ಮಂಗಳವಾರ, ಮೇ 17, 2022
27 °C
ನಗರ ಸಂಚಾರ

ಕಾಮಗಾರಿಗೆ ಅನುದಾನದ ಕೊರತೆ!

ಪ್ರಜಾವಾಣಿ ವಾರ್ತೆ/ ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

ಗದಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ಜನರ ಮನಸ್ಸಿನಲ್ಲಿ ಉಳಿಯಲಿ ಎಂಬ ಆಶಯದೊಂದಿಗೆ ಅವಳಿ ನಗರದಲ್ಲಿ ನಿರ್ಮಿಸುತ್ತಿರುವ `ಅಂಬೇಡ್ಕರ್ ಭವನ' ಕಾಮಗಾರಿ ಸಮರ್ಪಕ ಅನುದಾನದ ಕೊರತೆಯಿಂದ ನನೆಗುದಿಗೆ ಬಿದ್ದಿದೆ.ಆರಂಭದಲ್ಲಿ ನಿವೇಶನದ ಸಮಸ್ಯೆಯಿಂದಾಗಿ ನಗರದಲ್ಲಿ ಅಂಬೇಡ್ಕರ ಭವನ ಕಟ್ಟಡ ನಿರ್ಮಾಣಕ್ಕೆ ವಿಳಂಬ ಉಂಟಾಗಿತ್ತು. ಬಳಿಕ ನಿವೇಶನ ಗುರುತಿಸಿ ಒಂದು ಕೋಟಿ ರೂಪಾಯಿ ಮಂಜೂರು ಮಾಡಿ ಚಾಲನೆಯೂ ನೀಡಲಾಯಿತು. ನಂತರ ಸಮರ್ಪಕ ಅನುದಾನ ದೊರೆಯದೆ ಕಾಮಗಾರಿ ನಿರೀಕ್ಷಿತ ವೇಗ ಪಡೆಯಲಿಲ್ಲ.ಗದಗ ಜಿಲ್ಲೆಯಾಗಿ ಹದಿನಾರು ವರ್ಷವಾದರೂ ಅಂಬೇಡ್ಕರ್ ಭವನ ನಿರ್ಮಾಣವಾಗದೆ ಇರುವುದು ದಲಿತ ಸಂಘಟನೆಗಳಿಗೆ ಸಾಕಷ್ಟು ನಿರಾಸೆ ಉಂಟು ಮಾಡಿದೆ.ಭವನ ಆರಂಭಗೊಂಡ ಬಳಿಕ ಮೂವರು ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹೋದರು. ಹಲವು ಬಾರಿ ಸಂಘಟನೆ ಮುಖಂಡರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ. ಭವನದ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷವಾಯಿತು. ಅಂದಾಜು 2 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನಡೆದಿದೆ.  ಅಗತ್ಯ ಅನುದಾನ ಮಂಜೂರು ಮಾಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.ರೂ. 3,10,26175 ಕೋಟಿ ಅಂದಾಜು ವೆಚ್ಚದ ಅಂಬೇಡ್ಕರ್ ಭವನವನ್ನು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. 2010ಕ್ಕೆ ಪೂರ್ಣಗೊಳಿಸುವಂತೆ ಗುತ್ತಿಗೆ ಕರಾರಿನಲ್ಲಿ ತಿಳಿಸಲಾಗಿತ್ತು. ಕಟ್ಟಡ ಕಾಮಗಾರಿಯನ್ನು ಬೆಂಗಳೂರಿನ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಅವಧಿ ಪೂರ್ಣಗೊಂಡರು ಭವನ ಮಾತ್ರ ಪೂರ್ಣಗೊಳ್ಳಲಿಲ್ಲ.ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗುತ್ತಿಗೆದಾರರ ಅವಧಿಯನ್ನು ಪರಿಷ್ಕರಿಸಿ 2011ಕ್ಕೆ ನಿಗದಿಪಡಿಸಲಾಯಿತು. ಗದಗ-ಬೆಟಗೇರಿ ನಗರಭೆಯಿಂದ ರೂ. 25 ಲಕ್ಷ ಮತ್ತು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಂದ ತಲಾ ರೂ. 5 ಲಕ್ಷ ಅನುದಾನ ನೀಡಲಾಗಿದೆ. ಕಟ್ಟಡ ಪೂರ್ಣಗೊಳ್ಳಲು ಮತ್ತಷ್ಟು ಅನುದಾನದ ಅವಶ್ಯಕತೆ ಇದೆ.ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ವಹಿಸಿ ಆದಷ್ಟು ಬೇಗ ಭವನ ಪೂರ್ಣಗೊಳ್ಳಲು ಕ್ರಮ ವಹಿಸಬೇಕು. ಈ ಕುರಿತು `ಪ್ರಜಾವಾಣಿ' ಜತೆ ಮಾತನಾಡಿದ ಜೈ ಭೀಮ ಸೇನಾ ಅಧ್ಯಕ್ಷ ಗಣೇಶ ವೈ. ಹುಬ್ಬಳ್ಳಿ,  `ಅಂಬೇಡ್ಕರ್ ಭವನ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರು ಯಾರು ತಲೆ ಕೆಡಿಸಿಕೊಂಡಿಲ್ಲ. ಕಟ್ಟಡ ನಿರ್ಮಾಣ ಜಾಗದಲ್ಲಿ ಗಿಡ, ಗಂಟಿಗಳು ಬೆಳೆದಿವೆ.ಸಾಕಷ್ಟು ಮನವಿ ಮತ್ತು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಮುಖಂಡರೊಂದಿಗೆ ಚರ್ಚೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಕೆಲಸ ಆರಂಭಗೊಳ್ಳದಿದ್ದಾರೆ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.