ಕಿರು ಸೇತುವೆ ಕಾಮಗಾರಿ ಕಳಪೆ: ಕ್ರಮಕ್ಕೆ ಆಗ್ರಹ

ಹೊಸನಗರ: ತಾಲ್ಲೂಕಿನ ಮಾಸ್ತಿಕಟ್ಟೆ (ಖೈರಗುಂದ) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಚಿಗದ್ದೆಗೆ ಹೋಗುವ ಮಾರ್ಗದಲ್ಲಿ ನಡೆಯುತ್ತಿರುವ ಪುಟ್ ಬ್ರಿಡ್ಜ್ ಕಾಮಗಾರಿ ಸಂಪೂರ್ಣ ಕಳೆಪೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಉದ್ಯೋಗ ಖಾತ್ರಿ ಜಾಗೃತಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಪಾಚಿಗದ್ದೆಗೆ ಸಾಗುವ ಮಾರ್ಗದಲ್ಲಿ ಹಳ್ಳ ದಾಟಲು ಪುಟ್ ಬ್ರಿಡ್ಜ್ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ₹ 2 ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತಿದೆ. ಆದರೆ, ಬೇಕಾಬಿಟ್ಟಿ ಕಾಮಗಾರಿ ನಡೆಸುವ ಮೂಲಕ ಹಣದ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದರು.
ಕಾಮಗಾರಿ ಆರಂಭದಲ್ಲಿ ಎಸ್ಟಿಮೇಟ್ ಆಗಲಿ, ಕಾಮಗಾರಿ ಆದೇಶವಾಗಲಿ ಇರಲಿಲ್ಲ. ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಏಕಾಏಕಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಸ್ಟಿಮೇಟ್ನಲ್ಲಿದ್ದಂತೆ ಸಾಮಗ್ರಿ ಪರಿಮಾಣ ಇಲ್ಲ. ಕೆಳಗಡೆ ಮ್ಯಾಟ್ ಕಟ್ಟದೆ, ಕಾಟು ಕಲ್ಲುಗಳನ್ನು (ಅಕ್ಕಪಕ್ಕದ ಕಲ್ಲು) ಹಾಕಲಾಗಿದೆ. ಬುಡದಿಂದ ಅಗತ್ಯ ಕಬ್ಬಿಣದ ರಾಡುಗಳನ್ನು ಹಾಕದೆ ಮೇಲ್ಭಾಗದಲ್ಲಿ ಕಾಣುವಂತೆ ಕಬ್ಬಿಣದ ತುಂಡು ರಾಡುಗಳನ್ನು ಸಿಕ್ಕಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸವಾಲು: ಗ್ರಾ.ಪಂ ಅಧ್ಯಕ್ಷರೇ ಬೇನಾಮಿ ಹೆಸರಿನಲ್ಲಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಆರೋಪ ಕೇಳಿ ಬಂದ ತಕ್ಷಣ ಖಾತ್ರಿ ಹಣ ಮುಟ್ಟದೆ ಸ್ವಂತ ಖರ್ಚಿನಲ್ಲಿ ಕಾಮಗಾರಿ ನಡೆಸುತ್ತಿವೆ ಎಂದು ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೂಡಲೇ ಕಾಮಗಾರಿ ಗುಣಮಟ್ಟ ಪರೀಕ್ಷೆ ನಡೆಸಬೇಕು. ಕಳಪೆ ಆಗಿರುವುದು ಕಂಡು ಬರದೆ ಇದ್ದರೆ ನಾವು ನಮ್ಮದೆ ಖರ್ಚಿನಲ್ಲಿ ಪುಟ್ ಬ್ರಿಡ್ಜ್ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಸಮಿತಿ ಸವಾಲು ಎಸೆದಿದೆ.
ಪುಟ್ ಬ್ರಿಡ್ಜ್ ಕಳಪೆ ಕಾಮಗಾರಿಗೆ ಗ್ರಾ.ಪಂ ಹಾಗೂ ಅಧಿಕಾರಿಗಳೇ ನೇರ ಹೊಣೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಉದ್ಯೋಗ ಖಾತ್ರಿ ಜಾಗೃತಿ ಸಮಿತಿ ಸದಸ್ಯರಾದ ಎಸ್.ಕೆ.ಗೋಪಾಲಗೌಡ, ಗುರುಮೂರ್ತಿ, ವಾಸಪ್ಪ ಎಚ್, ಡಾಕಪ್ಪ, ಸಿದ್ದಪ್ಪ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ವಿ.ರವೀಂದ್ರ, ಕೆ.ಲೋಕಪ್ಪ, ಗ್ರಾ.ಪಂ. ಸದಸ್ಯರಾದ ರೇಣುಕಾ ವಾಸಪ್ಪ, ಕೆ.ಬಿ.ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.