ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಕಿಪ್ಕೆಟರ್

ಮುಂಬೈ (ಪಿಟಿಐ/ಐಎಎನ್ಎಸ್): ಆರಂಭದಿಂದ ಅಂತ್ಯದವರೆಗೂ ನಿಖರ ವೇಗ ಕಾಯ್ದುಕೊಂಡು ಓಡಿದ ಕೆನ್ಯಾದ ಗಿಡೆಯೋನ್ ಕಿಪ್ಕೆಟರ್ ಇಲ್ಲಿ ಕೊನೆಗೊಂಡ 13ನೇ ಮುಂಬೈ ಮ್ಯಾರಥಾನ್ನಲ್ಲಿ ಕೂಟ ದಾಖಲೆ ಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಭಾನುವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕಿಪ್ಕೆಟರ್ 2 ಗಂಟೆ 08. 35 ಸೆಕೆಂಡುಗಳಲ್ಲಿ ಗುರಿ ಸೇರಿದರು. ಈ ಮೂಲಕ ಉಗಾಂಡದ ಜ್ಯಾಕ್ಸನ್ ಕಿಪ್ರಾಪ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. 2013ರಲ್ಲಿ ಕಿಪ್ರಾಪ್ 2 ಗಂಟೆ 09 ನಿಮಿಷ 32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದು ದಾಖಲೆ ಎನಿಸಿತ್ತು.
ಇದರೊಂದಿಗೆ ಕಿಪ್ಕೆಟರ್ 56,000 ಡಾಲರ್ (ಅಂದಾಜು ₹ 37.96 ಲಕ್ಷ) ಬಹುಮಾನ ಪಡೆದರು.
ಇಥಿಯೋಪಿಯಾದ ಸೆಬೊಕಾ ದಿಬಾಬ 2 ಗಂಟೆ 09 ನಿಮಿಷ 20 ಸೆಕೆಂಡುಗಳಲ್ಲಿ ಗುರಿ ಸೇರಿ ಎರಡನೇ ಸ್ಥಾನ ಪಡೆದರು. ಕೆನ್ಯಾದ ಮಾರಿಯಸ್ ಕಿಮುಥಾಯಿ (2:09:39ಸೆ.) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಜೆನೆಮೊಗೆ ಚಿನ್ನ: ಮಹಿಳೆಯರ ವಿಭಾಗದಲ್ಲಿ ಇಥಿಯೋಪಿಯಾದ ಶುಕೊ ಜೆನೆಮೊ 2 ಗಂಟೆ 27 ನಿಮಿಷ 50 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಚಿನ್ನ ಒಲಿಸಿಕೊಂಡರು.
ಕೆನ್ಯಾದ ಬೋರ್ನೆಸ್ ಕಿತುರ್ 2 ಗಂಟೆ 32 ನಿಮಿಷಗಳಲ್ಲಿ ಗುರಿ ಸೇರಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ಕೆನ್ಯಾದ ವ್ಯಾಲೆಂಟೀನ್ ಕಿಪ್ಕೆಟರ್ (2:34.07ಸೆ.) ಮೂರನೇ ಸ್ಥಾನ ಗಳಿಸಿದರು.
ಕಿಪ್ಕೆಟರ್ಗೆ ಚಿನ್ನ ಗೆಲ್ಲುವ ಉತ್ತಮ ಅವಕಾಶ ಇತ್ತು. ಆದರೆ 29 ಕಿ.ಮೀ. ದೂರ ಕ್ರಮಿಸಿದ್ದ ವೇಳೆ ಅವರು ಹಾಕಿದ್ದ ಶೂ ನ ಲೇಸ್ ಬಿಚ್ಚಿಕೊಂಡಿತು. ಅದನ್ನು ಸರಿಮಾಡಿಕೊಂಡು ಓಡುವುದರೊಳಗೆ ಇತರ ಸ್ಪರ್ಧಿಗಳು ಬಹುದೂರ ಕ್ರಮಿಸಿದ್ದರು.
ಸುಧಾಗೆ ಚಿನ್ನ: ರಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿರುವ ಸುಧಾ ಸಿಂಗ್ ಭಾರತದ ಮಹಿಳಾ ಸ್ಪರ್ಧಿಗಳ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು.
ಸುಧಾ 2 ಗಂಟೆ 39 ನಿಮಿಷ ಹಾಗೂ 28 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಒಟ್ಟಾರೆ ಏಳನೇ ಹಾಗೂ ಭಾರತದ ಪರ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಲಲಿತಾ ಬಾಬರ್ ಮತ್ತು ಒ.ಪಿ ಜೈಶಾ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದರು.
ಲಲಿತಾ 2 ಗಂಟೆ 41 ನಿಮಿಷ ಹಾಗೂ 55 ಸೆಕೆಂಡುಗಳಲ್ಲಿ ಅಂತಿಮ ಗೆರೆ ದಾಟಿ ಒಟ್ಟಾರೆ 10ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. ಜೈಶಾ (2:43.26ಸೆ.) ಒಟ್ಟಾರೆ 11ನೇ ಸ್ಥಾನಕ್ಕೆ ತೃಪ್ತಿಪಟ್ಟರು.
‘ಇದು ನನ್ನ ಪಾಲಿನ ಕೊನೆಯ ಮ್ಯಾರಥಾನ್. ಮುಂಬರುವ ಚಾಂಪಿಯನ್ಷಿಪ್ಗಳಲ್ಲಿ 1500 ಮತ್ತು 5000 ಮೀಟರ್ಸ್ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದು ಜೈಶಾ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.