ಬುಧವಾರ, ಮೇ 25, 2022
22 °C

ಕಾಶ್ಮೀರ ಯುವಕರಿಗೆ ಮಾರ್ಗದರ್ಶನ: ಕನ್ನಡಿಗನಿಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕುವ ಜಮ್ಮು ಮತ್ತು  ಕಾಶ್ಮೀರದ ಯುವಕರಿಗೆ ಆಪ್ತಸಲಹೆ ನೀಡಿ ಸರಿದಾರಿಗೆ ತರುವ ಯತ್ನವೊಂದಕ್ಕೆ ಸಹಯೋಗ ನೀಡಲು ಕನ್ನಡಿಗ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ, ಸಮಾಜ ಶಾಸ್ತ್ರ ಪಾಧ್ಯಾಪಕ ಮತ್ತು ಆಪ್ತ ಸಲಹಾ ವಿಭಾಗದ ಮುಖ್ಯಸ್ಥರಾದ ಡಾ ಎಂ.ಎಸ್.ವಿಘ್ನೇಶ್ ಅವರಿಗೆ ಕರೆ ಬಂದಿದೆ.ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಪ್ತಸಲಹಾ ತರಬೇತಿ ಕಾರ್ಯಾಗಾರ ನಡೆಸಲು ಡಾ. ವಿಘ್ನೇಶ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆಹ್ವಾನಿಸಿದೆ.  ಕಾಶ್ಮೀರದ ಶ್ರೀನಗರದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಡಾ ವಿಘ್ನೇಶ್ ಅವರು ಭಾರತೀಯ ಆಪ್ತ ಸಲಹಾ ಸೂತ್ರಗಳ ಸೈದ್ಧಾಂತಿಕ ಚೌಕಟ್ಟಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲದ ಸದ್ಬಳಕೆ, ರಾಷ್ಟ್ರೀಯ ಭಾವೈಕ್ಯ ಮತ್ತು ನಿರ್ವಹಣಾ ಕೌಶಲ್ಯಗಳ ಬಗ್ಗೆ ಮಾರ್ಚ್ 14ರಿಂದ ಎರಡು ವಾರಗಳ ಕಾಲ ತರಬೇತಿ ನೀಡುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶ್ವವಿದ್ಯಾನಿಲಯಗಳ ಆಯ್ದ ಅಧ್ಯಾಪಕರಿಗೆ ವಿದ್ಯಾರ್ಥಿ ಆಪ್ತ ಸಲಹಾ ಸೂತ್ರಗಳ ಬಗ್ಗೆ ತರಬೇತಿ, ರಾಜ್ಯದ ಆಯ್ದ ಯುವ ರೈತರಿಗೆ ಗ್ರಾಮೀಣ ಮಾನವ ಸಂಪತ್ತಿನ ವ್ಯವಸ್ಥಿತ ನಿರ್ವಹಣೆ ಮತ್ತು ಉದ್ಯಮ ಶೀಲತಾ ಮನೋಭಾವದ ಬಗೆಗೂ ಆಪ್ತ ಸಲಹೆ ಮತ್ತು ಕಾರ್ಯಾಗಾರ ನಡೆಸಿಕೊಡಲಿದ್ದಾರೆ.  2010ರ ಡಿಸೆಂಬರ್‌ನಲ್ಲಿ ಇದೇ ರೀತಿಯ ಕಾರ್ಯಾಗಾರವನ್ನು ಡಾ. ವಿಘ್ನೇಶ್ ನಡೆಸಿಕೊಟ್ಟಿದ್ದರು. ಇದರ ಉಪಯುಕ್ತತೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೊಮ್ಮೆ ಅವರಿಗೆ ಆಪ್ತಸಲಹಾ ತರಬೇತಿ ನೀಡುವಂತೆ ಆಹ್ವಾನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.