ಭಾನುವಾರ, ಮೇ 22, 2022
24 °C

ಕಾಲಭೈರವ ತಂಡ ರಚನೆ

ಕೆ.ಎಚ್. ಓಬಳೇಶ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರಾಜ್ಯದಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯಿಂದ `ಕಾಲಭೈರವ ಕಾರ್ಯಾಚರಣೆ~ ಆರಂಭಗೊಂಡಿದೆ.ಕಾಳ್ಗಿಚ್ಚು, ಅರಣ್ಯ ಒತ್ತುವರಿ, ಕಳ್ಳಬೇಟೆ ಹಾಗೂ ಕಾಡಿನಿಂದ ಮರ ಕಡಿದು ಸಾಗಿಸುವಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಈ ಕಾರ್ಯಾಚರಣೆಯ ಮೂಲ ಉದ್ದೇಶ. ಬಹುಮುಖ್ಯವಾಗಿ ರಾತ್ರಿ ವೇಳೆ ನಡೆಯುವ ಅಕ್ರಮ ಚಟುವಟಿಕೆ ಮೇಲೆ ಕಾರ್ಯಾಚರಣೆಗೆ ನೇಮಿಸುವ ಸಿಬ್ಬಂದಿ ತೀವ್ರ ನಿಗಾವಹಿಸಲಿದ್ದಾರೆ.ಪ್ರಸ್ತುತ ಕಾಡಂಚಿನ ಹಳ್ಳಿಗಳಲ್ಲಿ ರಚಿಸಿರುವ ಗ್ರಾಮ ಅರಣ್ಯ ಸಮಿತಿ, ಪರಿಸರ ಅಭಿವೃದ್ಧಿ ಸಮಿತಿಗಳ ಸಹಕಾರ ಹಾಗೂ ಸಿಬ್ಬಂದಿ ಬಳಸಿಕೊಂಡು ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಇಲಾಖೆ ಒತ್ತು ನೀಡಿದೆ. ಆದರೆ, ಅರಣ್ಯ ಸಂರಕ್ಷಣೆ ಪ್ರತಿನಿತ್ಯವೂ ಸವಾಲಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಸಂರಕ್ಷಣಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆ ಮುಂದಾಗಿದೆ. ಈ ಸಂಬಂಧ ಎಲ್ಲ ಪ್ರಾದೇಶಿಕ ಹಾಗೂ ವನ್ಯಜೀವಿ ಅರಣ್ಯ ವಿಭಾಗದ ವ್ಯಾಪ್ತಿ `ಕಾಲಭೈರವ ಕಾರ್ಯಾಚರಣೆ ತಂಡ~ ರಚಿಸಲು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಈ ತಂಡದ ನೇತೃತ್ವ ವಹಿಸಲಿದ್ದಾರೆ. ವಲಯ ಅರಣ್ಯಾಧಿಕಾರಿ, ವನಪಾಲಕರು, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಈ ತಂಡದಲ್ಲಿರುತ್ತಾರೆ. ತಂಡದ ಸದಸ್ಯರು ರಾತ್ರಿವೇಳೆ ನಿಗದಿತ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ತಂಡದೊಂದಿಗೆ ಅರಣ್ಯ ಸಂಚಾರ ದಳವೂ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಸಾಮಾಜಿಕ ಅರಣ್ಯ ವಿಭಾಗದ ಸಿಬ್ಬಂದಿಯನ್ನು ಕೂಡ ಕಾರ್ಯಾಚರಣೆಗೆ ಬಳಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.ರಾತ್ರಿ ವೇಳೆ ಗಸ್ತು: ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿವೇಳೆ ಕಾಲಭೈರವ ತಂಡದ ಗಸ್ತು ನಡೆಯಲಿದೆ. ಆನೆ ಸಂಚರಿಸುವ ಕಾರಿಡಾರ್‌ಗಳ ಬಳಿಯಲ್ಲಿ ಕಟ್ಟೆಚ್ಚರವಹಿಸಲಿದೆ. ಆಯಕಟ್ಟಿನ ಸ್ಥಳದಲ್ಲಿ ಬೀಡುಬಿಟ್ಟು ಸಾಂಪ್ರದಾಯಿಕ ಬೇಟೆಗಾರರ ಚಲನವಲನದ ಮೇಲೆ ನಿಗಾವಹಿಸಲಿದೆ. ಜತೆಗೆ, ಅರಣ್ಯದಂಚಿನ ಗ್ರಾಮಗಳು, ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವ ಸಾಮಿಲ್‌ಗಳು, ಮರದ ದಿಮ್ಮಿಗಳನ್ನು ಸಾಗಿಸುವ ವಾಹನಗಳ ಮೇಲೆಯೂ ಹದ್ದಿನಕಣ್ಣು ನೆಡಲಿದೆ.ಕಾಲಭೈರವ ತಂಡದ ಸಿಬ್ಬಂದಿ ರಾತ್ರಿ ಗಸ್ತಿಗೆ ತೆರಳುವ ವೇಳೆ ಆಯಾ ಅರಣ್ಯ ವಿಭಾಗದ ಚೆಕ್‌ಪೋಸ್ಟ್‌ನಲ್ಲಿರುವ ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡಬೇಕಿದೆ. ಜತೆಗೆ, ಈ ತಂಡದ ಕಾರ್ಯಾಚರಣೆ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.`ಜಿಲ್ಲೆಯ ಕಾವೇರಿ ವನ್ಯಜೀವಿಧಾಮ ಹಾಗೂ ಕೊಳ್ಳೇಗಾಲ ಅರಣ್ಯ ವಿಭಾಗದ ವ್ಯಾಪ್ತಿ ಕಾಲಭೈರವ ತಂಡ ರಚಿಸಲಾಗಿದೆ. ಈ ತಂಡಕ್ಕೆ ಅಗತ್ಯ ಸೌಕರ್ಯ ನೀಡಲಾಗಿದ್ದು, ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ~ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್‌ಕುಮಾರ್ ದಾಸ್ `ಪ್ರಜಾವಾಣಿ~ಗೆ ತಿಳಿಸಿದರು.`ಪ್ರಸ್ತುತ ಕೊಳ್ಳೇಗಾಲ ಅರಣ್ಯ ವಿಭಾಗದಲ್ಲಿ 11 ಕಳ್ಳಬೇಟೆ ತಡೆ ಶಿಬಿರ ರಚಿಸಲಾಗಿದೆ. ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿ 16 ಕಳ್ಳಬೇಟೆ ತಡೆ ಶಿಬಿರ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 7 ಶಿಬಿರ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗ ರಾತ್ರಿ ವೇಳೆಯೂ ಕಾಲಭೈರವ ತಂಡದ ಕಾರ್ಯಾಚರಣೆ ನಡೆಯುವುದರಿಂದ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇವೆ~ ಎಂದು ಅವರು  ಅಭಿಪ್ರಾಯಪಡುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.