ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡ್ನಿ ಸಮಸ್ಯೆಯೇ? ಎಚ್ಚರ ವಹಿಸಿ...

Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಸಾರಾಂಶ
ಹೃದಯ, ಶ್ವಾಸಕೋಶದ ನಂತರ ಅತೀ ಮುಖ್ಯವಾದ ಅಂಗ ಕಿಡ್ನಿ(ಮೂತ್ರ ಪಿಂಡ). ಅದರಲ್ಲೂ ಮಕ್ಕಳ ಮೂತ್ರಾಂಗದ ರಚನೆ ಅತೀ ಸೂಕ್ಷ್ಮ. ವಿಳಂಬ ಚಿಕಿತ್ಸೆ ಜೀವಕ್ಕೆ ಮಾರಕ. ಇದಲ್ಲದೆ ಸದ್ದಿಲ್ಲದೆ ಸಾವನ್ನು ತಂದೊಡ್ಡುವ ಸಮಸ್ಯೆಗಳಿವು. ಕಾಯಿಲೆಯ ಕೊನೆ ಹಂತದಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಸಾಮಾನ್ಯವಾದ ಇಂಥವುಗಳ ಲಕ್ಷಣ, ಚಿಕಿತ್ಸೆ, ತಡೆಯುವ ಬಗ್ಗೆ ಮಾಹಿತಿ ಇಲ್ಲಿದೆ.

ಮಾರ್ಚ 10- ವಿಶ್ವ ಕಿಡ್ನಿ ದಿನದ ಘೋಷಣೆ: ಮಕ್ಕಳಲ್ಲಿ ಕಿಡ್ನಿ ಕಾಯಿಲೆ:ತಡೆಯಲು ಕೂಡಲೇ ಕಾರ್ಯಪ್ರವೃತ್ತರಾಗಿರಿ.

ಅಧಿಕ ರಕ್ತದ ಏರೊತ್ತಡ ಇರುವ ವ್ಯಕ್ತಿಯೊಬ್ಬರು ತಪಾಸಣೆಗಾಗಿ ತಮ್ಮ 8 ವರ್ಷದ ಮಗಳೊಂದಿಗೆ ಬಂದಿದ್ದರು. ಮಗಳು ಆರಾಮವಾಗಿದ್ದಾಳೆ, ಹಾಗೇ ಸುಮ್ಮನೆ ಇವಳ ಬಿ.ಪಿ. ಪರಿಕ್ಷೀಸಿರಿ ಡಾಕ್ಟ್ರೇ ಎಂದರು. ಇವರಿಗೆ ನಿರಾಶೆ ಬೇಡವೆಂದು ತಪಾಸಣೆ ಮಾಡಿದಾಗ ಮಗಳ ಬಿ.ಪಿ.ಹೆಚ್ಚಾಗಿತ್ತು. ಹೆಚ್ಚಿದ ಬಿ.ಪಿ, ಮಕ್ಕಳ ಕಿಡ್ನಿ ಕಾಯಿಲೆಯ ಮುಖ್ಯ ಲಕ್ಷಣ. ಅಪಾಯದ ಹಂತದಲ್ಲಿದ್ದಾಗ ರೋಗ ಲಕ್ಷಣ ಗೋಚರಿಸುತ್ತವೆ. ಕೆಲವು ಲಕ್ಷಣಗಳಿಂದ ಕಿಡ್ನಿ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಬಹುದು. 

* ವಿಪರೀತ ಜ್ವರದ ಜೊತೆ ಮೈ ನಡುಕ
* ಕಣ್ಣು ರೆಪ್ಪೆ, ಮುಖದಲ್ಲಿ ಊತ
* ಮೂತ್ರ ವಿಸರ್ಜನೆಯಲ್ಲಿ ನೋವು,ಉರಿ
* ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು.
* ಈ ಮುಂಚೆ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ನಿಲ್ಲಿಸಿದ ಮಗು, ಮತ್ತೆ  ಹಾಸಿಗೆಯಲ್ಲಿ ಮೂತ್ರ ಮಾಡುತ್ತದೆ.
* ಮೂತ್ರದ ಬಣ್ಣ ಕೆಂಪಗೆ ಅಥವಾ ಬಿಳಿಯಾಗುವುದು.
* ಹನಿ, ಹನಿಯಾಗಿ ಮೂತ್ರ ಸೋರುವುದು
ಇವುಗಳಲ್ಲಿನ ಯಾವುದೇ ಎರಡು ಲಕ್ಷಣಗಳಿದ್ದಾಗ ಕಿಡ್ನಿ ತೊಂದರೆ ಸಂಭವಿಸಬಹುದು. ಕೆಲವು ತಪಾಸಣೆಗಳಿಂದ ಯಾವ ತರಹದ ಕಾಯಿಲೆ ಎಂದು ತಿಳಿಯಲು ಸಾಧ್ಯ.

ಮೂತ್ರ ಪರೀಕ್ಷೆ, ರಕ್ತದಲ್ಲಿ ಸಕ್ಕರೆ, ಯೂರಿಯಾ ಮತ್ತು ಕ್ರಿಯಾಟಿನಿನ್ ಪ್ರಮಾಣ, ಇದಲ್ಲದೆ ಸಿಟಿ ಸ್ಕ್ಯಾನ್, ಎಮ್.ಆರ್.ಐ, ಹೊಟ್ಟೆ ಅಲ್ಟ್ರಾ ಸೌಂಡ್, ಮೂತ್ರ ಮಾಡುವಾಗಿನ ಮೂತ್ರದ ವೇಗ.

* ಗರ್ಭಸ್ಥ ಶಿಶುವಿನ ಮೂತ್ರಪಿಂಡದ ಬೆಳವಣಿಗೆಯ ದೋಷವನ್ನು ಗರ್ಭಾವಧಿಯಲ್ಲೇ ಗುರುತಿಸ ಬಹುದು. ಗರ್ಭಿಣಿಯ ಗರ್ಭಕೋಶದಲ್ಲಿ ವಿಪರೀತ ನೀರು ತುಂಬಿ ಕೊಂಡಿದ್ದರೆ- ಹೈಡ್ರಾ ಆಮ್ನಿಯಾಸ್ (ಹೊಟ್ಟೆ ನೋಡಲು ದೊಡ್ಡದಾಗಿದ್ದರೆ)- ಇದು ಗರ್ಭಸ್ಥ ಶಿಶುವಿನ ಮೂತ್ರಪಿಂಡದ ಬೆಳವಣಿಗೆಯ ತೊಂದರೆ ಎಂದು ಸಂಶಯಿಸಬಹುದು.

ಮಕ್ಕಳಿಗೆ ಕಾಡುವ ಕಿಡ್ನಿ ಕಾಯಿಲೆಗಳು
ನೆಫ್ರೋಟೆಕ್ ಸಿಂಡ್ರೋಮ್: 
ಮುಖ ಉತ ಮುಖ್ಯ ಲಕ್ಷಣವಾಗಿರುವ ಈ ಕಾಯಿಲೆಗೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ಚಿಕಿತ್ಸೆ ನೀಡಿದಾಗ ಊತ ಕಡಿಮೆಯಾಗಿ, ಚಿಕಿತ್ಸೆ ನಿಲ್ಲಿಸಿದ ತಕ್ಷಣವೇ ಇದು ಮರುಕಳಿಸುವುದು ಈ ಕಾಯಿಲೆಯ ವಿಶೇಷ.

ಲಕ್ಷಣಗಳು: 2 ರಿಂದ 6 ವರ್ಷದ ಬಾಲಕರಲ್ಲಿ  ಸಾಮಾನ್ಯ. ಬೆಳಿಗ್ಗೆ ಏಳುವಾಗ ಮೊದಲು ಕಣ್ಣು ರೆಪ್ಪೆಯಲ್ಲಿ ಬಾವು ಕಾಣಿಸಿಕೊಂಡು, ಹೊತ್ತು ಹೋಗುತ್ತಿದ್ದಂತೆ   ಮುಖ, ಹೊಟ್ಟೆ ಕಾಲುಗಳಿಗೆ ಹರಡುತ್ತದೆ.

ಇತರೆ ಲಕ್ಷಣಗಳು: ಹಸಿವಾಗದಿರುವುದು, ಹೊಟ್ಟೆನೋವು, ಅತಿಸಾರ ಭೇಧಿ, ರಕ್ತದೊತ್ತಡದಲ್ಲಿ ಹೆಚ್ಚಳ.

ದೇಹದಲ್ಲಿನ ಸಸಾರಜನಕ, ಅಪಾರ ಪ್ರಮಾಣದಲ್ಲಿ ಮೂತ್ರದಲ್ಲಿ ಹರಿದುಹೋಗಿ, ರಕ್ತದಲ್ಲಿ ಇದರ ಕೊರತೆ ಉಂಟಾಗುವದು ರೋಗ ಲಕ್ಷಣಗಳಿಗೆ ಮೂಲ ಕಾರಣ. (ಏಕೆ ಸಸಾರಜನಕ ಹರಿದು ಹೋಗುತ್ತದೆ ಎನ್ನುವುದು ಇನ್ನು ನಿಗೂಢ). ಸಸಾರಜನಕ ದೇಹಕ್ಕೆ ಅತ್ಯಾವಶ್ಯಕವಾಗಿದ್ದು, ಇವುಗಳ ಕೊರತೆಯಾದರೆ ದೇಹದ ವಿವಿಧ ಭಾಗದಲ್ಲಿ ನೀರು ತುಂಬಿಕೊಂಡು, ಬಾವು ಕಾಣಿಸಿಕೊಳ್ಳುತ್ತದೆ.

ರೋಗ ನಿರ್ಧಾರ: ಆರೋಗ್ಯವಂತರ ಮೂತ್ರದಲ್ಲಿ ಸಸಾರಜನಕ ಇರುವುದಿಲ್ಲ. ಆದರೆ ಈ ಕಾಯಿಲೆಯಲ್ಲಿ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ. ರಕ್ತದಲ್ಲಿ ಸಸಾರಜನಕ ಪ್ರಮಾಣ ಶೇ. 2 ಕ್ಕಿಂತ ಕಡಿಮೆಯಾಗಿರುತ್ತದೆ (ಆರೋಗ್ಯವಂತರಲ್ಲಿ ಈ ಪ್ರಮಾಣ ಶೇ.6). ಆದರೆ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ.

ಚಿಕಿತ್ಸೆ: ಕಾರ್ಟಿಕೊಸ್ಟಿರಾಯಡ್ ಮಾತ್ರೆಯನ್ನು ಸತತವಾಗಿ 15 ದಿನ, ನಂತರ ದಿನ ಬಿಟ್ಟು ದಿನ 6 ತಿಂಗಳು ಸೇವಿಸಬೇಕು. ಈ ಚಿಕಿತ್ಸೆಯಿಂದ ಊತ ಕಡಿಮೆಯಾಗುತ್ತದೆ. ಬಾವು ಇರುವಾಗ  ಉಪ್ಪು ಕಡಿಮೆ ಸೇವಿಸಬೇಕು. ಅಪೂರ್ಣ ಚಿಕಿತ್ಸೆಯಿಂದ ದೇಹದಲ್ಲಿ ಸೋಂಕು, ರಕ್ತನಾಳಗಳಲ್ಲಿ ತಡೆಯಾಗುವ ಅಪಾಯವಿದೆ.

ಮೂತ್ರದಲ್ಲಿ ರಕ್ತ: ತಂದೆ, ತಾಯಿ, ಹಾಗೂ ಮಗುವನ್ನು ಗಾಬರಿಗೊಳಿಸುವ ಮೂತ್ರದಲ್ಲಿನ ರಕ್ತಕ್ಕೆ ಕಾರಣ ಮೂತ್ರಪಿಂಡದ ಗಾಯ, ಅಥವಾ ಊತ, ಕಿಡ್ನಿ ಮತ್ತು ಮೂತ್ರ ನಾಳ/ಕೋಶದಲ್ಲಿ ಕಲ್ಲು, ಮೂತ್ರಾಂಗ, ಜನನಾಂಗಗಳ ಬೆಳವಣಿಗೆ ದೋಷ, ಮೂತ್ರಪಿಂಡದ  ರಕ್ತನಾಳದಲ್ಲಿ ಅಡೆ,ತಡೆ, ಮೂತ್ರಪಿಂಡದಲ್ಲಿ ಗಡ್ಡೆ..

ಇತರೆ ಕಾರಣಗಳೆಂದರೆ, ಆಸ್‌ಪ್ರಿನ್,ಪೆನ್ಸಿಲಿನ್, ಹೆಪಾರಿನ್ ಮಾತ್ರೆ ಸೇವನೆ. ಇದು ರಕ್ತ ಹೆಪ್ಪುಗಟ್ಟುವ ಕಾಯಿಲೆ (ಹಿಮೊಫಿಲಿಯಾ)ಯ ಒಂದು ಮುಖ್ಯ ಲಕ್ಷಣ ಸಹ. ರಕ್ತ, ಮೂತ್ರ, ಮೂತ್ರಪಿಂಡದ ಮಾದರಿ ಪರೀಕ್ಷೆ (ಬಯಾಪ್ಸಿ)ಯಿಂದ ಹಾಗೂ ಹೊಟ್ಟೆಯ ಸ್ಕ್ಯಾನಿಂಗ್ ಮೂಲಕ ರಕ್ತದ ಮೂಲವನ್ನು ಗುರುತಿಸಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿರಿ.

ಮೂತ್ರಪಿಂಡದ ಸೋಂಕಿನ ಊತ(ಅಕ್ಯೂಟ್ ನೆಪ್ರ್ಯಟಿಸ್): ಮಗು ಮೈಮೇಲೆ ಕೀವುಗುಳ್ಳೆ ಆಗುತ್ತವೆ. ಇದಾದ 2 ವಾರದ ನಂತರ ಮುಖದಲ್ಲಿ ಬಾವು, ರಕ್ತದೊತ್ತಡದಲ್ಲಿ ಹೆಚ್ಚಳ, ಕಂದು ಬಣ್ಣದ ಮೂತ್ರ, ಜ್ವರ, ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಇವು 3-4 ವರ್ಷದ ಮಕ್ಕಳಲ್ಲಿ ಸಾಮಾನ್ಯವಾದ ಈ ಕಾಯಿಲೆಯ ಪ್ರಮುಖ ಲಕ್ಷಣಗಳು.

ರೋಗ ಖಚಿತತೆಗಾಗಿ ಮೂತ್ರ ಪರೀಕ್ಷೆ ಅವಶ್ಯ. ಮೂತ್ರದಲ್ಲಿ  ಕೆಂಪು ರಕ್ತದ ಕಣ ಮತ್ತು ಆಲ್ಬುಬಿನ್  ಇರುತ್ತವೆ. ಹತ್ತು ದಿನ ರೋಗ ನಿರೋಧಕ ಔಷಧಿ, ರಕ್ತದೊತ್ತಡ ಕಡಿಮೆಗೊಳಿಸುವುದು- ಇವು ಕಾಯಿಲೆಯ ಚಿಕಿತ್ಸೆ. ಬೇಗ ಚಿಕಿತ್ಸೆ ನೀಡದಿದ್ದರೆ ಮೂತ್ರಕೋಶದ ವಿಫಲತೆ, ಹೃದಯದಲ್ಲಿ ಬಾವು,ಅಪಸ್ಮಾರ, ಪ್ರಜ್ಞಾಹೀನತೆಯ ಅಪಾಯಗಳಿವೆ.

ಮೂತ್ರಕೋಶದ ಸೋಂಕು: 7-10 ವರ್ಷದ ಬಾಲಿಕಿಯರಲ್ಲಿ ಸಾಮಾನ್ಯ.ಇದಕ್ಕೆ ಕಾರಣಗಳು ವ್ಯಕ್ತಿಗತ ಶುಚಿತ್ವದ ಕೊರತೆ, ಮಲಮೂತ್ರ ವಿಸರ್ಜನೆ ನಂತರ ಜನನಾಂಗವನ್ನು ಸ್ವಚ್ಛವಾಗಿಡದಿದ್ದರೆ ಈ ಸೋಂಕು ಸಾಮಾನ್ಯ, ಮೂತ್ರಾಂಗದ ಬೆಳವಣಿಗೆ ದೋಷ ಇರುವವರಲ್ಲಿ ಈ ಕಾಯಿಲೆಯ ಸಂಭವ ಹೆಚ್ಚು.

ಲಕ್ಷಣಗಳು: ಎಳೆ ಮಕ್ಕಳಲ್ಲಿ ಜ್ವರ, ವಾಂತಿ, ವಾಕರಿಕೆ, ಭೇಧಿ, ಕಾಮಾಲೆ, ದೊಡ್ಡ ಮಕ್ಕಳಲ್ಲಿ ಪದೇ ಪದೇ ಮೂತ್ರ ವಿಸರ್ಜನೆ, ಉರಿ ಮೂತ್ರ, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ, ಹೊಟ್ಟೆನೋವು, ಮೂತ್ರಕ್ಕೆ ವಾಸನೆ ಇರುತ್ತದೆ.

ರೋಗ ನಿರ್ಧಾರ: ಮೂತ್ರ ಪರೀಕ್ಷೆ, ರಸಾಯನಿಕ ಬಳಸಿ ಮೂತ್ರದಲ್ಲಿ ರೋಗಾಣು ಗುರುತಿಸುವಿಕೆ ಹಾಗೂ ಹೊಟ್ಟೆಯ ಅಲ್ಟ್ರಾಸೌಂಡ್ ಪರೀಕ್ಷೆ ಮೂಲಕ.
ಚಿಕಿತ್ಸೆ: 7ರಿಂದ 10 ದಿನ ರೋಗ ನಿರೋಧಕ ಔಷಧಿಯಿಂದ ಪೂರ್ಣವಾಸಿ ಇದೆ. ವಿಳಂಬ ಅಥವಾ ಅಪೂರ್ಣ ಚಿಕಿತ್ಸೆಯಿಂದ ರಕ್ತದೊತ್ತಡದಲ್ಲಿ ಹೆಚ್ಚಳ,ಮೂತ್ರಪಿಂಡದ ವಿಫಲತೆಯ ಅಪಾಯಗಳಿವೆ.

ಕಿಡ್ನಿ ಕಾಯಿಲೆ ತಡೆ ಹೇಗೆ?
* ಹೆತ್ತವರ ರಕ್ತದೊತ್ತಡ ಮಕ್ಕಳಿಗೆ ಬರುವ ಸಂಭವ ಹೆಚ್ಚು.ಆದ್ದರಿಂದ  ಮಕ್ಕಳಲ್ಲಿ ಈ ಕಾಯಿಲೆಗಳಿಗಾಗಿ ಪರಿಕ್ಷಿಸಬೇಕು. ಏಕೆಂದರೆ ರಕ್ತದೊತ್ತಡ ಕಿಡ್ನಿ ಕಾಯಿಲೆಯ ಮುಖ್ಯ ಲಕ್ಷಣವೂ ಹೌದು. ಹಾಗೂ ಏರಿದ ರಕ್ತದೊತ್ತಡದಿಂದ ಕಿಡ್ನಿ ಕಾಯಿಲೆಯು ಸಾಧ್ಯ.

* ಸಕ್ಕರೆ ಕಾಯಿಲೆವಿರುವ ಪಾಲಕರು,ಮಕ್ಕಳ ಮೂತ್ರ ಹಾಗೂ ರಕ್ತವನ್ನು ಸಕ್ಕರೆ ಅಂಶಕ್ಕಾಗಿ ತಪಾಸಿಸಬೇಕು.

* ಮೊದಲ ವರ್ಷ ಮಕ್ಕಳ ಆಹಾರಕ್ಕೆ ಉಪ್ಪು ಬೆರೆಸಬೇಡಿ. ಈ ವಯಸ್ಸಿಗೆ ಅಗತ್ಯವಾದ (ದಿನಕ್ಕೆ ಒಂದು ಗ್ರಾಮ್) ಉಪ್ಪು ಇವರ ಆಹಾರದಲ್ಲಿರುತ್ತದೆ. ಈ ವಯಸ್ಸಿನಲ್ಲಿನ ಅಪಕ್ವ ಮೂತ್ರಪಿಂಡಕ್ಕೆ ಹೆಚ್ಚಿನ ಉಪ್ಪು ಅಪಾಯಕಾರಿ.

* ಸಂಸ್ಕರಿಸಿದ ಹಾಗು ಜಂಕ್ ಆಹಾರ ಬೇಡ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಇರುತ್ತವೆ.

* ಜ್ವರ, ಮೈ ಕೈ ನೋವಿಗಾಗಿ ಕಿಡ್ನಿಗೆ ಅಪಾಯವೆಸಗುವ ಇಬುಬ್ರುಪೆನ್,ಅನಾಸಿನ್ ಮಾತ್ರೆ ಹಾಗೂ ರೋಗ ನಿರೋಧಕ ಔಷದಿ ಜೆಂಟಾಮೈಸಿನ್ ಬೇಡ.

* 4 ರಿಂದ 12 ವರ್ಷದ ಮಕ್ಕಳು ನಿತ್ಯ 6 ರಿಂದ 8 ಗ್ಲಾಸ್ ನೀರು ಸೇವಿಸಬೇಕು

* ಮಕ್ಕಳ ಮುಂದೆ ಧೂಮಪಾನ ಬೇಡ. ನಿಮ್ಮ ಸಿಗರೇಟ್‌ನ ಹೊಗೆ ಮಗುವಿನ ದೇಹ ಸೇರಿ,ಇದು ಕಿಡ್ನಿಯಲ್ಲಿನ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದಲ್ಲದೆ ಹೊಗೆಯಿಂದ ಕಿಡ್ನಿ ಕ್ಯಾನ್ಸರ್‌ನ ಸಂಭವ ಶೇ.5 ರಷ್ಟು ಅಧಿಕ.

* ಸೈಕ್ಲಿಂಗ್ ,ಕಿಡ್ನಿ ಆರೋಗ್ಯಕ್ಕೆ ಉತ್ತಮ. ಇದನ್ನು ಪ್ರೋತ್ಸಾಹಿಸಿರಿ.

* ನಾಟಿ ಔಷಧಿ , ನಾಟಿ ವೈದ್ಯರಿಂದ ದೂರವಿರಿ.

ನೆನಪಿಡಿ: ಮಕ್ಕಳ ಮೂತ್ರಾಂಗದ ರಚನೆ ಅತಿ ಸೂಕ್ಷ್ಮ ವಿಳಂಬ ಚಿಕಿತ್ಸೆ, ಜೀವಕ್ಕೆ ಮಾರಕ. ತೊಂದರೆಗಳಿಗೆ ಮೂತ್ರಪಿಂಡದ ತಜ್ಞ (ನೆಪ್ರೊಲಾಜಿಸ್ಟ್) ಅಥವಾ ಮೂತ್ರಪಿಂಡದ ಶಸ್ತ್ರ ಚಿಕಿತ್ಸಕ ಯುರೋಲಾಜಿಸ್ಟ್‌ರನ್ನು ಸಂಪರ್ಕಿಸಿರಿ. ಇದು ಸಾಧ್ಯವಾಗದಿದ್ದರೆ ಮಕ್ಕಳ ತಜ್ಞರನ್ನು ಕಾಣಿರಿ.

* ಕಿಡ್ನಿ ಆರೋಗ್ಯಕ್ಕಾಗಿ ಆಹಾರ ಪಥ್ಯವನ್ನು ಕಟ್ಟುನಿಟ್ಟಾಗಿ ಆಚರಿಸಿ.
* ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮೂತ್ರವಿಸರ್ಜಿಸಲು ತುರ್ತು ಎನಿಸುವುದು.
* ಮಕ್ಕಳಿಗೆ ಕಿಡ್ನಿ ತೊಂದರೆ ಇರುವುದು ಕಂಡು ಬಂದರೆ ಆಹಾರದಲ್ಲಿ ಉಪ್ಪಿನಂಶ ಕಡಿಮೆ ಮಾಡಿ.
* ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯೊಂದಿಗೆ ಬಹಳ ಹೊತ್ತು ಮೂತ್ರ ಕಟ್ಟಬಾರದು
* ತೊಂದರೆ ಇದ್ದಲ್ಲಿ  ಮಾತ್ರೆ, ಔಷಧಿ ನಿಯಮಿತವಾಗಿ ಸೇವಿಸಬೇಕು
* ಕನಿಷ್ಠ ನಿತ್ಯ 6ರಿಂದ 8 ಲೋಟ ನೀರನ್ನು ಕುಡಿಯಬೇಕು.

ಮಾಹಿತಿಗೆ: 9448579390

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT