ಸೋಮವಾರ, ಜನವರಿ 20, 2020
19 °C

ಕಾಫಿ ಒಣಗಿಸಲು ಸರಳ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾನ್ಯವಾಗಿ ಅರೇಬಿಕ ಕಾಫಿ ಕೊಯ್ಲು ಅಕ್ಟೋಬರ್‌ನಲ್ಲಿ ಶುರುವಾಗಿ ಡಿಸೆಂಬರ್ ಒಳಗೆ ಮುಗಿಯಬೇಕು. ಆದರೆ ಕಳೆದ ಐದು ವರ್ಷಗಳಿಂದ ಈ ಸಮಯಕ್ಕೆ ಅಕಾಲಿಕ ಮಳೆ ಬರುತ್ತಿದೆ. ಅದರಿಂದ ಕೊಯ್ಲು ಮುಂದೆ ಹೋಗುತ್ತಿದೆ.

 

ಮಳೆಯಿಂದ ತೋಟದಲ್ಲಿನ ಅರ್ಧದಷ್ಟು ಫಸಲು ಉದುರಿ ಮಣ್ಣು ಸೇರಿದರೆ ಉಳಿದ ಕಾಫಿ ಬೀಜವನ್ನು ಚೆನ್ನಾಗಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಣಮಟ್ಟ  ಹಾಳಾಗುತ್ತಿದೆ. ಇಂತಹ ಕಾಫಿಗೆ ಉತ್ತಮ ಬೆಲೆ ಸಿಗುವುದಿಲ್ಲ.ಈ ಹಿನ್ನೆಲೆಯಲ್ಲಿ, ಕಾಫಿ ಬೆಳೆಯುವ ದೇಶಗಳಾದ ಕೋಸ್ಟರಿಕಾ, ವಿಯೆಟ್ನಾಂ, ಬ್ರೆಜಿಲ್‌ಗಳಲ್ಲಿ ಬಹು ಹಿಂದಿನಿಂದ ಬಳಕೆಯಲ್ಲಿರುವ ಒಣಗಿಸುವ ತಾಂತ್ರಿಕ ಪದ್ಧತಿ ನಮ್ಮಲ್ಲಿ ಇಲ್ಲವೆಂಬ ಕೊರಗು ಬೆಳೆಗಾರರಲ್ಲಿತ್ತು. ಅದಕ್ಕೆ ವರದಾನವಾಗಿ ಬಂದಿದೆ ಮೂಡಬಿದರೆಯ ಎಸ್‌ಕೆಎಫ್‌ನವರ ಕಾಫಿ ಒಣಗಿಸುವ ಯಂತ್ರ. ಇದರಲ್ಲಿ ಏಲಕ್ಕಿ, ಅಡಿಕೆ, ಜೊಳವನ್ನೂ ಒಣಗಿಸಬಹುದು.ಕಟಾವು ಮಾಡಿದ ಕಾಫಿಯನ್ನು ಕಣದಲ್ಲಿ ಕನಿಷ್ಠ ಐದು ದಿನ ಒಣಗಿಸಬೇಕು. ಮೋಡದ ವಾತಾವರಣವಿದ್ದರೆ ಇನ್ನೂ ಹೆಚ್ಚು ದಿನ ಬೇಕು. ಒಣಗಿಸುವಾಗ ದಿನವೊಂದಕ್ಕೆ ಮೂರರಿಂದ ನಾಲ್ಕು ಸಲ ಕಾಲಾಡಿಸಬೇಕು.

 

ಈ ಸಮಯದಲ್ಲಿ ಕಾಫಿಯ ಮೇಲಿನ ಸಿಪ್ಪೆ ಉದುರಿ, ಶೇ 5ರಷ್ಟು ತೂಕ ಕಡಿಮೆಯಾಗುತ್ತದೆ. ಕಾಫಿಯನ್ನು ನಿಗದಿತ ತೇವಾಂಶ ಶೇ 12ಕ್ಕೆ ಬರುವ ವರೆಗೂ ಒಣಗಿಸಬೇಕು. ತೇವಾಂಶ ಹೆಚ್ಚು ಕಡಿಮೆಯಾದರೆ ತೂಕದಲ್ಲಿ ವ್ಯತ್ಯಾಸವಾಗುವುದೂ ಇದೆ.ಆದರೆ ಈ ಯಂತ್ರದಲ್ಲಿ ಉದ್ದದ ಜರಡಿಯ ಮೇಲೆ ಹನ್ನೆರಡು ಗಂಟೆ ಕಾಫಿ ಬೀಜ ಹಾಕಿದರಾಯಿತು. ಮೊದಲು ನಾಲ್ಕು, ನಂತರ ಪ್ರತೀ ಎರಡು ಗಂಟೆಗೊಮ್ಮೆ  ತೇವಾಂಶ ಅಳೆಯುವ ಮಾಪನಗಳಿವೆ. ಹನ್ನೆರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಒಣಗಿ ಉತ್ಕೃಷ್ಟ ಗುಣಮಟ್ಟದ ಕಾಫಿ ಮಾರುಕಟ್ಟೆಗೆ ಮರುದಿನವೆ ಸಿದ್ಧವಾಗಿರುತ್ತದೆ.         

          

 ಯಂತ್ರದ ರಚನೆ, ಕಾರ್ಯ

ಈ ಯಂತ್ರ ಒಂದು ಟನ್ ಕಾಫಿ ಒಣಗಿಸುವ ಸಾಮರ್ಥ್ಯ ಹೊಂದಿದೆ. ಬೇಡಿಕೆಗೆ ತಕ್ಕಂತೆ ಎರಡು ಟನ್‌ನದೂ ಲಭ್ಯವಿದೆ. ಬೆಂಕಿಯ ಒಲೆ, ಮೇಲ್ಭಾಗದಲ್ಲಿ ಚಿಮಣಿಯಿದೆ.ಗಾಳಿಯಂತ್ರದೊಂದಿಗೆ ಒಣಗಿಸುವ ಜರಡಿಯಿದೆ. ಇದು ವಿದ್ಯುತ್ ಚಾಲಿತ. ಬೆಂಕಿ ನಿಯಂತ್ರಿಸಲು ಒಂದು ಅಶ್ವಶಕ್ತಿಯ ಮತ್ತು ಶಾಖ ಹೆಚ್ಚಾದರೆ ಹೊರನೂಕಲು ಮೂರು ಅಶ್ವಶಕ್ತಿಯ ಮೋಟಾರ್‌ಗಳು ಇರುತ್ತವೆ. ಇದನ್ನು ಅಳವಡಿಸಲು 23 ಅಡಿ ಅಗಲ, 33ಅಡಿ ಉದ್ದದ ಜಾಗ ಸಾಕು. ಮೇಲ್ಛಾವಣಿಯನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು.ಸಂಸ್ಕರಿಸಿದ ಕಾಫಿಯನ್ನು ಯಂತ್ರದ ಜಾಲರಿಯಲ್ಲಿ ಹರಡಿ 80 ಡಿಗ್ರಿ ಶಾಖದಲ್ಲಿ ಒಣಗಿಸಬೇಕು. ಉಷ್ಣತೆ ಅದಕ್ಕಿಂತಲೂ ಹೆಚ್ಚಾದರೆ ಸ್ವಯಂಚಾಲಿತವಾಗಿ ಕಡಿಮೆ ಮಾಡುವ ನಿಯಂತ್ರಣ ಮಾಪನಗಳಿವೆ.ಇದನ್ನು  ಬಳಸುತ್ತಿರುವ ಸಕಲೇಶಪುರದ ಬೆಳೆಗಾರ ಗಿರೀಶ್‌ರವರ ಪ್ರಕಾರ `ಈ ಸಾಧನ ಬಳಕೆಯಿಂದ  ಅಕಾಲಿಕ ಮಳೆಯ ಭಯ ಇಲ್ಲ, ಕಳ್ಳರ ಕಾಟವಿಲ್ಲ, ಕಟಾವು ಮಾಡಿದ ಕಾಫಿಯನ್ನು ಒಣಗಿಸಿ ಮರುದಿನವೆ ಮಾರುಕಟ್ಟೆಗೆ ಕಳುಹಿಸಬಹುದು. ಕಾರ್ಮಿಕರ ಕೊರತೆಯ ಈ ದಿನಗಳಲ್ಲಿ ಒಬ್ಬರೇ ನಿಭಾಯಿಸಬಹುದು~. ಗುಣಮಟ್ಟ ಚೆನ್ನಾಗಿರುವುದರಿಂದ ಇವರಿಗೆ ಚೀಲವೊಂದಕ್ಕೆ 500 ರೂಪಾಯಿಯಷ್ಟು ಹೆಚ್ಚಿನ ಬೆಲೆ ದೊರೆತಿದೆ. ಒಂದು ಕಿಲೋ ಕಾಫಿ ಒಣಗಿಸಲು 2ರೂ ವೆಚ್ಚವಾಗುತ್ತದೆ.ಇದರಲ್ಲಿ ಹಸಿ ಪಾರ್ಚಮೆಂಟ್ 1000 ಕಿಲೊ ಒಣಗಿಸಲು 180 ಕಿಲೋ ಉರುವಲು ಬೇಕು. ಕಾಫಿ ತೋಟಗಳಲ್ಲಿ ಮರಕಸಿ ಮಾಡಿದ ರೆಂಬೆ ಕೊಂಬೆಗಳನ್ನು ಉರುವಲಾಗಿ ಬಳಸಬಹುದು.ಈ ಯಂತ್ರದ ಬೆಲೆ 3.80 ಲಕ್ಷ ರೂಪಾಯಿ. ಕಾಫಿ ಮಂಡಳಿ ಪ್ರಸ್ತುತ 2 ಟನ್ ಸಾಮರ್ಥ್ಯದ ಯಂತ್ರಕ್ಕೆ ಶೇ 20ರಷ್ಟು ಸಹಾಯ ಧನ ನೀಡುತ್ತಿದೆ. ಇದನ್ನು ಶೇ 50ಕ್ಕೆ ಹೆಚ್ಚಿಸಿದರೆ ಸಣ್ಣ ಬೆಳೆಗಾರರಿಗೆ, ಸ್ವಸಹಾಯ ಗುಂಪುಗಳಿಗೆ ಅನುಕೂಲವಾಗುತ್ತದೆ ಎಂಬುದು ಬೆಳೆಗಾರರ ಅಭಿಮತ.

ಪ್ರತಿಕ್ರಿಯಿಸಿ (+)