ಭಾನುವಾರ, ಜೂನ್ 20, 2021
28 °C

ಕಾಸರಗೋಡು ಲೋಕಸಭಾ ಕ್ಷೇತ್ರ ಐಕ್ಯರಂಗದಲ್ಲಿ ಇನ್ನೂ ಗೊಂದಲ

ಪ್ರಜಾವಾಣಿ ವಾರ್ತೆ/ ಸುರೇಶ್‌ ಎಡನಾಡು Updated:

ಅಕ್ಷರ ಗಾತ್ರ : | |

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಹೊರತುಪಡಿಸಿ ಉಳಿದ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಐಕ್ಯರಂಗದಲ್ಲಿ ಗುದ್ದಾಟ ಮುಂದುವರಿದಿದೆ.ಎಡರಂಗದಿಂದ ಹಾಲಿ ಸಂಸದ ಸಿಪಿಎಂ ಅಭ್ಯರ್ಥಿ ಪಿ.ಕರುಣಾಕರನ್, ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌, ತೃಣಮೂಲ ಪಕ್ಷದಿಂದ ಅಬ್ಬಾಸ್ ಮುದಲಪಾರೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇಲ್ಲಿ ಪ್ರಧಾನವಾಗಿ ಎಡರಂಗ–ಐಕ್ಯರಂಗ–ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ನಡೆದರೂ, ಎಡರಂಗ–ಐಕ್ಯರಂಗದ ಮಧ್ಯೆ ನೇರ ಹಣಾಹಣಿ ನಡೆಯಲಿದೆ.ಪಿ.ಕರುಣಾಕರನ್‌ ಈ ಬಾರಿ ಸ್ಪರ್ಧಿಸಲು ಹಿಂದೇಟು ಹಾಕಿದರೂ ಪಕ್ಷದ ಒತ್ತಡಕ್ಕೆ ಮಣಿದು ಮೂರನೇ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕರುಣಾಕರನ್‌ ಅವರ ಸಾಧನೆಯ ಮುಂದೆ ಎದೆ ಸೆಟೆದು ನಿಂತು ಗೆಲ್ಲುವ ಅಭ್ಯರ್ಥಿಗಾಗಿ ಐಕ್ಯರಂಗ ತಿಪ್ಪರಲಾಗ ಹಾಕುತ್ತಿದೆ. ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಒಂದೆಡೆಯಾದರೆ, ಅನ್ಯ ಜಿಲ್ಲೆಯ ಪ್ರಭಾವಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ವಾದವೂ ಬಲವಾಗಿ ಕೇಳಿಬರುತ್ತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಖ್ಯಾತ ವಕೀಲ ಸಿ.ಕೆ.ಶ್ರೀಧರನ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಟಿ.ಸಿದ್ದಿಕ್, ಮಾಜಿ ಶಾಸಕ ಕೆ.ಪಿ.ಕುಞ್ಞಿಕಣ್ಣನ್, ಮಾಜಿ ಸಂಸದ ಐ.ರಾಮ ರೈ ಅವರ ಪುತ್ರ ಬಿ.ಸುಬ್ಬಯ್ಯ ರೈ ಹೆಸರು ಕಾಂಗ್ರೆಸ್‌ನೊಳಗಿಂದ ತೇಲಿ ಬರುತ್ತಿದೆ. ಕಾಂಗ್ರೆಸ್ಸಿನ ಮೈತ್ರಿ ಕೂಟ ಐಕ್ಯರಂಗದ ಸದಸ್ಯ ಪಕ್ಷ ಮುಸ್ಲಿಂ ಲೀಗ್‌ ಆಮದು ಅಭ್ಯರ್ಥಿಯ ಹೆಸರನ್ನು ಮೊಳಗಿಸಿದೆ. ಕಣ್ಣೂರಿನ ಹಾಲಿ ಸಂಸದ ಕೆ.ಸುಧಾಕರನ್‌ರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿರುವ ಲೀಗ್ ಅವರಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದೂ ಸಾರಿದೆ. ಸುಧಾಕರನ್‌ ಕಣಕ್ಕಿಳಿದರೆ ಕಣ್ಣೂರಿನ ಗಡಿಯಲ್ಲಿರುವ ಪಯ್ಯನ್ನೂರು ಮತ್ತು ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದ ಮತಗಳು ಐಕ್ಯರಂಗದ ಬಗಲಿಗೆ ಬೀಳಲಿದೆ ಎಂದು ಲೀಗ್ ಲೆಕ್ಕಾಚಾರ ಹಾಕಿದೆ.ಪ್ರಚಾರಕ್ಕೆ ಚಾಲನೆ: ಬಿಜೆಪಿಯ ಅಭ್ಯರ್ಥಿ ಕೆ.ಸುರೇಂದ್ರನ್‌ ಪ್ರಚಾರದ ಪ್ರಾಥಮಿಕ ಹಂತಕ್ಕೆ ಚಾಲನೆ ನೀಡಿದ್ದಾರೆ. ಅವರು ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಮಲೆನಾಡಿನ ಗ್ರಾಮ, ಪೇಟೆಗಳನ್ನು ಕೇಂದ್ರೀಕರಿಸಿ ‘ಗ್ರಾಮಕೂಟ’ಗಳನ್ನು ಏರ್ಪಡಿಸಿ ಚುನಾವಣೆಯ ಪ್ರಚಾರಕ್ಕೆ ಧುಮುಕಿದ್ದಾರೆ.ಫೇಸ್ ಬುಕ್‌ ಬಳಕೆ: ಸಿಪಿಎಂ ಅಭ್ಯರ್ಥಿ ಪಿ.ಕರುಣಾಕರನ್‌ ಪರವಾಗಿ ಫೇಸ್‌ಬುಕ್‌ನಲ್ಲಿ ಪ್ರಚಾರ ರಾರಾಜಿಸುತ್ತಿದೆ. ಭಾವಚಿತ್ರ, ಪಕ್ಷದ ಚಿಹ್ನೆಯಿಂದ ಫೇಸ್‌ಬುಕ್‌ ಪ್ರಚಾರದಲ್ಲಿ ಎಡರಂಗ ನವೀನ ತಂತ್ರಗಳನ್ನೂ, ಗೋಡೆಬರಹ, ಬ್ಯಾನರ್‌ ಮೊದಲಾದ  ಸಾಂಪ್ರದಾಯಿಕ ಮಾಧ್ಯಮವನ್ನೂ ಅಳವಡಿಸಿ­ಕೊಂಡಿದೆ. ಬಿಜೆಪಿ ‘ಮೋದಿ’ ಮೋಡಿ ತಂತ್ರವನ್ನು ಅನುಸರಿಸಿದೆ. ತೃಣಮೂಲ ಮತ್ತು ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿಗಳೂ ಕಣಕ್ಕಿಳಿಯುವುದು ನಿಚ್ಚಳವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.