ಮ... ಹೀಗೆ ಹಲವಾರು ಶಿಲ್ಪಗಳು ನಿಮ್ಮ ಬರುವಿಕೆಯನ್ನು ಕಾಯುತ್ತಾ ನಿಂತಿವೆ. ಮೇಲೆ ವಿವರಿಸಿದ ರುಮಾಲು ಚೆಲುವ ಜೀವಂತವಾಗಿಲ್ಲ. ಆದರೆ ತನ್ನ ಮುಖದಲ್ಲಿ ಜೀವಂತಿಕೆಯನ್ನು ಹೊರಹೊಮ್ಮಿಸುತ್ತಾನೆ.

ಅವನು ಜಮೀನ್ದಾರನೋ, ಕಾವಲುಗಾರನೋ ಎಂಬ ನಿರ್ಧಾರ ನಿಮ್ಮದೇ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ರಾಜ್ಯದ ವಿವಿಧ ಭಾಗಗಳ ಯುವ ಶಿಲ್ಪಿಗಳನ್ನು ಕರೆಸಿ, ತರಬೇತಿ ನೀಡಿ ಶಿಲ್ಪಗಳನ್ನು ತಯಾರಿಸಲು ಅವಕಾಶ ಕಲ್ಪಿಸಿತ್ತು. ಉತ್ತಮ ಕಲಾಕೃತಿಗಳಿಗೆ ಬಹುಮಾನ ನೀಡಿತು. ಅಲ್ಲಿ ಸಿದ್ಧಗೊಂಡ 63 ವೈವಿಧ್ಯಮಯ ಶಿಲ್ಪಗಳ ಪ್ರದರ್ಶನ ಮಂಗಳವಾರದಿಂದ ಆರಂಭವಾಗಿದೆ.ನಮ್ಮ ಹಳ್ಳಿಗಳಲ್ಲಿ ಪ್ರತಿವರ್ಷ ಎಳೆಯುವ ತೇರುಗಳನ್ನು ನೆನಪಿಗೆ ತರುವ ಹಲವು ರಥಗಳು ಇಲ್ಲಿವೆ. ಜೊತೆಗೆ ಸರಸ್ವತಿ, ಗಣೇಶ, ಸೂರ್ಯದೇವ, ಕಾಳಿಂಗ ಮರ್ದನ, ಕಾಮಧೇನು, ಅರ್ಧನಾರೀಶ್ವರ, ಕಾವೇರಿ, ರಾಮ, ನಟರಾಜ, ಶಿವ, ಬುದ್ಧ, ಸೀಮಿ ದೇವತೆ, ಮಲ್ಲಯ್ಯ, ಸಿದ್ಧೇಶ, ಪರಶುರಾಮ, ಗೌರಿರಥ ಹೀಗೆ ಹಲವಾರು ಶೀರ್ಷಿಕೆಯುಳ್ಳ ಶಿಲ್ಪಗಳು ಪ್ರದರ್ಶನದಲ್ಲಿವೆ.ಕಲಾಲೋಕದಲ್ಲಿ ಸದಾಕಾಲ ಚರ್ಚೆಗೊಳಗಾಗುವ ಮೂರ್ತ ಹಾಗೂ ಅಮೂರ್ತ ಶೈಲಿಯ ಶಿಲ್ಪಗಳು ಇಲ್ಲಿವೆ. ಹಾಗಾಗಿ ಅವರವರ ಭಾವಕ್ಕೆ ಎಂಬಂತೆ ಮೂರ್ತ, ಅಮೂರ್ತಗಳನ್ನು ನೋಡಬಹುದು. ಬಹುತೇಕ ಮರೆತೇ ಹೋದ ಹಲವು ಗ್ರಾಮೀಣ ಜೀವನ ಶೈಲಿಯನ್ನು ಕೆಲ ಶಿಲ್ಪಗಳು ನೆನಪಿಗೆ ತರಲಿವೆ.ಆಧುನಿಕ ಸಮಾಜ ಎದುರಿಸುತ್ತಿರುವ ಸಮಸ್ಯೆಗಳೂ ಶಿಲ್ಪದ ರೂಪ ಪಡೆದಿವೆ. ಇನ್ನೇನು ಎಲ್ಲ ಶಾಲೆ, ಕಾಲೇಜುಗಳು ಆರಂಭವಾಗುವ ಹೊತ್ತು. ಮಕ್ಕಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಓದಿಸಬೇಕು ಎಂಬ ಆಸೆಯಿಂದ ಕೇಳಿದಷ್ಟು ಡೊನೇಷನ್ ತೆತ್ತು ಸೇರಿಸುತ್ತೇವೆ. ಅಂಥ ಸಮಸ್ಯೆಯನ್ನು ಬಿಂಬಿಸುವ `ವೇರ್ ಈಸ್ ಮನಿ, ದೇರ್ ಎಜುಕೇಷನ್~ ಎಂಬ ಶೀರ್ಷಿಕೆ ಹೊತ್ತ ಕಲ್ಲಿನ ಶಿಲ್ಪವನ್ನು ನೀವು ನೋಡಲೇಬೇಕು.ಒಂದೆಡೆ ಮಗು, ಮತ್ತೊಂದೆಡೆ ಅವನ ಬೆನ್ನಿಗೆ ಜೋತುಬೀಳುವ ಪಾಟಿಚೀಲ, ಅದರ ಮುಂಭಾಗದಲ್ಲಿಯೇ ನೋಟುಗಳ ಕಂತೆ. ಶಿಕ್ಷಣದ ವ್ಯಾಪಾರೀಕರಣ ವಿವರಿಸಲು ಇನ್ನೊಂದು ರೂಪಕ ಬೇಕೇ?ಮಾಧ್ಯಮ: ಈ ಶಿಲ್ಪಕೃತಿಗಳನ್ನು ಲೋಹ, ಪಂಚಲೋಹ. ಕಲ್ಲು, ಕಟ್ಟಿಗೆ, ತಾಮ್ರ, ಫೈಬರ್, ಕಬ್ಬಿಣ, ಗಾಜು ಹಾಗೂ ಮಿಶ್ರ ಮಾಧ್ಯಮಗಳಲ್ಲಿ ಕಲಾವಿದರು ರಚಿಸಿದ್ದಾರೆ.ತಾಮ್ರ ಮಾಧ್ಯಮದಲ್ಲಿ ರಚಿಸಲಾದ `ರೈಲಿಗೆ ಕಾಯುತ್ತಿರುವ ಪ್ರಯಾಣಿಕರ~ ಚಿತ್ರಿಕೆ ಇದೆ. ಪಾಪ ನಮ್ಮ ನೆಚ್ಚಿನ ಭಾರತೀಯ ರೈಲ್ವೆಯ ಪ್ಯಾಸೆಂಜರ್ ಗಾಡಿಗೆ ಕಾಯುತ್ತಿರುವ ಅವರಲ್ಲಿ ಕೆಲವರು ರೈಲು ಬಾರದ್ದಕ್ಕೆ ನಿದ್ದೆ ಹೋಗಿದ್ದಾರೆ!ಹಲವು ಅನುಭವಗಳನ್ನು, ಆಶಯಗಳನ್ನು ಇಲ್ಲಿನ ಕಲಾಕೃತಿಗಳು ಕಟ್ಟಿಕೊಡುತ್ತವೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ. ಬೆಳಿಗ್ಗೆ 10 ರಿಂದ ಸಂಜೆ 7. ಪ್ರದರ್ಶನ ಭಾನುವಾರ ಮುಕ್ತಾಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.