ಶನಿವಾರ, ಮೇ 8, 2021
26 °C
ಜಿಮ್ಖಾನಾ ಕ್ಲಬ್‌ಗೆ ಕೊಟ್ಟಿದ್ದ ಜಮೀನು ವಾಪಸು

ಕಾನೂನು ತಜ್ಞರ ಜತೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜಿಮ್ಖಾನಾ ಕ್ಲಬ್‌ಗೆ ಕಾಕ್ಸ್‌ಟೌನ್‌ನಲ್ಲಿ ನೀಡಿರುವ 4.21 ಎಕರೆ ಜಮೀನಿನಲ್ಲಿ 3.13 ಎಕರೆಯನ್ನು ಸಾರ್ವಜನಿಕ ಬಳಕೆಯ ಉದ್ದೇಶಕ್ಕೆ ವಾಪಸು ಪಡೆಯಬೇಕೆಂಬ ಬೇಡಿಕೆ ಕುರಿತು ಸರ್ಕಾರ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಭರವಸೆ ನೀಡಿದರು. ಪಾಲಿಕೆಯ ಆಟದ ಮೈದಾನವನ್ನು ಕ್ಲಬ್‌ಗೆ ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ ಸೋಮವಾರ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ಗೋಪ್ಯವಾಗಿ ಗುತ್ತಿಗೆ ನವೀಕರಣ ಮಾಡಲಾಗಿದೆ. 1.08 ಎಕರೆ ಮಾತ್ರ ಕ್ಲಬ್ ಬಳಕೆ ಮಾಡುತ್ತಿದೆ. ಆದರೆ, ವಾಸ್ತವವನ್ನು ಮುಚ್ಚಿಟ್ಟು 4.21 ಎಕರೆಯನ್ನೂ ಗುತ್ತಿಗೆಗೆ ನೀಡಲಾಗಿದೆ ಎಂದು ಆರೋಪಿಸಿದರು.2008ರಲ್ಲಿ 1.08 ಎಕರೆ ಜಮೀನಿನ ಗುತ್ತಿಗೆ ಅವಧಿ ಅಂತ್ಯಗೊಂಡಿತ್ತು. ಅದಕ್ಕೂ ಮುನ್ನವೇ ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಗುತ್ತಿಗೆ ಅವಧಿ ಅಂತ್ಯಗೊಂಡ ಬಳಿಕ ಜಮೀನನ್ನು ವಾಪಸು ಪಡೆಯುವ ಅಥವಾ ಮರು ಗುತ್ತಿಗೆಗೆ ನೀಡುವ ಸಂಬಂಧ ಸರ್ಕಾರ ತೀರ್ಮಾನಿಸಬಹುದು ಎಂದಿತ್ತು. 2010ರಲ್ಲಿ ರಹಸ್ಯವಾಗಿ ಒಂದು ಅರ್ಜಿ ಸಲ್ಲಿಸಲಾಗಿದೆ. ಆಗಿನ ಮುಖ್ಯಮಂತ್ರಿಯವರ (ಬಿ.ಎಸ್.ಯಡಿಯೂರಪ್ಪ) ಹೆಸರಿನಲ್ಲಿ ಆದೇಶ ಹೊರಡಿಸಲಾಗಿದೆ ಎಂದರು.ಜೆಡಿಎಸ್‌ನ ಎಂ.ಸಿ.ನಾಣಯ್ಯ, ಬಿಜೆಪಿಯ ಕೆ.ಬಿ.ಶಾಣಪ್ಪ, ಉಪ ಸಭಾಪತಿ ವಿಮಲಾಗೌಡ ಮತ್ತಿತರರು ಕ್ಲಬ್‌ಗೆ ಜಮೀನು ನೀಡುವ ಗುತ್ತಿಗೆ ನವೀಕರಿಸಿರುವ ನಿರ್ಧಾರವನ್ನು ವಿರೋಧಿಸಿದರು. `ಆದೇಶ ಪತ್ರದಲ್ಲಿ `ಡಾ.ಬಿ.ಎಸ್.' ಎಂದಷ್ಟೇ ಸಹಿ ಇದೆ. ಅದು ಯಡಿಯೂರಪ್ಪ ಅವರ ಸಹಿಯಲ್ಲ. ಫೋರ್ಜರಿ ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.ಕ್ಲಬ್‌ಗೆ ಹೆಚ್ಚುವರಿಯಾಗಿ ನೀಡಿರುವ 3.13 ಎಕರೆಯನ್ನು ವಾಪಸು ಪಡೆದು ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು. ಸುತ್ತಮುತ್ತಲ ಪ್ರದೇಶಗಳ ಮಕ್ಕಳಿಗೆ ಆಟವಾಡಲು ಅವಕಾಶ ನೀಡಬೇಕು. 500 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಆಸ್ತಿಯನ್ನು ಗುತ್ತಿಗೆಗೆ ನೀಡಿರುವುದು ಸರಿಯಲ್ಲ. ಎಕರೆಗೆ ಪ್ರತಿ ವರ್ಷ ಕೇವಲ 60 ಸಾವಿರ ರೂಪಾಯಿ ಬಾಡಿಗೆ ವಿಧಿಸಿರುವುದೂ ಸಮಂಜಸವಲ್ಲ ಎಂದರು.ಸಂಪುಟದ ತೀರ್ಮಾನ: ಪ್ರತಿಪಕ್ಷಗಳ ಸದಸ್ಯರ ಆಗ್ರಹಕ್ಕೆ ಉತ್ತರಿಸಿದ ಸಚಿವರು, `ಕಾಕ್ಸ್‌ಟೌನ್‌ನ ಆಟದ ಮೈದಾನದ 4.21 ಎಕರೆ ಜಮೀನನ್ನು ಜಿಮ್ಖಾನಾ ಕ್ಲಬ್‌ಗೆ 35 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುವ ಸಂಬಂಧ 2010ರ ಏಪ್ರಿಲ್ 28ರಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆ ಬಳಿಕವೇ ಕಾನೂನಿನ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಕ್ಲಬ್‌ನ ಆಡಳಿತ ಮಂಡಳಿ ನಡುವೆ ಗುತ್ತಿಗೆ ಕರಾರು ನಡೆದಿತ್ತು' ಎಂದು ಸದನಕ್ಕೆ ತಿಳಿಸಿದರು. ಸಂಪುಟ ಸಭೆಯ ತೀರ್ಮಾನವನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಪ್ರತಿಪಕ್ಷಗಳ ಸದಸ್ಯರ ಬೇಡಿಕೆ ಕುರಿತು ಅಡ್ವೊಕೇಟ್ ಜನರಲ್ ಹಾಗೂ ಇತರೆ ಕಾನೂನು ತಜ್ಞರ ಜೊತೆ ಚರ್ಚಿಸಿದ ಬಳಿಕ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.