ಬುಧವಾರ, ಮೇ 12, 2021
19 °C

ಕಾಸರಗೋಡು: ಗಮನಸೆಳೆದ ಎನ್ನೆಸ್ಸೆಸ್ ಶ್ರಮದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ಗಮನಸೆಳೆಯುವ ಉದ್ದೇಶದಿಂದ ಬಂದ್ಯೋಡಿನ ಅಡ್ಕ ಕೋಟೆಯಲ್ಲಿ ಕಾಡು-ಪೊದೆಗಳನ್ನು ಸವರಿ ಊರವರು ಮತ್ತು ಪೆರ್ಲ ನಲಂದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ಭಾನುವಾರ ಶ್ರಮದಾನ ನಡೆಸಿದರು.ಶಿರಿಯ ಗ್ರಾಮದ 130 ಸರ್ವೇ ನಂಬ್ರದಲ್ಲಿ 6.7 ಎಕರೆಯಷ್ಟು ವಿಸ್ತಾರವಾಗಿ ಹರಡಿರುವ ಅಡ್ಕದ ಕೋಟೆಯನ್ನು ಖಾಸಗಿ ವ್ಯಕ್ತಿಗಳು ವಶಪಡಿಸಿ ಕೋಟೆಯ ಸೊಬಗು ನಾಶಪಡಿಸುತ್ತಿದ್ದಾರೆ. ಸ್ಥಳೀಯರು ಕೋಟೆ ಸಂರಕ್ಷಣಾ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿಗೆ ವರದಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಿತಿಯ ಸಲಹೆಗಾರ ಮಲಾರ್ ಜಯರಾಮ ರೈ `ಪ್ರಜಾವಾಣಿ~ಗೆ ತಿಳಿಸಿದರು.ಪೆರ್ಲ ನಲಂದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ಭಗ್ನಗೊಂಡ ಕೋಟೆಯನ್ನು ವೀಕ್ಷಿಸಿ ಅದರ ಸೌಂದರ್ಯಕ್ಕೆ ಮಾರುಹೋದರು. ಸ್ಥಳೀಯರ ಸಹಕಾರದಿಂದ ಪೊದೆ-ಬಳ್ಳಿಗಳನ್ನು ಸವರಿ ಮುಚ್ಚಿ ಹೋಗಿದ್ದ ಬುರುಜುಗಳನ್ನು ಪತ್ತೆ ಮಾಡಿದರು. ಬುರುಜುಗಳನ್ನು ಹತ್ತಿದ ವಿದ್ಯಾರ್ಥಿಗಳು ಮತ್ತು ಊರವರು ಸುಮಾರು 5 ಕಿ.ಮೀ. ಉದ್ದ ಹರಿಯುವ ಶಿರಿಯ ಹೊಳೆಯ ಮೋಹಕ ದೃಶ್ಯವನ್ನು ಕಂಡು ಖುಷಿಪಟ್ಟರು.ಪ್ರಾಚ್ಯವಸ್ತು ಇಲಾಖೆ ಪಟ್ಟಿಯಲ್ಲಿ ಇಲ್ಲದ ಈ ಕೋಟೆ ಅತ್ಯಂತ ವ್ಯವಸ್ಥಿತ ಕಂದಕವನ್ನು ಹೊಂದಿದ್ದು, ಆಕರ್ಷಕ ಬುರುಜುಗಳನ್ನು ಹೊಂದಿದೆ ಎಂದು ಜಯರಾಮ ರೈ ವಿವರಿಸುತ್ತಾರೆ.  ಪ್ರಾಚೀನ ಸ್ಮಾರಕ, ಕೋಟೆಗಳನ್ನು ಉಳಿಸಿ ಗ್ರಾಮೀಣ ಜನತೆ ಮತ್ತು ಸರ್ಕಾರದ ಕಣ್ಣುತೆರೆಸುವ ಪ್ರಯತ್ನವನ್ನು ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಕೋಟೆ ಸಂರಕ್ಷಣಾ ಸಮಿತಿಯ ಸಂಚಾಲಕ ಹಾಗೂ ಅಡ್ಕ ವೀರನಗರ ನಿವಾಸಿ ಗಿರಿಧರ ಎಸ್. ಹೇಳುತ್ತಾರೆ.ಖಾಸಗಿ ವ್ಯಕ್ತಿಗಳು ಕೋಟೆಯನ್ನು ಆಕ್ರಮಿಸುವುದನ್ನು ಸರ್ಕಾರ ತಡೆಯಬೇಕು. ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೋಟೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಸ್ಥಳಿಯರು ಒತ್ತಾಯಿಸಿದ್ದಾರೆ.ಎರಡು ವರ್ಷಗಳ ಹಿಂದೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಈ ಕೋಟೆಯ ಬಗ್ಗೆ ಸಚಿತ್ರ ವರದಿ ಮಾಡಿದ್ದು, ಇದರಿಂದ ಎಚ್ಚೆತ್ತ ಸ್ಥಳೀಯರು ತಡವಾಗಿ ಕೋಟೆಯನ್ನು ಸಂರಕ್ಷಿಸಿ ಪುನರುದ್ಧಾರ ಮಾಡಲು ಸಮಿತಿ  ರಚಿಸಿದ್ದಾರೆ.ನಲಂದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಕೋಟೆಯನ್ನು ಸಂರಕ್ಷಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ, ಕಣ್ಣೂರು ವಿಶ್ವವಿದ್ಯಾನಿಲಯ, ರಾಜ್ಯ ಸಂಸ್ಕೃತಿ ಸಚಿವರು ಮತ್ತು ಪ್ರಾಚ್ಯವಸ್ತು ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್, ಕಾರ್ಯದರ್ಶಿ ಅನಂತರಾಮ ತಿಳಿಸಿದರು.ಶ್ರಮದಾನ ನಡೆಸಿದ ಪರಿಣಾಮ ಕೆಂಪು ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿದ ಕೋಟೆಯೊಳಗೆ 4 ಬುರುಜುಗಳು, 2 ಪಾಳುಬಿದ್ದ ಬಾವಿಗಳು ಪತ್ತೆಯಾಗಿದ್ದು, ಶಿವಪ್ಪ ನಾಯಕನ ಕಾಲದ ಕೋಟೆಯನ್ನು ಹೋಲುತ್ತಿದೆ. ಆತನ ಆರಂಭಿಕ ಕಾಲದ ಕೋಟೆಯಾಗಿರುವ ಸಾಧ್ಯತೆ ಇದೆ ಎಂದು ಚಿತ್ರದುರ್ಗದ ಪ್ರಾಚ್ಯವಸ್ತು ತಜ್ಞ ಗುಂಡೂರಾವ್ 2010ರಲ್ಲಿ ಕೋಟೆ ಸಂದರ್ಶಿಸಿ ಅಭಿಪ್ರಾಯಪಟ್ಟಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.