ಶುಕ್ರವಾರ, ಜೂನ್ 18, 2021
22 °C

ಕುಡಿಯಲು ನೀರಿಲ್ಲ; ಆದರೂ ಇದು ನವಗ್ರಾಮ !

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿ ಕುಡಿಯಲು ನೀರಿಲ್ಲ. ಶಾಲಾ ಕಟ್ಟಡ, ಆಸ್ಪತ್ರೆ, ಸಾರ್ವಜನಿಕ ಶೌಚಾಲಯಗಳೂ ಇಲ್ಲ. ಸ್ಮಶಾನ ಜಾಗೆಯಂತೂ ಇಲ್ಲವೇ ಇಲ್ಲ. ಆದರೂ ಇದು ನವಗ್ರಾಮ!`ಹುಚ್ಚು ಹೊಳೆ~ ಡೋಣಿ ನದಿಯ ಪ್ರವಾಹ ಪೀಡಿತ ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ಮನೆಗಳು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತರಿಗೆ ಇನ್ನೂ `ಆಸರೆ~ ಯಾಗಿಲ್ಲ.ಮೈಸೂರಿನ ನಾಗರಿಕ ವೇದಿಕೆಯವರು ಇಲ್ಲಿ 477 ಮನೆಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮನೆಗೆ 1.20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಡಿಸೆಂಬರ್ 19ರಂದು ಈ ಮನೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಎರಡು ತಿಂಗಳು ಗತಿಸಿದ್ದರೂ ನಿರಾಶ್ರಿತರು ಇಲ್ಲಿ ವಾಸವಾಗಿಲ್ಲ.`ಜನ ವಾಸಿಸಲು ಇಲ್ಲಿ ಅಗತ್ಯ ಮೂಲ ಸೌಲಭ್ಯಗಳೇ ಇಲ್ಲ. ಫಲಾನುಭವಿಗಳ ಪಟ್ಟಿಯೂ ದೋಷಪೂರಿತವಾಗಿದೆ. ದೋಷಪೂರಿತ ಪಟ್ಟಿ ಸರಿಪಡಿಸಿ ಅಗತ್ಯ ಸೌಲಭ್ಯ ಕಲ್ಪಿಸುವವರೆಗೂ ನವಗ್ರಾಮಕ್ಕೆ ತೆರಳದಿರಲು ಗ್ರಾಮಸ್ಥರು ನಿರ್ಧರಿಸಿದ್ದೇವೆ~ ಎಂಬುದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಶಿನಾಥ ಕಾಖಂಡಕಿ ಹೇಳಿಕೆ.`ಇಲ್ಲಿ ಚರಂಡಿ ಕಾಮಗಾರಿ ಕಳಪೆಯಾಗಿದೆ. ಕಾಲಿಟ್ಟರೆ ಒಡೆದು ಪುಡಿ ಪುಡಿಯಾಗುತ್ತದೆ. ಕುಡಿಯುವ ನೀರಿಗಾಗಿ ತೋಡಿದ ಮೂರು ಕೊಳವೆ ಬಾವಿಗಳು ಕೈಕೊಟ್ಟಿವೆ. 8 ಕಿ.ಮೀ. ದೂರದ ನಿಡೋಣಿ ಗ್ರಾಮದಿಂದ ಪೈಪ್‌ಲೈನ್ ಜೋಡಣೆ ಮಾಡಲಾಗಿದೆ. ಆದರೆ, ನೀರು ಬರುತ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ~ ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ಪತ್ರಕರ್ತರಿಗೆ ವಿವರ ನೀಡಿದರು.`ನಿಜವಾದ ನಿರಾಶ್ರಿತರಿಗೆ ಮನೆ ಸಿಕ್ಕಿಲ್ಲ. ಮನೆ ಹಂಚಿಕೆ ಪ್ರಕ್ರಿಯೆಯಲ್ಲಿ ದೋಷವಿದೆ. ಪ್ರಥಮ ಹಂಚಿಕೆ ಪಟ್ಟಿ ಪ್ರಕಾರ ಮನೆಗಳು ಹಂಚಿಕೆಯಾಗಿಲ್ಲ. ಹೊಲ-ಮನೆ ಮಾರಿ ಬೇರೆ ಊರಲ್ಲಿ ವಾಸವಿದ್ದವರಿಗೂ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಪಟ್ಟಿಯನ್ನು ರದ್ದುಪಡಿಸಿ ನಿಜ ಫಲಾನುಭವಿಗಳಿಗಷ್ಟೇ ಮನೆಗಳನ್ನು ನೀಡಬೇಕು~ ಎಂದು ಗ್ರಾಮಸ್ಥ ರಾಚನಗೌಡ ಪಾಟೀಲ ಆಗ್ರಹಿಸಿದರು.`ಕೂಲಿಯನ್ನು ಅವಲಂಬಿಸಿ ಬದುಕುತ್ತಿದ್ದೇವೆ. ನಮಗೆ ಹೊಲ-ಮನೆ ಇಲ್ಲ. ಆಸರೆ ಬಡಾವಣೆಯಲ್ಲಿಯೂ ಮನೆ ದೊರೆತಿಲ್ಲ. ಇನ್ನು ನಾವು ವಾಸಿಸುವುದಾದರೂ ಎಲ್ಲಿ~ ಎಂಬ ಪ್ರಶ್ನೆ ಶರಣಪ್ಪ ಶಿವಪ್ಪ ಹೊಸಟ್ಟಿ, ಶರಣಪ್ಪ ತುಳಜಪ್ಪ ಜತ್ತಿ, ಸುರೇಶ ಸಂಜೀವ ಶಿಡ್ಲೆ, ಸೈಯದ್ ಲಾಲ್‌ಸಾಬ್ ದಳವಾಯಿ ಪ್ರಶ್ನೆ.`ಟೆಕ್ ಮಹೇಂದ್ರ ಪ್ರತಿಷ್ಠಾನ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಇದನ್ನು ಮಾದರಿ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ~ ಎನ್ನುತ್ತಾರೆ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಉತ್ತರ ಕರ್ನಾಟಕ ಸಂಚಾಲಕ ನರಸಿಂಹ ರಾಯಚೂರು.`ಅರಣ್ಯ ಇಲಾಖೆಯ ಸಹಯೋಗದಲ್ಲಿ ನವ ಗ್ರಾಮದ ಪ್ರತಿ ರಸ್ತೆಯಲ್ಲಿಯೂ ಸಸಿ ನೆಟ್ಟು ಬೆಳೆಸುವುದು, ಪ್ರತಿಯೊಂದು ಮನೆಯ ಆವರಣದಲ್ಲಿ ಪುಟ್ಟ ಕೈತೋಟ ನಿರ್ಮಿಸಲು ಬಯಸಿದ್ದೇವೆ. ಮೂಲಸೌಲಭ್ಯದ ಕೊರತೆಯಿಂದ ನಿರಾಶ್ರಿತರು ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿರುವುದು ಹಾಗೂ ನೀರಿನ ಅಭಾವದಿಂದ ಸಸಿಗಳನ್ನು ನೆಡಲು ಆಗುತ್ತಿಲ್ಲ~ ಎಂಬುದು ಅವರ ಅಸಹಾಯಕತೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.