ಶನಿವಾರ, ಮೇ 15, 2021
24 °C
ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್, ಅಂಕಿತ್, ಚಾಂಡಿಲಾ ವಿರುದ್ಧ `ಮೋಕಾ' ಪ್ರಕರಣ

ಕಾನೂನು ಪರಿಣತರ ಟೀಕಾ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಹೊತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ಮೂವರು ಆಟಗಾರರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಮೋಕಾ) ಪ್ರಕರಣ ದಾಖಲಿಸಿದ ಪೊಲೀಸರ ಕ್ರಮವನ್ನು ಕಾನೂನು ಪರಿಣಿತರು ಟೀಕಿಸಿದ್ದಾರೆ.ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್, ಸ್ಪಿನ್ನರ್‌ಗಳಾದ ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಮೋಕಾ ಪ್ರಕರಣ ದಾಖಲಿಸಿದ್ದರು. ಇದು ಕಾನೂನು ವಲಯದಲ್ಲಿ ಭಾರಿ ಆಕ್ಷೇಪಕ್ಕೆ ಗುರಿಯಾಗಿದೆ.`ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ನಮ್ಮಲ್ಲಿ ದೂರವಾಣಿ ಕರೆಗಳ ದಾಖಲೆ ಸೇರಿದಂತೆ ಇನ್ನಿತರ ಸಾಕ್ಷಿಗಳಿವೆ. ಈ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರ ಚೋಟಾ ಶಕೀಲ್ ಕೈವಾಡವಿದೆ' ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.`ಪೊಲೀಸರ ಬಳಿ ದಾಖಲೆ ಹಾಗೂ ಸಾಕ್ಷಿಗಳಿದ್ದರೆ ಅವರೇಕೆ ಹಿಂದೇಟು ಹಾಕುತ್ತಿದ್ದಾರೆ. ದೂರವಾಣಿ ಕರೆಗಳ ದಾಖಲೆಯ ಮೂಲಕ ಸ್ಪಾಟ್ ಫಿಕ್ಸಿಂಗ್ ನಡೆಯುತ್ತಿರುವ ಬಗ್ಗೆ ತಿಳಿದಿದ್ದ ಪೊಲೀಸರು ಅದನ್ನು ತಡೆಯಲು ಏಕೆ ಮುಂದಾಗಲಿಲ್ಲ. ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ' ಎಂದು ಕ್ರಿಮಿನಲ್ ವಕೀಲ ಸುಶೀಲ್ ಕುಮಾರ್ ಹೇಳಿದ್ದಾರೆ.ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ, ತನಿಖೆ ನಡೆಸಲು ಪೊಲೀಸರಿಗೆ ಹೆಚ್ಚು ಕಾಲಾವಕಾಶ ಲಭಿಸುತ್ತದೆ. ಈ ಕಾಯ್ದೆಯಡಿ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ 180 ದಿನಗಳ ಸಮಯಾವಕಾಶ ಇರುತ್ತದೆ. ಆದರೆ, ಐಪಿಸಿ ಪ್ರಕಾರ ಇತರೆ ಪ್ರಕರಣಗಳಾದರೆ, 60 ರಿಂದ 90 ದಿನದೊಳಗೆ ಆರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ.`ಇದು ಪೊಲೀಸರ ನ್ಯಾಯಸಮ್ಮತವಲ್ಲದ ನಡೆ' ಎಂದು ದೆಹಲಿ ಹೈಕೋರ್ಟ್‌ನ  ವಕೀಲ ಅಮಿತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಶ್ರೀಶಾಂತ್ ಸೇರಿದಂತೆ ಇನ್ನುಳಿದ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರೆ, ಅದು ತಪ್ಪು. ಸ್ಪಾಟ್ ಮತ್ತು ಮ್ಯಾಚ್ ಫಿಕ್ಸಿಂಗ್‌ಗಳಲ್ಲಿ ಭಾಗಿಯಾಗುವುದು ಅಪರಾಧ. ಆದರೆ, ಈ ಆಟಗಾರರ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಏಕೆಂದರೆ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಮಟ್ಟ ಹಾಕಲು ಮಾತ್ರ ಈ ಕಾಯ್ದೆಯನ್ನು ಬಳಸಲಾಗುತ್ತದೆ' ಎಂದೂ ಅಮಿತ್ ಅವರು ಹೇಳಿದ್ದಾರೆ.`ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಆಟಗಾರರು ಬುಕ್ಕಿಗಳಿಂದ ಪಡೆದ ಹಣದಲ್ಲಿ ದೇಶದ್ರೋಹ ಕೃತ್ಯ ಎಸಗಿದ್ದರೆ ಆಗ ಅವರ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಿತ್ತು' ಎಂದು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎಸ್. ಸೋಧಿ ಅಭಿಪ್ರಾಯ ಪಟ್ಟಿದ್ದಾರೆ.ರಾಯಲ್ಸ್ ತಂಡದ ಮೂವರು ಆಟಗಾರರ ವಿರುದ್ಧ ಈಗಾಗಲೇ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಆಟಗಾರರು ಮತ್ತಷ್ಟು ದಿನ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ. ಪೊಲೀಸರ ಈ ಕ್ರಮದಿಂದ ಆಟಗಾರರು ಜಾಮೀನು ಪಡೆಯುವ ಪ್ರಯತ್ನಕ್ಕೂ ಕೊಂಚ ಹಿನ್ನಡೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.