ಶುಕ್ರವಾರ, ಏಪ್ರಿಲ್ 16, 2021
31 °C

ಕುವೆಂಪು, ಕಡಿದಾಳ್ ಮಂಜಪ್ಪ ಪ್ರತಿಮೆ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರಿಗೆ ಇಂದುಬಹಳ ಅನ್ಯಾಯ ಆಗುತ್ತಿದೆ. ಭ್ರಷ್ಟರು ಮಾನವರು ಅಲ್ಲ ಎಂದುನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.ಶುಕ್ರವಾರ ತೀರ್ಥಹಳ್ಳಿಯಲ್ಲಿ  ಮೇಲಿನಕುರುವಳ್ಳಿ ಗ್ರಾಮ ಪಂಚಾಯ್ತಿ ಹಾಗೂ ಕನ್ನಡ ರಾಜ್ಯೋತ್ಸವ ಸಮಿತಿ  ಮೇಲಿನಕುರುವಳ್ಳಿಯ ಕಡಿದಾಳ್ ಮಂಜಪ್ಪ ವೃತ್ತದಲ್ಲಿ ಏರ್ಪಡಿಸಿದ್ದ ತತ್ವಬದ್ಧ ರಾಜಕಾರಣಿ ಕಡಿದಾಳ್ ಮಂಜಪ್ಪ ಅವರ ಪ್ರತಿಮೆ ಅನಾವರಣಗೊಳಿಸಿ ನಂತರ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಭಾರತೀಯರು ಎಂದಿಗೂ ವೈಯಕ್ತಿಕ ಸ್ವಾತಂತ್ರ್ಯ ಪಡೆದಿರಲಿಲ್ಲ. ಸ್ವತಂತ್ರ ಭಾರತೀಯ ಅನುಭವ, ಈ ದೇಶ ನನ್ನದು ಎಂಬ ಗರ್ವ ಹುಟ್ಟಬೇಕು ಎಂಬುದು ಸುಳ್ಳಾಗುತ್ತಿದೆ. ಪ್ರಾಮಾಣಿಕತೆ ಮರೆ ಆಗುತ್ತಿದೆ. ಒಳ್ಳೆಯವರ ಸಂಖ್ಯೆ ಕಡಿಮೆ ಆಗುತ್ತಿದೆ. ಮತ ಹಾಕಿದವರನ್ನು ಯಾರು? ಎಂದು ಕೇಳುವ ಅಹಂಕಾರ ಬೆಳೆಯುತ್ತಿದೆ. ಅದಕ್ಕೆ ಕೊನೆ ಎಂದು ಎಂಬ ಪ್ರಶ್ನೆ ಮೂಡುವಂತಾಗಿದೆ ಎಂದರು.ಚುನಾಯಿತ ಪ್ರತಿನಿಧಿಗಳ ಕಾರ್ಯವೈಖರಿ, ಬದ್ಧತೆ ಬಗ್ಗೆ ಜನರು ಯೋಚಿಸಬೇಕು. ಮಸೂದೆಗಳು ಚರ್ಚೆಗೆ ಬಾರದೇ ವಾಪಸ್ ಆಗುತ್ತಿವೆ. ಸದನವನ್ನು ಹೊಡೆದಾಟ, ಅಶ್ಲೀಲ ಚಿತ್ರ ವೀಕ್ಷಣೆಗೆ ಬಳಸಿಕೊಳ್ಳಲಾಗುತ್ತಿದೆ. ಇದು ಪ್ರಜಾತಂತ್ರವೇ ಎಂದು ಸಂತೋಷ್ ಹೆಗ್ಡೆ ಪ್ರಶ್ನಿಸಿದರು. ಖಜಾನೆಯಿಂದ ಸಂಬಳ ಪಡೆಯುವ ಎಲ್ಲರೂ ಜನಸೇವಕರೇ. ನಾನು ಲೋಕಾಯುಕ್ತನಾಗಿದ್ದಾಗಲೂ ಜನ ಸೇವಕನೇ ಆಗಿದ್ದೆ. ಸಂವಿಧಾನದಲ್ಲಿ ಯಾರೂ ಸುಪ್ರಿಂ ಅಲ್ಲ. ಅಲ್ಲಿ ಭಾರತದ ಪ್ರಜೆ ಮಾತ್ರ ಸುಪ್ರಿಂ. ಸಂವಿಧಾನವನ್ನು ಒಪ್ಪಿಕೊಳ್ಳುವ ಹಕ್ಕು ಭಾರತೀಯರಿಗೆ ಇದ್ದರೆ ಆತನೇ ಸುಪ್ರಿಂ ಎಂದು ಹೇಳಿದರು.ಜನತಾ ಪ್ರತಿನಿಧಿಗಳಿಗೆ ಜನರ ಹೆದರಿಕೆ ಯಾಕೆ. ಪ್ರಜಾಪ್ರತಿನಿಧಿಗಳು ತಮ್ಮ ಎರಡು ಕಾಲುಗಳನ್ನು ನೆಲದಮೇಲೆ ಇಟ್ಟುಕೊಂಡು ಗೌರವಿಸುವ ಪರಿಪಾಠ ಬೆಳೆಯಬೇಕು. ಸಮಾಜದಲ್ಲಿ ಬದಲಾವಣೆ ಅಗತ್ಯ. ಜನರಿಂದ ಜನರಿಗಾಗಿ ಜನರ ಸರ್ಕಾರ ಆಗಬೇಕಿದ್ದುದು, ಕೆಲವರಿಂದ ಕೆಲವರಿಗಾಗಿ ಮಾತ್ರ ಸರ್ಕಾರ ಎಂಬಂತಾಗಿದೆ ಎಂದರು.ಮಕ್ಕಳಲ್ಲಿ ದುರಾಸೆ ಹುಟ್ಟುವ ಮೊದಲೇ ಬದಲಾವಣೆ ತರಬೇಕು. ಪ್ರತಿಯೊಬ್ಬರಿಗೂ ತನ್ನ ಹುದ್ದೆಯ ಜವಾಬ್ದಾರಿ ಇರಬೇಕು. ಈಗಿನ ಪರಿಸ್ಥಿತಿಯಲ್ಲಿ ಇಂಥಹ ವಿಚಾರಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದು ಹೆಚ್ಚು ಸೂಕ್ತ ಅದಕ್ಕಾಗಿ ಮಕ್ಕಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದರು.ಪಟ್ಟಣದ ಕುವೆಂಪು ವೃತ್ತದಲ್ಲಿನ ಕುವೆಂಪು ಪುತ್ಥಳಿಯನ್ನು ಹಿರಿಯ ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಅನಾವರಣಗೊಳಿಸಿದರು. ಕಡಿದಾಳು ಶಾಮಣ್ಣ, ಶಾಸಕ ಕಿಮ್ಮನೆ ರತ್ನಾಕರ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಜಿ.ಪಂ. ಸದಸ್ಯ ಹಾರೋಗೊಳಿಗೆ ಪದ್ಮನಾಭ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿವೆಂಕಟಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕದಾದಳ್ ಪ್ರಕಾಶ್ ಮಾತನಾಡಿದರು.ಕುವೆಂಪು ಹಾಗೂ ಕಡಿದಾಳ್ ಮಂಜಪ್ಪ ಅವರ ಬದುಕು ಮತ್ತು ಚಿಂತನೆ ಕುರಿತು ಸಾಹಿತಿ ಡಾ.ಜೆ.ಕೆ. ರಮೇಶ ಉಪನ್ಯಾಸ ನೀಡಿದರು.ಮೇಲಿನಕುರುವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಪಿ. ಅನಿಲ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಹೋರಾಟಗಾರಎಚ್. ಗಣಪತಿಯಪ್ಪ, ಅಕ್ಷರ ಸಂತ ಹರೆಕಳ ಹಾಜಬ್ಬ ಮತ್ತು ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.ಸರ್ಜಾಶಂಕರ ಹರಳೀಮಠ ಆಶಯ ನುಡಿಗಳನ್ನಾಡಿದರು. ಪೂರ್ಣೇಶ್ ಸ್ವಾಗತಿಸಿ, ನಾಗರಾಜ್ ವಂದಿಸಿದರು. ಮುನ್ನೂರು ಮೋಹನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.