ಮಂಗಳವಾರ, ಮೇ 18, 2021
22 °C

ಕಾಮಗಾರಿಗೆ ವೇಗ:ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಲಮಂಡಳಿ ವತಿಯಿಂದ ನಾಗವಾರ ಮುಖ್ಯ ರಸ್ತೆ ಬಳಿ ಇತ್ತೀಚೆಗೆ ಆರಂಭಿಸಿರುವ `ಮಹಾ ಬೆಂಗಳೂರು ಒಳಚರಂಡಿ ಕಾಮಗಾರಿ (ಜಿಬಿಯುಜಿಇ)'ಯನ್ನು ತ್ವರಿತಗತಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.ನಾಗವಾರ ಮುಖ್ಯ ರಸ್ತೆಯ ಶಾಮ್‌ಪುರ ರೈಲ್ವೆ ಗೇಟ್ ಬಳಿಯಿಂದ ಎಚ್‌ಬಿಆರ್ ಬಡಾವಣೆಯ ಸಮೀಪದ ಟೆಲಿಕಾಂ ಬಡಾವಣೆಯವರೆಗೆ ಈ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಮೊತ್ತ 35 ಕೋಟಿ ಎಂದು ಜಲಮಂಡಳಿಯ ಅಧಿಕಾರಿಗಳು ಹೇಳುತ್ತಾರೆ.ಬಿಬಿಎಂಪಿ ವ್ಯಾಪ್ತಿಯ ಎಂಟು ಕಡೆಗಳಲ್ಲಿ `ಮಹಾ ಬೆಂಗಳೂರು ಒಳಚರಂಡಿ ಕಾಮಗಾರಿ' ನಡೆಯುತ್ತಿದೆ. ಬ್ಯಾಟರಾಯನಪುರ ವಲಯದ ನಾಗವಾರ ಹಾಗೂ ಎಚ್‌ಬಿಆರ್ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಒಳಚರಂಡಿ ಮಾರ್ಗಗಳ ಮೂಲಕ ಕೊಳಚೆ ನೀರು ಹೆಣ್ಣೂರಿನ ರಾಜಕಾಲುವೆಯ ಬಳಿ ಇರುವ ಕೊಳಚೆ ನೀರು ಸ್ವಚ್ಛತಾ ಘಟಕಕ್ಕೆ ಹೋಗಲಿದೆ. ನಾಗವಾರ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಆರಂಭವಾದ ಬಳಿಕ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಆಸುಪಾಸಿನ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. `ಮೆಜೆಸ್ಟಿಕ್, ಶಿವಾಜಿನಗರ ಹಾಗೂ ಮತ್ತಿತರ ಕಡೆಗಳಿಂದ ಬರುವ ಬಸ್‌ಗಳು ಈಗ ಎಚ್‌ಬಿಆರ್ ಲೇಔಟ್ ಬಳಿ ಪರ್ಯಾಯ ರಸ್ತೆ ಮೂಲಕ ಥಣಿಸಂದ್ರ, ನಾಗವಾರ ರಿಂಗ್ ರೋಡ್, ಹೆಗ್ಡೆನಗರಕ್ಕೆ ಸಾಗುತ್ತಿವೆ. ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು' ಎಂದು ಗುಲ್ ಮೊಹಮದ್ ಆಗ್ರಹಿಸಿದರು.

`ಬ್ಯಾಟರಾಯನಪುರ ವಲಯದಲ್ಲಿ 2010ರಲ್ಲಿ ಕಾಮಗಾರಿ ಆರಂಭವಾಗಿತ್ತು. ಹೆಣ್ಣೂರು ಗ್ರಾಮ, ಕಾಚಕಾರನಹಳ್ಳಿ ಸೇರಿದಂತೆ ಒಟ್ಟು 104 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. `ಬ್ಯಾಟರಾಯನಪುರದಲ್ಲಿ ಶೇ 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಾಗವಾರ ಮುಖ್ಯ ರಸ್ತೆ ಹಾಗೂ ಟೆಲಿಕಾಂ ಬಡಾವಣೆ ನಡುವಿನ ಕಾಮಗಾರಿ ಪೂರ್ಣಗೊಳ್ಳಲು ಆರು ತಿಂಗಳು ಅಗತ್ಯ ಇದೆ' ಎಂದು ಜಲಮಂಡಳಿ ಎಂಜಿನಿಯರ್ (ಪೂರ್ವ ವಲಯ) ಶ್ರೀಧರ್ ತಿಳಿಸಿದರು.ಜಲಮಂಡಳಿಯ ಮುಖ್ಯ ಎಂಜಿನಿಯರ್ (ಯೋಜನೆ) ರಾಮಸ್ವಾಮಿ ಪ್ರತಿಕ್ರಿಯಿಸಿ, `ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಎಂಟು ಒಳಚರಂಡಿ ಕಾಮಗಾರಿಗಳು ಶೇ 74ರಷ್ಟು ಪೂರ್ಣಗೊಂಡಿವೆ. ಈ ಕಾಮಗಾರಿಗಳನ್ನು 2010ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. 2014ರ ಮಾರ್ಚ್ ಒಳಗೆ ಪೂರ್ಣಗೊಳ್ಳಬೇಕಾದ  ಕಾಮಗಾರಿ   ಮಳೆ, ಕಿರಿದಾದ ರಸ್ತೆ, ಮತ್ತಿತರ ಕಾರಣಗಳಿಂದ 2015ರ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.