ಮಂಗಳವಾರ, ಮಾರ್ಚ್ 9, 2021
23 °C

ಕಿವುಡ, ಮೂಕ ಮಕ್ಕಳ ಪೋಷಕರಿಗೂ ಶಿಕ್ಷಣ

ಡಿ.ಸುರೇಶ್ Updated:

ಅಕ್ಷರ ಗಾತ್ರ : | |

ಕಿವುಡ, ಮೂಕ ಮಕ್ಕಳ ಪೋಷಕರಿಗೂ ಶಿಕ್ಷಣ

ಹುಟ್ಟಿನಿಂದ ಕಿವಿ ಕೇಳದ ಮಗು ಮೂಕನಾಗುತ್ತದೆ. ಅದರಿಂದ ಪೋಷಕರಿಗೂ ಯಾತನೆ. ಇಂಥ ಮಕ್ಕಳನ್ನು ಸಾಕಿ, ಬೆಳೆಸಿ ದೊಡ್ಡವರನ್ನಾಗಿ ಮಾಡುವುದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕು, ಭಾರೀ ತಾಳ್ಮೆ ಇರಬೇಕು.ಆದರೆ ತಮ್ಮ ಮಗುವಿಗೆ ಸರಿಯಾಗಿ ಕಿವಿ ಕೇಳುತ್ತಿಲ್ಲ, ಶಬ್ದಕ್ಕೆ ಸ್ಪಂದಿಸುತ್ತಿಲ್ಲ ಎಂಬುದನ್ನು ಪಾಲಕರು ಎಳೆಯ ವಯಸ್ಸಿನಲ್ಲಿಯೆ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ಕಿವುಡ ಮತ್ತು ಮೂಕತನದ ತೊಂದರೆ ತಪ್ಪಿಸಬಹುದು ಎನ್ನುತ್ತಾರೆ ತಜ್ಞರು.ಮಗು ಬೆಳೆದು ದೊಡ್ಡದಾಗಿ ವಾಕ್ ಶ್ರವಣ ದೋಷ ಎದುರಿಸುತ್ತಿದ್ದರೆ ಅಂಥವರಿಗೂ ಶಿಕ್ಷಣ ನೀಡಲು, ಭಾಷೆ, ಓದು ಬರಹ ಕಲಿಸಲು ಸಾಧ್ಯ. ಇದಕ್ಕಾಗಿ ಅಂಥ ಮಕ್ಕಳ ತಾಯಿ, ತಂದೆ ಅಥವಾ ಪಾಲಕರು ಕೂಡ ಸಹಕರಿಸಬೇಕು, ಕೆಲ ಸಮಯ ಮೀಸಲಿಡಬೇಕು. ಇಲ್ಲವಾದರೆ ಆ ಮಕ್ಕಳ ಮೆದುಳಿನಲ್ಲಿನ ಭಾಷೆ, ವಿಷಯ ಗ್ರಹಿಕೆ ಕೋಶಗಳು ವಿಸ್ತಾರವಾಗುವುದಿಲ್ಲ ಎಂದು ಹೇಳುತ್ತಾರೆ ವಾಕ್ ಶ್ರವಣ ತಜ್ಞರು.ಇದಕ್ಕಾಗಿಯೇ ವಾಕ್ ಶ್ರವಣ ಸಮಸ್ಯೆಯ ಮಕ್ಕಳೊಂದಿಗೆ ಹೇಗೆ ಮಾತನಾಡಬೇಕು, ಹಾವಭಾವ ಮತ್ತು ಸಂಕೇತಗಳ ಮೂಲಕ ವಿಷಯ ತಿಳಿಸುವುದು ಹೇಗೆ, ಅವರು ಪ್ರಯತ್ನ ಪೂರ್ವಕವಾಗಿ ಮಾತನಾಡುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಪಾಲಕರಿಗೆ ತರಬೇತಿ ನೀಡುವ ಕೋರ್ಸ್ ಕೂಡ ಇದೆ.ವಾಕ್ ಶ್ರವಣ ದೋಷ ಇರುವ ಬಡ ಹಾಗೂ ಮಧ್ಯಮ ವರ್ಗದವರ ಸೇವೆಯಲ್ಲಿ 35 ವರ್ಷದಿಂದ ನಿರತವಾದ ಬೆಂಗಳೂರಿನ ಲಿಂಗರಾಜಪುರದ ಹೆಣ್ಣೂರು ಬಾಣಸವಾಡಿ ರಸ್ತೆಯ ಡಾ.ಎಸ್.ಆರ್. ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆ, ಕಿವುಡ ಮತ್ತು ಮೂಕ ಮಕ್ಕಳ ಪಾಲಕರಿಗಾಗಿ ಈ ಕೋರ್ಸ್ ನಡೆಸುತ್ತಿದೆ. ತಮ್ಮ ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಇಲ್ಲಿ ಕಲಿಸಲಾಗುತ್ತದೆ.ಇಂಥ ಮಕ್ಕಳಿಗೆ ಬೇಕಿರುವುದು ಅತಿಯಾದ ಅಕ್ಕರೆ ಅಥವಾ ಅನುಕಂಪವಲ್ಲ. ಬದಲಾಗಿ ಪ್ರೋತ್ಸಾಹ, ಉತ್ತೇಜನ ಹಾಗೂ ಬೆಂಬಲ ಎಂದು ವೈದ್ಯ ತಜ್ಞ ನಾಗರಾಜ್ ಹೇಳುತ್ತಾರೆ.ಪರಿಹಾರ ಸಾಧ್ಯ

ವಾಕ್ ಶ್ರವಣ ಸಮಸ್ಯೆ ಇರುವ ಮಕ್ಕಳನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸಿ ಅವಹೇಳನ ಮಾಡದೆ, ಕಡೆಗಣಿಸದೆ ಆ ಮಕ್ಕಳು ಕೂಡ ಎಲ್ಲ ವಿಷಯದಲ್ಲೂ ಪಾಲ್ಗೊಳ್ಳುವಂತೆ ಮಾಡಿದರೆ, ಸೂಕ್ತ ರೀತಿಯಲ್ಲಿ ತರಬೇತಿ ಹಾಗೂ ಸಕಾಲಿಕ ಚಿಕಿತ್ಸೆ ನೀಡಿದರೆ ನ್ಯೂನತೆಯನ್ನು ಪರಿಹರಿಸಲು ಸಾಧ್ಯ ಎನ್ನುತ್ತಾರೆ ಅವರು.ಸಾಮಾನ್ಯವಾಗಿ ಮೊದಲ ಮೂರು ತಿಂಗಳ ಅವಧಿಯಲ್ಲಿ ಅರಿಶಿನ ಕಾಮಾಲೆ (ಜಾಂಡಿಸ್), ಟೈಫೈಡ್, ಹೆಚ್ಚಿನ ರಕ್ತದೊತ್ತಡ ಅಥವಾ ಅತಿಯಾದ ಮಧುಮೇಹದಿಂದ ಬಳಲುವ ಗರ್ಭಿಣಿಯರಲ್ಲಿ ಜನಿಸುವ ಮಕ್ಕಳಿಗೆ ಕಿವುಡುತನದ ಸಾಧ್ಯತೆ ಹೆಚ್ಚು. ಹೀಗಾಗಿ ಇಂಥ ತಾಯಂದಿರು ನವಜಾತ ಶಿಶುಗಳ ಶ್ರವಣ ಶಕ್ತಿಯ ಪರೀಕ್ಷೆ ಮಾಡಿಸುವುದು ಅತ್ಯಗತ್ಯ ಎನ್ನುವುದು ಅವರ ಸಲಹೆ.ಚಿಟಿಕೆ ಹೊಡೆದರೆ, ಚಪ್ಪಾಳೆ ತಟ್ಟಿದರೆ ಅಥವಾ ಲೋಟ, ತಟ್ಟೆ ಬಿದ್ದು ಶಬ್ದವಾದ ಸಂದರ್ಭದಲ್ಲಿ ಕತ್ತು ತಿರುಗಿಸಿ ಸ್ಪಂದಿಸದಿದ್ದರೆ, ಎಂಟು ತಿಂಗಳು ತುಂಬಿದರೂ ತೊದಲುನುಡಿ ಆಡಲು ಪ್ರಯತ್ನಿಸದಿದ್ದರೆ ಅಂಥ ಮಕ್ಕಳನ್ನು ಕೂಡಲೆ ವಾಕ್ ಶ್ರವಣ ತಜ್ಞರ ಬಳಿ ತಪಾಸಣೆ ಮಾಡಿಸಬೇಕು.`ಶ್ರೀಮಂತರೇನೊ ಇಂಥ ಚಿಕಿತ್ಸೆ ಮಾಡಿಸುತ್ತಾರೆ. ಆದರೆ ನಾವು ಬಡವರು ಎಲ್ಲಿಂದ ಹಣ ತರುವುದು ಎಂದು ಕೊರಗುವುದು ಬೇಡ. ನಮ್ಮಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗಾಗಿ ವಿಶೇಷ ರಿಯಾಯ್ತಿಯಲ್ಲಿ ಚಿಕಿತ್ಸೆ ಲಭ್ಯ~ ಎಂದು ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಹೇಳುತ್ತಾರೆ.ದುಬಾರಿಯಲ್ಲ

ಹೆಸರಾಂತ ಗಂಟಲು, ಮೂಗು ಮತ್ತು ಕಿವಿ ತಜ್ಞ ಡಾ. ಎಸ್.ಆರ್.ಚಂದ್ರಶೇಖರ್ ಅವರು 1977ರಲ್ಲಿ ಸ್ಥಾಪಿಸಿದ ಈ ಸಂಸ್ಥೆ ಒಂದು ಮಾದರಿ ಸಂಸ್ಥೆಯಾಗಿದೆ. ಇಲ್ಲಿ ವಾಕ್ ಶ್ರವಣ ದೋಷದ ಮಕ್ಕಳಿಗೆ 1ರಿಂದ 10ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ ಇಂಥ ಮಕ್ಕಳಿಗೆ ಶಿಕ್ಷಣ ನೀಡುವ ವಿಶೇಷ ಶಿಕ್ಷಕರಿಗೂ ತರಬೇತಿ ಕೊಡುವ ಪದವಿ ಕೋರ್ಸ್‌ಗಳಿವೆ. ಅತ್ಯಾಧುನಿಕ ಸಲಕರಣೆಗಳುಳ್ಳ ಆಸ್ಪತ್ರೆಯೂ ಇದ್ದು, ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪೂರ್ವ ಪ್ರಾಥಮಿಕ ಹಂತದಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ, ಹೈಸ್ಕೂಲ್‌ನಲ್ಲಿ ಕನ್ನಡ ಮಾಧ್ಯಮ ಮಾತ್ರ ಇದೆ.  ಶ್ರವಣ ದೋಷ, ಮಾತಿನ ಸಮಸ್ಯೆ ಇರುವ  ಸಾವಿರಾರು ಮಕ್ಕಳು ಇಲ್ಲಿ ಚಿಕಿತ್ಸೆಯ ಜೊತೆಗೆ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ.ಸಂಸ್ಥೆಗೆ ಹಾಗೂ ಡಾ.ಚಂದ್ರಶೇಖರ್ ಅವರ ಸಾಧನೆಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡ ಪ್ರಶಸ್ತಿ ನೀಡಿ ಸತ್ಕರಿಸಿದೆ.ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿದ್ದರೂ 78ರ ಇಳಿವಯಸ್ಸಿನಲ್ಲಿ ಇಂದಿಗೂ ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸಂಸ್ಥೆಗೆ ಆಗಮಿಸಿ ಮಕ್ಕಳ ಯೋಗಕ್ಷೇಮ ವಿಚಾರಿಸುವ ಚಂದ್ರಶೇಖರ್ ಅವರ ಬದ್ಧತೆ ನಿಜಕ್ಕೂ ಅನುಕರಣೀಯ.

ವಿವರಗಳಿಗೆ 080- 2546 0405, 2546 8470 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.