ಕುಡಿವ ನೀರಿನ ಯೋಜನೆಗೆ ಶಿಲಾನ್ಯಾಸ
ಚಿಂಚೋಳಿ: ತಾಲ್ಲೂಕಿನ ಚಂದನಕೇರಾ ಸುತ್ತಮುತ್ತಲಿನ 4 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 12 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಮಹತ್ವದ ಜಲ ನಿರ್ಮಲ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಹಾಗೂ ಮೂಲಸೌಕರ್ಯ ಸಚಿವ ಸುನೀಲ ವಲ್ಯ್ಪುರ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ಐನಾಪುರ, ಚಂದನಕೇರಾ, ಚೇಂಗಟಾ ಹಾಗೂ ರುಮ್ಮನಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಜಲಾಶಯದಿಂದ ಶುದ್ಧೀಕರಿಸಿದ ನೀರು ಸರಬರಾಜು ಈ ಯೋಜನೆಯಿಂದ ಆಗಲಿದೆ.
ಗ್ರಾ.ಪಂ.ನಿಂದ ಹಾಗೂ ಗ್ರಾಮಸ್ಥರ ವಂತಿಗೆ ಸೇರಿ ಒಟ್ಟು 16.53 ಕೋಟಿ ರೂಪಾಯಿ ಅಂದಾಜು ವೆಚ್ಚದ ಕುಡಿವ ನೀರಿನ ಯೋಜನೆಯ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಕುಡಿವ ನೀರಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿರುವ ಚಂದನಕೇರಾ, ರಾಣಾಪುರ, ಕೊಟಗಾ, ಚೇಂಗಟಾ, ಭೂಂಯಾರ್(ಕೆ), ಖಾನಾಪೂರ, ರುಮ್ಮನಗೂಡ, ಸಾಸರಗಾಂವ್ ಮತ್ತು ನೀರು ಸರಬರಾಜಿನ ಮುಖ್ಯ ಕೊಳವೆ ಹಾದು ಹೋಗುವ ಮಾರ್ಗ ಮಧ್ಯೆ ಬರುವ ರಾಣಾಪೂರ ತಾಂಡಾ, ಪಂಗರಗಾ, ಭೂಂಯಾರ್(ಬಿ) ಮತ್ತು ಸಾಸರಗಾಂವ್ ತಾಂಡಾಗಳ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂದು ಸುನೀಲ ವಲ್ಯ್ಪುರ ತಿಳಿಸಿದರು.
2031ರ ಜನಸಂಖ್ಯೆಗೆ ಅನುಗುಣವಾಗಿ 12 ಗ್ರಾಮಗಳ ಪ್ರತಿಯೊಬ್ಬ ವ್ಯಕ್ತಿಗೆ 70 ಲೀಟರ್ ನೀರು ದೊರೆಯುವಂತೆ ಯೋಜನೆ ರೂಪಿಸಲಾಗಿದೆ ಎಂದು ಯೋಜನಾಧಿಕಾರಿ ಸತೀಶ್ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಬಾಬುರಾವ್ ಪವಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಗಂಗಾರಾಮ ರಾಠೋಡ್, ರಾಮರಾವ್ ಪಾಟೀಲ, ರವಿರಾಜ ಕೊರವಿ, ಉಷಾ ಮಂಜುನಾಥ, ನೀಲಮ್ಮಾ ಇಟಗಿ, ಕಲಾವತಿ ಸೂರ್ಯಕಾಂತ, ಮಹಾನಂದ ಪಂಗರಗಿ, ರೇವಣಸಿದ್ದಪ್ಪ ಮಜ್ಜಗಿ ಮುಂತಾದವರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.