ಮಂಗಳವಾರ, ಮೇ 17, 2022
27 °C

ಕಾಮಗಾರಿ ವಿಳಂಬ; ಸಚಿವರ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಸಹಯೋಗದಲ್ಲಿ ಉತ್ತರ ಕರ್ನಾಟಕ ವಲಯ ಬಂಡವಾಳ ಕಾರ್ಯಕ್ರಮದಡಿ (ಕೆಯುಎಸ್‌ಐಪಿ) ಅವಳಿ ನಗರದಲ್ಲಿ ಕೈಗೆತ್ತಿಕೊಂಡಿರುವ ಕೊಳಚೆ ನೀರು ಸಾಗಾಟ ಜಾಲ (ಯುಜಿಡಿ) ಕಾಮಗಾರಿ ಪ್ರಗತಿಯ ಕುರಿತು ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳ ಜೊತೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ರಹಸ್ಯ ಸಭೆ ನಡೆಸಿದ ಸಚಿವರು, ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ತೃಪ್ತಿಕರ ಕೆಲಸ ಆಗಿಲ್ಲ ಎಂದು ಅತೃಪ್ತಿ ಹೊರಗೆಡವಿದ್ದಾರೆ ಎಂದು ತಿಳಿದು ಬಂದಿದೆ.ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಪಾದಯಾತ್ರೆ  ನಡೆಸಿ ವೀಕ್ಷಿಸಿದ್ದರು. ಮ್ಯಾನ್‌ಹೋಲ್‌ಗಳನ್ನು ಮತ್ತು ಪೈಪ್‌ಲೈನ್ ಅಳವಡಿಸುವ ಉದ್ದೇಶದಿಂದ ತೆರೆಯಲಾದ ಗುಂಡಿಗಳನ್ನು ಮುಚ್ಚಿವಂತೆ ಈ ಸಂದರ್ಭದಲ್ಲಿ ಸಾರ್ವಜನಿಕರು ಆಗ್ರಹಿಸಿದ್ದನ್ನು ಸಚಿವರ ಗಮನಕ್ಕೆ ತರಲಾಯಿತು.ಪಾದಯಾತ್ರೆ ನಡೆದು ತಿಂಗಳುಗಳು ಕಳೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹದಗೆಟ್ಟ ರಸ್ತೆಗಳು, ಅಲ್ಲಲ್ಲಿ ಮುಚ್ಚದೆ ಬಿಟ್ಟಿರುವ ಮ್ಯಾನ್‌ಹೋಲ್‌ಗಳು ವಾಹನ ಚಾಲಕರಿಗೆ ಮತ್ತು ಪಾದ ಚಾರಿಗಳಿಗೆ ಸಮಸ್ಯೆ ಉಂಟು ಮಾಡುತ್ತಿವೆ ಎಂಬುದನ್ನು ಸಚಿವರ ಗಮನಕ್ಕೆ ತರಲಾಯಿತು.ಇದಕ್ಕೆ  ಪ್ರತಿಕ್ರಿಯಿಸಿದ ಸಚಿವರು, `ಕಾಮಗಾರಿ ಆಮೆಗತಿಯಲ್ಲಿ ನಡೆದರೆ ಈ ಬೃಹತ್ ಯೋಜನೆ ಪೂರ್ಣಗೊಳ್ಳುವು ದಾದರೂ ಯಾವಾಗ?~ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಗುತ್ತಿಗೆ ದಾರರು ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಅನುಷ್ಠಾನ ವಿಷಯದಲ್ಲಿ ವಿಳಂಬ ನೀತಿ ಅನುಸುರಿಸುತ್ತಿರುವ ಬಗ್ಗೆ ಮತ್ತು ಕಾಮಗಾರಿ ತ್ವರಿತಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಕಾಮಗಾರಿಯ ನಿಧಾನಗತಿಯಿಂದ ಉಂಟಾಗುತ್ತಿರುವ ಅನಾನುಕೂಲತೆಯ ಬಗ್ಗೆ ಜನಸಾಮಾನ್ಯರು ತಮ್ಮಲ್ಲಿ ದೂರುತ್ತಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಸಚಿವರ ಗಮನ ಸೆಳೆದರು.ಯುಜಿಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ಉದ್ದೇಶದಿಂದ ಅವಳಿ ನಗರಕ್ಕೆ ಇನ್ನೊಮ್ಮೆ ಭೇಟಿ ನೀಡುವುದಾಗಿ ಜನಪ್ರತಿನಿಧಿಗಳಿಗೆ ಸಚಿವರು ಇದೇ ವೇಳೆ ಭರವಸೆ ನೀಡಿದರು. ಅಲ್ಲದೆ ಈ ಯೋಜನೆಯ ಕುರಿತು ಉನ್ನತ ಅಧಿಕಾರಿಗಳ ಜೊತೆ ಚರ್ಚಿಸುವ ಸಲುವಾಗಿ ಮೇಯರ್, ಪಾಲಿಕೆ ಸದಸ್ಯರು, ಚುನಾಯಿತ ಸದಸ್ಯರ ನಿಯೋಗವನ್ನು ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲಹೆ ನೀಡಿದರು ಎಂದು ತಿಳಿದುಬಂದಿದೆ.ಕೆಲವು ವರ್ಷದಿಂದ ಸರ್ಕಾರದ ಮುಂದಿರುವ ಘನ ತ್ಯಾಜ್ಯ ನಿರ್ವಹಣೆ ಮತ್ತು ಸೂಪರ್ ಮಾರ್ಕೆಟ್ ಆಧುನೀಕರಣ ಕುರಿತ ಪ್ರಸ್ತಾವನೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸರ್ಕಾರ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆಯೂ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು ಅಸಂತೋಷ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.ಈ ವಿಷಯವನ್ನು ಮುಂದಿಟ್ಟು ವಿರೋಧ ಪಕ್ಷಗಳು ತಮ್ಮ ಟೀಕಿಸುತ್ತಿರುವುದರಿಂದ ತೀವ್ರ ಮುಜುಗರ ಉಂಟಾಗುತ್ತಿದೆ ಎಂದೂ ಈ ನಾಯಕರು ಸಚಿವರ ಮುಂದೆ ಅಳಲು ತೋಡಿಕೊಂಡರು ಎನ್ನಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಮೇಯರ್ ಪಾಂಡುರಂಗ ಪಾಟೀಲ, ಶಾಸಕರಾದ ಚಂದ್ರಶೇಖರ ಬೆಲ್ಲದ, ವೀರಭದ್ರಪ್ಪ ಹಾಲಹರವಿ, ವಿಧಾನಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಜಿಲ್ಲಾಧಿಕಾರಿ ದರ್ಪನ್ ಜೈನ್, ಮಾಜಿ ಮೇಯರ್ ವೀರಣ್ಣ ಸವಡಿ ಮತ್ತಿತರರು ಸಭೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.