ಬುಧವಾರ, ಜೂನ್ 23, 2021
29 °C

ಕುಗ್ರಾಮದಲ್ಲಿ ಕುಣುಬಿಯರ ಬದುಕು

ಜಿ.ಟಿ. ಸತ್ಯನಾರಾಯಣ Updated:

ಅಕ್ಷರ ಗಾತ್ರ : | |

ಕುಗ್ರಾಮದಲ್ಲಿ ಕುಣುಬಿಯರ ಬದುಕು

ಅತ್ತ ಸಹ್ಯಾದ್ರಿಯ ಕೊಡಚಾದ್ರಿ ಶಿಖರ, ಇತ್ತ ತಲೆಯ ಮೇಲೆ ಕುಸಿದು ಬೀಳುವಂತೆ ಎದೆ ಒಡೆದುಕೊಂಡಿರುವ ಅಂಬಾರಗುಡ್ಡ, ನಡುವೆ ಸಾಗಿದೆ ಶಿವಮೊಗ್ಗ ಜಿಲ್ಲೆಯ ಗಡಿಭಾಗದ ಕುಗ್ರಾಮ ಮರಾಠಿ ಗ್ರಾಮದಲ್ಲಿನ ಕುಣುಬಿಯರ ಬದುಕು!ಸಾಗರ ತಾಲ್ಲೂಕಿನ ಕೊನೆಯ ಸಂಕಣ್ಣ ಸಾನ್‌ಬೋಗ್ ಗ್ರಾಮ ಪಂಚಾಯ್ತಿಯ ಮರಾಠಿ ಗ್ರಾಮದಿಂದ ಕೆಲವೇ ಕಿ.ಮೀ.ಗಳಲ್ಲಿ ಉಡುಪಿ ಜಿಲ್ಲೆಯ ಸರಹದ್ದು ಪ್ರಾರಂಭ ಆಗುತ್ತದೆ. ಜಿಲ್ಲೆಯ ಕೊನೆಯ ಗ್ರಾಮದ ಕತೆಯು ಸಾವಿರ ವ್ಯತ್ಯೆಯಾಗಿ ಬಾಯಿ ತೆಗೆದುಕೊಳ್ಳುತ್ತದೆ. ನಾಲ್ಕು ನೂರಕ್ಕೂ ಹೆಚ್ಚು ಕುಟುಂಬ, 3,000 ಜನಸಂಖ್ಯೆ ಹೊಂದಿರುವ ಮರಾಠಿ ಮತ್ತು ಸುತ್ತಲಿನ ಆವಿಗೆ, ಮುರಳ್ಳಿ,ಉಡಿಕೆಸರ ಗ್ರಾಮದಲ್ಲಿ ಬಹುಸಂಖ್ಯಾತರು ಬುಡಕಟ್ಟು ಜನಾಂಗದವರಾದ ಕುಣುಬಿಯವರು, ಅವರು ಕಾಡಿನ ಮಕ್ಕಳು.ಹೊಸಬರು ಊರಿಗೆ ಬಂದರೆ ಕಾಡು ಹತ್ತಿ ಓಡುತ್ತಿದ್ದ ಈ ಜನರ ಭಾಷೆಯೂ ಮರಾಠಿ. ಅದೇ ಕಾರಣಕ್ಕೆ ಮರಾಠಿ ಊರಿನ ಹೆಸರೂ ಆಗಿದೆ. ಇನ್ನು ಜೈನರು, ಕೆಲವೇ ಕೆಲವು ಪರಿಶಿಷ್ಟ ಜಾತಿ ಮತ್ತು ಕೇರಳ ಮೂಲದ ಕುಟುಂಬಗಳು ಇವೆ.ದಾರಿ ಇಲ್ಲವಯ್ಯ!

ಕರೂರು ಹೋಬಳಿಯ ಅತಿ ದುರ್ಗಮ ಪ್ರದೇಶಗಳಲ್ಲಿ ಮರಾಠಿಯೂ ಒಂದು. ಮರಾಠಿ ಸುತ್ತಮುತ್ತಲಿನ ಗ್ರಾಮದ ಜನರು ಅಂಗಡಿ ಕಾಣಬೇಕು ಎಂದರೆ ಎಂಟು ಕಿ.ಮೀ. ಕಾಲ್ನಡಿಗೆ ಅನಿವಾರ್ಯ. ಸಮೀಪದ ಇಕ್ಕೀಬೀಳು ಗ್ರಾಮಕ್ಕೆ ಬಸ್ ಸೌಕರ್ಯ ದಿನಕ್ಕೆ ನಾಲ್ಕು ಬಾರಿ ಮಾತ್ರ ಇದೆ. ಬಸ್‌ನ ಮುಖ ಕಾಣಬೇಕೆಂದರೆ ಇಕ್ಕೀಬೀಳಿಗೆ ನೆಡೆಯಲೇಬೇಕು ಮಾರಾಠಿಯ ಜನ. ಇನ್ನು ಪಡಿತರ ಅಕ್ಕಿಯನ್ನು ಪಡೆಯಲು ಹೊಸಕೊಪ್ಪ ತೆರಳಲು ಹನ್ನೆರಡು ಕಿ.ಮೀ. ಸಾಗಬೇಕು. ಇದು ಬೇಸಿಗೆಯ ಕತೆ. ಇನ್ನು ಮಳೆಗಾಲದಲ್ಲಿ ಧೋ ಎಂದು ಮಳೆ ಸುರಿದಾಗ ಮಾರಾಠಿ ಅಕ್ಷರಶಃ ದ್ವೀಪವಾಗುತ್ತದೆ.ಊರಿಗೆ ಬರುವ ದುರ್ಗಮ ಹಾದಿಯ ಮಣ್ಣುರಸ್ತೆ ಕೆಸರು ತುಂಬಿಕೊಳ್ಳುವುದರಿಂದ ಜೀಪಿನ ಹೊರತಾಗಿ ಬೇರೆ ವಾಹನಗಳು ಚಲಿಸುವುದಿಲ್ಲ. ಒಂದು ಸಾವಿರ ರೂಪಾಯಿ ಬಾಡಿಗೆ ಕೊಟ್ಟು ಜೀಪು ಏರಿ ಪಡಿತರ ಅಕ್ಕಿಯನ್ನು ತರುವುದು ನಮ್ಮಿಂದ ಸಾಧ್ಯವಿಲ್ಲ ಎಂಬ ಕುಣುಬಿಯರ ಕೂಗು ಸರ್ಕಾರಕ್ಕಿನ್ನು ಮುಟ್ಟಿಲ್ಲ. ಭರವಸೆ ಕಳೆದುಕೊಳ್ಳದೇ ಮರಾಠಿಯ ಜನ ಗುಡ್ಡದ ಹಾದಿಯಲ್ಲಿ ತಲೆ ಹೊರೆಯ ಮೇಲೆ ಅಕ್ಕಿ ದಿನಸಿಗಳನ್ನು ಒಯ್ಯುತ್ತಲೇ ಇದ್ದಾರೆ. ಇನ್ನು ಊರಿಗೆ ಕರೆಂಟು ಬಂದಿದೆಯಾದರೂ ವರ್ಷದ ಆರು ತಿಂಗಳ ಮಾತ್ರ ಸಿಂಗಲ್‌ಫೇಸ್ ವಿದ್ಯುತ್. ಮಳೆಗಾಲದಲ್ಲಿ ಚಿಮುಣಿಬುಡ್ಡೆ ಅನಿವಾರ್ಯ ಎನ್ನುತ್ತಾರೆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಸುಬ್ರಮಣ್ಯಭಟ್.ಗಣಿಗಾರಿಕೆಯ ಭೂತ

ಕಷ್ಟ ಜೀವನದ ನೊಗ ಬಾರವನ್ನು ಎಳೆಯುತ್ತಿದ್ದರೂ ಜೀವನ ಪ್ರೀತಿ ಕಳೆದುಕೊಳ್ಳದ ಮರಾಠಿ ಜನರನ್ನು ಅಕ್ಷರಶಃ ಹೈರಾಣಗೊಳಿಸಿದ್ದು, ತಲೆಯ ಮೇಲೆ ಇಷ್ಟು ವರ್ಷಗಳ ಕಾಲ ಸುಮ್ಮನೆ ಮಲಗಿದ್ದ ಅಂಬಾರಗುಡ್ಡದಲ್ಲಿ ಮ್ಯಾಂಗನೀಸ್ ಅದಿರಿನ ನಿಕ್ಷೇಪ ಪತ್ತೆ ಹಚ್ಚಿದಾಗ. ಬೆಂಗಳೂರು ಮೂಲದ ಉದ್ಯಮಿಯೊಬ್ಬರು ದೊಡ್ಡದೊಡ್ಡ ಯಂತ್ರಗಳನ್ನು ತಂದು ಎತ್ತರದಲ್ಲಿ ರಸ್ತೆ ಕೊರೆದು ಸದ್ದು ಮಾಡಿದಾಗ.

 

2004ರಲ್ಲಿ ಒಂದು ವರ್ಷ ಗಣಿಗಾರಿಕೆ ನೆಡೆಯುತ್ತಿದ್ದಂತೆ ಅಂಬಾರಗುಡ್ಡ ನಲುಗಿಹೋಯಿತು. ಗುಡ್ಡದ ತುದಿಯ ಅದಿರು ಮಿಶ್ರಿತ ಮಣ್ಣು ಮರಾಠಿ ಊರು ಒಳಗೊಂಡಂತೆ ಮುನ್ನೂರು ಎಕರೆ ಭತ್ತದ ಗದ್ದೆಯಲ್ಲಿ ಬಂದು ಕುಳಿತುಬಿಟ್ಟಿತ್ತು. ಅನ್ನಕ್ಕೆ ಸಂಚಕಾರ ನೀಡುವ ಮತ್ತು ಕ್ರಮೇಣ ತಮ್ಮನ್ನು ಒಕ್ಕಲು ಎಬ್ಬಿಸಬಹುದು ಅಪಾಯ ಅರಿತ ಜನತೆ ಹೊಸನಗರ ಸಮೀಪದ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಚಳವಳಿ ಆರಂಭಿಸಿದರು. ಹೋರಾಟ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಲ್ಲದೇ ಗಣಿಗಾರಿಕೆ ಸ್ಥಗಿತಗೊಂಡಿದೆ. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಅಂಬಾರಗುಡ್ಡ ಗಣಿಗಾರಿಕೆ ಪರಿಣಾಮದಿಂದ ಸೀಳಿಕೊಂಡಿದೆ. ಪ್ರತಿ ಮಳೆಗಾಲವೂ ಕುಸಿಯುತ್ತಲೇ ಇದೆ. ಕುಸಿತದ ಪ್ರಮಾಣ ಕಡಿಮೆ ಆಗಿದೆ ಎನ್ನುತ್ತಾರೆ ಗುಡ್ಡದ ಕಾಲಿನಲ್ಲಿನ ಕೃಷಿಕ ಶ್ರೀಧರಜೈನ್.ಕುಣುಬಿಯರ ಜೀವನಗಾಥೆ

ಕಾಡಿನ ಮಕ್ಕಳಾದ ಕುಣುಬಿಯರು ಜೇನು ಕೀಳುವುದು, ಬುಟ್ಟಿ ನೇಯ್ಯುವುದು, ಬೆತ್ತದ ಉತ್ಪನ್ನಗಳನ್ನು ತಯಾರಿಸುವುದನ್ನು ತಮ್ಮ ಕಸುಬಾಗಿ ರೂಢಿಸಿಕೊಡಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ಮರಾಠಿಯನ್ನೇ ಮನೆ ಮಾತಾಗಿ ಬಳಸುವ ಈ ಜನರು ನಾಗರಿಕ ಲೋಕಕ್ಕೆ ಬೆನ್ನು ತಿರುಗಿಸಿದರೆ, ಇತ್ತ ಸರ್ಕಾರವು ಕೂಡ ದೃಷಿ ಹಾಯಿಸಿಲ್ಲ.

 

ಪರಿಶಿಷ್ಟ ಜನಾಂಗಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕು ಎಂಬ ಇವರ ಕೂಗು ಅಂಬಾರಗುಡ್ಡವನ್ನೇ ದಾಟಿಲ್ಲ. ಪರಿಣಾಮ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕೆಳಸ್ತರದಲ್ಲಿರುವ ಕುಣುಬಿಯರಿಗೆ ಸಂವಿಧಾನ ರಕ್ಷಣೆ ಸಿಕ್ಕಿಲ್ಲ.ಪರಿಶಿಷ್ಟ ಮಾನ್ಯತೆ ದೊರೆಯದ ಕುಣುಬಿಯರ ಸಮಾನ ಪಂಗಡಗಳಿಗೆ ಪಕ್ಕದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಎಂದು ಘೋಷಣೆ ಆಗಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಮಾನ್ಯತೆ ದೊರಕದೇ ಹಿಂದುಳಿದ ಜಾತಿಗಳಲ್ಲಿ ಗುರುತಿಸಿರುವ ಬಗ್ಗೆ ಪದವಿ ಅಭ್ಯಾಸ ಮಾಡುತ್ತಿರುವ ಏಕೈಕ ಯುವತಿ ತಿಮ್ಮಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

 

ಗಣಿಗಾರಿಕೆ ಕಾರಣದಿಂದ ಇಲ್ಲಿನ ಕುಣುಬಿ ಜನಾಂಗದ ಪಿಲ್ಲು ಬೆಂಗಳೂರು ನೋಡಿದ್ದು, ಒಂದು ದಂತ ಕತೆಯಾಗಿ ಬೆಳೆದಿದ್ದರೆ. ಬಹುಸಂಖ್ಯಾತ ಕುಣುಬಿ ಮಕ್ಕಳು ಊರಿನೊಳಗೆ ಇರುವ ಪ್ರಾಥಮಿಕ ಶಾಲೆಯನ್ನು ಮೆಟ್ಟಿಲು ಹತ್ತಿ ಇಳಿದಿದ್ದಾರೆ ಅಷ್ಟೆ. ಅದ್ಭುತ ಎನ್ನುವಂತೆ ಹೋಳಿಕುಣಿತ ಕುಣಿಯುತ್ತ, ಕೋಲಾಟ ಆಡುತ್ತಾ ಅಂಬಾರಗುಡ್ಡವನ್ನು ಅಪ್ಪಿಕೊಂಡಿದ್ದಾರೆ ಇಲ್ಲಿನ ಕುಣುಬಿಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.