ಬುಧವಾರ, ಮೇ 25, 2022
30 °C

ಕುಡಿಯುವ ನೀರು, ಮೇವು: ಮುಂಜಾಗ್ರತೆಗೆ ಸಚಿವರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರು, ಮೇವು: ಮುಂಜಾಗ್ರತೆಗೆ ಸಚಿವರ ಸೂಚನೆ

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲೂ ಮಳೆಯ ಅಭಾವ ಇರುವುದರಿಂದ ಸರ್ಕಾರ ಶೀಘ್ರವೇ ಆ ತಾಲ್ಲೂಕನ್ನೂ `ಬರಪೀಡಿತ~ ಎಂದು ಘೋಷಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಜಿಲ್ಲಾ ಪಂಚಾತಿ ಸಭಾಂಗಣದಲ್ಲಿ ಸೋಮವಾರ ನಡೆದ ಬರಪೀಡಿತ ಪರಿಸ್ಥಿತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಆರು ತಾಲ್ಲೂಕುಗಳನ್ನು ಈಗಾಗಲೇ `ಬರಪೀಡಿತ~ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಕಂಡುಬರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ, ಅಂದರೆ 141.4 ಮಿ.ಮೀ.ಗೆ ಬದಲು, ಕೇವಲ 25.3 ಮಿ.ಮೀ ಮಳೆ ಸುರಿದಿದೆ. ಅಕ್ಟೋಬರ್ ತಿಂಗಳಲ್ಲಿ 35.2 ಮಿ.ಮೀ ಮಳೆ ಸುರಿದಿದೆ. ತೇವಾಂಶದ ಕೊರತೆಯಿಂದಾಗಿ 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆಯಾಶ್ರಿತ ಬೆಳೆಗಳು ಹಾನಿಗೊಳಗಾಗಿವೆ. ಶೇ. 75ರಷ್ಟು ಇಳುವರಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.ಜಿಲ್ಲೆಯ ಮುಂದಿನ ಮೂರು ತಿಂಗಳ ಅವಧಿಗೆ ಮೇವಿನ ಲಭ್ಯತೆ ಇದೆ. ನಂತರವೂ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಶೀಘ್ರವೇ ಕ್ರಿಯಾ ಯೋಜನೆ ರೂಪಿಸಿ, ಮಹಾತ್ಮಗಾಂಧಿ ರಾಷ್ಟ್ರೀಯ  ಉದ್ಯೋಗ ಖಾತರಿ ಯೋಜನೆ ಅಡಿ ಶೇ.10ರಷ್ಟು ಅನುದಾನವನ್ನು ಬರ ಪರಿಹಾರ ಕಾಮಗಾರಿಗೆ ಮೀಸಲಿಡಬೇಕು. ಅಲ್ಲದೆ, ಹೆಚ್ಚುವರಿಯಾಗಿ ಉದ್ಯೋಗ ಖಾತರಿ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ತಿಳಿಸಿದರು.ಕೂಲಿ ಕಾರ್ಮಿಕರಿಗೆ ವೇತನವನ್ನು ಶೀಘ್ರವೇ ಪಾವತಿಸಬೇಕು. ಬರಪರಿಹಾರ ಕಾಮಗಾರಿಗಳನ್ನು ಗಂಭೀರವಾಗಿ ಪರಿಗಣಿಸಿ ನಿರ್ವಹಣೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು    ಎಂದು ಅವರು ಎಚ್ಚರಿಸಿದರು.ನವೆಂಬರ್ ಮೊದಲ ವಾರ ಜಿಲ್ಲಾ ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಸಭೆ ಹಮ್ಮಿಕೊಳ್ಳಲಾಗುವುದು. ಸಂಬಂಧಿಸಿದ ಎಲ್ಲ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ, ವರದಿ ಸಲ್ಲಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು 2008ರಿಂದ ಈವರೆಗೆ ಬಿಡುಗಡೆಯಾದ ಅನುದಾನ ಮತ್ತು ಸಾಧನೆ ಕುರಿತ ಪ್ರಗತಿ ವರದಿ  ಸಲ್ಲಿಸಬೇಕು ಎಂದು ಅವರು ಸೂಚಿಸಿದರು.ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. `ಸುವರ್ಣಭೂಮಿ~ ಯೋಜನೆ ಅಡಿ 16,977 ಫಲಾನುಭವಿಗಳಿಗೆ ರೂ 6.77 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಎ. ಬಿಸ್ವಾಸ್ ಸಭೆಗೆ ತಿಳಿಸಿದರು.ಮಹಾನಗರ ಪಾಲಿಕೆಗೆ 2ನೇ ಹಂತದಲ್ಲಿ ಮಂಜೂರಾಗಿರುವ ರೂ 100 ಕೋಟಿ  ಅನುದಾನದ ಅಡಿ ಶೀಘ್ರವೇ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು.  ಮಹಾನಗರ ಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಅನುದಾನ ಮಂಜೂರಾಗಿದ್ದು, ಸ್ಥಳೀಯ ಸಂಸ್ಥೆಗಳು ಶೀಘ್ರವೇ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ. ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ಶೀಘ್ರವೇ ವೇತನ ಪಾವತಿಯಾಗಬೇಕು. ಈ ಯೋಜನೆ ಅಡಿ ಕಾಮಗಾರಿಗಳು ಉತ್ತಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.ಶಾಸಕರಾದ  ನೇಮರಾಜ ನಾಯ್ಕ, ಚಂದ್ರಾ ನಾಯ್ಕ ಅವರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ವಿವರಿಸಿದರು. ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಉಪಾಧ್ಯಕ್ಷ ಚೆನ್ನಬಸವನಗೌಡ, ಮೇಯರ್ ಪಾರ್ವತಿ ಇಂದುಶೇಖರ್, ಉಪಮೇಯರ್ ಶಶಿಕಲಾ, ವಿಧಾನ ಪರಿಷತ್ ಸದಸ್ಯರಾದ ಮೃತ್ಯುಂಜಯ ಜಿನಗಾ, ಎನ್. ತಿಪ್ಪಣ್ಣ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯ್ಕ, ಸದಸ್ಯ ಗೋನಾಳ್ ರಾಜಶೇಖರ ಗೌಡ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.